ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈಯಲ್ಲೇ ಇದೆ ಅನಂತ ಅವಕಾಶ

Last Updated 5 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ಶತ ಶತಮಾನಗಳಲ್ಲಿ ಕುಟುಂಬದವರೆಲ್ಲರ ಜಠರಾಗ್ನಿಯನ್ನು ಶಾಂತವಾಗಿಸುವ ಕಾಯಕದಲ್ಲೇ ಅನೇಕ ಸ್ತ್ರೀಯರು ಮುಪ್ಪಾಗಿ ಮಣ್ಣಾಗಿ ಹೋಗಿದ್ದಾರೆ. ‘ಕೇವಲ ಗೃಹಕೃತ್ಯವನ್ನು ಮಾಡಿಕೊಂಡಿರುವ ಗೃಹಿಣಿ ನಾನು. ನನಗೇನೂ ಗೊತ್ತಿಲ್ಲ’ ಎಂಬ ಸ್ಲೋಗನ್ನನ್ನು ಲೆಕ್ಕವಿಲ್ಲದಷ್ಟು ಹೆಂಗಸರ ಬಾಯಲ್ಲಿ ಕೇಳುತ್ತಲೇ ಬಂದಿದ್ದೇವೆ. ಹಲವು ಕೌಶಲಬಲ್ಲ ರಜಾರಹಿತ, ಸಂಬಳರಹಿತ ಸೇವೆಯನ್ನೊದಗಿಸುವ ಗೃಹಿಣಿಯರೇಕೆ ಹೀಗೆ? ಎಂಬ ಪ್ರಶ್ನೆ ಸದಾ ಗಿರಕಿ ಹೊಡೆಯುತ್ತದೆ.

ಆದರೆ ಕುಟುಂಬದ ಅಗತ್ಯಕ್ಕೆ, ಮನೆಮಂದಿಯ ಬಾಯಿ ರುಚಿಗೆ ಹೊಂದುವಂತೆ ಪ್ರತಿ ಹೆಣ್ಣು ಅಡುಗೆಮನೆ ಎಂಬ ಪ್ರಯೋಗ ಶಾಲೆಯಲ್ಲಿ ನೂರಾರು ಬಗೆಯ ವೈವಿಧ್ಯಮಯವಾದ ಅಡುಗೆಯನ್ನು ಮಾಡಬಲ್ಲಳು. ಆ ಕೌಶಲ ಅವಳ ಅರ್ಹತೆ ಕೂಡಾ ಹೌದೆಂದು ಅವಳಿಗೂ ಅರಿವಿರುವುದಿಲ್ಲ. ಅವಳ ಸುತ್ತಮುತ್ತಲಿರುವವರಿಗೂ ಅರಿವಿರುವುದಿಲ್ಲ. ಮಹಿಳೆಯರ ಜ್ಞಾನದ, ಕೌಶಲದ ದಾಖಲಾತಿಯ ಯತ್ನಗಳು ನಡೆದಿರುವುದೇ ತೀರಾ ಕಡಿಮೆ. ‘ನಮಗೇನೂ ಗೊತ್ತಿಲ್ಲ’ ಎಂದು ಹಿಂಜರಿಯುವ ಮಹಿಳೆಯರನ್ನು ಕಡೆಗಣಿಸಿದವರೇ ಎಲ್ಲ.

ಪಾಕ ಕೌಶಲದಿಂದ ಆರ್ಥಿಕ ಸ್ವಾವಲಂಬನೆ
ಹಾಗೆಂದು ಹಿಂಜರಿಕೆ ಎಲ್ಲ ಹೆಂಗಸರ ಕಥೆಯೇನಲ್ಲ. ಅನೇಕ ಮಹಿಳೆಯರು ತಮಗೆ ಗೊತ್ತಿರುವ ಪಾಕ ಕೌಶಲವನ್ನೇ ಆರ್ಥಿಕ ಸ್ವಾವಲಂಬನೆಯ ಮಾರ್ಗವಾಗಿಸಿಕೊಂಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಸುಗಾವಿ ಎನ್ನುವ ಇಪ್ಪತ್ತೈದು ಮನೆಗಳ ಪುಟ್ಟ ಊರಿನ ಹೆಂಗಸರು ಶ್ರೀ ವಿನಾಯಕ ಸ್ವಸಹಾಯ ಸಂಘ ಕಟ್ಟಿಕೊಂಡಿದ್ದಾರೆ. ಕಳೆದ ಹನ್ನೆರಡು ವರ್ಷಗಳಿಂದ ಜನರ ಬೇಡಿಕೆಗೆ ಅನುಗುಣವಾಗಿ ಕಡ್ಲೆಬೇಳೆ ಹೋಳಿಗೆ, ಗೆಣಸಿನ ಹೋಳಿಗೆ, ಕೊಬ್ಬರಿ ಹೋಳಿಗೆ ಚಕ್ಕುಲಿಗಳನ್ನು ತಯಾರಿಸಿ ಕೊಡುತ್ತಿದ್ದಾರೆ. ಊರಿನ ಸುಧಾ ಹೆಗಡೆಯವರ ನೇತೃತ್ವದಲ್ಲಿ ಅವರ ಮನೆಯ ಹಿಂಭಾಗವನ್ನೇ ಹೋಳಿಗೆ ತಯಾರಿಕಾ ಕೇಂದ್ರವನ್ನಾಗಿಸಿ ವರ್ಷಕ್ಕೆ ಹದಿನೈದರಿಂದ ಇಪ್ಪತ್ತು ಸಾವಿರ ಹೋಳಿಗೆ ತಯಾರಿಸುತ್ತಾರೆ. ದೊಡ್ಡ ಗಾತ್ರದ ರುಚಿಕರ ಸುಗಾವಿ ಹೋಳಿಗೆ ಶಿರಸಿಯಲ್ಲಿ ಮನೆಮಾತಾಗಿದೆ.

‘ಊರಿನಲ್ಲಿ ಎಲ್ಲರೂ ಅಡಿಕೆ ಬೆಳೆಗಾರು. ಪರಸ್ಪರ ಮುರಿಯಾಳು ಪದ್ಧತಿಯಲ್ಲಿ ಎಲ್ಲರ ಮನೆಯ ಅಡಿಕೆ ಸುಲಿಯುವ ಕೆಲಸವನ್ನು ಕೂಡಾ ನಾವು ಮಾಡುತ್ತೇವೆ. ಮನೆಗೆಲಸದೊಂದಿಗೆ ಇದ್ದ ಊರಿನಲ್ಲೇ ನಮ್ಮದೇ ಆದ ಪುಟ್ಟ ಆದಾಯವನ್ನು ನಾವು ಕಂಡುಕೊಂಡಿದ್ದೇವೆ, ಬಟ್ಟೆ ಒಡವೆ ಖರೀದಿಯಂತಹ ಚಿಕ್ಕಪುಟ್ಟ ಆಸೆಗಳನ್ನ ಪೂರೈಸಿಕೊಳ್ಳುತ್ತೇವೆ. ಮನೆಯ ಸಂಕಷ್ಟದ ಸಮಯದಲ್ಲಿ ಹೆಗಲೊಡ್ಡುತ್ತೇವೆ. ಮಕ್ಕಳ ಓದಿಗೆ ಅನುಕೂಲವಾಗಿದೆ. ಪೋಸ್ಟಾಫಿಸಿನಲ್ಲಿ ಉಳಿತಾಯ ಖಾತೆಯನ್ನೂ ತೆಗೆದಿದ್ದೇವೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸಂಘದ ಸದಸ್ಯೆ ವಿಜಯಾ ಹೆಗಡೆ.

ಅದೇ ಜಿಲ್ಲೆಯ ದಂಟ್ಕಲ್ ಎಂಬ ಹಳ್ಳಿಯ ಹೆಂಗಸರು ಸಮಾರಂಭಗಳಿಗೆ ಊಟಕ್ಕೆ ಬಡಿಸುವ (ನೀಡುವ) ಕೆಲಸಕ್ಕೆ ಹೋಗುತ್ತಾರೆ. ದಿನಕ್ಕೆ ಇನ್ನೂರೈವತ್ತರಿಂದ ಮುನ್ನೂರು ರೂಪಾಯಿಗಳವರೆಗೂ ಆದಾಯ ಸಿಗುವ ಕೆಲಸ. ಟೀಮ್ ವರ್ಕ್‌ ಆಗಿರುವುದರಿಂದ ಮಾತುಕತೆಯಾಡುತ್ತ ಕೆಲಸ ಮಾಡಲು ಸಂತೋಷವೆನಿಸುತ್ತದೆ ಎನ್ನುತ್ತಾರೆ ಸುಜಾತಾ ದಂಟ್ಕಲ್. ಈ ಗುಂಪು ಗಣೇಶಚೌತಿ ಹಬ್ಬದ ಸಮಯದಲ್ಲಿ ಚಕ್ಕುಲಿ ಮಿಕ್ಸ್‌ ತಯಾರಿಸಿ ಜಿಲ್ಲೆಯಾದ್ಯಂತ ಮಾರುಕಟ್ಟೆಯನ್ನು ಕೂಡಾ ಕಂಡುಕೊಂಡಿದೆ. ಹಳೆಯ ಬಟ್ಟೆಗಳಿಂದ ಉಪಯುಕ್ತ ಕೌದಿಗಳನ್ನು ಕೂಡಾ ಇವರು ಹೊಲಿಯುತ್ತಾರೆ.

ಉದ್ಯಮವನ್ನೂ ಕಟ್ಟಿದರು!
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರವಹಿಸುವ ಜೋಳದ ರೊಟ್ಟಿ ತಯಾರಿಕೆಯಲ್ಲಿ ಬಹುತೇಕ ಹೆಂಗಸರು ಪರಿಣತಿ ಹೊಂದಿದ್ದಾರೆ. ಕುಳಿತ ಬೈಠಕ್ಕಿನಲ್ಲಿ 200–300 ರೊಟ್ಟಿ ಬಡಿಯುವಂತಹ ಸಾಹಸಿ ಹೆಂಗಸರಿದ್ದಾರೆ. ಸರಿ ಸುಮಾರಾಗಿ ಎಲ್ಲ ನಗರಗಳಿಗೂ ಉತ್ತರ ಕರ್ನಾಟಕದಿಂದ ಲಕ್ಷಾಂತರ ಖಡಕ್ ರೊಟ್ಟಿಗಳು ಪ್ರಯಾಣ ಬೆಳೆಸುತ್ತವೆ. ರೊಟ್ಟಿ ಬಹು ಬೇಡಿಕೆ ಗಳಿಸಿದೆ ಎನ್ನುತ್ತಾರೆ ಧಾರವಾಡದ ಸಪ್ತಾಪುರದಲ್ಲಿ ನೆಲೆಸಿದ ಓಂ ಗೃಹ ಉದ್ಯೋಗದ ಶಾಂತಕ್ಕ. ಮನೆಯ ಆರ್ಥಿಕ ಸಂಕಷ್ಟದ ಸಮಯದಲ್ಲಿ ರೊಟ್ಟಿ ಬಡಿದು ಮಾರಿ ಮನೆತನ ನಡೆಸಿದವರು ಇವರು. ನಂತರ ಹೋಳಿಗೆ, ಮಾದ್ಲಿ, ಚಕ್ಕುಲಿ, ಉಂಡೆ ಹಚ್ಚಿದ ಅವಲಕ್ಕಿ ಹೀಗೆ ಹಲವು ಬಗೆಯ ತಿನಿಸುಗಳನ್ನು ಮಾಡಿ ಮಾರುವ ಉದ್ಯಮ ಕಟ್ಟಿದರು ಕಳೆದ ಹತ್ತು ವರ್ಷಗಳಲ್ಲಿ ಇವರು ಬೆಳೆಸಿದ ಉದ್ಯಮ ಇವರಿಗೆ ‘ಹೋಳಿಗೆ ಶಾಂತಕ್ಕ’ ಎಂಬ ಖ್ಯಾತಿಯನ್ನು ತಂದುಕೊಟ್ಟಿದೆ. ಮಕ್ಕಳನ್ನು ಓದಿಸಿ ಉದ್ಯೋಗಕ್ಕೆ ಹಚ್ಚಲು, ಮನೆಕಟ್ಟಿಸಲು ನನಗಿರುವ ಪಾಕ ಕೌಶಲವೇ ನೆರವಾಯಿತೆನ್ನುತ್ತಾರೆ. ಐದು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಗಾಯತ್ರಿ ಬೋಳಗುಡ್ಡೆ ಅವರು ತಮಗಿರುವ ಹೊಲಿಗೆ ಕೌಶಲವನ್ನು ಬಳಸಿಕೊಂಡು ಅಲಂಕಾರಿಕ ವಸ್ತುಗಳನ್ನು ತಯಾರು ಮಾಡಿ ಶಾಲಾ ಮಕ್ಕಳಿಗೆ ಬಾಡಿಗೆಗೆ ಕೊಡುತ್ತಿದ್ದಾರೆ. ಮಾಮೂಲಿಯಾಗಿ ಎಲ್ಲರೂ ಹೊಲಿಯುವ ರವಿಕೆ, ಚೂಡಿದಾರ್‌ಗಳಿಗಿಂತ ಭರತನಾಟ್ಯದ ವೇಷಭೂಷಣಗಳನ್ನು ಹೊಲಿಯುವುದು ಲಾಭಕರ ಎನ್ನುತ್ತಾರೆ. ಇವರಿಗೆ ರಾಜ್ಯದಾದ್ಯಂತ ಗ್ರಾಹಕರಿದ್ದಾರೆ!

ಅನೇಕರು ಅಡುಗೆ ಮಾಡಿ ಅಚ್ಚುಕಟ್ಟಾಗಿ ಫೋಟೋ ಹೊಡೆದು ವಿವಿಧ ಪತ್ರಿಕೆಗಳಿಗೆ ಹೊಸರುಚಿ ಕಾಲಮ್ಮಿಗೆ ಬರೆದು ಅಲ್ಪ ಆದಾಯ ಗಳಿಸುತ್ತಾರೆ. ಕೆಲವರು ಅಡುಗೆ ಮಾಡುವುದನ್ನು ವಿಡಿಯೋ ಮಾಡಿ ಯೂ ಟ್ಯೂಬಿಗೆ ಹಾಕಿ ಪ್ರಸಿದ್ಧಿಯನ್ನು, ಆದಾಯವನ್ನೂ ಗಳಿಸುತ್ತಾರೆ. ಇವು ಕೆಲವು ಉದಾಹರಣೆಗಳು ಮಾತ್ರ. ಆಸಕ್ತಿ ಇದ್ದರೆ ಅಂಗೈಲಿಲ್ಲವೇ ಅವಕಾಶ? ಅನುಸರಿಸಲು ತಡವೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT