ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಝಳ: ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನೆರಳಿನ ವ್ಯವಸ್ಥೆ ಮಾಡಿದ ವಿಜಯಪುರ ಪಾಲಿಕೆ

Last Updated 20 ಮಾರ್ಚ್ 2019, 6:36 IST
ಅಕ್ಷರ ಗಾತ್ರ

ವಿಜಯಪುರ: ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕ್‌ ಸವಾರರು ಎರಡರಿಂದ ಮೂರು ನಿಮಿಷ ಬಿಸಿಲ ಝಳಕ್ಕೆ ಸಿಲುಕಿ ಬಸವಳಿಯುವುದನ್ನು ತಪ್ಪಿಸಲಿಕ್ಕಾಗಿ, ವಿಜಯಪುರ ಮಹಾನಗರ ಪಾಲಿಕೆ ವಿನೂತನ ಯೋಜನೆಯೊಂದನ್ನು ಅನುಷ್ಠಾನಗೊಳಿಸುತ್ತಿದೆ.

ಇದರೊಂದಿಗೆ, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ವಾಹನ ಸವಾರರಿಗೆ ನೆರಳಿನ ವ್ಯವಸ್ಥೆ ಮಾಡಿದ ರಾಜ್ಯದ ಮೊದಲ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೂ ಪಾತ್ರವಾಗುತ್ತಿದೆ.

ಇಲ್ಲಿನ ಗಾಂಧಿಚೌಕದ ಟ್ರಾಫಿಕ್‌ ಸಿಗ್ನಲ್‌ನ ನಾಲ್ಕೂ ರಸ್ತೆಯಲ್ಲೂ 12 ಮೀಟರ್‌ ಅಗಲ, 30 ಮೀಟರ್ ಉದ್ದದ ಹಸಿರು ಹೊದಿಕೆಯನ್ನು ರಸ್ತೆಯ ಮೇಲ್ಭಾಗ ಕಟ್ಟುವ ಮೂಲಕ ನೆರಳಿನ ವ್ಯವಸ್ಥೆ ಮಾಡುತ್ತಿದೆ.

ಈ ಸಿಗ್ನಲ್‌ನಲ್ಲಿ ಭಾನುವಾರ ರಾತ್ರಿ ಇಲ್ಲಿನ ರಸ್ತೆಯೊಂದಕ್ಕೆ ಹಸಿರು ಹೊದಿಕೆ ಕಟ್ಟಿದ್ದು, ವಾಹನ ಸವಾರರು ಪಾಲಿಕೆಯ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

‘ಕಡು ಬೇಸಿಗೆಯ ದಿನಗಳಲ್ಲಿ ವಾಹನ ಸವಾರರು ಬಿಸಿಲ ಝಳಕ್ಕೆ ಸಿಲುಕಿ ಹೈರಾಣಾಗುವುದನ್ನು ತಪ್ಪಿಸಲಿಕ್ಕಾಗಿ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆ.

ಗಾಂಧಿಚೌಕ್‌ನ ರಸ್ತೆಯೊಂದಕ್ಕೆ ಪ್ರಾಯೋಗಿಕವಾಗಿ ಹಸಿರು ಹೊದಿಕೆ ಕಟ್ಟಲಾಗಿದೆ. ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ’ ಎಂದು ಪಾಲಿಕೆಯ ಸಹಾಯಕ ಎಂಜಿನಿಯರ್ ಶರಣು ಕೆಂಭಾವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಾಂಧಿಚೌಕ್‌ನ ಉಳಿದ ಮೂರು ರಸ್ತೆಗಳಿಗೂ ಹಸಿರು ಹೊದಿಕೆ ಹೊದಿಸಲಾಗುವುದು. ಇದೇ ರೀತಿ ವಾಟರ್‌ ಟ್ಯಾಂಕ್‌, ಕೇಂದ್ರ ಬಸ್‌ ನಿಲ್ದಾಣ, ಬಸವೇಶ್ವರ ವೃತ್ತದ ಸಿಗ್ನಲ್‌ನ ಮೂರು ರಸ್ತೆಗಳಿಗೂ ಹಸಿರು ಹೊದಿಕೆ ಅಳವಡಿಸುವ ಮೂಲಕ ಎಲ್ಲ ಸಿಗ್ನಲ್‌ಗಳಲ್ಲೂ ನೆರಳಿನ ವ್ಯವಸ್ಥೆ ಕಲ್ಪಿಸುತ್ತೇವೆ’ ಎಂದು ಹೇಳಿದರು.

‘ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ 5X5 ಮೀಟರ್ ಅಳತೆಯ ಹಸಿರು ಹೊದಿಕೆ ಅಳವಡಿಸಲಾಗಿದೆ. ಅದನ್ನೇ ಮಾದರಿಯಾಗಿಸಿಕೊಂಡು ನಮ್ಮಲ್ಲಿ 12X30 ಮೀಟರ್ ಅಳತೆಯ ಹಸಿರು ಹೊದಿಕೆ ಹೊದಿಸುತ್ತೇವೆ. ಗಾಂಧಿಚೌಕ್‌ನಲ್ಲಿ ₹ 2 ಲಕ್ಷ ಖರ್ಚಾದರೆ, ಉಳಿದ ಮೂರು ಸಿಗ್ನಲ್‌ಗಳಿಗೆ ತಲಾ ₹ 1.5 ಲಕ್ಷ ಖರ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ’ ಎಂದು ಕೆಂಭಾವಿ ಯೋಜನೆಯ ಮಾಹಿತಿ ನೀಡಿದರು.

**

ಝೀಬ್ರಾ ಕ್ರಾಸಿಂಗ್‌ನಿಂದ ಹಿಂಬದಿಯೇ ಹೊದಿಕೆಯ ನೆರಳು ಬರುವಂತೆ ಕಟ್ಟಲಾಗಿದೆ. ಪಾದಚಾರಿಗಳ ಸಂಚಾರಕ್ಕೂ ಅನುಕೂಲ ಕಲ್ಪಿಸಲಾಗುವುದು
- ಶರಣು ಕೆಂಭಾವಿ, ಎಇ, ವಿಜಯಪುರ ಮಹಾನಗರ ಪಾಲಿಕೆ

**

ಸಿಗ್ನಲ್‌ಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲು ಮುಂದಾಗುತ್ತಿರುವುದು ಅತ್ಯುತ್ತಮ ಕೆಲಸ. ಬೈಕ್‌ ಸವಾರರು ಬಿಸಿಲಿಗೆ ಹೈರಾಣಾಗುವುದು ತಪ್ಪಲಿದೆ
- ಎಂ.ಎಸ್.ಮಠ, ಸಂಗಮೇಶ ಅಂಬಿಗೇರ, ಬೈಕ್‌ ಸವಾರರು, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT