ಗುರುವಾರ , ಮೇ 28, 2020
27 °C
ತಸ್ಲೀಂ ತಂಡಕ್ಕೆ ಐಎಸ್‌ ಸಂಘಟನೆಯಿಂದ ಸುಪಾರಿ

‘ಆರ್‌ಎಸ್‌ಎಸ್ ನಾಯಕರ ಹತ್ಯೆಗೆ ₹2 ಕೋಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: ಕೇರಳ ಮತ್ತು ಕರ್ನಾಟಕದ ಪ್ರಮುಖ ಆರ್‌ಎಸ್‌ಎಸ್ ನಾಯಕರ ಹತ್ಯೆಗೆ ಐಎಸ್‌ ಸಂಘಟನೆಯಿಂದ ತಸ್ಲೀಂ ಮತ್ತು ಆತನ ಸಹಚರರಿಗೆ ₹2 ಕೋಟಿ ಸುಪಾರಿ ನೀಡಲಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.

ಹೆಚ್ಚಿನ ತನಿಖೆಗೆ ಕೇಂದ್ರ ವಿಚಕ್ಷಣಾ ತಂಡ ಹಾಗೂ ದೆಹಲಿ ಪೊಲೀಸರು ಶೀಘ್ರದಲ್ಲೇ ಕಾಸರಗೋಡಿಗೆ ಬರಲಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೊಲೆ ಸಂಚಿಗೆ ಸಂಬಂಧಪಟ್ಟಂತೆ ಕಾಸರಗೋಡು ಸಮೀಪದ ಚೆಂಬರಿಕ ನಿವಾಸಿ ಮುಫ್ತಾಸ್ ಯಾನೆ ತಸ್ಲೀಂ (38)ನನ್ನು ದೆಹಲಿ ಪೊಲೀಸರು ಹಾಗೂ 'ರಾ' ಗುಪ್ತ ದಳದ ಅಧಿಕಾರಿಗಳು ಕಾಸರಗೋಡಿನ ಚಟ್ಟಂಚಾಲಿನ ಆತನ ಪತ್ನಿಯ ಮನೆಯಿಂದ ಬಂಧಿಸಿ, ದೆಹಲಿಗೆ ಕರೆದೊಯ್ದಿದ್ದರು. ಈತನ ಸಹಚರರಾದ ಅಫ್ಗಾನಿಸ್ಥಾನದ ವಾಲೀ ಮುಹಮ್ಮದ್ ಸೈಫಿ ಹಾಗೂ ದೆಹಲಿ ನಿವಾಸಿ ಶೇಖ್‌ ರಿಯಾಜುದ್ದೀನ್ ಎಂಬವರನ್ನು ಈ ಒಳಸಂಚಿನ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ತಸ್ಲೀಂ ಬಗ್ಗೆ ಮಾಹಿತಿ ನೀಡಿದ್ದರು.

ಮೂವರು ಆರೋಪಿಗಳು, ಐಎಸ್ ಸಂಘಟನೆಯ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಮೊದಲು ಕೇರಳ ಮತ್ತು ಕರ್ನಾಟಕದ ಕೆಲವು ಆರ್‌ಎಸ್ಎಸ್ ನಾಯಕರನ್ನು ಹತ್ಯೆ ಮಾಡಲು ಈ ಮೂವರು ಶಾರ್ಪ್ ಶೂಟರ್‌ಗಳಿಗೆ ಐಎಸ್ ಸುಪಾರಿ ನೀಡಿದ್ದು, ಇದಕ್ಕಾಗಿ ₹2 ಕೋಟಿ ಪಡೆದಿದ್ದರು ಎನ್ನಲಾಗಿದೆ. ತನ್ನ ಸಹಚರರು ದೆಹಲಿಯಲ್ಲಿ ಬಂಧನಕ್ಕೆ ಒಳಗಾದ ಮಾಹಿತಿ ಲಭಿಸಿದ ತಸ್ಲೀಂ, ತನಗೆ ಸುರಕ್ಷಿತ ಸ್ಥಳವಾಗಿದ್ದ ಚಟ್ಟಂಚಾಲಿನಲ್ಲಿ ಅಡಗಿದ್ದ.

ಐಎಸ್ ಜತೆಗೆ ತಸ್ಲೀಂನಿಗೆ ಇರುವ ಸಂಬಂಧ ಹಾಗೂ ₹2 ಕೋಟಿ ಸುಪಾರಿಯ ಆರೋಪದ ಬಗ್ಗೆ ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು