ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಲು ಮರ’ಕ್ಕೆ ಕೊಡಲಿಪೆಟ್ಟು: ಪರಿಸರ ಪ್ರಿಯರ ಆತಂಕ

ಹೆದ್ದಾರಿ ವಿಸ್ತರಣೆ: ಲೋಕೋಪಯೋಗಿ ಇಲಾಖೆ ಪ್ರಕಟಣೆಯಿಂದ ಗೊಂದಲ
Last Updated 4 ಜೂನ್ 2019, 4:44 IST
ಅಕ್ಷರ ಗಾತ್ರ

ರಾಮನಗರ: ಸಾಲು ಮರದ ತಿಮ್ಮಕ್ಕ ಮಕ್ಕಳಂತೆ ಬೆಳೆಸಿದ ಆಲದ ಮರಗಳು ಹೆದ್ದಾರಿ ವಿಸ್ತರಣೆಗೆ ಬಲಿಯಾಗಲಿವೆ ಎನ್ನುವ ಸಂಗತಿಯು ಪರಿಸರ ಪ್ರಿಯರಲ್ಲಿ ಆತಂಕ ಮೂಡಿಸಿದೆ.

ಬಾಗೇಪಲ್ಲಿ–ಹಲಗೂರು ನಡುವಿನ ರಾಜ್ಯ ಹೆದ್ದಾರಿ– 94 ವಿಸ್ತರಣೆ ಸಂಬಂಧ ಲೋಕೋಪಯೋಗಿ ಇಲಾಖೆಯು ಸರ್ವೆ ಕಾರ್ಯ ನಡೆಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಬರುವ ಸರ್ವೆ ಸಂಖ್ಯೆಗಳನ್ನು ಪ್ರಕಟಿಸಿದೆ. ಇದರಲ್ಲಿ ಮಾಗಡಿ ತಾಲ್ಲೂಕಿನ ಕುದೂರಿನಿಂದ ಹುಲಿಕಲ್ ಗ್ರಾಮದವರೆಗೆ ಸುಮಾರು ನಾಲ್ಕು ಕಿ.ಮೀ. ಉದ್ದಕ್ಕೂ ತಿಮ್ಮಕ್ಕನವರು ನೆಟ್ಟು ಬೆಳೆಸಿರುವ 280ಕ್ಕೂ ಹೆಚ್ಚು ಆಲದ ಮರಗಳ ಜಾಗವೂ ಸೇರಿದೆ. ಹುಲಿಕಲ್‌ ಗ್ರಾಮದ ಬಸ್‌ ನಿಲ್ದಾಣದ ಪಕ್ಕದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆಯೇ ತಿಮ್ಮಕ್ಕನವರ ಮನೆ ಇದೆ. ಅದೂ ಸಹ ಈ ಸರ್ವೆ ಸಂಖ್ಯೆಯಲ್ಲಿ ಸೇರಿದೆ.

ಹುಲಿಕಲ್‌ ಗ್ರಾಮದವರಾದ ತಿಮ್ಮಕ್ಕ ಹಾಗೂ ಚಿಕ್ಕಯ್ಯ ದಂಪತಿ ತಮಗೆ ಮಕ್ಕಳಿಲ್ಲದಿದ್ದರೂ ಮರಗಳನ್ನೇ ಮಕ್ಕಳಂತೆ ಪೋಷಿಸಿದ್ದಾರೆ. ಕುದೂರು–ಹುಲಿಕಲ್ ನಡುವೆ ಹೆಮ್ಮರವಾಗಿ ಬೆಳಿದಿರುವ ಈ ಆಲದ ಮರಗಳು ನೆರಳು, ಗಾಳಿ ನೀಡುತ್ತಾ ಬಂದಿವೆ. ಇಂತಹ ಮರಗಳ ಹನನಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಬೈಪಾಸ್‌ಗೆ ಒತ್ತಾಯ: ಈಗ ನಡೆದಿರುವ ಸರ್ವೆ ಪ್ರಕಾರವೇ ಹೆದ್ದಾರಿ ವಿಸ್ತರಣೆ ಮಾಡಿದಲ್ಲಿ ಇಡೀ ಕುದೂರು ಪಟ್ಟಣದ ಅಸ್ತಿತ್ವಕ್ಕೇ ಧಕ್ಕೆ ಬರಲಿದೆ. ಪ್ರಮಖ ವಾಣಿಜ್ಯ ಕಟ್ಟಡಗಳು, ನೂರಾರು ಮನೆಗಳೂ ನೆಲಸಮವಾಗಲಿವೆ. ಇದಕ್ಕೆ ಬದಲಾಗಿ ಬೈಪಾಸ್‌ ರಸ್ತೆ ಅಭಿವೃದ್ಧಿ ಮಾಡಿ ಪಟ್ಟಣವನ್ನು ಉಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಅಧಿಕಾರಿಗಳು ಹೇಳುವುದೇನು?
‘ಹೆದ್ದಾರಿ ಅಕ್ಕಪಕ್ಕ ಇರುವ ಸರ್ವೆ ಸಂಖ್ಯೆಗಳನ್ನು ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಲಾಗಿದೆ. ಆದರೆ ರಸ್ತೆ ವಿಸ್ತರಣೆ ಸಂಬಂಧ ಸರ್ಕಾರ ಯಾವುದೇ ಅಧಿಸೂಚನೆ ಪ್ರಕಟಿಸಿಲ್ಲ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶ್ರೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಿಮ್ಮಕ್ಕನವರು ಬೆಳೆಸಿರುವ ಮರಗಳ ಜಾಗವು ಈ ಹಿಂದಿನಿಂದಲೂ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿಯೇ ಇದೆ. ಸದ್ಯ ಈ ರಸ್ತೆಯು ಎರಡು ಕಡೆ ತಲಾ ಐದೂವರೆ ಮೀಟರ್‌ನಷ್ಟು ಅಗಲ ಇದ್ದು, ಇನ್ನು ಒಂದೂವರೆ ಮೀಟರ್‌ನಷ್ಟು ವಿಸ್ತರಣೆ ಮಾಡಬಹುದು. ಆದಾಗ್ಯೂ ಸಾಲುಮರಗಳಿಗೆ ಧಕ್ಕೆ ಆಗುವುದಿಲ್ಲ. ಸಾರ್ವಜನಿಕರು ಈ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಅನಿವಾರ್ಯ ಆದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗುವುದು’ ಎಂದು ಹೇಳಿದರು.

ಮರದ ಬದಲು ನನ್ನನ್ನು ಕಡಿಯಿರಿ: ತಿಮ್ಮಕ್ಕ ಆಕ್ರೋಶ
‘ಹೆದ್ದಾರಿಗಾಗಿ ಮರಗಳನ್ನು ಕಡಿಯುವ ಮೊದಲು ನನ್ನನ್ನೇ ಕಡಿಯಿರಿ’ ಎಂದು ಸಾಲುಮರದ ತಿಮ್ಮಕ್ಕ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಿಮ್ಮಕ್ಕ ‘ಕೂಲಿ ಮಾಡಿಕೊಂಡು ಮರಗಳನ್ನೇ ಮಕ್ಕಳಂತೆ ಪೋಷಿಸಿದ್ದೇನೆ. ಅವುಗಳು ಕಣ್ಣೆದುರಿಗೆ ನಾಶವಾಗುವುದನ್ನು ನೋಡಲು ನನ್ನಿಂದ ಆಗದು’ ಎಂದು ಬೇಸರಿಸಿದರು. ‘ಹೆದ್ದಾರಿ ವಿಸ್ತರಣೆ ಮಾಡುವುದೇ ಆದಲ್ಲಿ ಮರಗಳನ್ನು ಬಿಟ್ಟು ಅಕ್ಕಪಕ್ಕದ ಜಮೀನು ಬಳಸಿಕೊಳ್ಳಬೇಕು. ಇಲ್ಲವೇ ಬೈಪಾಸ್‌ ರಸ್ತೆ ಅಭಿವೃದ್ಧಿ ಮಾಡಿ ಇದನ್ನು ಹಾಗೆಯೇ ಉಳಿಸಿಕೊಳ್ಳಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು. ಮರ ಕಡಿಯಲು ಮುಂದಾದಲ್ಲಿ ಬೀದಿಗೆ ಇಳಿದು ಹೋರಾಟ ಮಾಡುವುದಾಗಿಯೂ ಅವರು ಎಚ್ಚರಿಸಿದರು.

*
ಹೆದ್ದಾರಿ ಬದಿಯ ಸರ್ವೆ ಸಂಖ್ಯೆಗಳನ್ನು ಸಾರ್ವಜನಿಕರ ಗಮನಕ್ಕಾಗಿ ಪ್ರಕಟಿಸಲಾಗಿದ್ದು, ಅಧಿಸೂಚನೆ ಹೊರಡಿಸಿಲ್ಲ. ರಸ್ತೆ ವಿಸ್ತರಣೆಯಿಂದ ಸಾಲುಮರಗಳಿಗೆ ಹಾನಿ ಆಗದು.
-ಶ್ರೀಧರ್, ಕಾರ್ಯಪಾಲಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT