ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೀರ್ಥೋದ್ಭವ’ಕ್ಕೆ ಗುಂಡಿಗಳೇ ಸ್ವಾಗತ

ಮಡಿಕೇರಿ–ತಲಕಾವೇರಿ ರಸ್ತೆಯ ದುಃಸ್ಥಿತಿ, ಜಾತ್ರೆ ಹತ್ತಿರ ಬಂದರೂ ದುರಸ್ತಿ ಮರೆತ ಇಲಾಖೆ
Last Updated 14 ಅಕ್ಟೋಬರ್ 2019, 21:41 IST
ಅಕ್ಷರ ಗಾತ್ರ

ಮಡಿಕೇರಿ: ಕಾವೇರಿ ತೀರ್ಥೋದ್ಭವ ಈ ಬಾರಿ ಅ.18ರಂದು (ಶುಕ್ರವಾರ) ನಡೆಯಲಿದೆ. ಕಾವೇರಿ ‘ತೀರ್ಥೋದ್ಭವ’ಕ್ಕೆ ಸಮಯ ನಿಗದಿಯಾಗಿದ್ದರೂ ಇತ್ತ ಮಡಿಕೇರಿಯಿಂದ– ತಲಕಾವೇರಿಗೆ ಹೋಗುವ ರಸ್ತೆ ದುರಸ್ತಿ ಕಾರ್ಯ ನಡೆದಿಲ್ಲ!

ಕಾವೇರಿಯು ತೀರ್ಥರೂಪಿಣಿಯಾಗಿ ಈ ಬಾರಿ ರಾತ್ರಿ 12.59ಕ್ಕೆ ಭಕ್ತರಿಗೆ ದರ್ಶನ ನೀಡಲಿದ್ದು, ಪ್ರತಿವರ್ಷ ತೀರ್ಥೋದ್ಭವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆ ಹಾಗೂ ತಮಿಳುನಾಡು– ಕೇರಳ ರಾಜ್ಯದಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಆದರೆ, ಈ ಬಾರಿ ರಸ್ತೆಯ ಸ್ಥಿತಿಯನ್ನು ಕಂಡು ಭಕ್ತರು ಮರುಗುವುದಂತೂ ನಿಜ.

ಸಾಲುಸಾಲು ಗುಂಡಿಗಳು ವಾಹನ ಸವಾರರನ್ನು ಸ್ವಾಗತಿಸುತ್ತಿವೆ. ಆದರೆ, ದುರಸ್ತಿ ಕಾರ್ಯ ಮಾತ್ರ ಮರೀಚಿಕೆಯಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಪಕ್ಕದ ಗಿಡಗಂಟಿ ತೆರವು ಮಾಡಲಾಗಿದೆ. ಆದರೆ, ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚುವುದನ್ನೇ ಮರೆಯಲಾಗಿದೆ.

ತಲಕಾವೇರಿ – ಭಾಗಮಂಡಲಕ್ಕೆ ನಿತ್ಯ ನೂರಾರು ವಾಹನ ಚಲಿಸುತ್ತಿದ್ದರೂ ರಸ್ತೆ ಅಭಿವೃದ್ಧಿ ಕಾರ್ಯ ಆಗಿಲ್ಲ. ಚರಂಡಿ ವ್ಯವಸ್ತೆಯು ಸರಿಯಾಗಿಲ್ಲ. ನಾಲ್ಕೈದು ದಿನ ಬಿರುಸಿನ ಮಳೆಯಾದರೆ ಸಾಕು ಹಾಳಾಗುತ್ತವೆ. ಇಂಥ ಮಾರ್ಗಗಳಲ್ಲಿ ವಾಹನಗಳು ‘ಸರ್ಕಸ್’ ಮಾಡಿಕೊಂಡು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳೀಯರು ದೂರುತ್ತಾರೆ.

ಆರು ತಿಂಗಳು, ವರ್ಷಗಳ ಹಿಂದಷ್ಟೇ ನಿರ್ಮಾಣವಾದ ಬಹುತೇಕ ರಸ್ತೆಗಳು ಅಲ್ಲಲ್ಲಿ ಹಾಳಾಗುತ್ತಿವೆ. ಸದ್ಯ ಹದಗೆಟ್ಟ ರಸ್ತೆಗಳಲ್ಲಿ ಕಾರು, ಆಟೊ, ದ್ವಿಚಕ್ರ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ.

ಮಂಗಳೂರು –ಮಡಿಕೇರಿ ಜಂಕ್ಷನ್ ಮೂಲಕ ತಲಕಾವೇರಿ ಪ್ರವೇಶಿಸುವ ಮುಖ್ಯರಸ್ತೆಯಲ್ಲಿ ರಸ್ತೆ ಹದಗೆಟ್ಟಿರುವುದರಿಂದ ಈ ಭಾಗದ ಸುಮಾರು 10 ಕಿ.ಮೀ ರಸ್ತೆ ಹಾಳಾಗಿದೆ. ಮಳೆ ಬಂದಾಗ ರಸ್ತೆಯಲ್ಲಿನ ತಗ್ಗು- ಗುಂಡಿಗಳು ಹೆಚ್ಚಾಗಿರುವುದರಿಂದ ನೀರು ತುಂಬಿಕೊಂಡು ಹೊಂಡದಂತಾಗುತ್ತಿವೆ.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ನಿರ್ಮಿಸಿರುವ ಡಾಂಬರ್ ರಸ್ತೆ ಕನಿಷ್ಠ ಒಂದು ವರ್ಷವಾದರೂ ಬಾಳಿಕೆ ಬರಬೇಕಿತ್ತು. ಆದರೆ, ತಾಳತ್ತಮನೆ, ಅಪ್ಪಂಗಳ, ಉಡೋತ್ ಮೊಟ್ಟೆ ಭಾಗದ ರಸ್ತೆಗಳಲ್ಲಿ ವರ್ಷಕ್ಕೆ ನಾಲ್ಕು ಬಾರಿ ಗುಂಡಿ ಬೀಳುತ್ತವೆ ಎಂದು ಸ್ಥಳೀಯರು ದೂರುತ್ತಾರೆ.

ಮಡಿಕೇರಿ ದಸರಾಕ್ಕೂ ಮೊದಲು ದುರಸ್ತಿ ಕಾರ್ಯ ಮಾಡಿದ್ದರೂ ಸಮರ್ಪಕವಾಗಿ ನಡೆದಿಲ್ಲ. ಅಲ್ಲಲ್ಲಿ ಗುಂಡಿಗಳು ಹಾಗೆಯೇ ಇವೆ. ಗುಂಡಿಗೆ ಜಲ್ಲಿ, ಮರಳು ಮಿಶ್ರಿತ ಪುಡಿಗಳನ್ನು ಹಾಕಿ ಬಿಡಲಾಗಿದೆ. ಅವು ರಸ್ತೆಯ ಮೇಲೆ ಹರಡಿಕೊಂಡು ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಅಪ್ಪಂಗಳದ ನಿವಾಸಿ ಎಂ.ಮಹೇಶ್ ಹೇಳಿದರು.

‘ಚೇರಂಬಾಣೆ ಸಮೀಪದ ಕೋಪಟ್ಟಿ ಭಾಗದಲ್ಲಿಯೂ ಪ್ರಕೃತಿ ವಿಕೋಪದಿಂದ ಸುಮಾರು 200 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಇನ್ನು ದುರಸ್ತಿ ಕಾರ್ಯ ಆಗಿಲ್ಲ. ತಲಕಾವೇರಿ ಜಾತ್ರೆಗೂ ಮೊದಲು ದುರಸ್ತಿಗೊಳಿಸಿ’ ಎಂದು ಭಾಗಮಂಡಲದ ನಿವಾಸಿ ಪ್ರಭು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT