ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜಿಲ್ಲೆ ರಚನೆಗೆ ಬಿಜೆಪಿ ಶಾಸಕ ಕರುಣಾಕರ ರೆಡ್ಡಿ ವಿರೋಧ

Last Updated 29 ಸೆಪ್ಟೆಂಬರ್ 2019, 11:53 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚನೆಗೆ ಆಡಳಿತ ಪಕ್ಷದ ಶಾಸಕರಿಂದಲೇ ವಿರೋಧ ವ್ಯಕ್ತವಾಗಿದೆ.

ನೂತನ ಜಿಲ್ಲೆ ರಚನೆಗೆ ಎರಡು ದಿನಗಳ ಹಿಂದೆಯಷ್ಟೇ ಶಾಸಕ ಜಿ. ಸೋಮಶೇಖರ್‌ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೂ ಮುನ್ನ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅಪಸ್ವರ ಎತ್ತಿದ್ದರು. ಭಾನುವಾರ ಅದಕ್ಕೆ ಇನ್ನೊಬ್ಬ ಶಾಸಕ ಜಿ. ಕರುಣಾಕರ ರೆಡ್ಡಿ ದನಿಗೂಡಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕರುಣಾಕರ ರೆಡ್ಡಿ, ‘ಕೆಲವರ ಒತ್ತಡಕ್ಕೆ ಮಣಿದು, ಅವರ ಸ್ವಹಿತಾಸಕ್ತಿಗಾಗಿ ಮುಖ್ಯಮಂತ್ರಿಗಳು ನೂತನ ಜಿಲ್ಲೆ ರಚನೆಗೆ ಮುಂದಾಗಿರುವುದು ಸರಿಯಲ್ಲ’ ಎಂದು ಆನಂದ್‌ ಸಿಂಗ್‌ ಅವರ ಹೆಸರು ಪ್ರಸ್ತಾಪಿಸದೆ ಹೇಳಿದರು.

‘ಯಡಿಯೂರಪ್ಪನವರು ಒತ್ತಡಕ್ಕೆ ಮಣಿದು, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತರುವಂತೆ ತರಾತರಿಯಲ್ಲಿ ಆದೇಶ ಹೊರಡಿಸಿದ್ದಾರೆ. ಅದಕ್ಕೂ ಮುನ್ನ ಜಿಲ್ಲೆಯ ನಾಲ್ಕು ಜನ ಬಿಜೆಪಿ ಶಾಸಕರ ಅಭಿಪ್ರಾಯ ಪಡೆಯಬಹುದಿತ್ತು. ಆದರೆ, ಈ ಘಟನೆಯಿಂದ ನಿಜಕ್ಕೂ ನಾವು ಬಿಜೆಪಿಯ ಶಾಸಕರೇ ಎಂಬ ಪ್ರಶ್ನೆ ನಮ್ಮನ್ನು ನಾವು ಕೇಳಿಕೊಳ್ಳುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಒಬ್ಬ ವ್ಯಕ್ತಿಯ ಹಿತಕ್ಕಾಗಿ ಜಿಲ್ಲೆಯ ನೆಮ್ಮದಿ ಕದಡುವುದು ಬೇಡ. ಹೊಸ ಜಿಲ್ಲೆಗಾಗಿ ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ಹೋರಾಟ ನಡೆಯುತ್ತಿದೆ. ಒಂದುವೇಳೆ ಹೊಸ ಜಿಲ್ಲೆ ಮಾಡಲೇಬೇಕು ಎಂದಾದರೆ ಜಿಲ್ಲೆಯ ಎಲ್ಲಾ ಪಶ್ಚಿಮ ತಾಲ್ಲೂಕುಗಳಿಗೆ ಸಮೀಪವಿರುವ ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡಬೇಕು. ಮುಂದಿನ ದಿನಗಳಲ್ಲಿ ಈ ಕುರಿತು ಸಿ.ಎಂ. ನಮ್ಮನ್ನು ಕರೆದು ಮಾತನಾಡಿಸಿ, ಹೆಜ್ಜೆ ಇಡುತ್ತಾರೆ ಎಂಬ ಭರವಸೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT