ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ಪೋಸ್ಟ್‌ಗಳಲ್ಲಿ ಸುಲಿಗೆ ನಿರಂತರ: ನಿಯೋಜನೆಯೇ ಲೂಟಿಗೆ ರಹದಾರಿ

ಸಾರಿಗೆ ಅಲ್ಲ ಸೋರಿಕೆ: ಖಾಸಗಿ ‘ಪಡೆ’ಗಳ ಕೈಯಲ್ಲಿ ವಸೂಲಿ ದಂಧೆ
Last Updated 2 ಮಾರ್ಚ್ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು:ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಕರ್ತವ್ಯ ನಿರ್ವಹಿಸುವ ವ್ಯಕ್ತಿ ನಿವೃತ್ತರಾದರೆ, ಬೇರೆ ಕಡೆಗೆ ವರ್ಗಾವಣೆಯಾದರೆ ಅಂತಹ ಹುದ್ದೆಯನ್ನು ತಾತ್ಕಾಲಿಕವಾಗಿ ನಿಭಾಯಿಸಲು ನಿಯೋಜನೆ ಎಂಬ ಪದ್ಧತಿ ಇದೆ. ಅದಕ್ಕೆ ಕೆಲವು ಕಟ್ಟುಪಾಡುಗಳೂ ಇವೆ.

ಆದರೆ, ಸಾರಿಗೆ ಇಲಾಖೆಯಲ್ಲಿ ‘ನಿಯೋಜನೆ’ ಎಂಬುದು ದುಡ್ಡಿನ ಗಣಿ(ಕ್ವಾರಿ) ಇದ್ದಂತೆ. ಪ್ರವರ್ತನ ಕಾರ್ಯದ (ಎನ್‌ ಫೋರ್ಸ್‌ಮೆಂಟ್‌) ಹೆಸರಿನಲ್ಲಿ ದಿನದ ಎಂಟು ಗಂಟೆ, ವಾರದ ಲೆಕ್ಕದಲ್ಲಿ ನಿಯೋಜನೆ ಜವಾಬ್ದಾರಿಗೆ ಹಿಮೋನಿ, ಮೋನಿಗಳನ್ನು ಹಂಚಿಕೆ ಮಾಡಲಾಗುತ್ತದೆ. ಹಾಗಂತ ಪುಗಸಟ್ಟೆ ಈ ಕೆಲಸ ಸಿಗುವುದಿಲ್ಲ. ಆರ್‌ಟಿಒ ಹುದ್ದೆಯಲ್ಲಿ ಕೂರಲು ಹರಾಜು ಕೂಗಿದಂತೆ, ಚೆಕ್‌ಪೋಸ್ಟ್‌ ಹಾಗೂ ಹೈವೆ ಚೆಕ್ಕಿಂಗ್ ಪಾಯಿಂಟ್‌ಗಳಲ್ಲಿ ದಿನವೊಂದಕ್ಕೆ ಎಷ್ಟು ಮೊತ್ತದ ಕಮಾಯಿ ಅಥವಾ ಸ್ಕೋರ್ ಆಗುತ್ತದೆ ಎಂಬುದನ್ನು ಆಧರಿಸಿ ನಿಯೋಜಿತ ಹುದ್ದೆಗೆ ದರ ನಿಗದಿ ಮಾಡಲಾಗುತ್ತದೆ. ಅದನ್ನು ಕೊಡಲೊಪ್ಪಿದರೆ ಮಾತ್ರ ನಿಯೋಜನೆ ಇಲ್ಲದೇ ಇದ್ದರೆ ಆರ್‌ಟಿಒ ಕಚೇರಿಯಲ್ಲಿ ಕೂರಬೇಕಾಗುತ್ತದೆ.

ಉತ್ತರದಲ್ಲಿ ಇರುವ ಇಬ್ಬರು ಜಂಟಿ ಆಯುಕ್ತರು, ದಕ್ಷಿಣದಲ್ಲಿ ಇರುವ ನಾಲ್ವರು ಜಂಟಿ ಆಯುಕ್ತರಿಗೆ ಈ ಅಧಿಕಾರ ಇದೆ. ಯಾವ ಚೆಕ್‌ಪೋಸ್ಟ್‌ಗೆ ಯಾರನ್ನು ಹಾಕಬೇಕು, ಅಲ್ಲಿನ ವಸೂಲಿ ಎಷ್ಟು ನಡೆಯುತ್ತದೆ, ಹಂಚಿಕೆ ಹೇಗೆ ಎಂಬುದನ್ನು ನಿರ್ಧರಿಸುವುದು ಮಾತ್ರ ‘2ಜಿ’ಗಳು. ನಿಯೋಜನೆ ಆದೇಶ ಹೊರಡಿಸುವ ಜಂಟಿ ಆಯುಕ್ತರಿಗೂ ಹೆಚ್ಚಿನ ಪಾಲು ಸಿಗುತ್ತದೆ.

ದುಡ್ಡಿನ ಗಣಿ: ಕರ್ನಾಟಕದ ಗಡಿಯಲ್ಲಿರುವ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಕಡೆಯಿಂದ ಪ್ರತಿನಿತ್ಯ ಸರಾಸರಿ 15 ಸಾವಿರ ಲಾರಿಗಳು ಅತ್ತಿಂದಿತ್ತ ಓಡಾಡುತ್ತವೆ.

ಚೆಕ್‌ಪೋಸ್ಟ್‌ಗಳಲ್ಲಿ ಇವುಗಳನ್ನು ತಡೆದು ನಿಲ್ಲಿಸಿ, ವಾಹನಗಳ ದಾಖಲೆ ಪರಿಶೀಲನೆ, ಸರಕು ಸಾಗಣೆಗೆ ಸಂಬಂಧಿಸಿದ ತೆರಿಗೆ ಪಾವತಿಸಿದ ದಾಖಲೆ ಪರಿಶೀಲನೆ ಮಾಡುವ ಹೆಸರಿನಲ್ಲಿ ಈ ಹಗಲು ದರೋಡೆ ನಡೆಯುತ್ತದೆ ಎನ್ನುತ್ತಾರೆ ಈ ಬಗ್ಗೆ ಅಧ್ಯಯನ ನಡೆಸಿದ ಕೆ.ಎನ್‌. ಸೋಮಶೇಖರ್.

ಇಲ್ಲಿ ಒಬ್ಬರೋ ಇಬ್ಬರೋ ಅಧಿಕಾರಿಗಳು ಇರುತ್ತಾರೆ. ವಸೂಲಿ ಮಾಡುವುದು ಖಾಸಗಿ ಪಡೆ ಮತ್ತು ಅವರಿಗೆ ಬೆಂಗಾವಲಾಗಿ ಗೃಹ ರಕ್ಷಕ ದಳದ ಸಿಬ್ಬಂದಿ ಇರುತ್ತಾರೆ. ಮಹಾರಾಷ್ಟ್ರದಿಂದ ಒಳ ಪ್ರವೇಶಿಸುವ ಗಡಿ ಭಾಗವಾದ ಝಳಕಿ, ನಿಪ್ಪಾಣಿ ಸಮೀಪದ ಕೋಗೋನಳ್ಳಿ, ತಮಿಳುನಾಡಿನಿಂದ ಬರುವ ಗಡಿ ಅತ್ತಿಬೆಲೆ ಅತಿ ಹೆಚ್ಚು ದುಡ್ಡು ಉದುರುವ ಕೇಂದ್ರಗಳು. ಇಲ್ಲಿ ದಿನಕ್ಕೆ ಏನಿಲ್ಲವೆಂದರೂ ₹10 ಲಕ್ಷದಿಂದ ₹30 ಲಕ್ಷದವರೆಗೆ ಸರಾಸರಿ ‘ಸ್ಕೋರ್‌’ ಆಗುತ್ತದೆ.

ಚೆಕ್‌ಪೋಸ್ಟ್‌ಗಳಲ್ಲಿಬೆಳಿಗ್ಗೆ 6ರಿಂದ ಮಧ್ಯಾಹ್ನ 2, 2ರಿಂದ ರಾತ್ರಿ 10, ರಾತ್ರಿ 10ರಿಂದ ಬೆಳಿಗ್ಗೆ 6 ಹೀಗೆ ಮೂರು ಪಾಳಿಯಲ್ಲಿ ನಿಯೋಜನೆ ಮಾಡಲಾಗುತ್ತದೆ. ಅತಿ ಹೆಚ್ಚು ವಾಹನಗಳು ಗಡಿಭಾಗ ದಾಟಿ ಕರ್ನಾಟಕಕ್ಕೆ ಬರುವ, ರಾಜ್ಯದಿಂದ ಪರರಾಜ್ಯಗಳಿಗೆ ತೆರಳುವ ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆವರೆಗಿನ ಪಾಳಿಗೆ ಅತಿ ಹೆಚ್ಚು ಬೇಡಿಕೆ. ಹೆಚ್ಚು ಹಣ ಕೊಡಲು ಅಥವಾ ಆ ತಿಂಗಳಿನಲ್ಲಿ ಹೆಚ್ಚು ಹಣ ಬೇಕಾದರೆ 24 ಗಂಟೆ ಅವಧಿ ಒಬ್ಬರಿಗೆ ನಿಯೋಜನೆ ನೀಡುವುದೂ ಉಂಟು. 24 ಗಂಟೆ ಅಲ್ಲಿಯೇ ಇದ್ದರೆ ಊಟ, ನಿದ್ರೆ ಯಾವಾಗ ಮಾಡುತ್ತಾರೆ ಎಂಬ ಅನುಮಾನ ಸಹಜ. ಹಾಜರಿ ಪುಸ್ತಕದಲ್ಲೇ ಸಹಿ ಇರುತ್ತದೆ.ಆದರೆ, ಇವರ‍್ಯಾರೂ ಅಲ್ಲಿ ಕೆಲಸ ಮಾಡುವುದಿಲ್ಲ. ವಸೂಲಿಯನ್ನು ಖಾಸಗಿ ವ್ಯಕ್ತಿಗಳಿಗೆ ವಹಿಸಿ ಆರಾಮವಾಗಿ ಮನೆ, ಲಾಡ್ಜ್‌, ಮಸಾಜ್ ಪಾರ್ಲರ್‌ಗಳಲ್ಲಿ ಅಥವಾ ಗೋವಾದಲ್ಲೂ ಇದ್ದು ಬಿಡುವುದು ಸಾಮಾನ್ಯ. ಹೆಚ್ಚೆಂದರೆ ತಿಂಗಳಿಗೆ 10 ದಿನ ಕೆಲಸ ಮಾಡಿದರೆ ಹೆಚ್ಚು ಎನ್ನುತ್ತವೆ ಮೂಲಗಳು.

ಹಾಗಂತ ತಿಂಗಳಪೂರ್ತಿ ಒಂದೇ ಕಡೆ ಹಾಕುವ ಪರಿಪಾಟ ಇಲ್ಲ. ‘ಸ್ಕೋರ್‌’ ಅಥವಾ ಆ ಹೊತ್ತಿನಲ್ಲಿ ಸಂಗ್ರಹವಾಗುವ ಲಂಚದ ಆಧಾರದ ಮೇಲೆ, ಪಾಳಿಗೆ ಇಂತಿಷ್ಟು ಎಂದು ಮೊತ್ತ ನಿಗದಿ ಮಾಡಲಾಗುತ್ತದೆ. ಸಂಗ್ರಹವಾದ ಹಣವನ್ನು ಹಿಮೋನಿ, ಮೋನಿ, ಆರ್‌ಟಿಒ, ಜಂಟಿ ಆಯುಕ್ತರು, ಹೆಚ್ಚುವರಿ ಆಯುಕ್ತರು ಮಾತ್ರವಲ್ಲದೇ, ಅಟೆಂಡರ್, ಗುಮಾಸ್ತ, ಕಂಪ್ಯೂಟರ್ ಆಪರೇಟರ್‌, ಚಾಲಕ ಹೀಗೆ ಎಲ್ಲರಿಗೂ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡುವ ‘ಭ್ರಷ್ಟಾಚಾರದಲ್ಲೂ ಸರ್ವ ಸಮಾನತೆ’ ಇಲ್ಲಿದೆ.

ಹಣ ವಸೂಲಿಗೆ ನೇಮಿಸಿಕೊಳ್ಳುವ ಖಾಸಗಿ ‘ಗೂಂಡಾ’ಗಳಿಗೆ ಇದರಲ್ಲಿ ಪಾಲಿಲ್ಲ. ಅವರಿಗೆ ದಿನವೊಂದಕ್ಕೆ ವಸೂಲಾತಿ ಸಾಮರ್ಥ್ಯದ ಆಧಾರದ ಮೇಲೆ ₹1 ಸಾವಿರದಿಂದ ₹2 ಸಾವಿರದವರೆಗೆ ಸಂಬಳ ನಿಗದಿ ಮಾಡಲಾಗುತ್ತದೆ.

ಚೆಕ್‌ಪೋಸ್ಟ್‌ನಲ್ಲಿ ಹಣ ನೀಡಿದ ಮಾತ್ರಕ್ಕೆ ಮುಂದಿನ ದಾರಿ ಸಲೀಸಲ್ಲ. ಹೈವೆ ಚೆಕ್ಕಿಂಗ್ ಪಾಯಿಂಟ್‌ನಲ್ಲಿ ಮತ್ತೆ ಗುಂಪುಗುಂಪಾಗಿ ವಾಹನ ಅಡ್ಡಗಟ್ಟಿ ಸುಲಿಗೆ ಮಾಡುವುದು ಇದ್ದೇ ಇದೆ. ಇಂತಹ‍ಪಾಯಿಂಟ್‌ಗಳು ರಾಜ್ಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಗುಂಟ 30 ಕಡೆಗಳಲ್ಲಿ ಇದೆ.

ಈ ಕಾರಣಕ್ಕಾಗಿಯೇ, ಬೆಳಗಾವಿ–30, ಕೊಪ್ಪಳ–16, ಅತ್ತಿಬೆಲೆ–24, ಚಿತ್ರದುರ್ಗ–15, ಹೊಸಪೇಟೆ–12, ಬೀದರ–10, ನೆಲಮಂಗಲ–10 ಜನರು ಹಿರಿಯ ಮೋಟಾರು ನಿರೀಕ್ಷಕರು ಕೆಲಸ ಮಾಡುತ್ತಾರೆ. ದುಡ್ಡು ಉದುರದನಾಗಮಂಗಲ, ಸಕಲೇಶಪುರ, ಕೆಜಿಎಫ್‌, ಮಡಿಕೇರಿ, ಸಾಗರ, ಕಾರವಾರ, ಶಿರಸಿ, ತಿಪಟೂರು, ಹೊನ್ನಾವರ, ಜಮಖಂಡಿ, ಭಾಲ್ಕಿಯಂತಹ ಆರ್‌ಟಿಒ ಕಚೇರಿಗಳಿಗೆ ಯಾರೊಬ್ಬರೂ ಹೋಗುವುದಿಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಅಡ್ಡದಂಧೆಯೇ ಬಂಡವಾಳ

ಬೆಂಗಳೂರಿನ ರಾಜಾಜಿನಗರದ ಆರ್‌ಟಿಒ ಕಚೇರಿ ಹಾಗೂ ಸುತ್ತಮುತ್ತಲ ಅಂಗಡಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ಮಾಡಿದ್ದರು. ದಲ್ಲಾಳಿಗಳಿಂದ ಹಣ, ಆರ್‌ಟಿಇ ಕಚೇರಿ ಸೀಲ್‌, ಸ್ಮಾರ್ಟ್ ಕಾರ್ಡ್‌, ಆರ್‌ಸಿ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದರು. ವಶ ಪಡಿಸಿಕೊಂಡ ಹಣದ ಪೈಕಿ ₹7.31 ಲಕ್ಷ ಅಧಿಕಾರಿಗಳಿಗೆ ನೀಡಲು ಸಂಗ್ರಹಿಸಿದ್ದಾಗಿದೆ ಎಂದು ವಶಕ್ಕೆ ಪಡೆದ ಖಾಸಗಿ ವ್ಯಕ್ತಿಗಳು ಹೇಳಿದ್ದಾರೆ.

ಅತಿ ಹೆಚ್ಚು ವಾಹನ ನೋಂದಣಿ, ಎಫ್‌ಸಿ ನಡೆಯುವ ಎಲ್ಲ ಆರ್‌ಟಿಒ ಕಚೇರಿಗಳಲ್ಲೂ ಇದು ಸಾಮಾನ್ಯ. ಇವನ್ನೆಲ್ಲ ನಿಭಾಯಿಸುವುದು ಖಾಸಗಿ ವ್ಯಕ್ತಿಗಳು. ಅವರೂ ತಿಂದು, ಅಧಿಕಾರಿಗಳಿಗೂ ಪಾಲು ಹಂಚುವುದು ನಿತ್ಯದ ಕಾಯಕ.

ಧನದ ಮೂಲವೇ ಫಿಟ್‌ನೆಸ್‌ ಸರ್ಟಿಫಿಕೇಟ್‌(ಎಫ್‌ಸಿ), ನೋಂದಣಿ, ವಾಹನದ ಮೂಲ ದಾಖಲೆ, ತೆರಿಗೆ ತಪ್ಪಿಸಲು ಒಳಮಾರ್ಗವಾಗಿರುವ ನಾಲ್ಕೈದು ವಾಹನಗಳಿಗೆ ಒಂದೇ ನಂಬರ್ ಪ್ಲೇಟ್‌ನ ದಂಧೆ.

ಎಲ್ಲ ವಾಣಿಜ್ಯ ವಾಹನಗಳಿಗೂ ಪ್ರತಿ ವರ್ಷ ಎಫ್‌ಸಿ ಮಾಡಿಸಲೇಬೇಕು. ಇದಕ್ಕೆ ಸರ್ಕಾರಿ ಶುಲ್ಕ ಗರಿಷ್ಠ ₹1,000. ಸಣ್ಣಪುಟ್ಟ ದೋಷ ತೋರಿಸಿ ಎಫ್‌ಸಿ ನಿರಾಕರಿಸಲಾಗುತ್ತದೆ. ಅದಕ್ಕಾಗಿ ಬಹುತೇಕರು ದಲ್ಲಾಳಿಗಳ ಮೊರೆ ಹೋಗುತ್ತಾರೆ. ₹ 3 ಸಾವಿರದಿಂದ ₹20 ಸಾವಿರದವರೆಗೂ ವಸೂಲು ನಡೆಯುತ್ತದೆ. ಕಚೇರಿ ಆರಂಭವಾಗುವುದು ಬೆಳಿಗ್ಗೆ 10ರ ಬಳಿಕ. ಆದರೂ, ಎಫ್‌ಸಿಗಾಗಿ ವಾಹನಗಳ ಪರಿಶೀಲನೆ ಬೆಳಿಗ್ಗೆ 6ರಿಂದ 8ಗಂಟೆ ಅವಧಿಯಲ್ಲೇ ಮುಗಿದಿರುತ್ತದೆ.

ಜನರನ್ನು ಕರೆದೊಯ್ಯುವ ಬಸ್, ಐಷಾರಾಮಿ ಬಸ್‌ಗಳಿಗೆ ಮೂರು ತಿಂಗಳಿಗೊಮ್ಮೆ ₹1 ಲಕ್ಷ, ಸರಕು ಸಾಗಿಸುವ ವಾಹನಗಳಿಗೆ ₹80 ಸಾವಿರ ತೆರಿಗೆ ಪಾವತಿಸಬೇಕು. ಇದನ್ನು ತಪ್ಪಿಸಲು ನಾಲ್ಕೈದು ವಾಹನಗಳಿಗೆ ಒಂದೇ ನಂಬರ್ ಪ್ಲೇಟ್‌ ಹಾಕಿ ಓಡಿಸುವ ದಂಧೆ ಇದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೂ ಆರ್‌ಟಿಇ, ಹಿಮೋನಿಗಳಿಗೆ ಕೈ ತುಂಬಾ ಹಣ. ಅಪಘಾತವಾದರೆ ಛಾಸ್ಸಿ ನಂಬರ್ ಗೋಜಿಗೆ ಹೋಗದೇ ನಂಬರ್ ಪ್ಲೇಟ್ ಆಧರಿಸಿಯೇ ವಿಮೆ ಹಣ ಪಡೆಯಲಾಗುತ್ತದೆ.

‘ಡಬ್ಬ’ ಎಂದು ಕರೆಯಲಾಗುವ 10, 12,14, 18 ಚಕ್ರಗಳ ಭಾರೀ ಸರಕು ಸಾಗಣೆ ವಾಹನಗಳು ಹಣದ ಫಲ ಬಿಡುವ ಮರ.

‘ಬ್ಲೇಡ್’ ಲಾರಿ ಎನ್ನುವ 120 ಅಡಿ ಉದ್ದದ ಓವರ್‌ ವೈಟ್ ಕಾರ್ಗೊ (ಒಡಬ್ಲ್ಯುಸಿ), ಓವರ್‌ ಡೈಮೆನ್ಶನ್‌ ಕಾರ್ಗೊ (ಒಡಿಸಿ) ಓಡಿಸಲು ಆನ್‌ಲೈನ್‌ನಲ್ಲಿ ಅಂತಾರಾಜ್ಯ ರಹದಾರಿ ಸಿಗುವುದಿಲ್ಲ. ಅದಕ್ಕೆ ತಂತ್ರಾಂಶದಲ್ಲಿ ಹಾಗೂ ಕಾನೂನು ಪ್ರಕಾರ ಇವುಗಳಿಗೆ ಅವಕಾಶವೂ ಇಲ್ಲ. ವರ್ಷಕ್ಕೆ 1000–1200 ಟ್ರಿಪ್‌ ಕರ್ನಾಟಕದಲ್ಲಿ ಬರುತ್ತವೆ. ಇಂತಹ ಒಂದು ಲಾರಿಗೆ ₹1 ಲಕ್ಷ ವಸೂಲು ಮಾಡಲಾಗುತ್ತಿದೆ.

ಸುರಕ್ಷತೆಗಲ್ಲ, ಭಕ್ಷಣೆಯತ್ತ ಚಿತ್ತ

ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ರಸ್ತೆ ಸುರಕ್ಷತೆ ಎಂಬುದು ಸಾರಿಗೆ ಇಲಾಖೆಯ ಅತಿ ನಿರ್ಲಕ್ಷ್ಯಕ್ಕೆ ತುತ್ತಾದ ವಿಭಾಗ.

ಚಾಲನಾ ಪರವಾನಗಿ ಪಡೆಯುವಾಗ ರಸ್ತೆ ಸುರಕ್ಷತೆ ಹಾಗೂ ರಸ್ತೆ ನಿಯಮಗಳನ್ನು ಕುರಿತು ಸಾಮಾನ್ಯ ಜ್ಞಾನ ಪರೀಕ್ಷೆ ಬರೆಯಬೇಕು. ಅದಾದ ಬಳಿಕವಷ್ಟೇ ಕಲಿಕಾ ಪರವಾನಗಿಯನ್ನು(ಎಲ್‌ಎಲ್‌) ಆರು ತಿಂಗಳ ಅವಧಿಗೆ ನೀಡಲಾಗುತ್ತದೆ. ಕಲಿಕಾ ಅವಧಿಯಲ್ಲಿ ವಾಹನಗಳನ್ನು ಚೆನ್ನಾಗಿ ಓಡಿಸುವುದರಲ್ಲಿ ನೈಪುಣ್ಯ ಸಾಧಿಸಿದರೆ ಮಾತ್ರ ಚಾಲನಾ ಪರವಾನಗಿ(ಡಿಎಲ್‌) ಪರೀಕ್ಷೆ ಎದುರಿಸಿ, ಸಾಮರ್ಥ್ಯ ತೋರಬಹುದು. ಅಂತಹವರಿಗೆ ಮಾತ್ರ ಡಿಎಲ್ ಸಿಗುತ್ತದೆ ಎಂಬುದು ನಿಯಮ. ಆದರೆ, ಆರ್‌ಟಿಒ ಕಚೇರಿಯ ಬ್ರೋಕರ್‌ಗಳಿಗೆ ಹಣ ಕೊಟ್ಟರೆ ಎಲ್‌ಎಲ್‌, ಡಿಎಲ್‌ ಎಲ್ಲವೂ ಸಿಗಲಿದೆ. ಹಣ ಮೊದಲೇ ಕೊಟ್ಟು ಬುಕ್ ಮಾಡಿದವರ ಸಾಮರ್ಥ್ಯವನ್ನು ಪರೀಕ್ಷಿಸುವ ಗೋಜಿಗೆ ಮೋಟಾರು ವಾಹನ ಇನ್‌ಸ್ಪೆಕ್ಟರ್‌ಗಳು ಹೋಗುವುದೇ ಇಲ್ಲ. ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಸಾರಿಗೆ ಇಲಾಖೆಯಲ್ಲಿ ಇದಕ್ಕೊಂದು ವಿಭಾಗ ಇದೆ. ಅದು ಕೇವಲ ದಾಖಲೆಗೆ ಸೀಮಿತ.

2013ರಿಂದ ರಸ್ತೆ ಸುರಕ್ಷತೆ ವಿಭಾಗಕ್ಕೆ ಹೆಚ್ಚುವರಿ ಆಯುಕ್ತರನ್ನು ನೇಮಕ ಮಾಡಿಲ್ಲ. ಇದರ ಜತೆಗೆ ಯೋಜನೆ, ಶಿಕ್ಷಣ ಹಾಗೂ ಸಂಪನ್ಮೂಲ ವಿಭಾಗದ ಅಧಿಕಾರಿಗಳನ್ನು ನಿಯುಕ್ತಿ ಮಾಡಬೇಕು. ಇಬ್ಬರು ಹಿರಿಯ ಆರ್‌ಟಿಒ ಅಧಿಕಾರಿಗಳು ಇರಬೇಕು. ಅವರ ನೆರವಿಗೆ ಬೇಕಾದ ಸಿಬ್ಬಂದಿ ಹಂಚಿಕೆ ಮಾಡಬೇಕು. ಇದು ಈವರೆಗೆ ಕಾರ್ಯರೂಪಕ್ಕೆ ಬಂದೇ ಇಲ್ಲ. ದುಡ್ಡು ಉದುರದ ಈ ಹುದ್ದೆಗಳಿಗೆ ಬರಲು ಯಾರೊಬ್ಬರೂ ತಯಾರಿಲ್ಲ.

ಆನ್‌ಲೈನ್ ಎಂಬ ತಮಾಷೆ

ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ತೊಡೆದು ಹಾಕಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆನ್‌ಲೈನ್‌ನಲ್ಲೇ ಅರ್ಜಿ ತುಂಬಿ, ಹಣ ಪಾವತಿಸಿ ಡಿಎಲ್‌, ನೋಂದಣಿ ಪ್ರಕ್ರಿಯೆ ಮುಗಿಸಬಹುದು. ಫಿಟ್ ನೆಸ್‌ ಸರ್ಟಿಫಿಕೇಟ್‌ ಪಡೆಯುವ ಅವಕಾಶ ಇದೆ.

ಆದರೆ, ಒಳದಾರಿಗಳ ಸುಳಿಯೊಳಗೆ ಹೋಗದೇ, ನೇರಾನೇರ ಹೋದರೆ ವಾರವಲ್ಲ, ತಿಂಗಳು ಸುತ್ತಾಡಿದರೂ ಎಲ್‌ಎಲ್‌ ಅಥವಾ ಡಿಎಲ್ ಸಿಗುವುದಿಲ್ಲ ಎಂಬುದು ಅನುಭವಸ್ಥರ ಮಾತು. ಚಾಲನಾ ತರಬೇತಿ ಶಾಲೆ (ಡ್ರೈವಿಂಗ್ ಸ್ಕೂಲ್‌) ಮೂಲಕ ಹೋದರೆ ಎಲ್ಲವೂ ಸಲೀಸು.

ಕಲಿಕಾ ಅನುಜ್ಞಾ ಪತ್ರ (ಎಲ್‌ಎಲ್‌) ಪಡೆಯಲು ಸರ್ಕಾರಕ್ಕೆ ನೀಡಬೇಕಾದ ಶುಲ್ಕ ಗರಿಷ್ಠ ₹200, ಡಿಎಲ್‌ಗೆ ಎಲ್ಲವೂ ಸೇರಿ ₹700, ಎಫ್‌ಸಿ ಪಡೆಯಲು ₹200 ಮಾತ್ರ ನೀಡಬೇಕು. ಸರ್ಕಾರದ ಬೊಕ್ಕಸಕ್ಕೆ ಹೋಗುವುದು ಇಷ್ಟು ಮಾತ್ರ.

ಸ್ಕೋರ್‌ ಎಲ್ನೋಡು ಸ್ಕೋರ್...!

ಇದು ಕ್ರಿಕೆಟ್‌ ಆಟಗಾರರು ಬಾರಿಸುವ ಸ್ಕೋರ್ ಅಲ್ಲ. ವಿವಿಧ ಕಡೆ ದಿನನಿತ್ಯ ಆಗುವ ಲಂಚದ ಸಂಗ್ರಹದ ಮೊತ್ತಕ್ಕೆ ಇಲ್ಲಿ ‘ಸ್ಕೋರ್’ ಎಂಬ ಅಡ್ಡಪದ ಬಳಕೆಯಲ್ಲಿದೆ.

ಆರ್‌ಟಿಒ ಕಚೇರಿ, ಚೆಕ್‌ಪೋಸ್ಟ್‌ ಅಥವಾ ಚೆಕ್ಕಿಂಗ್ ಪಾಯಿಂಟ್‌ಗಳಲ್ಲಿ ಕೆಳಹಂತದ ಸಿಬ್ಬಂದಿ ಖಾಸಗಿ ಪಡೆ, ಬ್ರೋಕರ್‌ಗಳು ಸಂಗ್ರಹಿಸುವ ಲಂಚದ ಮೊತ್ತದ ಈ ದಿನ ಎಷ್ಟಾಯ್ತು ಎಂದು ವಿಚಾರಿಸುವಾಗ, ಎಷ್ಟು ಸ್ಕೋರ್‌ ಎಂದು ಕೇಳುವುದು ರೂಢಿ. ಇದನ್ನು ಆಧರಿಸಿಯೇ ಹರಾಜು, ನಿಯೋಜನೆ ನಡೆಯುತ್ತದೆ. ಹೀಗಾಗಿ, ಸ್ಕೋರ್ ಸಾರಿಗೆ ಇಲಾಖೆಯಲ್ಲಿ ಅತ್ಯಂತ ಆಪ್ಯಾಯಮಾನ.

ಬೇಕಾಬಿಟ್ಟಿ ವ್ಯವಹಾರಕ್ಕೆ ಬಣ್ಣ ಬಣ್ಣದ ಚೀಟಿ

ರಾಜ್ಯದ ಹೆದ್ದಾರಿಗಳ ಮೂಲಕ ಬೇರೆ ರಾಜ್ಯಗಳ ವಾಹನಗಳು ಮತ್ತೊಂದು ರಾಜ್ಯವನ್ನು ಸಂಪರ್ಕಿಸುತ್ತವೆ. ಕೆಲವು ಮಾಲೀಕರು 100ಕ್ಕಿಂತ ಹೆಚ್ಚು ಲಾರಿಗಳನ್ನು ಹೊಂದಿದ್ದಾರೆ.

ದಿನನಿತ್ಯ ಓಡಾಡುವ ಈ ಲಾರಿಗಳ ಚಾಲಕರು ಪ್ರತಿ ಚೆಕ್‌ ಪೋಸ್ಟ್ ಅಥವಾ ಚೆಕ್ಕಿಂಗ್ ಪಾಯಿಂಟ್‌ಗಳಲ್ಲಿ ಲಂಚ ಕೊಟ್ಟು ಹೋಗುವುದನ್ನು ತಪ್ಪಿಸಲು ಸ್ಲಿಪ್‌ ಪದ್ಧತಿ ಇದೆ.

ಕರ್ನಾಟಕದಲ್ಲಿ ಓಡಾಡುವ ಲಾರಿಗಳು ಹಾಗೂ ಟ್ರಿಪ್‌ಗಳ ಸಂಖ್ಯೆ ಆಧರಿಸಿ ಲಾರಿ ಮಾಲೀಕರಿಗೆ ಉಂಡಾಗುತ್ತಿಗೆ ಲೆಕ್ಕದಲ್ಲಿ ಸ್ಲಿಪ್‌ಗಳನ್ನು ನೀಡಲಾಗುತ್ತದೆ. ತಿಂಗಳ ಆರಂಭದಲ್ಲೇ ಗ್ರೀನ್, ಪಿಂಕ್, ರೆಡ್, ಯಲ್ಲೋ ಬಣ್ಣದ ಸ್ಲಿಪ್‌ಗಳನ್ನು ನೀಡಲಾಗುತ್ತದೆ. ಲಾರಿ ಚಾಲಕ ಈ ಸ್ಲಿಪ್ ತೋರಿಸಿದರೆ ಮೊದಲೇ ಹಣ ಸಂದಾಯವಾಗಿದೆ ಎಂಬ ಸೂಚನೆ. ಸ್ಲಿಪ್‌ನ ಬಣ್ಣಗಳನ್ನು ಕಾಲಕಾಲಕ್ಕೆ ಬದಲಾವಣೆ ಮಾಡಿ, ಹಣ ಪಾವತಿಸಿದರಿಗೆ ತಲುಪಿಸುವ ಜಾಲವೂ ಇದೆ. ಆಂಧ್ರ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನ ಲಾರಿ ಮಾಲೀಕರು ಇಂತಹ ಪ್ಯಾಕೇಜ್‌ ಹೊಂದಿದ್ದಾರೆ.

11 ವರ್ಷಗಳಿಂದ ನೇಮಕಾತಿ ಇಲ್ಲ

ಇರುವವರು ಮಾತ್ರ ತಿನ್ನಬೇಕು, ಹೊಸಬರು ಇಲ್ಲಿ ಬರಬಾರದು ಎಂಬ ಕಾರಣಕ್ಕೆ ಆರ್‌ಟಿಒ, ಹಿಮೋನಿಗಳ ನೇಮಕಕ್ಕೆ ಪದೇ ಪದೇ ತಡೆಯೊಡ್ಡಲಾಗುತ್ತಿದೆ.

2008ರಲ್ಲಿ 108 ಹುದ್ದೆ ಭರ್ತಿ ಮಾಡಲಾಗಿದೆ. ಬಳಿಕ ಬಂದ ಸರ್ಕಾರಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಿದರೂ ವಿವಿಧ ರೀತಿಯಲ್ಲಿ ತಡೆ ತಂದು ಅದನ್ನು ನಿಲ್ಲಿಸುವಲ್ಲಿ 4ಜಿಗಳು ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT