ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಒ ಇನ್‌ಸ್ಪೆಕ್ಟರ್ ಹೃದಯಾಘಾತದಿಂದ ಸಾವು

ಅಡ್ಡಾದಿಡ್ಡಿ ಕಾರು ಓಡಿಸಿ ಆಟೊಗೆ ಗುದ್ದಿಸಿದ್ದ ಪ್ರಕರಣ
Last Updated 13 ಸೆಪ್ಟೆಂಬರ್ 2019, 16:54 IST
ಅಕ್ಷರ ಗಾತ್ರ

ಬೆಂಗಳೂರು: ಅಡ್ಡಾದಿಡ್ಡಿ ಕಾರು ಓಡಿಸಿ ಆಟೊಗೆ ಗುದ್ದಿಸಿದ್ದ ಪ್ರಕರಣ ಹಾಗೂ ಆ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯಿಂದ ನೊಂದಿದ್ದರು ಎನ್ನಲಾದ ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯ ಇನ್‌ಸ್ಪೆಕ್ಟರ್ ಎಚ್‌. ಮಂಜುನಾಥ್ ಅವರು ಹೃದಯಾಘಾತದಿಂದಾಗಿ ಶುಕ್ರವಾರ ಸಾವಿಗೀಡಾಗಿದ್ದಾರೆ.

ಗುರುವಾರ ಸಂಜೆ ಕೆಲಸ ಮುಗಿಸಿ ಮಂಜುನಾಥ್ ಅವರು ಕಾರಿನಲ್ಲಿ ಮನೆಗೆ ಹೊರಟಿದ್ದರು. ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿ ಆಟೊಗೆ ಕಾರು ಗುದ್ದಿಸಿದ್ದರು. ಆಟೊ ಚಾಲಕ ಗಾಯಗೊಂಡಿದ್ದರು. ಮಂಜುನಾಥ್‌ ಅವರನ್ನು ಸುತ್ತುವರೆದಿದ್ದ ಜನ, ತರಾಟೆಗೆ ತೆಗೆದುಕೊಂಡಿದ್ದರು.

‘ಅಪಘಾತ ಹಾಗೂ ಆ ಬಗ್ಗೆ ಬಿತ್ತರವಾದ ಸುದ್ದಿ ನೋಡಿ ನೊಂದಿದ್ದ ಮಂಜುನಾಥ್‌ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಸಂಬಂಧಿಕರು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಹೃದಯಾಘಾತದಿಂದ ಅವರು ಸಾವಿಗೀಡಾಗಿದ್ದಾರೆ’ ಎಂದು ಸಹೋದ್ಯೋಗಿಯೂ ಆದ ಹಿರಿಯ ಇನ್‌ಸ್ಪೆಕ್ಟರ್ ಕೃಷ್ಣಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೈನಿಕನ ಮಗ ಆಗಿದ್ದ ಮಂಜುನಾಥ್‌, 25 ವರ್ಷದಿಂದ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ.’

‘ಅಪಘಾತದ ಸ್ಥಳದಲ್ಲೇ ಮಂಜುನಾಥ್‌ ಅವರನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದಾಗ, ಯಾವುದೇ ಮದ್ಯದ ಅಂಶ ಕಂಡುಬಂದಿರಲಿಲ್ಲ. ಅಷ್ಟಾದರೂ ಮಾಧ್ಯಮದವರು, ‘ಪಾನಮತ್ತರಾಗಿ ಕಾರು ಓಡಿಸಿದ್ದರು’ ಎಂದು ತಪ್ಪಾಗಿ ಸುದ್ದಿ ಮಾಡಿದ್ದರು. ಅದರಿಂದ ನೊಂದಿದ್ದ ಮಂಜುನಾಥ್‌, ನನಗೂ ಕರೆ ಮಾಡಿ ಅಳಲು ತೋಡಿಕೊಂಡಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT