ರಿಜ್ವಾನ್‌– ಪ್ರಕಾಶ್‌ರಾಜ್‌ ವಾಕ್ಸಮರ

ಶುಕ್ರವಾರ, ಏಪ್ರಿಲ್ 26, 2019
36 °C
ಮಹಿಳಾ ಮೀಸಲಾತಿ: ಜನರೊಂದಿಗೆ ಅಭ್ಯರ್ಥಿಗಳ ಸಂವಾದ ಕಾರ್ಯಕ್ರಮ

ರಿಜ್ವಾನ್‌– ಪ್ರಕಾಶ್‌ರಾಜ್‌ ವಾಕ್ಸಮರ

Published:
Updated:
Prajavani

ಬೆಂಗಳೂರು: ಮಹಿಳಾ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಹಾಗೂ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ರಾಜ್‌ ಮಧ್ಯೆ ವಾಕ್ಸಮರ ನಡೆಯಿತು.

ಬೆಂಗಳೂರು ರಾಜಕೀಯ ಕ್ರಿಯಾಸಮಿತಿಯ (ಬಿ–ಪ್ಯಾಕ್‌) ಆಶ್ರಯದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಸಹಯೋಗದಲ್ಲಿ ಭಾರತೀಯ ವಿದ್ಯಾಭವನದಲ್ಲಿ ಸೋಮವಾರ ನಡೆದ ‘ಜನರೊಂದಿಗೆ ಅಭ್ಯರ್ಥಿಗಳ ಭೇಟಿ (ಚುನಾವಣಾ ಹಬ್ಬ)’ ಕಾರ್ಯಕ್ರಮ ಈ ವಿದ್ಯಮಾನಕ್ಕೆ ಸಾಕ್ಷಿಯಾಯಿತು.

ಎರಡು ದಶಕಗಳಿಂದ ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗದೆ ಇರಲು ಕಾರಣ ಏನು ಎಂದು ಸಭಿಕರೊಬ್ಬರು ‍ಪ್ರಶ್ನಿಸಿದರು. ರಿಜ್ವಾನ್‌ ಪ್ರತಿಕ್ರಿಯಿಸಿ, ‘ಮಹಿಳಾ ಮೀಸಲಾತಿ ಜಾರಿಗೆ ಕಾಂಗ್ರೆಸ್‌ ಬದ್ಧ. ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಲೋಕಸಭೆಯಲ್ಲಿ ಅದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ್ದು ನಮ್ಮ ಪಕ್ಷ’ ಎಂದರು.

ಪ್ರಕಾಶ್‌ರಾಜ್‌, ‘ಮಹಿಳೆಯರಿಗೆ ಸಮಾನ ಅವಕಾಶ ನೀಡುವುದು ಅವರಿಗೆ ಮಾಡುವ ಅನುಕೂಲ ಎಂದು ಪುರುಷರು, ಸರ್ಕಾರ, ರಾಜಕಾರಣಿಗಳು ಹಾಗೂ ಸಮಾಜ ತಿಳಿದಂತಿದೆ. ಈ ಧೋರಣೆ ಸರಿಯಲ್ಲ’ ಎಂದರು. ರಾಜಕಾರಣಿಗಳು ಎಂಬ ಪದ ಬಳಕೆಗೆ ರಿಜ್ವಾನ್‌ ಆಕ್ಷೇಪಿಸಿದರು. ‘ನಾನು ರಿಜ್ವಾನ್‌ ಅವರನ್ನು ಉದ್ದೇಶಿಸಿ ಈ ಮಾತನ್ನು ಆಡಿಲ್ಲ. ನಮ್ಮ ಸಮಾಜದ ದೃಷ್ಟಿಕೋನದ ಬಗ್ಗೆ ಬೆಳಕು ಚೆಲ್ಲಿದೆ’ ಎಂದು ಪ್ರಕಾಶ್‌ರಾಜ್‌ ಸಮರ್ಥಿಸಿಕೊಂಡರು.

ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಸಂವಾದಕ್ಕೆ ಗೈರುಹಾಜರಾಗಿದ್ದರು. ಬಿ.ಪ್ಯಾಕ್‌ ಟ್ರಸ್ಟಿ ಕೆ.ಜೈರಾಜ್‌ ಸಮನ್ವಯಕಾರರಾಗಿದ್ದರು.

ಪ್ರಕಾಶ್‌ರಾಜ್‌ ಹೇಳಿದ್ದು

* ಚುನಾವಣೆಯ ಪರಿಭಾಷೆ ಬದಲಿಸಬೇಕಿದೆ. ಯೋಗ್ಯ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅದು ಮತದಾರರ ಗೆಲುವು. ಅಸಮರ್ಥ ಅಭ್ಯರ್ಥಿ ಜಯಭೇರಿ ಬಾರಿಸಿದರೆ ಅದು ಮತ ಚಲಾಯಿಸಿದವರ ಸೋಲು.

* ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಶೇ 50ರಷ್ಟು ಇದೆ. ಅನೇಕ ವಿದ್ಯಾವಂತರು ಮತಗಟ್ಟೆಗಳ ಕಡೆಗೆ ಸುಳಿಯುವುದಿಲ್ಲ. ಶೇ 30ಕ್ಕೂ ಅಧಿಕ ಮತದಾರರು ಹಣ ‍ಪಡೆದೇ ಮತ ಚಲಾಯಿಸುತ್ತಾರೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕಿದೆ.

* ರಾಜ್ಯ ಸರ್ಕಾರ ₹33 ಸಾವಿರ ಕೋಟಿ ವೆಚ್ಚದಲ್ಲಿ ಎಲಿವೇಟೆಡ್‌ ಕಾರಿಡಾರ್ ನಿರ್ಮಾಣ ಮಾಡಲು ಮುಂದಾಗಿದೆ. ಆದರೆ, ಆ ಸರ್ಕಾರಕ್ಕೆ ನೀರಿನ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇಲ್ಲ.

* ರಾಜಕೀಯ ಪಕ್ಷಗಳ ಮರ್ಜಿಗೆ ತಕ್ಕಂತೆ ಕುಣಿಯಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ. ಸಂಚಾರ ದಟ್ಟಣೆ, ಮಾಲಿನ್ಯ ದಿಂದಾಗಿ ಕಂಗೆಟ್ಟಿರುವ ನಗರದ ಚಹರೆಯನ್ನು ಬದಲಿಸಬೇಕು ಎಂಬುದು ನನ್ನ ಉದ್ದೇಶ. 

ರಿಜ್ವಾನ್ ಅರ್ಷದ್‌ ಹೇಳಿದ್ದೇನು?

* ಬಿಬಿಎಂಪಿ ವ್ಯಾಪ್ತಿ ಈಗ 800 ಚದರ ಕಿ.ಮೀ.ಗೆ ವಿಸ್ತರಿಸಿದೆ. ಇದರಿಂದಾಗಿ ಪಾಲಿಕೆಯ ಮೇಲಿನ ಹೊರೆ ಹೆಚ್ಚಾಗಿದೆ. ಅಧಿಕಾರದ ವಿಕೇಂದ್ರೀಕರಣ ಆಗಬೇಕು. ಪಾಲಿಕೆ ವಿಭಜನೆ ಕುರಿತ ಬಿ.ಎಸ್‌.ಪಾಟೀಲ ಸಮಿತಿ ವರದಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಆದರೆ, ರಾಜಕೀಯ ಕಾರಣಗಳಿಂದಾಗಿ ರಾಷ್ಟ್ರಪತಿ ಅವರು ಅದಕ್ಕೆ ಒಪ್ಪಿಗೆ ನೀಡಿಲ್ಲ.

* ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಮತ ಕೇಳುತ್ತಿದ್ದಾರೆ. ಅವರು ಕಳೆದ ಐದು ವರ್ಷಗಳಲ್ಲಿ ಕೆಲಸ ಮಾಡಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಒಂದು ವೇಳೆ ನನ್ನನ್ನು ಚುನಾಯಿಸಿದರೆ ಮಾದರಿ ಸಂಸದನಾಗಿ ಕಾರ್ಯನಿರ್ವಹಿಸುತ್ತೇನೆ. ಸಂಸತ್‌ನಲ್ಲಿ ಬೆಂಗಳೂರಿನ 
ಧ್ವನಿಯಾಗುತ್ತೇನೆ.

* ನಗರದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿರುವ ಏಕೈಕ ಅಭ್ಯರ್ಥಿ ನಾನು. 2014ರ ಚುನಾವಣೆಯಲ್ಲಿ ಸೋತ ಬಳಿಕ ನಾನು ಸುಮ್ಮನೆ ಕುಳಿತಿಲ್ಲ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಖಾತಾ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ನನ್ನ ಪಾತ್ರ ದೊಡ್ಡದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !