ಶನಿವಾರ, ನವೆಂಬರ್ 23, 2019
18 °C
ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರತಿಭಾವಂತ ಎಂಜಿನಿಯರ್‌

ಮೃತರ ಕುಟುಂಬಕ್ಕೆ ₹ 3.2 ಕೋಟಿ ಪರಿಹಾರ

Published:
Updated:

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಮೊಗ್ಗದ ಪ್ರತಿಭಾವಂತ ಸಾಫ್ಟ್‌ವೇರ್ ಎಂಜಿನಿಯರ್ ಎನ್‌.ಬಿ. ಯತೀಂದ್ರನಾಥ್ ಕುಟುಂಬದ ಸದಸ್ಯರಿಗೆ ₹ 3.2 ಕೋಟಿ ಪರಿಹಾರ ಮೊತ್ತ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ.

‘ಯತೀಂದ್ರನಾಥ್ ಕುಟುಂಬದ ಸದಸ್ಯರಿಗೆ ವಾರ್ಷಿಕ ಶೇ 9ರಷ್ಟು ಬಡ್ಡಿದರಲ್ಲಿ ₹ 1.70 ಕೋಟಿ ಪರಿಹಾರ ನೀಡಬೇಕು’ ಎಂದು ಬೆಂಗಳೂರಿನ 8ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಮತ್ತು ಮೋಟಾರು ಅಪಘಾತ ಕ್ಲೇಮುಗಳ ನ್ಯಾಯಮಂಡಳಿ 2017ರಲ್ಲಿ ವಿಮಾ ಕಂಪನಿಗೆ ಆದೇಶಿಸಿತ್ತು.

ನ್ಯಾಯಮಂಡಳಿಯ ಈ ಆದೇಶ ಪ್ರಶ್ನಿಸಿ ಮೃತ ಯತೀಂದ್ರನಾಥ್ ಪತ್ನಿ ಹಾಗೂ ಕುಟುಂಬದ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಇದೀಗ ಪರಿಹಾರ ಮೊತ್ತವನ್ನು ಹೆಚ್ಚಿಸಿ ಆದೇಶಿಸಿದೆ.

‘ಪರಿಹಾರ ಮೊತ್ತದಲ್ಲಿ ಯತೀಂದ್ರನಾಥ್ ಪತ್ನಿ ಮತ್ತು ಅವರ ಅಪ್ರಾಪ್ತ ವಯಸ್ಸಿನ ಪುತ್ರನಿಗೆ ತಲಾ ಶೇ 30ರಷ್ಟು, ತಂದೆ-ತಾಯಿಗೆ ತಲಾ ಶೇ 15, ಅವಿವಾಹಿತ ಸಹೋದರಿಗೆ ಶೇ 10ರಷ್ಟು ಹಣ ವಿತರಿಸಬೇಕು’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣವೇನು?: ಯತೀಂದ್ರನಾಥ್ ಅವರು 2015ರ ಫೆಬ್ರುವರಿ 10ರಂದು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಬಾಗೇಪಲ್ಲಿ ಬಳಿಯ ಸುಂಕಲಮ್ಮ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಮಧ್ಯಾಹ್ನ 3.30ರ ಸಮಯದಲ್ಲಿ ಪರಗೋಡು ಗ್ರಾಮದ ಬಳಿ ಪಲ್ಟಿ ಹೊಡೆದಿತ್ತು. ಈ ಅಪಘಾತದಲ್ಲಿ ಯತೀಂದ್ರನಾಥ್ ಸಾವನ್ನಪ್ಪಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ, ‘ಯತೀಂದ್ರನಾಥ್ ಅಪಘಾತದಲ್ಲಿ ಸಾವನ್ನಪ್ಪಿದ ವೇಳೆ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ’ ಎಂದು ತೀರ್ಮಾನಿಸಿ ₹ 1.70 ಕೋಟಿ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿತ್ತು.

‘ಈ ಪರಿಹಾರ ಮೊತ್ತವನ್ನು ₹ 50 ಕೋಟಿಗೆ ಹೆಚ್ಚಿಸಬೇಕು’ ಎಂದು ಕೋರಿ ಯತೀಂದ್ರನಾಥ್ ಪತ್ನಿ ಎಸ್.ಎಲ್.ವರ್ಷಾ ಹಾಗೂ ಕುಟುಂಬದ ಸದಸ್ಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ವಿಮಾ ಕಂಪನಿಯು, ‘ನ್ಯಾಯಮಂಡಳಿ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿತ್ತು.

ಪ್ರತಿಭಾವಂತ ಯತೀಂದ್ರನಾಥ್‌: ಯತೀಂದ್ರನಾಥ್ ದ್ವಿತೀಯ ಪಿ.ಯುನಲ್ಲಿ 6ನೇ ರ‍್ಯಾಂಕ್‌ , ಸಿಇಟಿ (ಕರ್ನಾಟಕ) 3ನೇ ರ‍್ಯಾಂಕ್‌ , ಆಲ್ ಇಂಡಿಯಾ ಐಐಟಿ-ಜೆಇಇನಲ್ಲಿ 77ನೇ ರ‍್ಯಾಂಕ್‌ ಮತ್ತು 1992ರಲ್ಲಿ ನಡೆದ 12ನೇ ತರಗತಿಯ ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾ ಶೋಧನಾ ಪರೀಕ್ಷೆಯಲ್ಲಿ 76ನೇ ರ‍್ಯಾಂಕ್‌ ಗಳಿಸಿದ್ದರು.

ಐಐಟಿ-ಮದ್ರಾಸ್‌ನಿಂದ ಕಂಪ್ಯೂಟರ್ ಸೈನ್ಸ್ ವಿಭಾಗದ ಪದವಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾಗಿದ್ದರು. ಅಮೆರಿಕದ ಜಾರ್ಜಿಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ನಂತರ ಅಮೆರಿಕದ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗ ಮಾಡಿದ್ದ ಅವರು, ಅಮೆರಿಕದಲ್ಲೇ ‘ಥಾಮಸ್ ಆಲ್ವಾ ಎಡಿಸನ್ ಪೇಟೆಂಟ್ ಮೆಡಲ್’ ಸಹ ಪಡೆದಿದ್ದರು. ಬೆಂಗಳೂರಿನಲ್ಲೇ ಸ್ವಂತ ಉದ್ಯೋಗ ಆರಂಭಿಸುವುದಕ್ಕಾಗಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು.

ಪ್ರತಿಕ್ರಿಯಿಸಿ (+)