ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗ್‌ ವಿಚಾರಣೆಗೆ ರಾಜಕೀಯ ವಿಘ್ನ?

Last Updated 14 ಆಗಸ್ಟ್ 2019, 19:16 IST
ಅಕ್ಷರ ಗಾತ್ರ

ಬೆಂಗಳೂರು: ಅನರ್ಹಗೊಂಡ ಶಾಸಕ ರೋಷನ್‌ ಬೇಗ್‌ ಸೇರಿದಂತೆ ಕೆಲವು ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಅಕ್ರಮ ಲಾಭ ಪಡೆದಿದ್ದಾರೆ ಎನ್ನಲಾದ ಐಎಂಎ ಕಂಪನಿ ವಂಚನೆ ಪ್ರಕರಣದ ತನಿಖೆ ಪ್ರಕ್ರಿಯೆಯನ್ನು ವಿಳಂಬ ಮಾಡುವಂತೆ ವಿಶೇಷ ತನಿಖಾ ದಳದ (ಎಸ್‌ಐಟಿ) ಮೇಲೆ ಮುಖ್ಯಮಂತ್ರಿ ಸಚಿವಾಲಯ ಹಾಗೂ ‍ಪೊಲೀಸ್‌ ಕೇಂದ್ರ ಕಚೇರಿ ಒತ್ತಡ ಹೇರುತ್ತಿವೆ ಎಂದು ಗೊತ್ತಾಗಿದೆ.

‘ವಿಚಾರಣೆಗೆ ಬರುವಂತೆ ಕೊಟ್ಟಿರುವ ನೋಟಿಸ್‌ಗಳನ್ನು ಲೆಕ್ಕಿಸದೆ ಬೇಗ್‌ ಕೈಕೊಡುತ್ತಿದ್ದರೂ ಎಸ್‌ಐಟಿ ಅಧಿಕಾರಿಗಳು ಬಂಧಿಸದೆ ಅಸಹಾಯಕರಾಗಿ ಕುಳಿತಿರುವುದು, ಸರ್ಕಾರ ತೆರೆಮರೆಯಲ್ಲಿ ಒತ್ತಡ ಹೇರುತ್ತಿದೆ’ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಸದ್ಯ, ಎಸ್‌ಐಟಿ ವಶದಲ್ಲಿರುವ ಐಎಂಎ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ವಿಚಾರಣೆ ವೇಳೆ, ‘ರೋಷನ್‌ ಬೇಗ್‌, ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌, ಸಚಿವರಾಗಿದ್ದಾಗ ಜೈಲಿಗೆ ಹೋಗಿದ್ದ ಒಬ್ಬರು ಬಿಜೆಪಿ ಮುಖಂಡರು ಮತ್ತು ಕೆಲವು ಅಧಿಕಾರಿಗಳೂ ಒಳಗೊಂಡಂತೆ ಅನೇಕರು ತನ್ನಿಂದ ಅಕ್ರಮ ಲಾಭ ಪಡೆದಿರುವುದಾಗಿ ಹೇಳಿದ್ದಾನೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

‘ಬದಲಾದ ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕತ್ವಕ್ಕೆ ಹತ್ತಿರವಾಗಿರುವ ಬೇಗ್‌ ತೆರೆಮರೆಯಲ್ಲಿ ವಿಚಾರಣೆಗೆ ಒಳಪಡಿಸದಂತೆ ತೀವ್ರ ಒತ್ತಡ ಹಾಕಿಸುತ್ತಿದ್ದಾರೆ. ಈ ಪ್ರಕರಣ ಸಿಬಿಐಗೆ ಹಸ್ತಾಂತರವಾಗುವ ಸಾಧ್ಯತೆಯಿದೆ. ಈ ಬಗ್ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ ಮುಂದಿದ್ದು, ಅದು ಇತ್ಯರ್ಥ ಆಗುವವರೆಗೆ ಬೇಗ್ ವಿಚಾರಣೆಗೆ ತರಾತುರಿ ಬೇಡ ಎಂದು ತಾಕೀತು ಮಾಡಲಾಗುತ್ತಿದೆ’ ಎಂದೂ ಹೇಳಲಾಗುತ್ತಿದೆ.

‘ನನ್ನ ಲಾಭಾಂಶದಲ್ಲಿ ಗರಿಷ್ಠ ಪಾಲನ್ನು ಬೇಗ್‌ ಪಡೆದಿದ್ದಾರೆ. ಲೆಕ್ಕಾಚಾರದ ಪ್ರಕಾರ ₹405 ಕೋಟಿ
ಯಷ್ಟು ಹಣವನ್ನು ಅವರಿಗೆ ಮತ್ತು ಅವರ ಆಪ್ತರಿಗೆ ನೀಡಲಾಗಿದೆ ಎಂದು ಖಾನ್‌ ಹೇಳಿದ್ದಾನೆ. ಕೆಲವು ವ್ಯವಹಾರಗಳನ್ನು ಕೈಬರಹದಲ್ಲಿ ದಾಖಲಿಸಿಕೊಂಡಿದ್ದಾನೆ. ಹಲವು ವ್ಯವಹಾರಗಳು ಸಾಕ್ಷಿಗಳ ಎದುರು ನಡೆದಿದೆ. ಆದರೆ, ಆರೋಪಿ ಹೇಳಿರುವುದರಲ್ಲಿ ಪೂರ್ಣ ಸತ್ಯವಿಲ್ಲ. ಬೇಗ್‌ ವಿಚಾರಣೆಗೆ ಹಾಜರಾದರೆ ಮಾತ್ರ ನಿಜ ಏನೆಂಬುದು ಗೊತ್ತಾಗುತ್ತದೆ’ ಎಂದು ಮೂಲಗಳು ಹೇಳಿವೆ.

ಜುಲೈ 15ರಂದು ರೋಷನ್‌ ಬೇಗ್‌ ಖಾಸಗಿ ವಿಮಾನದಲ್ಲಿ ಪುಣೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆನಂತರ, ವಿಚಾರಣೆಗೆ ಬರದೆ ಕೈಕೊಡುತ್ತಿದ್ದಾರೆ. ಕನಿಷ್ಠ ನಾಲ್ಕು ಸಲ ಅವರಿಗೆ ನೋಟಿಸ್‌ ಕೊಡಲಾಗಿದೆ. ಇದೇ ಪ್ರಕರಣದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಅವರನ್ನು ಎಸ್‌ಐಟಿ ಹಾಗೂ ಇ.ಡಿ ವಿಚಾರಣೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT