ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆ ಸೇರಲು ಯುವಕರ ನೂಕುನುಗ್ಗಲು!

ಬರುತ್ತಿರುವ ಸಾವಿರಾರು ಜನ; ನಿಯಂತ್ರಿಸಲು ಹರಸಾಹಸ
Last Updated 31 ಅಕ್ಟೋಬರ್ 2019, 11:19 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿರುವ ರಾಷ್ಟ್ರೀಯ ಸೇನಾ ಶಾಲೆ ಮೈದಾನದಲ್ಲಿ ಭಾರತೀಯ ಸೇನೆಯ ನೇಮಕಾತಿಗಾಗಿ ನಡೆಯುತ್ತಿರುವ ರ‍್ಯಾಲಿಗೆ ಆಕಾಂಕ್ಷಿಗಳಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2ನೇ ದಿನವಾದ ಗುರುವಾರವೂ ಸಾವಿರಾರು ಮಂದಿ ಯುವಕರು ಪರೀಕ್ಷೆಗೆಂದು ಬಂದಿದ್ದರು.

ಟೆರಿಟೋರಿಯಲ್‌ ಆರ್ಮಿಯ 40 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. 12 ರಾಜ್ಯಗಳ ಸಹಸ್ರಾರು ಮಂದಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸ್ಥಳದಲ್ಲಿಯೇ ಅರ್ಜಿ ಭರ್ತಿಗೂ ಅವಕಾಶ ಕೊಡಲಾಗಿತ್ತು. ಮೊದಲ ದಿನವಾದ ಬುಧವಾರ ನೆರೆಯ ಮಹಾರಾಷ್ಟ್ರದವರಿಗೆ ನಿಗದಿಯಾಗಿತ್ತು. ಗುರುವಾರ ರಾಜಸ್ಥಾನದ ಸಾವಿರಾರು ಮಂದಿ ಬಂದಿದ್ದರು. ಅಭ್ಯರ್ಥಿಗಳು ಒಮ್ಮೆಲೆ ಮೈದಾನದತ್ತ ತೆರಳಲು ಮುಂದಾಗುತ್ತಿದ್ದುದ್ದರಿಂದ ನೂಕುನುಗ್ಗಲು ಉಂಟಾಯಿತು. ಅವರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ಪೊಲೀಸರು ಆಗಾಗ ಲಾಠಿ ಬೀಸಬೇಕಾಯಿತು.

ನ. 1ರಂದು ಗುಜರಾತ್, ಗೋವಾ, ದಾದರ್‌, 2ರಂದು ಆಂಧ್ರಪ್ರದೇಶ, ತೆಲಂಗಾಣ, 3ರಂದು ತಮಿಳುನಾಡು, ಲಕ್ಷದ್ವೀಪ, ಪಾಂಡಿಚೇರಿ, 4ರಂದು ಕರ್ನಾಟಕ ಮತ್ತು ಕೇರಳ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.

ಪರೀಕ್ಷೆ ನಿಗದಿಯಾದ ಮುನ್ನಾದಿನವೇ ವಿವಿಧ ರಾಜ್ಯಗಳ ಅಭ್ಯರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ವಸತಿ ವ್ಯವಸ್ಥೆ ಇಲ್ಲದಿರುವುದರಿಂದ, ರ‍್ಯಾಲಿ ನಡೆಯುವ ಮೈದಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ರಸ್ತೆ ಬದಿಯಲ್ಲಿ ಕೊರೆಯುವ ಚಳಿಯಲ್ಲೂ ಮಲಗುವುದು ಕಂಡುಬರುತ್ತಿದೆ.

‘ಸಂಬಂಧಿಸಿದವರು ಅಭ್ಯರ್ಥಿಗಳಿಗೆ ವಸತಿ ಮೊದಲಾದ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು’ ಎನ್ನುವುದು ಅವರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT