ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಶನ್ ಹಸ್ತ: ಡಿಕೆಶಿ, ಜಮೀರ್‌ಗೆ ಹೊಣೆ

7

ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಶನ್ ಹಸ್ತ: ಡಿಕೆಶಿ, ಜಮೀರ್‌ಗೆ ಹೊಣೆ

Published:
Updated:

ಬಿಡದಿ: ಬಿಜೆಪಿಯ ಆಪರೇಷನ್‌ ಕಮಲ ತಂತ್ರಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತದ ಯೋಜನೆಯನ್ನು ಕಾಂಗ್ರೆಸ್ ನಾಯಕರು ರೂಪಿಸಿದ್ದಾರೆ.

ದೆಹಲಿ ಬಳಿಯ ಗುರುಗ್ರಾಮದ ರೆಸಾರ್ಟ್‌ನಲ್ಲಿರುವ ಬಿಜೆಪಿ ಶಾಸಕರ ವಾಪಸ್‌ ಬರುವಿಕೆಗಾಗಿ ಕಾಯುತ್ತಿರುವ ಕಾಂಗ್ರೆಸ್‌ ಮುಖಂಡರು ಐವರು ಶಾಸಕರಿಗೆ ಗಾಳ ಹಾಕುವ ಪ್ಲಾನ್‌ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಓರ್ವ, ಹಳೆ ಮೈಸೂರು ಭಾಗದ ಇಬ್ಬರು ಹಾಗೂ ಚಿತ್ರದುರ್ಗದ ಇಬ್ಬರು ಶಾಸಕರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.

ಅದಕ್ಕಾಗಿ ಕೈ–ತೆನೆಯತ್ತ ಬರುವ ಶಾಸಕರಿಗೆ ಮಂತ್ರಿಗಿರಿ ನೀಡುವ ಆಮಿಷ ಒಡ್ಡುವುದು ಹಾಗೂ ಕೂಡಲೇ ಸಚಿವ ಸ್ಥಾನ ನೀಡಲು ಎರಡೂ ಪಕ್ಷಗಳ ನಿರ್ಧಾರ ಮಾಡಿಕೊಂಡಿವೆ. ಸಚಿವರಾದ ಡಿ.ಕೆ. ಶಿವಕುಮಾರ್‌ ಹಾಗೂ ಜಮೀರ್‌ ಅಹಮದ್‌ಗೆ ಆಪರೇಷನ್ ಹಸ್ತದ ಹೊಣೆ ನೀಡಲಾಗಿದೆ.

ಮುಂದುವರಿದ ರೆಸಾರ್ಟ್‌ ವಾಸ್ತವ್ಯ

ಈಗಲ್‌ಟನ್ ಹಾಗೂ ವಂಡರ್‌ ಲಾ ರೆಸಾರ್ಟ್‌ನಲ್ಲಿರುವ ಕಾಂಗ್ರೆಸ್ ಶಾಸಕರ ವಾಸ್ತವ್ಯ ಮುಂದುವರಿದಿದೆ.

ಶುಕ್ರವಾರ ತಡರಾತ್ರಿವರೆಗೂ ನಡೆದ ಶಾಸಕರ ಸಭೆ‌ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್, ಪರಮೇಶ್ವರ ನಾಯ್ಕ, ಎಚ್.ಕೆ. ಪಾಟೀಲ, ನಾರಾಯಣ ಸ್ವಾಮಿ ಹಾಗೂ ಮುನಿರತ್ನ ಸೇರಿದಂತೆ 13 ಶಾಸಕರು ವಂಡರ್ ಲಾಗೆ ತೆರಳಿದ್ದರು. ಉಳಿದ 48-50 ಶಾಸಕರು ಈಗಲ್ ಟನ್ ರೆಸಾರ್ಟಿನಲ್ಲಿ ರಾತ್ರಿ ಕಳೆದರು.

ರೆಸಾರ್ಟ್‌ನಲ್ಲೇ ಉಳಿದ ಡಿ.ಕೆ. ಶಿವಕುಮಾರ್‌

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಹಲವು ಸಚಿವರು ರಾತ್ರಿಯೇ ಬೆಂಗಳೂರಿಗೆ ವಾಪಸ್ ಆದರು. ಡಿ.ಕೆ. ಶಿವಕುಮಾರ್ ರೆಸಾರ್ಟಿನಲ್ಲಿಯೇ ಉಳಿದರು.

ಶನಿವಾರ ಬೆಳಗ್ಗೆ ಚಳಿ ಹೆಚ್ಚಾಗಿರುವ ಕಾರಣ ಕೆಲವು ಶಾಸಕರು ತಡವಾಗಿ ಎದ್ದರು. ರೆಸಾರ್ಟ್ ಆವರಣದಲ್ಲಿಯೇ ವಾಕಿಂಗ್ ಮಾಡಿದರು.

ವಂಡರ್‌ ಲಾದಲ್ಲಿ ಉಳಿದುಕೊಂಡಿರುವ ಶಾಸಕರು ಉಪಾಹಾರದ ಬಳಿಕ ಈಗಲ್‌ ಟನ್‌ಗೆ ವಾಪಸಾದರು.

ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಿರುವ ಸಿದ್ದರಾಮಯ್ಯ

ಈಗಲ್‌ಟನ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ಕಾಂಗ್ರೆಸ್ ಶಾಸಕರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಿಸಿದ್ದಾರೆ.

ಬಿಗಿ ಭದ್ರತೆ​

ಈಗಲ್‌ಟನ್ ಹಾಗೂ ವಂಡರ್‌ ಲಾ ರೆಸಾರ್ಟ್‌ಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಸಾರ್ವಜನಿಕರಿಗೆ ರೆಸಾರ್ಟ್‌ ಪ್ರವೇಶ ನಿಷೇಧಿಸಲಾಗಿದೆ. ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಸುತ್ತಿದ್ದು, ಮಫ್ತಿಯಲ್ಲಿರುವ ಪೋಲಿಸರು ಹೆಚ್ಚಿನ ನಿಗಾ ವಹಿಸಿದ್ದಾರೆ.

ಸಿದ್ದರಾಮಯ್ಯ–ಗುಂಡೂರಾವ್ ನೇತೃತ್ವದಲ್ಲಿ​ ಸಭೆ

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ‌ನೇತೃತ್ವದಲ್ಲಿ ಸಭೆ ನಡೆಯಲಿದೆ.

ವಂಡರ್‌ ಲಾದಲ್ಲಿ ಉಳಿದುಕೊಂಡಿರುವ ಎಲ್ಲ ಶಾಸಕರು ಈಗಲ್‌ ಟನ್‌ಗೆ ಬರುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಅದರಂತೆ 12 ಗಂಟೆ ಸುಮಾರಿಗೆ ಕೈ ಶಾಸಕರ ಜೊತೆ ಮಾತುಕತೆ ನಡೆಯಲಿದೆ. ಸಭೆಯಲ್ಲಿ ಮುಂದಿನ‌ ಬೆಳವಣಿಗೆ ಚರ್ಚೆಯಾಗಲಿದ್ದು, ಮುಂದಿನ ನಡೆ ಏನಿರಬೇಕು, ಬಿಜೆಪಿಯ ಆಪರೇಷನ್‌ ಕಮಲಕ್ಕೆ ಪ್ರತಿತಂತ್ರ ರೂಪಿಸುವುದು ಹೇಗೆ, ಅತೃಪ್ತ ಶಾಸಕರ‌ ರಾಜೀನಾಮೆ ತಡೆಯುವ ಬಗ್ಗೆ ಚರ್ಚೆಯಾಗಲಿದೆ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !