ಮಂಗಳವಾರ, ಅಕ್ಟೋಬರ್ 15, 2019
27 °C

ಮಾಧ್ಯಮ ನಿರ್ಬಂಧ: ಪುನರ್‌ ಪರಿಶೀಲನೆಗೆ ಆಗ್ರಹ

Published:
Updated:

ಬೆಂಗಳೂರು: ಎಲೆಕ್ಟ್ರಾನಿಕ್‌ ಮಾಧ್ಯಮಗಳ ಕ್ಯಾಮೆರಾ ಇದ್ದಾಗ ಶಾಸಕರು ಹೆಚ್ಚು ಉತ್ಸಾಹದಿಂದಲೂ ಮತ್ತು ಇನ್ನು ಕೆಲವರು ಎಚ್ಚರಿಕೆಯಿಂದ ಮಾತನಾಡುತ್ತಿದ್ದರು. ಅವುಗಳಿಗೆ ನಿರ್ಬಂಧ ವಿಧಿಸಿರುವುದರಿಂದ  ಪಾರದರ್ಶಕತೆಯೇ ಇಲ್ಲವಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.

ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಸರಿಯಲ್ಲ. ಸಭಾಧ್ಯಕ್ಷರು ತಮ್ಮ ನಿರ್ಧಾರವನ್ನು ಪುನರ್‌ಪರಿಶೀಲಿಸಬೇಕು. ಪಾರದರ್ಶಕತೆ ಇಲ್ಲದ ಕಲಾಪ ಪ್ರಜಾಪ್ರಭುತ್ವ ಎನ್ನಲಾಗದು ಎಂದರು.

‘ಸಭಾಧ್ಯಕ್ಷರ ನಿರ್ಧಾರಕ್ಕೆ ಆಡಳಿತ ಪಕ್ಷದವರ ಒಪ್ಪಿಗೆ ಇಲ್ಲವೆಂದು ಭಾವಿಸುತ್ತೇನೆ. ಏಕೆಂದರೆ, ಸಭಾಧ್ಯಕ್ಷರು ತಮ್ಮ ಆದೇಶವನ್ನು ಪುನರ್‌ ಪರಿಶೀಲಿಸುವಂತೆ ಯಡಿಯೂರಪ್ಪ ಟ್ವೀಟ್‌ ಮಾಡಿದ್ದರು. ಬಳಿಕ ಅದನ್ನು ಏಕೆ ಅಳಿಸಿ ಹಾಕಿದರೋ ಗೊತ್ತಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ಶಾಸಕಾಂಗದಷ್ಟೇ ಮಾಧ್ಯಮ ಕ್ಷೇತ್ರವೂ ಮುಖ್ಯ. ಸ್ಪೀಕರ್‌ಗಳ ಸಮ್ಮೇಳನದಲ್ಲಿ ನಿರ್ಬಂಧದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಸದನದಲ್ಲಿ ನಿರ್ಬಂಧ ವಿಧಿಸಬೇಕೆ ಬೇಡವೇ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಇಲ್ಲಿ ನಡೆಯುವ ಚರ್ಚೆಗಳು ಎಲ್ಲ ಜನರಿಗೂ ಗೊತ್ತಾಗಬೇಕು. ಎಲ್ಲ ಜನರೂ ದಿನ ಪತ್ರಿಕೆಗಳನ್ನು ಓದುವುದಿಲ್ಲ. ಆದರೆ, ಸುದ್ದಿವಾಹಿನಿಗಳು ಎಲ್ಲ ಜನರನ್ನು ತಲುಪುವ ಪ್ರಭಾವಿ ಮಾಧ್ಯಮವಾಗಿದ್ದು, ಅವುಗಳಿಗೆ ನಿರ್ಬಂಧ ವಿಧಿಸಿದ್ದು ಸರಿಯಲ್ಲ’ ಎಂದರು.

ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ‘ಇದರ ಸಂಪೂರ್ಣ ಹೊಣೆಗಾರಿಕೆ ಸಭ್ಯಾಧ್ಯಕ್ಷರ ಮೇಲೆ ಹಾಕುವುದು ಸರಿಯಲ್ಲ. ದೇಶದ ಎಲ್ಲ ಸ್ಪೀಕರ್‌ಗಳ ಸಮಾವೇಶದಲ್ಲಿ ಈ ನಿರ್ಣಯ ಆಗಿದೆ. ಕಳೆದ 10 ವರ್ಷಗಳಿಂದ ನಿರ್ಬಂಧ ವಿಧಿಸುವ ಚರ್ಚೆ ಸದನದಲ್ಲಿ ನಡೆಯುತ್ತಲೇ ಬಂದಿದೆ. ನಿಮ್ಮ ಸರ್ಕಾರ ಇದ್ದಾಗಲೇ ಈ ಪ್ರಸ್ತಾಪ ಬಂದಿದ್ದು. ಆದ್ದರಿಂದ ಇದಕ್ಕೆ ಸದನದಲ್ಲಿರುವ ಎಲ್ಲರೂ ಜವಾಬ್ದಾರರು’ ಎಂದು ಹೇಳಿದರು.

Post Comments (+)