ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಗತ ಪಾತಕಿ ಅಸ್ಗರ್‌ ಪೊಲೀಸ್‌ರ ಬಲೆಗೆ

ನಕಲಿ ಪಾಸ್‌ಪೋರ್ಟ್‌ ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ
Last Updated 15 ಜೂನ್ 2019, 20:24 IST
ಅಕ್ಷರ ಗಾತ್ರ

ಮಂಗಳೂರು: ಎರಡು ಕೊಲೆ ಸೇರಿದಂತೆ 9 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, 12 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಅಸ್ಗರ್ ಆಲಿಯನ್ನು ಮಂಗಳೂರು ನಗರ ಪೊಲೀಸರು ಶನಿವಾರ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಬಂಧಿಸಿದ್ದಾರೆ.

ಆರೋಪಿಯು, ವಿದೇಶಕ್ಕೆ ಪಲಾಯನ ಮಾಡಲು ನಕಲಿ ಪಾಸ್‌ ಪೋರ್ಟ್ ಸಿದ್ಧ ಪಡಿಸಿಕೊಟ್ಟಿದ್ದ ನವಾಜ್ ಮತ್ತು ರಶೀದ್‌ ಎಂಬುವವರನ್ನೂ ಬಂಧಿಸಲಾಗಿದೆ.

ಆರೋಪಿಯು 2007ರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿಕೊಂಡು ದುಬೈಗೆ ಪರಾರಿಯಾಗಿದ್ದನು. ಕೆಲ ದಿನಗಳ ಹಿಂದೆ ಆತ ವಾಪಸ್ ಬಂದಿದ್ದು, ಕೇರಳದ ಉಪ್ಪಳದಲ್ಲಿ ತಲೆಮರೆಸಿಕೊಂಡಿರುವ ಕುರಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕಂಕನಾಡಿ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ್, ಸಬ್ ಇನ್‌ಸ್ಪೆಕ್ಟರ್ ಶ್ಯಾಮ್‌ ಸುಂದರ್ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

2005ರಲ್ಲಿ ನಡೆದ ಪೊಳಲಿ ಅನಂತು ಕೊಲೆಯಲ್ಲಿ ಅಸ್ಗರ್‌ ಪ್ರಮುಖ ಆರೋಪಿಯಾಗಿದ್ದ. ಕಳೆದ ವರ್ಷ ನಡೆದ ಟಾರ್ಗೆಟ್‌ ಗುಂಪಿನ ಇಲ್ಯಾಸ್‌ ಕೊಲೆ ಪ್ರಕರಣದಲ್ಲಿ ವಿದೇಶದಲ್ಲಿ ಕುಳಿತೇ ಸಂಚು ರೂಪಿಸಿದ್ದ.

ಆ ಸಂದರ್ಭದಲ್ಲಿ ಕೃತ್ಯ ಎಸಗಿದ್ದ ದಾವೂದ್‌ ಮತ್ತು ಇತರೆ ಆರೋಪಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಇಲ್ಯಾಸ್‌ ಕೊಲೆ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಮುಂಬೈನಲ್ಲಿ ಸ್ಥಳಾವಕಾಶವನ್ನೂ ವ್ಯವಸ್ಥೆ ಮಾಡಿದ್ದ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಭೂಗತ ಪಾತಕಿ ರಶೀದ್ ಮಲಬಾರಿ ಜೊತೆ ಅಸ್ಗರ್‌ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ವಿದೇಶದಲ್ಲಿ ಕುಳಿತು ಹಫ್ತಾಕ್ಕಾಗಿ ಹಲವರಿಗೆ ಬೆದರಿಕೆ ಕರೆ ಮಾಡುತ್ತಿದ್ದ. ಬೆಂಗಳೂರು ನಗರದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣವೊಂದರಲ್ಲೂ ಭಾಗಿಯಾಗಿದ್ದ ಎಂದು ತಿಳಿಸಿದ್ದಾರೆ.

ಉಳ್ಳಾಲದಲ್ಲಿ ನಡೆದಿದ್ದ ಶಕೀನಾ ಎಂಬ ಯುವತಿಯ ಕೊಲೆಯಲ್ಲೂ ಈತ ಭಾಗಿಯಾಗಿರುವ ಆರೋಪವಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

35 ಪಾಸ್‌ಪೋರ್ಟ್‌ ವಶ: ಅಸ್ಗರ್‌ ಇತರೆ ಆರೋಪಿಗಳ ನೆರವಿನಿಂದ ಅಶ್ರಫ್‌ ಅಲಿ ಎಂಬ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್‌ ಪಡೆದು, ದುಬೈಗೆ ಪರಾರಿಯಾಗಿದ್ದ. ನಕಲಿ ಪಾಸ್‌ಪೋರ್ಟ್‌ ಪಡೆಯಲು ಸಹಕಾರ ಮಾಡಿದ ಇಬ್ಬರನ್ನು ಬಂಧಿಸಿ, ಅವರಿಂದ 35 ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಭಾಗಿಯಾಗಿರುವ ನಕಲಿ ಪಾಸ್‌‍ಪೋರ್ಟ್‌ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT