ಅನುಕಂಪ, ಜನಾಕ್ರೋಶ ನನ್ನನ್ನು ದಡ ಸೇರಿಸಲಿದೆ: ರಿಜ್ವಾನ್‌ ಅರ್ಷದ್‌

ಬುಧವಾರ, ಏಪ್ರಿಲ್ 24, 2019
29 °C
ಪ್ರಜಾವಾಣಿ ಸಂದರ್ಶನ

ಅನುಕಂಪ, ಜನಾಕ್ರೋಶ ನನ್ನನ್ನು ದಡ ಸೇರಿಸಲಿದೆ: ರಿಜ್ವಾನ್‌ ಅರ್ಷದ್‌

Published:
Updated:
Prajavani

* ಪೈಪೋಟಿಯಲ್ಲಿ ಗೆದ್ದು ಟಿಕೆಟ್‌ ಗಿಟ್ಟಿಸಿಕೊಂಡಿದ್ದೀರಿ ಅಲ್ಲವೇ?

ಹ್ಹ..ಹ್ಹ... (ನಗು). ಕ್ಷೇತ್ರ ವ್ಯಾಪ್ತಿಯ ನಾಲ್ವರು ಶಾಸಕರು, ಪಾಲಿಕೆ ಸದಸ್ಯರು, ಪಕ್ಷದ ಬ್ಲಾಕ್‌ ಘಟಕಗಳ ಪದಾಧಿಕಾರಿಗಳು ಹೀಗೆ ಪಕ್ಷದ ಶೇ 80ಕ್ಕೂ ಪ್ರಮುಖರು ನನಗೇ ಟಿಕೆಟ್‌ ನೀಡಬೇಕು ಎಂದು ವರಿಷ್ಠರ ಮುಂದೆ ಅಭಿಪ್ರಾಯ ಮಂಡಿಸಿದ್ದರು. ಈ ಬೆಂಬಲ ಶೇ 50ರಷ್ಟು ಇರುತ್ತಿದ್ದರೂ ವಾದ–ವಿವಾದಕ್ಕೆ ಕಾರಣವಾಗಿ ಸಮಸ್ಯೆಯಾಗುತ್ತಿತ್ತು. ಆದರೆ, ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಟಿಕೆಟ್‌ ಆಕಾಂಕ್ಷಿಗಳಾಗಿದ್ದವರೂ ನನ್ನ ಬೆನ್ನಿಗೆ ನಿಂತಿದ್ದಾರೆ.

* ಪ್ರಬಲ ಆಕಾಂಕ್ಷಿಯಾಗಿದ್ದ ಶಾಸಕ ರೋಷನ್‌ ಬೇಗ್‌ ಮುನಿಸಿಕೊಂಡಿದ್ದಾರೆ ಎಂಬ ಮಾತಿದೆ...

ಅವರೂ ಟಿಕೆಟ್ ಬಯಸಿದ್ದರು. ನನಗೆ ಟಿಕೆಟ್‌ ಘೋಷಣೆಯಾದ ಆರಂಭದಲ್ಲಿ ಅವರಿಗೂ ಸ್ವಲ್ಪ ಬೇಸರವಾಗಿತ್ತು ನಿಜ. ಆದರೆ, ಈಗ ಇಲ್ಲ. ನನ್ನ ಪರ ಅವರೂ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

* ಅಂದರೆ, ನಿಮ್ಮೊಳಗೆ ‘ಗುಂಪುಗಾರಿಕೆ’ ಇಲ್ಲ ಎಂದಾಯಿತು...

ಸಮುದಾಯದ ರಾಜಕಾರಣ ಮಾಡಿದರೆ ಆ ರೀತಿಯ ಯೋಚನೆ ಮಾಡಬೇಕು. ಆದರೆ, ನಾನು ಎಂದೂ ಆ ರೀತಿ ಯೋಚನೆ ಮಾಡಿದವನಲ್ಲ. ಯುವ ಕಾಂಗ್ರೆಸ್‌ನಿಂದ ಬೆಳೆದು ಈ ಮಟ್ಟಕ್ಕೆ ಬಂದಿದ್ದೇನೆ. ಎಲ್ಲ ಜಾತಿ, ಧರ್ಮ, ವರ್ಗದವರ ಜೊತೆ ಸಂಬಂಧ– ವಿಶ್ವಾಸ ಬೆಳೆಸಿಕೊಂಡಿದ್ದೇನೆ. 

* ಕ್ಷೇತ್ರದಲ್ಲಿ ಮೋದಿ ಹವಾ ಇದೆಯಂತೆ. ನಿಮ್ಮ ಗಮನಕ್ಕೂ ಬಂದಿದೆಯಾ?

ಮೋದಿ ಧೋರಣೆಗೆ ಜನ ಬೇಸತ್ತಿದ್ದಾರೆ. ಅಭಿವೃದ್ಧಿ ಇಲ್ಲ. ವ್ಯಾಪಾರ– ವಹಿವಾಟಿಗೂ ಸಮಸ್ಯೆಯಾಗಿದೆ. ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ. ಹೀಗಾಗಿ, ಪರ್ಯಾಯ ಸರ್ಕಾರ ಬೇಕೆಂದು ಜನ ಈಗಾಗಲೇ ತೀರ್ಮಾನಿಸಿಬಿಟ್ಟಿದ್ದಾರೆ. ಆ ಕಾರಣಕ್ಕೆ ಜನ ಈ ಬಾರಿ ಕಾಂಗ್ರೆಸ್‌ ಪರ ನಿಲ್ಲುವ ವಿಶ್ವಾಸವಿದೆ.

* ನಿಮ್ಮ ಬಗ್ಗೆಯೂ ಅನುಕಂಪ ಇದೆಯಂತೆ ಹೌದೇ?

ಕಳೆದ ಚುನಾವಣೆಯಲ್ಲಿ ಸೋತರೂ ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೆ ಎಂಬ ಕಾರಣಕ್ಕೆ ಅನುಕಂಪದ ಭಾವ ನನ್ನ ಬಗ್ಗೆ ಇದೆ. ಪ್ರಚಾರ ವೇಳೆ ಅದು ನನ್ನ ಅನುಭವಕ್ಕೆ ಬಂದಿದೆ. ಇವನು ನಮ್ಮವನು. ಕೈಗೆ ಸಿಗುತ್ತಿದ್ದಾನೆ ಎಂದು ಆಡಿಕೊಳ್ಳುತ್ತಿದ್ದಾರೆ. ನಾನೂ ಜನರ ಜೊತೆಗೇ ನಿಂತು ಕೆಲಸ ಮಾಡಿದ್ದೇನೆ. ತಾಳ್ಮೆಯಿಂದ ಬೆರೆತಿದ್ದೇನೆ.

*ಎರಡು ಬಾರಿ ಗೆದ್ದ ಬಿಜೆಪಿಯ ಪಿ.ಸಿ. ಮೋಹನ್‌ ವಿರುದ್ಧ ಗೆಲುವು ಸಲೀಸೇ?

ಗೆದ್ದ ಬಳಿಕ ಪಿ.ಸಿ. ಮೋಹನ್‌ ಕ್ಷೇತ್ರದಲ್ಲೆಲ್ಲೂ ಕಾಣಿಸಿಕೊಂಡಿಲ್ಲ ಎನ್ನುವ ಅಪವಾದವಿದೆ. ಸಂಸತ್‌ ಒಳಗೆ ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪಿಸಿ ಅವರು ಎಂದೂ ಹೋರಾಟ ಮಾಡಿಲ್ಲ. ಸಂಸದರು ಜನಪರ ಕೆಲಸವನ್ನೂ ಮಾಡಿಲ್ಲ. ಆ ಆಕ್ರೋಶವೇ ಮತಗಳಾಗಿ ಪರಿವರ್ತನೆಯಾಗುವ ನಂಬಿಕೆ ಇದೆ.

* ನೀವು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಬಿಜೆಪಿಯವರು ಹಿಂದುತ್ವ ಅಜೆಂಡಾ ಬಳಸುತ್ತಿದ್ದಾರಲ್ಲ?

ನಾನೂ ಸಾರ್ವಜನಿಕ ಜೀವನದಲ್ಲಿದ್ದೇನೆ. ಎಲ್ಲ ಧರ್ಮ– ಜಾತಿಗಳ ಜನರ ಜೊತೆ ಒಂದಾಗಿದ್ದೇನೆ. ದೇವಸ್ಥಾನ, ಚರ್ಚ್‌ ಹೀಗೆ ಎಲ್ಲ ಕಡೆ ಭೇಟಿ ನೀಡಿದ್ದೇನೆ. ಹಾಗೆಂದು, ಚುನಾವಣೆಗಾಗಿ ಅಲ್ಲ. ಎಲ್ಲ ಧರ್ಮಗಳ ಜನರನ್ನು ಗೌರವಿಸುವ ಜೊತೆಗೆ ಅವರೊಂದಿಗೆ ಒಬ್ಬನಾಗಿದ್ದೇನೆ. ಸಮಾಜದಲ್ಲಿ ಒಡಕು ಮೂಡಿಸುವ ಯಾವುದೇ ಹೇಳಿಕೆ ನಾನು ನೀಡಿಲ್ಲ. ಜನರನ್ನು ಒಂದು ಗೂಡಿಸಿದ್ದೇನೆ.

* ಜೆಡಿಎಸ್‌ ಜೊತೆಗಿನ ಮೈತ್ರಿಯಿಂದ ಲಾಭವಾಗುವುದು?

‌ಜೆಡಿಎಸ್‌ ಬೆಂಬಲ ಖಂಡಿತಾ ಅನುಕೂಲ ಆಗಲಿದೆ. ಜೆಡಿಎಸ್‌ ನಾಯಕರು, ಕಾರ್ಯಕರ್ತರು ಪ್ರಚಾರದಲ್ಲಿ ಜೊತೆಗಿದ್ದಾರೆ. ಅಷ್ಟಕ್ಕೂ ದೇವೇಗೌಡರಂಥ ಹಿರಿಯರು ನನ್ನ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರುವುದು ಸೌಭಾಗ್ಯ. 

* ಪ್ರಕಾಶ್‌ ರಾಜ್‌ ಸ್ಪರ್ಧೆಯಿಂದ ಕಾಂಗ್ರೆಸ್‌ ಮತಗಳು ವಿಭಜನೆ ಆಗಬಹುದು ಎಂಬ ಮಾತಿದೆಯಲ್ಲ?

ಇಲ್ಲಿ ಕಾಂಗ್ರೆಸ್‌– ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇದೆ. ಜನರಿಗೆ ಈ ಅರಿವು ಇದೆ. ಹೀಗಾಗಿ, ಪ್ರಕಾಶ್‌ರಾಜ್‌ ಸ್ಪರ್ಧೆಯಿಂದ ಕಾಂಗ್ರೆಸ್‌ ಮತ ಬ್ಯಾಂಕಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಒಮ್ಮೆ ಸೋತಿದ್ದಾನೆ. ಈ ಬಾರಿ ಅವಕಾಶ ಕೊಡೋಣ ಎಂಬ ಮನಸ್ಥಿತಿ ಜನರಲ್ಲಿದೆ.

* ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್‌ ನಿರ್ಲಕ್ಷಿಸುತ್ತಿದೆ ಎಂಬ ಆರೋಪ ಇದೆಯಲ್ಲ?

ಕಾಂಗ್ರೆಸ್‌ ಪಕ್ಷ ಎಲ್ಲ ಸಮುದಾಯ, ಜಾತಿ, ಜನಾಂಗ, ವರ್ಗಕ್ಕೆ ಸಮಾನ ಅವಕಾಶ ನೀಡಿದೆ. ಅಲ್ಪಸಂಖ್ಯಾತರು, ಬಹುಸಂಖ್ಯಾತರು, ದಲಿತರು, ಹಿಂದುಳಿದವರು ಹೀಗೆ ಎಲ್ಲರಿಗೂ ನಮ್ಮ ಪಕ್ಷ ಸಾಮಾಜಿಕ ನ್ಯಾಯ ಕಲ್ಪಿಸಿದೆ. ಆದರೆ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿಯವರು ಒಬ್ಬನೇ ಒಬ್ಬ ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೆಟ್‌ ನೀಡಿಲ್ಲ.

* ಮೋದಿ ತೇಲಿಬಿಟ್ಟ ರಾಷ್ಟ್ರೀಯತೆ, ಭಾವನಾತ್ಮಕತೆ ವಿಷಯವೇ ಚುನಾವಣೆ ವಿಷಯಗಳಾಗಿವೆಯಲ್ಲವೇ?

ದೇಶದ ಸುರಕ್ಷತೆ ವಿಷಯದಲ್ಲಿ ಮೋದಿ ಎಚ್ಚರದಲ್ಲಿರುತ್ತಿದ್ದರೆ ಪುಲ್ವಾಮಾ ದಾಳಿಗೆ ಬಳಕೆಯಾದ 300 ಕಿಲೋ ಆರ್‌ಡಿಎಕ್ಸ್‌ ಗಡಿಯೊಳಗೆ ಹೇಗೆ ಬರುತ್ತಿತ್ತು. ಇದು ಗುಪ್ತಚರ ವೈಫಲ್ಯ ಅಲ್ಲವೇ. 44 ಜನ ಯೋಧರು ಹುತಾತ್ಮರಾದರು. ಆದರೆ, ಈ ವೈಫಲ್ಯಕ್ಕೆ ಒಬ್ಬನೇ ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿಲ್ಲ. ದೇಶದ ಗಡಿಯಲ್ಲಿ ಚೀನಾ ಅಧಿಪತ್ಯ ಸ್ಥಾಪಿಸಿದೆ. ಹಿಂದೂ ರಾಷ್ಟ್ರ ನೇಪಾಳ ಕೂಡಾ ನಮ್ಮಿಂದ ದೂರ ಆಗಿದೆ. ಶ್ರೀಲಂಕಾದಲ್ಲಿ ಚೀನಾ ಅತಿ ದೊಡ್ಡ ನೌಕಾ ನೆಲೆ ಸ್ಥಾಪಿಸಿದೆ. ಪ್ರಧಾನಿ ಶಕ್ತಿಶಾಲಿ ಅಂತೀರಿ. ಇದೆಲ್ಲ ಭವಿಷ್ಯದಲ್ಲಿ ಅಪಾಯ ಅಲ್ಲವೇ. ವಿದೇಶಾಂಗ ನೀತಿಯೇ ವಿಫಲವಾಗಿದೆ. ಅಂಥವರು ದೇಶದ ಭದ್ರತೆ ಬಗ್ಗೆ ಮಾತನಾಡುತ್ತಾರೆ. ಯುವ ಸಮುದಾಯಕ್ಕೆ ಭಾವನಾತ್ಮಕ ವಿಷಯಕ್ಕಿಂತಲೂ ಭವಿಷ್ಯದ ಚಿಂತೆ ಇದೆ. ಜನ ಪ್ರಜ್ಞಾವಂತರಿದ್ದಾರೆ. ಇಂಡಿಯಾ ಶೈನಿಂಗ್‌ ಎಂದು 2004ರಲ್ಲಿ ಬಿಜೆಪಿಯವರು ಹೇಳಿದರು. ಫಲಿತಾಂಶ ಏನಾಯಿತು. 2019ರ ತೀರ್ಮಾನವೂ ಅದೇ ರೀತಿ ಇರುತ್ತದೆ.

* ರಾಹುಲ್‌ ಆಪ್ತರೆಂದೇ ಗುರುತಿಸಿಕೊಂಡಿರುವ ನಿಮಗೆ, ರಾಷ್ಟ್ರ ರಾಜಕಾರಣದ ಕಡೆಗೆ ಹೆಚ್ಚು ಒಲವು ಅನಿಸುತ್ತದೆ...

ನಾನು ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಯುವ ಕಾಂಗ್ರೆಸ್‌ನ ಉಸ್ತುವಾರಿಯೂ ಆಗಿದ್ದರು. ಅವರ ಜೊತೆಗಿನ ಒಡನಾಟ ರಾಜಕೀಯವಾಗಿ ಬೆಳೆಯಲು ದಾರಿ ಮಾಡಿಕೊಟ್ಟಿದೆ. ನನ್ನಂತೆ ಅನೇಕರನ್ನು ಅವರು ಬೆಳೆಸಿದ್ದಾರೆ. ನಿಷ್ಠೆಯಿಂದ ಕೆಲಸ ಮಾಡುವವರಿಗೆ ಅವರು ಬೆಂಬಲವಾಗಿ ನಿಲ್ಲುತ್ತಾರೆ. ಇವತ್ತು ಈ ಮಟ್ಟಕ್ಕೆ ಏರಲು ಆ ವಿಶ್ವಾಸವೇ ಕಾರಣ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ 2–3 ಬಂದರೂ ಈ ಕಾರಣಕ್ಕೆ ನಿರಾಕರಿಸಿದ್ದೆ. ಎರಡು ಬಾರಿ ಲೋಕಸಭೆಗೆ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟ ರಾಹುಲ್‌ಗೆ ಋಣಿಯಾಗಿದ್ದೇನೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !