ಬುಧವಾರ, ಜುಲೈ 28, 2021
20 °C

ಫಲಾನುಭವಿಗಳಿಗೆ ನಿವೇಶನ ಹಕ್ಕು: ಸಚಿವ ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಸತಿ ಯೋಜನೆಗಳ ಮೂಲಕ ಹಂಚಿಕೆ ಮಾಡುವ ನಿವೇಶನಗಳ ಹಕ್ಕು ಇಲ್ಲದೆ ಫಲಾನುಭವಿಗಳಿಗೆ ಬ್ಯಾಂಕ್‌ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಿವೇಶನದ ಹಕ್ಕು ನೀಡಲು ನಿರ್ಧರಿಸಲಾಗಿದೆ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನಿವೇಶನ ಹಕ್ಕು ಸಿಕ್ಕಿದರೆ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅನುಕೂಲ ಆಗಲಿದೆ’ ಎಂದರು.

ನಿವೇಶನವನ್ನು 15 ವರ್ಷ ಪರಭಾರೆ ಮಾಡಬಾರದು ಎಂಬ ನಿಯಮ ಇರಲಿದೆ. ಬ್ಯಾಂಕಿನಲ್ಲಿ ಹಕ್ಕುಪತ್ರ ಅಡ ಮಾನ ಇಡಲು ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.

‘ರಾಜ್ಯದಲ್ಲಿ ಇನ್ನು ಕೆಲವೇ ತಿಂಗಳಲ್ಲಿ 6,000 ನಿವೇಶನಗಳನ್ನು ವಿತರಿಸಲಾಗುವುದು. ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲೂ ನಿವೇಶನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ’ ಎಂದರು.

‘ಇನ್ನು ಮುಂದೆ ನಿವೇಶನ ಅಭಿವೃದ್ಧಿಪಡಿಸುವುದನ್ನು ಕಡಿಮೆಗೊಳಿಸಿ ಫ್ಲ್ಯಾಟ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ನಿರ್ಮಿಸುವ ಫ್ಲ್ಯಾಟ್‌ಗಳಿಗಿಂತ ಉತ್ತಮವಾದುದನ್ನು ನಿರ್ಮಿಸಿ ಕಡಿಮೆ ದರದಲ್ಲಿ ಮಾರಾಟ ಮಾಡುವ ಚಿಂತನೆ ಇದೆ. ಜಿಗಣಿ ಬಳಿ 600 ಎಕರೆ ಪ್ರದೇಶದಲ್ಲಿ ಫ್ಲ್ಯಾಟ್‌ ನಿರ್ಮಿಸಲು ತೀರ್ಮಾನಿಸಲಾಗಿದೆ’ ಎಂದರು.

‘ಗೃಹ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಎಇಇ) ಹಂತದ ಅಧಿಕಾರಿಗಳಿಗೆ ಜಿಪಿಎಸ್ ಆಧಾರಿತ ದಿನಚರಿ ವ್ಯವಸ್ಥೆ ಜಾರಿಗೆ ತರಲಾಗಿದೆ’ ಎಂದರು.

‘ವಿಜಯಪುರದಲ್ಲಿ ನೋಂದಣಿ ಶುಲ್ಕ ಪಾವತಿಸದೆ 400 ನಿವೇಶನಗಳನ್ನು ಅಧಿಕಾರಿಗಳು ನೋಂದಣಿ ಮಾಡಿದ್ದಾರೆ. ಅಂಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯಲ್ಲಿ ಇಷ್ಟು ದಿನ ಕೃಷ್ಣನ ಲೆಕ್ಕ ಹೆಚ್ಚು ನಡೆಯುತ್ತಿತ್ತು. ಈಗ ರಾಮನ ಲೆಕ್ಕ ತರುತ್ತಿದ್ದೇವೆ. ತಿಂದು, ತೇಗಿ ಮಜಾ ಮಾಡುವ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು