ಮುಸ್ಲಿಮರ ನಿರ್ಲಕ್ಷ್ಯ: ಬೇಗ್‌

ಶುಕ್ರವಾರ, ಏಪ್ರಿಲ್ 26, 2019
33 °C

ಮುಸ್ಲಿಮರ ನಿರ್ಲಕ್ಷ್ಯ: ಬೇಗ್‌

Published:
Updated:

ಬೆಂಗಳೂರು: ‘ಕಾಂಗ್ರೆಸ್‌ ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸುತ್ತಿರುವುದನ್ನು ಗಮನಿಸಿದರೆ ‘ಮುಸ್ಲಿಂ ಮುಕ್ತ ಕಾಂಗ್ರೆಸ್’ ಮಾಡಬೇಕೆಂಬ ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ’ ಎಂದು ಕಾಂಗ್ರೆಸ್ ಶಾಸಕ ರೋಶನ್ ಬೇಗ್ ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಮರಿಗೆ ಆಗುತ್ತಿರುವ ಈ ಅನ್ಯಾಯಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಾಯಕತ್ವದ ವೈಫಲ್ಯವೇ ಕಾರಣ ಎಂದು ಗುರುವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಹಾಲಿ ಶಾಸಕರಿಗೆ ಟಿಕೆಟ್ ನೀಡುವುದಿಲ್ಲ ಎಂದಿದ್ದರು. ಆದರೆ, ಮೂವರು ಶಾಸಕರ ಹೆಸರು ಪ್ರಕಟಿಸಲಾಯಿತು. ಮುಸ್ಲಿಮರನ್ನು ನಿರ್ಲಕ್ಷ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿ ರಾಹುಲ್ ಗಾಂಧಿಗೆ ಪತ್ರ ಬರೆಯುತ್ತೇನೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಾರ್ಯವೈಖರಿಯ ಬಗ್ಗೆಯೂ ಮಾಹಿತಿ ನೀಡುತ್ತೇನೆ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್‌ ಮೂರು ಕ್ಷೇತ್ರಗಳಿಂದ ಟಿಕೆಟ್ ನೀಡುತ್ತಿತ್ತು. ಆದರೆ, ಈ ಬಾರಿ ಕೇವಲ ಒಂದು ಸ್ಥಾನ ನೀಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮುಸ್ಲಿಮರಲ್ಲಿ ಅಭ್ಯರ್ಥಿಗಳಿಲ್ಲ. ಟಿಕೆಟ್ ಕೊಟ್ಟರೆ ಗೆಲ್ಲಲು ಸಾಧ್ಯವಿಲ್ಲ ಎಂಬ ಕುಂಟು ನೆಪ ಹೇಳಿಕೊಂಡು ಟಿಕೆಟ್ ನಿರಾಕರಿಸಲಾಗಿದೆ. ಮುಸ್ಲಿಮರ ನಾಯಕತ್ವವನ್ನೆ ಅಂತ್ಯಗೊಳಿಸಲು ಕಾಂಗ್ರೆಸ್ ಹೊರಟಂತಿದೆ’ ಎಂದು ಕಿಡಿಕಾರಿದರು.

‘ಕಾಂಗ್ರೆಸ್‌ ಅಭ್ಯರ್ಥಿಗಳು ಕಣಕ್ಕಿಳಿದಿರುವ ಎಲ್ಲ 21 ಕ್ಷೇತ್ರಗಳಲ್ಲೂ ಗೆಲುವು ಕಾಣುತ್ತಾರೆಯೇ. ಬೇರೆಯವರಿಗೆ ಇಲ್ಲದ ಮಾನದಂಡ ಮುಸ್ಲಿಂ ಸಮುದಾಯದ ಮೇಲೆ ಹೇರುವುದು ಎಷ್ಟು ಸರಿ’ ಎಂದೂ ಅವರು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !