ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ

7
ರಕ್ಷಣಾ ಕಾರ್ಯಾಚರಣೆ ವಿಳಂಬ, ಜೀವನ್ಮರಣ ಸ್ಥಿತಿಯಲ್ಲಿ 600 ಮಂದಿ, ಹಲವರು ಕಣ್ಮರೆ ಶಂಕೆ, ಮತ್ತೊಂದು ಸಾವು

ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ

Published:
Updated:
Deccan Herald

ಮಡಿಕೇರಿ: ಮಳೆಗೆ ಜಿಲ್ಲೆಯ ಜನರು ನಲುಗಿದ್ದು, ಕ್ಷಣಕ್ಷಣಕ್ಕೂ ಗುಡ್ಡಗಳು ಕುಸಿಯುತ್ತಿವೆ. ಅದರಲ್ಲಿ ಸಿಲುಕಿಕೊಂಡವರು ಎರಡು ದಿನಗಳಾದರೂ ಹೊರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.

ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್‌ ಕಾರ್ಯಾಚರಣೆ ವಿಳಂಬವಾಗಿದ್ದು, ಜಿಲ್ಲೆಯ ವಿವಿಧೆಡೆ ಅಂದಾಜು 600ಕ್ಕೂ ಹೆಚ್ಚು ಮಂದಿ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಹಲವರು ಮಣ್ಣಿನ ಅಡಿ ಸಿಲುಕಿದ್ದರೆ, ಕೆಲವರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಮಾದಾಪುರ ಮುವತೊಕ್ಲು ಗ್ರಾಮದಲ್ಲಿ ಗುಡ್ಡ ಕುಸಿದು ಸಾಬು (30) ಮೃತಪಟ್ಟಿದ್ದಾರೆ. ಮತ್ತೆರಡು ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಮಾಂದಲ್‌ಪಟ್ಟಿ, ಮಕ್ಕಂದೂರು, ಹಾಲೇರಿ, ಗಾಳಿಬೀಡು, ಜೋಡಪಾಲ, ಹಟ್ಟಿಹೊಳೆ, 2ನೇ ಮೊಣ್ಣಂಗೇರಿ, ಮೇಘತ್ತಾಳ್‌, ತಂತಿಪಾತ, ಮುಕ್ಕೊಡ್ಲು ಬೆಟ್ಟದಲ್ಲಿ ಸಂತ್ರಸ್ತರು ರಕ್ಷಣೆಗೆ ಮೊರೆಯಿಡುತ್ತಿದ್ದಾರೆ. ಆ ಸ್ಥಳಕ್ಕೆ ಎನ್‌ಡಿಆರ್‌ಎಫ್‌ ಹಾಗೂ ಯೋಧರಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಮಕ್ಕಂದೂರು ಆಸುಪಾಸಿನ ಹಲವು ಗ್ರಾಮಗಳೂ ಉಳಿದಿಲ್ಲ. ಗುಡ್ಡ ಕುಸಿಯುತ್ತಿರುವುದನ್ನು ಕಂಡು ರಾತ್ರೋರಾತ್ರಿ ಇಳಿದು ಬಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿ ಸುಮಾರು 150 ಮಂದಿ ತಂಗಿದ್ದಾರೆ. ಅವರ ರಕ್ಷಣೆಯೂ ಸಾಧ್ಯವಾಗಿಲ್ಲ. ರಕ್ಷಣಾ ಸಿಬ್ಬಂದಿಯ ಮೇಲೆಯೇ ಮಣ್ಣು ಕುಸಿಯುತ್ತಿದೆ. ಜತೆಗೆ, ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿಯಿದೆ.

ಹಾರಂಗಿ ಹಿನ್ನೀರು ಮಕ್ಕಂದೂರು ಬೆಟ್ಟವನ್ನೇ ಬಲಿ ಪಡೆಯುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ಪ್ರಸಿದ್ಧ ಕೋಟೆಬೆಟ್ಟವೂ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಬೆಟ್ಟದ ತಪ್ಪಲಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿದೆ.

ಮಡಿಕೇರಿ– ಮಂಗಳೂರು ನಡುವೆ ಇಡೀ ಗುಡ್ಡವೇ ಕುಸಿದು ಬೆಟ್ಟದ ತಪ್ಪಲಿನ ಮನೆಗಳ ಮೇಲೆ ಬಿದ್ದಿದೆ. ಮೈಸೂರು– ಬಂಟ್ವಾಳ ರಸ್ತೆಯ ಉದ್ದಕ್ಕೂ ಮಣ್ಣು ಬಿದ್ದಿದ್ದು ಸದ್ಯಕ್ಕೆ ಸಂಚಾರ ಸಾಧ್ಯ ಅಗುವುದಿಲ್ಲ.

ರಸ್ತೆ, ಮನೆ, ಆಸ್ತಿಪಾಸ್ತಿ ಸೇರಿದಂತೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

‘ಸಂತ್ರಸ್ತರ ಕಾರ್ಯಾಚರಣೆಗೆ ಮೂರು ಹೆಲಿಕಾಪ್ಟರ್‌ಗಳು ಸನ್ನದ್ಧವಾಗಿದ್ದರೂ ಹವಾಮಾನ ವೈಪರೀತ್ಯದಿಂದ ರಕ್ಷಣೆ ಸಾಧ್ಯವಾಗುತ್ತಿಲ್ಲ. ಕಾರವಾರದಿಂದ ನೌಕಾಪಡೆ, ಸೇನೆಯಿಂದ ಹೆಚ್ಚುವರಿಯಾಗಿ 80 ಯೋಧರನ್ನು ಕರೆಸಿಕೊಳ್ಳಲಾಗುತ್ತಿದೆ. ರಕ್ಷಣೆಗೆ ಬೇಕಾದ ಸಲಕರಣೆ ತರುತ್ತಿದ್ದಾರೆ. ಮತ್ತೆ 23 ಕಡೆ ಗಂಜಿಕೇಂದ್ರ ತೆರೆಯಲು ಸೂಚನೆ ನೀಡಿದ್ದೇನೆ. ಶನಿವಾರ ಬೆಳಿಗ್ಗೆ ಹೆಲಿಕಾಪ್ಟರ್ ಬಳಸಿ ರಕ್ಷಣೆ ಮಾಡುವ ಕೆಲಸ ಆರಂಭವಾಗುವ ಸಾಧ್ಯತೆ ಇದೆ’ ಎಂದು ದೇಶಪಾಂಡೆ ಮಾಹಿತಿ ನೀಡಿದರು.

‘ವಿವಿಧ ಜಿಲ್ಲೆಗಳಿಂದ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಮೈಸೂರಿನಿಂದ ವೈದ್ಯರು ಹಾಗೂ ನರ್ಸ್‌ ತಂಡಗಳು ಆಗಮಿಸುತ್ತಿವೆ. ಹಾಲಿನ ಪೌಡರ್‌, ಗ್ಯಾಸ್‌, ಸೀಮೆಎಣ್ಣೆ, ಔಷಧಿ, ಅಕ್ಕಿ, ಹೊದಿಕೆ, ಬಟ್ಟೆಗಳನ್ನು ‍ಪೂರೈಕೆ ಮಾಡಲಾಗುವುದು’ ಎಂದು ತಿಳಿಸಿದರು.

ಸಂಚಾರ ಸ್ಥಗಿತ: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿದು ರಸ್ತೆ ಹಾಗೂ ತಡೆಗೋಡೆಗೆ ಹಾನಿಯುಂಟಾಗಿದೆ. ಗ್ರಾಮ ಸಂಪರ್ಕ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ತೂಗು ಸೇತುವೆಗೆ ಹಾನಿ: ಕುಶಾಲನಗರ ಸಮೀಪದ ಕಣಿವೆ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಳಿ ಕಾವೇರಿ ಮತ್ತು ಹಾರಂಗಿ ನದಿಗಳು ಸಂಗಮಗೊಂಡು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತೂಗು ಸೇತುವೆಗೆ ಹಾನಿ ಉಂಟಾಗಿದೆ. ಕೊಡಗು ಹಾಗೂ ಮೈಸೂರು ಜಿಲ್ಲೆಯ ಗಡಿಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.

ಕುಸಿದ ಅಂತರರಾಜ್ಯ ಹೆದ್ದಾರಿ: ಗೋಣಿಕೊಪ್ಪಲು– ಹುದಿಕೇರಿ– ಶ್ರೀಮಂಗಲ ನಡುವಿನ ಅಂತರರಾಜ್ಯ ಹೆದ್ದಾರಿ ಟಿ.ಶೆಟ್ಟಿಗೇರಿ ಪೋಕಳತೋಡ್ ಬಳಿ ಕುಸಿದಿದೆ. ಈ ಮಾರ್ಗದ ಬಸ್ ಸಂಚಾರ ಶುಕ್ರವಾರ ಮುಂಜಾನೆಯಿಂದ ಸ್ಥಗಿತಗೊಂಡಿದೆ. ಬೈಕ್, ಕಾರು ಮತ್ತಿತರ ಸಣ್ಣ ವಾಹನಗಳು ಮಾತ್ರ ಸಂಚರಿಸುತ್ತಿವೆ.

ಮೈಸೂರು– ಮಡಿಕೇರಿ ಬಸ್‌ ಸಂಚಾರ ಸ್ಥಗಿತ: ಭಾರಿ ಮಳೆಯಿಂದ ಅಲ್ಲಲ್ಲಿ ಗುಡ್ಡ ಕುಸಿದಿರುವ ಕಾರಣ ಮೈಸೂರಿನಿಂದ ಕೊಡಗಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೈಸೂರು ಮೂಲಕ ಕೊಡಗು ತಲುಪುತ್ತಿದ್ದ ಬಸ್‌ಗಳು ತಮ್ಮ ಸಂಚಾರವನ್ನು ಕುಶಾಲನಗರಲ್ಲೇ ಕೊನೆಗೊಳಿಸಿದವು. ಪ್ರಸ್ತುತ ಮಡಿಕೇರಿ ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳು ಬಂದ್ ಆಗಿವೆ.

ಆರ್ಭಟ ಜೋರು: ಹಾಸನ ಜಿಲ್ಲೆಯಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಗ್ರಾಮದೊಳಗೆ ನೀರು ನುಗ್ಗಿ 150ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ, ಹಲವು ಮನೆಗಳು ಕುಸಿದಿವೆ.

ರೈಲ್ವೆ ಸಿಬ್ಬಂದಿ ರಕ್ಷಣೆ: ಸಕಲೇಶಪುರ ಶಿರಾಡಿ ಘಾಟ್‌ನಲ್ಲಿ ಗುಡ್ಡಕುಸಿತ ಮುಂದುವರಿದಿದೆ. ಯಡಕುಮರಿ ರೈಲು ನಿಲ್ದಾಣ ಮೇಲೆ ಗುಡ್ಡದ ಮಣ್ಣು ಕುಸಿದು ಸಿಲುಕಿಕೊಂಡಿದ್ದ 12 ಮಂದಿ ರೈಲ್ವೆ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ಹೆಲಿಕಾಪ್ಟರ್‌ ಮೂಲಕ ರಕ್ಷಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಟ್ರಕ್ಕಿಂಗ್‌ ಪರಿಣತರು ಮತ್ತು ಪೊಲೀಸರು ಕಾಗಿನೆರೆ ಮೂಲಕ ಕಾರ್ಯಾಚರಣೆ ನಡೆಸಿ, ಎಲ್ಲರನ್ನು ಸುರಕ್ಷಿತವಾಗಿ ಸಕಲೇಶಪುರ ಪಟ್ಟಣಕ್ಕೆ ಕರೆತಂದರು.

ಹೆದ್ದಾರಿ ಬಂದ್: ಕಬಿನಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದ್ದು, ಮೈಸೂರು– ನಂಜನಗೂಡು ಹೆದ್ದಾರಿಗೆ ನೀರು ನುಗ್ಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ನಂಜನಗೂಡು ದೇವಸ್ಥಾನದ ಸುತ್ತಲಿನ ಪ್ರದೇಶ ಜಲಾವೃತಗೊಂಡಿದೆ. ಕಬಿನಿಯಿಂದ 80,000 ಕ್ಯುಸೆಕ್‌, ನುಗು ಜಲಾಶಯದಿಂದ 7,500, ತಾರಕದಿಂದ 2,500 ಕ್ಯುಸೆಕ್‌ ನೀರನ್ನು ಹೊರಬಿಡುತ್ತಿದ್ದು, ಸುತ್ತೂರಿನ ಸೇತುವೆ ನೀರಿನಲ್ಲಿ ಮುಳುಗಿದೆ. ಕೆಆರ್‌ಎಸ್‌ ಜಲಾಶಯದಿಂದ 1.30 ಲಕ್ಷ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ.

ತಡೆಗೋಡೆ: ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮೇಲೆ ಜನ, ಜಾನುವಾರು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಿಮೆಂಟ್‌ ಇಟ್ಟಿಗೆಗಳಿಂದ ತಡೆಗೋಡೆ ನಿರ್ಮಿಸಲಾಗಿದೆ.

ಮುಂದುವರಿದ ನೆರೆ: ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕಾವೇರಿ ನದಿ ಪಾತ್ರದಲ್ಲಿರುವ ಗ್ರಾಮಗಳಾದ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ ಗ್ರಾಮಗಳ ತಗ್ಗು ಪ್ರದೇಶಗಳು ಐದು ದಿನಗಳಿಂದ ಜಲಾವೃತವಾಗಿವೆ.

ಕೊಡಗು ಸಹಾಯವಾಣಿ: 08272 221077
ಜಿಲ್ಲಾಧಿಕಾರಿ: Pi Shreevidya - 94826 28409
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ: Summan D. -94808 04901

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !