ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೀರುಳ್ಳಿ’ ಬೆಳೆಗಾರರ ಕರುಣಾಜನಕ ಕತೆ..!

ಉಳ್ಳಾಗಡ್ಡಿ ಧಾರಣೆ ಪಾತಾಳಮುಖಿ; ಕಂಗಾಲಾದ ರೈತ
Last Updated 21 ಮೇ 2018, 10:47 IST
ಅಕ್ಷರ ಗಾತ್ರ

ವಿಜಯಪುರ: ‘ಮಾಡ್ದ್‌ ಖರ್ಚಾದ್ರೂ ಕೈಗ ಹತ್ತುತ್ತ ಅಂತಹ ಉಳ್ಳಾಗಡ್ಡಿ ಮಾರ್ಕೆಟ್‌ಗೆ ಬಂದೀವ್ರೀ. ಆದ್ರಾ ಇಲ್ಲಿ ನಮ್‌ ಗಾಡಿ ಖರ್ಚ್‌ ಸಹ ಹುಟ್ಲಿಲ್ಲ್ರೀ. ಮಾರಾಕ ತರೋ ಬದ್ಲು ಹೊಲದಲ್ಲೇ ಬಿಟ್ಟಿದ್ರೇ ಗೊಬ್ಬರಾರೇ ಆಗ್ತಿತ್ರೀ..!’ ವಿಜಯಪುರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿನ ಉಳ್ಳಾಗಡ್ಡಿ ಮಾರ್ಕೆಟ್‌ಗೆ ಭಾನುವಾರ ಉತ್ಪನ್ನ ತಂದಿದ್ದ ಬೆಳೆಗಾರರೊಬ್ಬರ ಅಸಹಾಯಕ ಮಾತಿದು.

‘ಈ ಸಲ ಉಳ್ಳಾಗಡ್ಯಾಗ ದೊಡ್ಡ ಪಟ್ಟಿ ತಗೋ ಬೇಕಂತಹ ₹ 5000 ಕೊಟ್ಟು ಅಗಿ ತಂದು ಎರಡ್‌ ಬಿಗೇ ಹಚ್ಚಿದ್ದೆ. ಎರಡ್‌ ಸಾರಿ ಕಸ ತಗದ್ವೀ. ಎಣ್ಣಿ ಹೊಡದ್ವೀ, ಬೆಂಕಿ ಅಂತಹ ಬಿಸಿಲಾ ಲೆಕ್ಕಿಸ್ದೇ ನೀರ್‌ ಬಿಟ್ಟಿವೀ. ಏನು ಇಲ್ಲ ಅಂದ್ರೂ ಇಪ್ಪತ್ತರಿಂದ ಇಪ್ಪತೈದು ಸಾವಿರ ರೊಕ್ಕಾ ಖರ್ಚ್‌ ಮಾಡೇವಿ. 35 ಪಾಕೆಟ್‌ ಆಗಿದ್ದು. ಇವತ್‌ ಮಾರಾಕ್‌ ತಂದ್ರ ಎರಡ್ನೂರಾ ಐವತ್ತು ಧಾರಣೆ ಐತ್ರಿ.

ಇದರಾಗ್‌ ಎಷ್ಟ್‌ ಕಟ್‌ ಮಾಡಿ ಕೊಡ್ತಾರ ನೋಡ್ಬೇಕು. ಗಾಡಿ ಬಾಡಿಗಿ ಆದ್ರೂ ಹೋದ್ರ ಚಲೋ. ಇಲ್ಲಂದ್ರಾ ಸಾಲ ಮಾಡಿ ಕೊಡ್ಬೇಕ್‌ ಆಗ್ತಾದ’ ಎಂದು ಬಸವನ ಬಾಗೇವಾಡಿ ತಾಲ್ಲೂಕು ಅರಳಿಚಂಡಿ ಗ್ರಾಮದ ರೈತ ಮಲ್ಲಪ್ಪ ಎಮ್ಮಿ ‘ಕಣ್ಣೀರುಳ್ಳಿ’ಯಿಂದ ತಾವು ಪ್ರಸ್ತುತ ಎದುರಿಸಿದ ಅಸಹಾಯಕತೆಯನ್ನು ‘ಪ್ರಜಾವಾಣಿ’ ಬಳಿ ಎಳೆ ಎಳೆಯಾಗಿ ಬಿಚ್ಚಿಟ್ಟರು.

‘ರೈತ್ರ ಬಗ್ಗೆ ಯಾರಿಗೂ ಕಾಳ್ಜೀನೇ ಇಲ್ರೀ. ನಾವ್‌ ಬೆಳಿದಿದ್ರಾ ಎಲ್ರೂ ಹೆಂಗ್‌ ಬದುಕ್ತಾರೆ ಹೇಳ್ರಿ. ಸಾಲ ಮನ್ನಾ ಮಾಡೋ ಬದ್ಲಿ ನಮ್ಮ ಬೆಳಿಗಿ ಚಲೋ ರೇಟ್‌ ಕೊಡ್ಲಿ. ನಾವೇ ಅವ್ರಿಗಿ ಸಾಲಾ ಕೊಡ್ತೀವಿ. ಜೋಳಕ್‌ ಮೂರ್ ಸಾವಿರ, ಗೋದಿಗಿ ನಾಕ್‌ ಸಾವಿರ, ಉಳ್ಳಾಗಡ್ಡಿಗಿ ಎರಡ್‌ ಸಾವಿರ ಮಾಡ್ಲಿ. ರೈತ್‌ ಯಾಕ್‌ ಸಾಯ್ತಾನಾ ನೋಡೋಣ’ ಎಂದು ಮಲ್ಲಪ್ಪ ಹೇಳಿದರು.

‘ನಮ್ಮ ತ್ವಾಟದ್ಯಾಗ ನೀರ್‌ ಕಡಿಮಿ ಆಗ್ಯಾವ ಅಂತ; ಮತ್ತೊಬ್ಬರ ಹೊಲ ಮಾಡಿ ಸಾವಿರ ರೂಪಾಯಿದಂಗ ನಾಕ್‌ ಸೊಲಗಿ ಬೀಜ ತಂದು ಅಗಿ ಮಾಡಿ ಉಳ್ಳಾಗಡ್ಡಿ ಹಚ್ಚಿದ್ವಿ. ಬ್ಯಾಸಗಿ ಇರುದ್ರಿಂದ ಬೆಳೆ ನಲುಗಿಸಬಾರ್ದು ಅಂತ ಹಗಲು ರಾತ್ರಿ ನೀರು ಬಿಟ್ಟಿದ್ವಿ. ಮನಿ ಮಂದಿ ದುಡಿದಲ್ದೆ ಹತ್‌ ಹದಿನೈದ್‌ ಸಾವಿರ ಖರ್ಚ್‌ ಮಾಡಿದ್ವಿ.

ಐವತ್‌ ಪಿಸ್ಬಿ ಉಳ್ಳಾಗಡ್ಡಿ ಆಗಿತ್ತು. ಕ್ವಿಂಟಲ್‌ಕ ಮೂರ್‌ನೂರಾ ಎಪ್‌ತೈದು ಮಾರ್‌್ಯಾವ. ಮಾಡಿದ ಖರ್ಚು ಬರೋದಿಲ್ಲ. ಹೊಲ ಮಾಡಾಗ ಹೆಂಗ ಬಂದೀವಿ ಹಂಗೇ ಮನಿಗಿ ಖಾಲಿ ಕೈಲಿ ಹೋಗ್ಬೇಕು’ ಎಂದು ಬೂದಿಹಾಳ ಗ್ರಾಮದ ರೈತ ಶ್ರೀಶೈಲ ಸೋಮನಾಳ ಅಳಲು ತೋಡಿಕೊಂಡರು.

‘ಬೆಂಗಳೂರಾಗ ಉಳ್ಳಾಗಡ್ಡಿಗೆ ಸಾವಿರ ಮಾರಾಕತೈತಿ ಅಂತಹ ಹೇಳಿದ್ರು. ನಮ್ದೂ ಏನ್‌ ಬಾಳ ಇಲ್ಲ. ಇಲ್ಲೇ ಏಳೆಂಟ್‌ ನೂರ್‌ ಬರ್ತಾವ್‌ ಅಂತಹ ತಗೊಂಡ್‌ ಬಂದೆ. ಇಲ್ಲಿ ನೋಡಿದ್ರ ಬರೀ ನಾಕ್‌ ನೂರ್‌ಗೆ ಮಾರಿದೆ.
ನಾವ್‌ ಮಾಡ್ದ ಖರ್ಚಿಗಿ, ಉಳ್ಳಾಗಡ್ಡಿ ರೊಕ್ಕ ಬರುದ್ವಕ ಸರಿಸಾಟಿ ಆಗ್ತಾದ ನೋಡ್ರಿ. ಮನೆನವ್ರು ದುಡಿದಿದ್ಕ ಪಗಾರ ಬರೋದಿಲ್ಲ’ ಎಂದು ಇಂಡಿ ತಾಲ್ಲೂಕಿನ ಇಂಚಗೇರಿಯ ರೈತ ಸಿದ್ದಪ್ಪ ಬೇಸರ ವ್ಯಕ್ತಪಡಿಸಿದರು.

**
ಹೊಲದಾಗ ದುಡಿ ಬದ್ಲಿ ದೇಶಕ್‌ ಹೋಗಿದ್ರ ತುಸು ರೊಕ್‌ ಮಾಡ್ತಿದ್ದೆ. ಹೊಲದ ಕೆಲ್ಸಾ ಯಾವತ್ತು ಮಾಡ್ಬಾರ್ದು ಎನ್ನಿಸ್ತೈತಿ ‌– ಸಿದ್ದಪ್ಪ, ಇಂಚಗೇರಿಯ ಈರುಳ್ಳಿ ಬೆಳೆಗಾರ

–ಬಾಬುಗೌಡ ರೋಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT