ಗುರುವಾರ , ಫೆಬ್ರವರಿ 20, 2020
29 °C
ವಿರೋಧದ ನಡುವೆಯೂ ಬೆಳಗಾವಿಗೆ ಬಂದ ಶಿವಸೇನಾ ವಕ್ತಾರ

ಚರ್ಚಿಸಿ ಬಗೆಹರಿಸಿಕೊಳ್ಳಲಿ, ನ್ಯಾಯಾಲಯದ ಅವಶ್ಯಕತೆ ಇಲ್ಲ: ಸಂಜಯ್‌ ರಾವುತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕನ್ನಡ– ಮರಾಠಿ ಭಾಷೆ ಹಾಗೂ ಸಂಸ್ಕೃತಿ ಉಳಿಸಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಲು ಮುಂದೆ ಬರಬೇಕು. ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯವಿದ್ದು, ನ್ಯಾಯಾಲಯದ ಅವಶ್ಯಕತೆ ಇಲ್ಲ’ ಎಂದು ಶಿವಸೇನಾ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ವಿವಿಧ ಕನ್ನಡ ಸಂಘಟನೆಗಳ ವಿರೋಧದ ನಡುವೆಯೂ ಶನಿವಾರ ಬಂದ ಸಂಜಯ್‌, ಸಾರ್ವಜನಿಕ ವಚನಾಲಯ ಆಯೋಜಿಸಿದ್ದ ಸಂವಾದದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

‘ಮುಂಬೈ, ಸೊಲ್ಲಾಪುರ ಸೇರಿದಂತೆ ಮಹಾರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ಕನ್ನಡ ಶಾಲೆಗಳಿವೆ. ಇವುಗಳಿಗೆ ನಾವು ಅನುದಾನ ಕೊಟ್ಟು ಪೋಷಿಸುತ್ತಿದ್ದೇವೆ. ಕನ್ನಡ ಭಾಷೆ, ಶಾಲೆ ಹಾಗೂ ಸಂಸ್ಕೃತಿಗೆ ನಾವು ರಕ್ಷಣೆ ನೀಡಿದ್ದೇವೆ. ಅದೇ ಕರ್ನಾಟಕದಲ್ಲಿರುವ ಮರಾಠಿ ಶಾಲೆ, ಭಾಷೆ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಇಲ್ಲಿನ ಸರ್ಕಾರ ಮಾಡಬೇಕು’ ಎಂದು ಆಗ್ರಹಿಸಿದರು.

‘ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಬಂದಿದ್ದ ರಾಜೇಶ ಪಾಟೀಲ ಅವರನ್ನು ವಶಕ್ಕೆ ಪಡೆದು, ಗಡಿ ದಾಟಿಸುವ ಅವಶ್ಯಕತೆ ಇರಲಿಲ್ಲ. ನಮ್ಮ ಮುಂಬೈಗೂ ಅನೇಕ ಜನ ಕರ್ನಾಟಕದ ಸಚಿವರು ಬರುತ್ತಾರೆ. ಆದರೆ, ನಾವು ಹಾಗೆ ಮಾಡಿಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಧರ್ಮಯುದ್ಧವಲ್ಲ: ‘ಕನ್ನಡ ಹಾಗೂ ಮರಾಠಿಗರ ನಡುವೆ ಯಾವುದೇ ಧರ್ಮಯುದ್ಧವಾಗಲಿ, ಮಹಾಭಾರತವಾಗಲಿ ನಡೆಯುತ್ತಿಲ್ಲ. ಆ ಯುದ್ಧಗಳು ಭೂಮಿಗಾಗಿ ನಡೆದಂತಹವು. ನಮ್ಮದು ಭೂಮಿಗಾಗಿ ಅಲ್ಲ, ಭಾಷೆ ಹಾಗೂ ಸಂಸ್ಕೃತಿ ಉಳಿವಿಗಾಗಿ ನಡೆದಿರುವ ಹೋರಾಟ’ ಎಂದು ಹೇಳಿದರು.

‘ಕರ್ನಾಟಕ ಅಷ್ಟೇ ಅಲ್ಲ, ದೇಶದೆಲ್ಲೆಡೆ ಮರಾಠಿ ಜನರು ಇದ್ದಾರೆ. ಎಲ್ಲೆಲ್ಲಿ ಮರಾಠಿಗರು ಇರುತ್ತಾರೆಯೋ ಅಲ್ಲಲ್ಲಿ, ಭಗವಾ ಧ್ವಜ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಫೋಟೊ ಇದ್ದೇ ಇರುತ್ತದೆ’ ಎಂದು ತಿಳಿಸಿದರು.

‘ಸಾಹಿತಿ ಕ್ಷೇತ್ರದಲ್ಲಿ ಎರಡೂ ರಾಜ್ಯಗಳ ನಡುವೆ ಕೊಡುಕೊಳ್ಳುವಿಕೆ ಇದೆ. ಶಿವರಾಮ ಕಾರಂತ, ಗಿರೀಶ ಕಾರ್ನಾಡ, ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್‌, ರಜನಿಕಾಂತ ಸೇರಿದಂತೆ ಅನೇಕರ ಕೊಡುಗೆ ಮಹಾರಾಷ್ಟ್ರದಲ್ಲಿಯೂ ಇದೆ. ಮಹಾರಾಷ್ಟ್ರದಲ್ಲಿ ಪ್ರಸ್ತುತ ಅಧಿಕಾರ ಹಿಡಿದಿರುವ ಮೈತ್ರಿಕೂಟದ ರಚನೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆಯೂ ಪ್ರಮುಖವಾಗಿದೆ’ ಎಂದು ನೆನದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು