ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಹಕ್ಕು ಕಾಯ್ದೆ: 43,626 ವಿದ್ಯಾರ್ಥಿಗಳಿಗೆ ಸಿಗದ ಭರವಸೆ

ಹಲವು ಪೋಷಕರಿಗೆ ಬಂದಿದೆ ಶುಲ್ಕ ಪಾವತಿ ನೋಟಿಸ್‌
Last Updated 20 ಜನವರಿ 2020, 21:05 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಂತೆ (ಆರ್‌ಟಿಇ) ರಾಜ್ಯದಲ್ಲಿ 43,626 ವಿದ್ಯಾರ್ಥಿಗಳು ವಿವಿಧ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, 9ನೇ ತರಗತಿಗೆ ಅವರಿಗೆ ಸರ್ಕಾರವೇ ಶುಲ್ಕ ಭರಿಸುವ ನಿಟ್ಟಿನಲ್ಲಿ ಇದುವರೆಗೆ ಯಾವ ಭರವಸೆಯೂ ದೊರೆತಿಲ್ಲ.

2012–13ನೇ ಸಾಲಿನಲ್ಲಿ ಆರ್‌ಟಿಇ ಅಡಿಯಲ್ಲಿ 1ನೇ ತರಗತಿಗೆ ದಾಖಲಾದ ಈ ವಿದ್ಯಾರ್ಥಿಗಳು ಇದೀಗ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರ ತಕ್ಷಣ ಇವರ ಭವಿಷ್ಯದ ಕುರಿತಂತೆ ಗಮನ ಹರಿಸುವ ನಿಟ್ಟಿನಲ್ಲಿ ‘ಪ್ರಜಾವಾಣಿ’ ಇದೇ 12ರಂದು ‘ಒಳನೋಟ’ ಪ್ರಕಟಿಸಿತ್ತು.

‘ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೋ ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ, ಸಣ್ಣಪುಟ್ಟ ಕೃಷಿ ಮಾಡಿ ಜೀವನ ಮಾಡುತ್ತಿರುವವನು ನಾನು, ಈ ಹಂತದಲ್ಲಿ ದುಬಾರಿ ಶುಲ್ಕ ಕೊಟ್ಟು ಶಾಲೆಗೆ ಮಗಳನ್ನು ಕಳುಹಿಸುವ ಪರಿಸ್ಥಿತಿ ಬಂದುಬಿಟ್ಟಿದೆ’ ಎಂದು ಹೇಸರ ಘಟ್ಟದ ಬಾಲಕಿಯೊಬ್ಬಳ ತಂದೆ ಎಸ್‌.ವಿ.ಗೋವಿಂದರಾಜು ಹೇಳಿದರು.

‘ನನ್ನ ಮಗಳಿಗೆ ₹ 79 ಸಾವಿರ ಶುಲ್ಕ ಕಟ್ಟಲು ನಾಗರಬಾವಿಯ ಪ್ರತಿಷ್ಠಿತ ಶಾಲೆಯಿಂದ ಸೂಚನೆ ಬಂದಿದೆ. 7ನೇ ತರಗತಿಯಲ್ಲೇ ಈ ನಿಯಮ ಬಂದಿದ್ದರೆ 8ನೇ ತರಗತಿಗೆ ಅವಳನ್ನು ಬೇರೆ ಶಾಲೆಗೆ ಸೇರಿಸಬಹುದಿತ್ತು. ಇದೀಗ ನನಗೆ ಶುಲ್ಕ ಕಟ್ಟದೆ ಬೇರೆ ದಾರಿಯೇ ಇಲ್ಲ, ನಮ್ಮಂತಹವರ ಗೋಳನ್ನು ಸರ್ಕಾರ ಗಮನಿಸಬೇಕು ’ ಎಂದು ಲ್ಯಾಬ್‌ ಟೆಕ್ನಿಷಿಯನ್‌ ಆದ ನಂಜುಂಡಯ್ಯ ಹೇಳಿದರು.

‘ಪ್ರತಿದಿನ ಕಚೇರಿಗೆ ದೂರುಗಳು ಬರುತ್ತಲೇ ಇವೆ, ಸರ್ಕಾರ ತಕ್ಷಣ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು’ ಎಂದು ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆಯ ಅಧ್ಯಕ್ಷ ಬಿ.ಎನ್‌.ಯೋಗಾನಂದ ಹೇಳಿದರು.

‘ಸರ್ಕಾರ ನಿರ್ಧರಿಸಿದರೆ ಜಾರಿಗೆ ತರುತ್ತೇವೆ’
‘ಆರ್‌ಟಿಇ ನಿಯಮದ ಪ್ರಕಾರ 8ನೇ ತರಗತಿವರೆಗೆ ಮಾತ್ರ ಸರ್ಕಾರ ಮಕ್ಕಳ ಶಾಲಾ ಶುಲ್ಕವನ್ನು ಭರಿಸಬೇಕು. 9 ಮತ್ತು 10ನೇ ತರಗತಿಗೆ ಶುಲ್ಕವನ್ನು ಪೋಷಕರು ಭರಿಸಬೇಕು ಇಲ್ಲವೇ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಆರ್‌ಟಿಇ ಅನ್ನು 9 ಮತ್ತು 10ನೇ ತರಗತಿಗೆ ವಿಸ್ತರಿಸಬೇಕು ಎಂದು ಸರ್ಕಾರ ನಿರ್ಧರಿಸಿದರೆ ನಾವು ಅದನ್ನು ಜಾರಿಗೆ ತರುತ್ತೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್‌ ಹೇಳಿದರು.

‘ಕೇಂದ್ರ ನೆರವಿನಮಧ್ಯಾಹ್ನದ ಬಿಸಿಯೂಟ ಯೋಜನೆ ಇರುವುದು 1ರಿಂದ 8ನೇ ತರಗತಿ ಮಕ್ಕಳಿಗೆ ಮಾತ್ರ. ಆದರೆ 9 ಮತ್ತು 10ನೇ ತರಗತಿಗೆ ಬಿಸಿಯೂಟ ನೀಡುತ್ತಿರುವುದು ರಾಜ್ಯ ಸರ್ಕಾರದ ದುಡ್ಡಿನಿಂದ. ಇದೇ ರೀತಿ ಆರ್‌ಟಿಇ ಅನ್ನು 9 ಮತ್ತು 10ನೇ ತರಗತಿಗಳಿಗೆ ರಾಜ್ಯ ಸರ್ಕಾರ ವಿಸ್ತರಿಸಿದ್ದೇ ಆದರೆ ಕೇಂದ್ರ ಸರ್ಕಾರದಿಂದ ಆಕ್ಷೇಪಣೆ ಬರಲಾರದು, ಆದರೆ ಸರ್ಕಾರ ಕೈಗೊಳ್ಳುವ ನಿರ್ಧಾರವೇ ಇಲ್ಲಿ ಪ್ರಮುಖವಾದುದು’ ಎಂದು ತಿಳಿಸಿದರು.

*
ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವುದು ಸಾಧ್ಯವಾಗಿಲ್ಲ, ದಾವೋಸ್‌ನಿಂದ ಮರಳಿದ ಬಳಿಕ ಈ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸುವೆ.
-ಎಸ್‌.ಸುರೇಶ್‌ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT