ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ವೈದ್ಯರಿಗೆ ಸುಲಭ ಕನ್ನಡ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಕ್ರಮ
Last Updated 10 ನವೆಂಬರ್ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಮಗೆ ಏನು ತೊಂದರೆ ಇದೆ ಹೇಳಿ, ಎಲ್ಲಿ ನೋವಿದೆ, ಈಗ ಹಸಿವು ಆಗುತ್ತಿದೆಯೇ...’ ಉತ್ತರ ಭಾರತದ ಯುವ ವೈದ್ಯರು ಹಳ್ಳಿಗೆ ಬಂದು ಕನ್ನಡದಲ್ಲಿ ಹೀಗೆ ಕೇಳಿದಾಗ ನಮಗೆ ಎಷ್ಟು ಖುಷಿಯಾಗುವುದಿಲ್ಲ ಹೇಳಿ. ಅರ್ಧ ಕಾಯಿಲೆ ಆಗಲೇ ಹೊರಟು ಹೋಗುತ್ತದೆ. ಇದು ಕಲ್ಪನೆಯಲ್ಲ, ಇನ್ನು ಮುಂದೆ ಅದು ವಾಸ್ತವ ಸಂಗತಿಯಾಗಲಿದೆ!

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌)ಕನ್ನಡ ಬಾರದ ವಿದ್ಯಾರ್ಥಿಗಳಿಗಾಗಿ ‘ಬಳಕೆ ಕನ್ನಡ’ ಎಂಬ ಸರಳ ಕನ್ನಡ ಕಲಿಕಾ ಪುಸ್ತಕವನ್ನು ಹೊರತಂದಿದೆ. ಕನ್ನಡ ಗೊತ್ತಿರುವ ವಿದ್ಯಾರ್ಥಿಗಳಿಗಾಗಿ ‘ಸಾಂಸ್ಕೃತಿಕ ಕನ್ನಡ’ ಎಂಬ ಪುಸ್ತಕವನ್ನು ಪ್ರಕಟಿಸಿದೆ.

ಹಿರಿಯಲೇಖಕರಾದ ಡಾ.ಪಿ.ಎಸ್‌.ಶಂಕರ್‌, ಡಾ. ಪಿ. ಮಹದೇವಯ್ಯ, ಡಾ.ಹಿ.ಚಿ. ಬೋರಲಿಂಗಯ್ಯ ಸಂಪಾದಿಸಿರುವ ಈ ಪುಸ್ತಕಗಳಲ್ಲಿ ಸರಳ ಕನ್ನಡ, ಕನ್ನಡ ಬಳಕೆಯ ಕ್ರಮಗಳನ್ನು ವಿವರಿಸಲಾಗಿದೆ. ಕನ್ನಡ ಗೊತ್ತಿದ್ದವರಿಗೆ ಕನ್ನಡ ಸಾಹಿತ್ಯದ ಸರಳ ಪರಿಚಯ ಮಾಡುವ ಯತ್ನವೂ ನಡೆದಿದೆ.

ಕಡ್ಡಾಯ ಅಲ್ಲ: ಕುಲಪತಿ ಡಾ.ಎಸ್‌.ಸಚ್ಚಿದಾನಂದ ಅವರು ಕನ್ನಡ ಅನುಷ್ಠಾನ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳಲ್ಲಿ ಇದೂ ಒಂದು. ಅವರಿಗೆ ಬೆಂಬಲವಾಗಿ ನಿಂತವರು ಉಪ ಕುಲಸಚಿವ ಡಾ. ಪ್ರಾಣೇಶ್‌ ಗೂಡೂರ್ ಮತ್ತು ಪ್ರಸಾರಾಂಗ ವಿಭಾಗದ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ. ಅದರ ಫಲವಾಗಿಕನ್ನಡವನ್ನು ಲವಲವಿಕೆಯಿಂದ ಕಲಿಯುವ ಪುಸ್ತಕಗಳನ್ನು ಇದೀಗ ವಿದ್ಯಾರ್ಥಿಗಳು ಕೈಗೆಗಿತ್ತಿಕೊಂಡಿದ್ದಾರೆ.

ಈ ಮೊದಲು ಸಹ ಕನ್ನಡ ಕಲಿಕೆಯ ಪರಿಪಾಠ ಇತ್ತು. ಆದರೆ ವೈದ್ಯಕೀಯ ವಿಷಯಗಳ ವ್ಯಾಸಂಗದ ವೇಳೆ ಕನ್ನಡ ಕಲಿಕೆಯೇ ಕಬ್ಬಿಣದ ಕಡಲೆಯಾಗಬಾರದು,ಅದು ಸುಲಭದ ಕಲಿಕೆಯಾಗಬೇಕುಎಂಬ ಕಾರಣಕ್ಕೆ ಪ್ರತ್ಯೇಕ ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. ಬಹುತೇಕ ಮೊದಲ ವರ್ಷದ ಎಂಬಿಬಿಎಸ್‌ ಮತ್ತು ಅರೆ ವೈದ್ಯಕೀಯ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಈ ಪುಸ್ತಕ ಓದಲು ತಿಳಿಸಲಾಗುತ್ತದೆ. 100 ಅಂಕಗಳ ಪರೀಕ್ಷೆಯೂ ಕೊನೆಗೆ ಇರಲಿದೆ. ಆದರೆ ಇದು ಕಡ್ಡಾಯ ಪರೀಕ್ಷೆ ಅಲ್ಲ ಎಂದು ವಿ.ವಿ ಮೂಲಗಳು ತಿಳಿಸಿವೆ.

**

ಪುಸ್ತಕದಲ್ಲಿ ದೇಹದ ಭಾಗಗಳ ಬಗ್ಗೆ ಚಿತ್ರ ಸಹಿತ ವಿವರ ನೀಡಿ, ಸುಲಭವಾಗಿ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
-ಡಾ. ಪಿ. ಎಸ್‌. ಶಂಕರ್,ಕನ್ನಡ ವಿದ್ವಾಂಸ

**

ಕನ್ನಡ ಭಾಷೆ ಅನುಷ್ಠಾನ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಆರಂಭಿಸಿದ ಸಣ್ಣ ಪ್ರಯತ್ನ ಇದು, ಇದರ ಸದ್ಬಳಕೆ ಆಗಲಿ.
-ಡಾ. ಎಸ್‌. ಸಚ್ಚಿದಾನಂದ, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT