ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ ಪಾಳೆಯದಲ್ಲಿ ಚಟುವಟಿಕೆ ಬಿರುಸು

Last Updated 20 ಫೆಬ್ರುವರಿ 2018, 9:11 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಇದುವರೆಗೂ ಎರಡು ಬಾರಿ ಮಾತ್ರ ಗೆಲುವಿನ ಮುಖ ಕಂಡಿರುವ ಬಿಜೆಪಿ ಯಲ್ಲಿ ಉಂಟಾದ ದಿಢೀರ್ ರಾಜಕೀಯ ಬದಲಾವಣೆಗಳು, ಆಂತರಿಕ ಚಟುವಟಿಕೆಗಳನ್ನು ಗರಿಗೆದರಿಸಿದೆ.

ಟಿಕೆಟ್‌ ಹಂಚಿಕೆಯ ಕುರಿತ ಗೋಜಲುಗಳು ಮತ್ತು ಅಸಮಾಧಾನ ಹೊಗೆಯಾಡುತ್ತಿದ್ದರೂ, ಅಷ್ಟಾಗಿ ಬಹಿರಂಗಗೊಂಡಿರಲಿಲ್ಲ. ಈಗ ಮುಖಂಡರು ಮತ್ತು ಕಾರ್ಯಕರ್ತರು ಬಹಿರಂಗವಾಗಿ ತಮ್ಮ ಅಸಮಾಧಾನ ಗಳನ್ನು ಹೇಳಿಕೊಳ್ಳಲು ಆರಂಭಿಸಿದ್ದಾರೆ. ಇದರಿಂದ ಪಕ್ಷದೊಳಗಿನ ಗೊಂದಲಗಳೂ ಹೆಚ್ಚಾಗಿವೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಂ. ರಾಮಚಂದ್ರ ಕಾಂಗ್ರೆಸ್‌ ತೊರೆದು ಕಮಲ ಪಾಳೆಯಕ್ಕೆ ಸೇರ್ಪಡೆ ಯಾಗಿರುವುದು ಕಾಂಗ್ರೆಸ್‌ ಬಲವನ್ನು ಕ್ಷೀಣಗೊಳಿಸಲು ನೆರವಾಗಲಿದೆ ಎಂಬ ಭರವಸೆ ಪಕ್ಷದಲ್ಲಿ ಮೂಡಿದೆ.

ರಾಮಚಂದ್ರ ಅವರಿಂದ ನಾಯಕ ಸಮುದಾಯದ ಮತಗಳನ್ನು ಸೆಳೆದುಕೊಳ್ಳುವ ತಂತ್ರ ಪಕ್ಷದ ಮುಖಂಡರದು. ಇದಕ್ಕೆ ಪಕ್ಷದಲ್ಲಿಯೇ ಆಕ್ಷೇಪ ವ್ಯಕ್ತವಾಗಿದೆ. ರಾಮಚಂದ್ರ ಅವರು ಸ್ಥಳೀಯ ಚುನಾವಣೆಗಳಲ್ಲಿ ಗೆಲ್ಲಲು ಕಾಂಗ್ರೆಸ್‌ ಬೆಂಬಲವೇ ಪ್ರಮುಖ ಪಾತ್ರ ವಹಿಸಿದೆ. ಅವರು ದೊಡ್ಡಮಟ್ಟದಲ್ಲಿ ನಾಯಕ ಸಮುದಾಯದ ಮತಗಳನ್ನು ತರುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಅವರ ಸೇರ್ಪಡೆಯಿಂದ ಪ್ರಯೋಜನ ವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರೇ ಈ ಬಾರಿಯ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಎನ್ನಲಾಗುತ್ತಿತ್ತು. ಈಗ ಬದಲಾದ ಸನ್ನಿವೇಶದಲ್ಲಿ ರಾಮಚಂದ್ರ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಚಾಮರಾಜನಗರ ಇಲ್ಲವೇ ಎಚ್‌.ಡಿ ಕೋಟೆಯಿಂದ ಕಣಕ್ಕಿಳಿಯಲು ಅವರು ಬಯಸಿದ್ದಾರೆ.

ಮಾಜಿ ಶಾಸಕ ಸಿ. ಗುರುಸ್ವಾಮಿ ಅವರು ತಮಗೆ ಅಥವಾ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆಯಾಗಿರುವ ತಮ್ಮ ಮಗಳು ನಾಗಶ್ರೀ ಪ್ರತಾಪ್‌ಗೆ ಅವಕಾಶ ನೀಡುವಂತೆ ವರಿಷ್ಠರನ್ನು ಕೋರಿದ್ದಾರೆ. ಕೆಲ್ಲಂಬಳ್ಳಿ ಸೋಮ ನಾಯಕ, ನಿಜಗುಣರಾಜು, ಜಿ.ಎಂ. ಗಾಡ್ಕರ್‌, ಮಲ್ಲೇಶ್‌, ಎ.ಆರ್. ಬಾಬು ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಸೋಮಣ್ಣಗೆ ಕ್ಷೇತ್ರ ಯಾವುದು?: ಪಕ್ಷದ ಜಿಲ್ಲಾ ಉಸ್ತುವಾರಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ವಿ. ಸೋಮಣ್ಣ ಮತ್ತು ಪರಿಮಳಾ ನಾಗಪ್ಪ ನಡುವಣ ಜಿದ್ದಾಜಿದ್ದಿ ಗುಟ್ಟಾಗಿ ಉಳಿದಿಲ್ಲ. ಹನೂರು ಕ್ಷೇತ್ರದಲ್ಲಿ ಛಲವಾದಿ ಮಹಾಸಭಾದ ರಾಜ್ಯಘಟಕದ ಅಧ್ಯಕ್ಷ ಕೆ.ಶಿವರಾಂ, ಮುಖಂಡರಾದ ದತ‌್ತೇಶ್‌ ಕುಮಾರ್‌, ರಾಜೇಂದ್ರಕುಮಾರ್ ಅವರ ಹೆಸರು ಕೂಡ ಕೇಳಿಬರುತ್ತಿದ್ದರೂ, ನಾಗಪ್ಪ ಕುಟುಂಬ ಮತ್ತು ಸೋಮಣ್ಣ ನಡುವಣ ಪೈಪೋಟಿ ತೀವ್ರಗೊಂಡಿದೆ.

ಹನೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡಿರುವ ಸೋಮಣ್ಣ, ಕ್ಷೇತ್ರದಾದ್ಯಂತ ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಪರಿಮಳಾ ನಾಗಪ್ಪ ಅವರೂ ಪ್ರತಿತಂತ್ರ ಹೆಣೆಯುತ್ತಿದ್ದಾರೆ. ತಮಗೆ ಅಥವಾ ಮಗ ಡಾ. ಪ್ರೀತನ್‌ಗೆ ಟಿಕೆಟ್‌ ನೀಡುವಂತೆ ಅವರು ಪಟ್ಟು ಹಿಡಿದಿದ್ದಾರೆ. ಪ್ರೀತನ್‌ ಕೂಡ ವರಿಷ್ಠರೊಂದಿಗೆ ಮಾತನಾಡಿ ತಮಗೆ ಟಿಕೆಟ್‌ ನೀಡುವಂತೆ ಕೋರಿದ್ದಾರೆ. ಸೋಮಣ್ಣಗೆ ಟಿಕೆಟ್‌ ನೀಡಿದರೆ ಅದು ಪಕ್ಷಕ್ಕೆ ನಕಾರಾತ್ಮಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ನಾಗಪ್ಪ ಅವರ ಕುಟುಂಬಕ್ಕೆ ಬದ್ಧರಾಗಿರುವ ಅಭಿಮಾನಿಗಳ ಮತಗಳು ಕೈತಪ್ಪಲಿವೆ ಎಂಬ ಕಾರಣಕ್ಕೆ ಗುಂಡ್ಲುಪೇಟೆಯಿಂದ ಸ್ಪರ್ಧಿಸುವಂತೆ ಸೋಮಣ್ಣಗೆ ವರಿಷ್ಠರು ಸಲಹೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿಯೂ ಸೋಮಣ್ಣ ಸ್ಪರ್ಧೆಗೆ ಕಾರ್ಯಕರ್ತರಲ್ಲಿ ವಿರೋಧ ವ್ಯಕ್ತವಾಗಿದೆ. ಇಲ್ಲಿಯೇ ಪ್ರಬಲ ಆಕಾಂಕ್ಷಿಗಳು ಇರುವುದರಿಂದ ಹೊರಗಿನಿಂದ ಬಂದವರಿಗೆ ಮಣೆ ಹಾಕುವುದು ಸರಿಯಲ್ಲ ಎಂದು ಅನೇಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿದ್ದ ನಿರಂಜನಕುಮಾರ್‌, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ತೀವ್ರ ಪೈಪೋಟಿ ನೀಡಿದ್ದರು. ಈ ಬಾರಿ ಕೂಡ ಅವರ ಹೆಸರು ಮುಂಚೂಣಿಯಲ್ಲಿದೆ. ಎಂಡಿಸಿಸಿ ನಿರ್ದೇಶಕ ಎಂ.ಪಿ. ಸುನಿಲ್‌ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ವಿರೋಧದ ನಡುವೆಯೂ ಈ ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಸೋಮಣ್ಣಗೆ ಟಿಕೆಟ್‌ ನೀಡಿದರೂ ಬಂಡಾಯದ ಬಿಸಿ ತಟ್ಟಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೊಳ್ಳೇಗಾಲದಲ್ಲಿ ಆಕಾಂಕ್ಷಿಗಳು: ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಮಾಜಿ ಶಾಸಕ ಬಸವಯ್ಯ ಅವರ ಮಗ ಸರ್ವೇಶ್‌ ಬಸವಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚಂದ್ರಕಲಾಬಾಯಿ ಪ್ರಮುಖ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. 2008ರಲ್ಲಿ ಸ್ಪರ್ಧಿಸಿ ಕಹಿ ಅನುಭವಿಸಿದ್ದ ಸಿನಿಮಾ ನಿರ್ದೇಶಕ ಎಸ್‌. ಮಹೇಂದರ್‌ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ.

* * 

ಸೋಮಣ್ಣ ಸ್ಪರ್ಧೆ ಬಗ್ಗೆ ಗಾಳಿಸುದ್ದಿಗಳು ಹರಡುತ್ತಿವೆ. ಸಹಜವಾಗಿ ಒಂದೆಡೆ ಸೇರಿಕೊಂಡ ಕೆಲವರು ಮಾತಿನ ನಡುವೆ ಅವರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿರುವುದು ನಿಜ
ನಿರಂಜನಕುಮಾರ್  ಬಿಜೆಪಿ ಟಿಕೆಟ್‌ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT