ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಪಥ: ಎಸ್‌.ಎಂ. ಕೃಷ್ಣ ಬದುಕಿನ ಸಾಧನೆಯ ಆರು ಕೃತಿಗಳ ಲೋಕಾರ್ಪಣೆ

Last Updated 4 ಜನವರಿ 2020, 13:20 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಐದು ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳು ನಮ್ಮ ಶಾಸನ ಸಭೆಗಳಲ್ಲಿ ಸ್ಥಾನ‌ ಪಡೆದು ತಮ್ಮ ನಿಯಮಾವಳಿಗಳನ್ನು ನಮ್ಮ ಮೇಲೆ ಹೇರಿಕೆ ಮಾಡುವ ಅಪಾಯವಿದೆ. ಹೀಗಾಗಿ, ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಹೇಳಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಹಿರಿಯ ರಾಜಕೀಯ ಮುತ್ಸದ್ದಿ ಎಸ್‌.ಎಂ. ಕೃಷ್ಣ ಅವರ ಸಾಧನೆ– ಸಿದ್ಧಿಗಳ ಪರಿಚಯ ಹಾಗೂ ಆಕರ ಗ್ರಂಥಗಳಾದ ‘ಕೃಷ್ಣ ಪಥ’ ಸೇರಿ ಒಟ್ಟು ಆರು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ನಿಟ್ಟಿನಲ್ಲಿ ಎಸ್‌.ಎಂ.‌ ಕೃಷ್ಣ ಅವರ ಜೀವನಗಾಥೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಚರ್ಚೆಗಳು ಆಗಬೇಕು’ ಎಂದೂ ಅವರು ಅಭಿಪ್ರಾಯಪಟ್ಟರು.

‘ಕೃಷ್ಣ ಪಥ’ವನ್ನು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಮಹಾರಾಜ್‌ ಲೋಕಾರ್ಪಣೆ ಮಾಡಿದರೆ, ‘ಸ್ಮೃತಿ ವಾಹಿನಿ’ ಸೇರಿ ಇತರ ಐದು ಕೃತಿಗಳನ್ನು ವೆಂಕಟಾಚಲಯ್ಯ ಬಿಡುಗಡೆ ಮಾಡಿದರು.

‘ಅಮೆರಿಕಾದಲ್ಲಿ ಎಸ್.ಎಂ. ಕೃಷ್ಣ ಕಾನೂನು‌ ಪದವಿ ಪಡೆದು ಬೆಂಗಳೂರಿಗೆ ಬಂದಾಗ, ಅವರು ದೊಡ್ಡ ವಕೀಲರಾಗಿ ದೊಡ್ಡ ಜಡ್ಜ್ ಆಗುತ್ತಾರೆ ಎಂದು ಹಲವರು ಭಾವಿಸಿದ್ದರು. ಇನ್ನೂ ಕೆಲವರು ರಾಜಕೀಯಕ್ಕೆ ಬಂದು ಪ್ರಧಾನಿಯಾಗುತ್ತಾರೆ ಎಂದು ನಿರೀಕ್ಷಿಸಿದ್ದರು. ಕಾಲೇಜು ಜೀವನದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ 110 ಹೆಣ್ಣು ಮಕ್ಕಳ ಪೈಕಿ 90 ಹೆಣ್ಣು ಮಕ್ಕಳು ಕೃಷ್ಣರಿಗೆ ಓಟ್ ಹಾಕಿದ್ದರು. ವಿದ್ಯಾರ್ಥಿ ಜೀವನದಲ್ಲಿ ಹಲವು ರೂಪವತಿಯರು ತಮ್ಮ ಜತೆ ಓಡಾಡಿದ್ದರು. ಆದರೆ, ಎಂದೂ ತಾವು ಲಕ್ಷ್ಮಣ ರೇಖೆ ಮೀರಿಲ್ಲ ಎಂದು ಕೃತಿಯಲ್ಲಿ ಕೃಷ್ಣ ಅವರು ಹೇಳಿಕೊಂಡಿದ್ದಾರೆ. ಆದರೆ, ಇವರು ಲಕ್ಷ್ಮಣ ರೇಖೆ ಮೀರಲಿಲ್ಲ. ಆದರೆ, ಆ ಹೆಣ್ಣು ಮಕ್ಕಳು ಲಕ್ಷ್ಮಣ ರೇಖೆ ಮೀರಲಿಲ್ಲ ಎಂದೇನೂ ಹೇಳಿಲ್ಲ. ಅದನ್ನು ಗಮನಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗಲೂ ಹೆಣ್ಣು ಮಕ್ಕಳು ಎಸ್.ಎಂ. ಕೃಷ್ಣರಿಗೇ ಓಟ್ ಹಾಕುತ್ತಾರೆ’ ಎಂದು ವೆಂಕಟಾಚಲಯ್ಯ ಹೇಳಿತಾಗ ಇಡೀ ಸಭಾಂಗಣದಲ್ಲಿ ನಗೆ ಉಕ್ಕಿತು.

‘ಸರ್ಕಾರವು ಸಂವಿಧಾನ ಪರಾಮರ್ಶನಾ ಸಮಿತಿ ರಚನೆ ಮಾಡಿತ್ತು. ಅದರ ಪ್ರತಿಕ್ರಿಯೆಗಳು ನನಗೆ ಆಶ್ಚರ್ಯ ಮೂಡಿಸಿತ್ತು. ರಾಷ್ಟ್ರವ್ಯಾಪಿ ವಿರೋಧ ಮಾಡಿದರು. ಆದರೆ, ಸಮಿತಿಯ ಸದಸ್ಯರು ಗೌರವಧನ ಕೂಡ ಪಡೆದಿರಲಿಲ್ಲ. ಸಂವಿಧಾನದ ಮಹತ್ವ ಒಳತಿರುಳನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವುದು ಸಮಿತಿಯ ಮುಖ್ಯ ಉದ್ದೇಶವಾಗಿತ್ತು. ರಾಷ್ಟ್ರವ್ಯಾಪಿ ಪ್ರವಾಸ ಮಾಡಿದ್ದೆವು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕೃಷ್ಣ ನೀಡಿದ ಸಹಕಾರ ಮರೆಯಲಾಗದು’ ಎಂದು ಅವರು ಸ್ಮರಿಸಿದರು.

‘ಕೃಷ್ಣ ಇನ್ನೂ 125 ವರ್ಷ ಬಾಳಬೇಕು. ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಹೆಣ್ಣುಮಕ್ಕಳ ಓಟು ಪಡೆಯಬೇಕು. ಈಗಲೂ ಎಸ್.ಎಂ. ಕೃಷ್ಣ ಯಂಗ್ ಆ್ಯಂಡ್ ಚಾರ್ಮಿಂಗ್, ಹ್ಯಾಂಡ್ ಸಮ್’ ಎಂದು ಬಣ್ಣಿಸಿದರು.

ಮುಕ್ತಿದಾನಂದ ಮಹಾರಾಜ್‌ ಮಾತನಾಡಿ, ‘ರಾಮಕೃಷ್ಣ ಆಶ್ರಮದ ಶಿಸ್ತು ಎಸ್‌.ಎಂ. ಕೃಷ್ಣ ಅವರನ್ನು ಸಾರ್ಥಕ ಬದುಕಿನ ಜೊತೆಗೆ ಉತ್ತಮ ಸಂಸದೀಯಪಟುವಾಗಿ ರೂಪಿಪಿತು. ಅವರಲ್ಲಿ ಸಮತ್ವ, ಚಾಣಕ್ಯ ನೀತಿ, ಸೇವಾ ಮನೋಭಾವ, ಆಡಳಿತ ತಂತ್ರವನ್ನು ಕಲಿಸಿಕೊಟ್ಟಿದೆ’ ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಎಸ್.ಎಂ. ಕೃಷ್ಣ ರಾಜಕೀಯಕ್ಕೆ ಬಂದ ಹೊಸದರಲ್ಲಿ ಅಮೆರಿಕದ ಮಾತೆಯರು ತಮ್ಮ ಮಕ್ಕಳಿಗೆ, ಮಕ್ಕಳೇ ಬೇಗ ನಿಮ್ಮ ಆಹಾರವನ್ನು ತಿಂದು ಮುಗಿಸಿ, ಇಲ್ಲವಾದರೆ ಭಾರತದ ಬಡ ಮಕ್ಕಳು ಬಂದು ನಿಮ್ಮ ಆಹಾರವನ್ನು ಕಸಿದು ಕೊಂಡಾರು ಎಂದು ಹೇಳುತ್ತಿದ್ದರು. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾದಾಗ ಅದೇ ಅಮೆರಿಕದ ಮಾತೆಯರು ತಮ್ಮ ಮಕ್ಕಳಿಗೆ, ಮಕ್ಕಳೇ ನೀವು ಚೆನ್ನಾಗಿ ಓದಿ ಮುಂದೆ ಬನ್ನಿ. ಇಲ್ಲವಾದರೆ ಭಾರತದ ಮಕ್ಕಳು ಬಂದು ನಿಮ್ಮ ಅವಕಾಶಗಳನ್ನು ಕಸಿದುಕೊಳ್ಳುತ್ತಾರೆ ಎಂದು ಎಚ್ಚರಿಸುವಂತಾಯಿತು. ಬರಾಕ್ ಒಬಾಮ ಅಧ್ಯಕ್ಷರಾದ ನಂತರ ಹೋದ ಕಡೆಯಲ್ಲೆಲ್ಲಾ ಏನು ಹೇಳುತ್ತಿದ್ದರು ಎಂದು ಎಲ್ಲರಿಗೂ ಗೊತ್ತೇ ಇದೆ. ಇದು ಕೃಷ್ಣ ಅವರ ಸಾಧನೆ’ ಎಂದು ಹೊಗಳಿದರು.

‘ವಿದ್ಯಾರ್ಥಿ ಜೀವನದಲ್ಲಿ ನಡೆದ ಚುನಾವಣೆಯಲ್ಲಿ ಎಸ್.ಎಂ. ಕೃಷ್ಣ ಕೆಲವೇ ಮತಗಳ ಅಂತರದಿಂದ ಸೋತರು. ಆದರೆ, ಟೆಕ್ಸಾಸ್‌ನಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾನ್ ಎಫ್ ಕೆನಡಿಯವರ ಪರ ಪ್ರಚಾರ ಮಾಡಿ ಅವರ ಗೆಲುವಿಗೆ ಕಾರಣಕರ್ತರಾದರು. ಹಾಗೆಂದು, ಸ್ವತಃ ಕೆನಡಿಯವರೇ ಧನ್ಯವಾದ ಅರ್ಪಿಸಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದೂ ಸ್ವಾಮೀಜಿ ಹೇಳಿದರು.

ಕೃತಿ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಪಾವಗಡ ಪ್ರಕಾಶ್ ರಾವ್‌ ಮಾತನಾಡಿ, ‘ಎಸ್.ಎಂ. ಕೃಷ್ಣ ಅವರಲ್ಲಿ ಹೆಂಗಸರನ್ನು ಮಾತ್ರವಲ್ಲ ಗಂಡಸರನ್ನೂ ಆಕರ್ಷಿಸುವ ಶಕ್ತಿ ಇದೆ‌. ಅವರಲ್ಲಿ ಶ್ರೀರಾಮನಿಗೆ ಇದ್ದ ವಾಕ್ ಸಂಹಿತೆ ಇದೆ. ಪ್ರತಿ ಪದವನ್ನೂ ಬಳಕೆ ಮಾಡಬೇಕಾದರೂ ಯೋಚಿಸಿ ಮಾತನಾಡುತ್ತಾರೆ. ತಮ್ಮ 70 ವರ್ಷಗಳ ಬದುಕಿನಲ್ಲಿ ಒಂದೇ ಒಂದು ಕಠಿಣ, ಅಸಂಸದೀಯ ಪದವನ್ನು ಮಾತನಾಡದ ವಚನ ಸಂಹಿತೆಯೂ ಕೃಷ್ಣ ಅವರಿಗೆ ಸಿದ್ಧಿಸಿದೆ. ಪಂಪ ಹೇಳುವಂತೆ ವಸ್ತ್ರ ಸಂಹಿತೆಯೂ ಕೃಷ್ಣರಿಗೆ ಸಿದ್ಧಿಸಿದೆ. ಕೃಷ್ಣರ ಸುಂದರ ಉಡುಗೆಗಳನ್ನು ನೋಡಿ, ನೋಡಿಯೇ ಪ್ರಧಾನಿ ನರೇಂದ್ರ ಮೋದಿ ಅಂತಹ ಉಡುಗೆಗಳನ್ನು ಧರಿಸುತ್ತಿದ್ದಾರೆ. ಕೃಷ್ಣರಲ್ಲಿ ಹಾಗೂ ವೆಂಕಟಾಚಲಯ್ಯ ಅವರಲ್ಲಿ ವಿನಯ ಸಂಹಿತೆಯೂ ಇದೆ’ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಎಸ್‌.ಎಂ. ಕೃಷ್ಣ, ‘ನನ್ನ ಜೀವನದುದ್ದಕ್ಕೂ ಘಟಿಸಿದ ನೂರಾರು ಘಟನೆಗಳು ಈ ಕೃತಿಗಳ ಮೂಲಕ ಅಕ್ಷರ ರೂಪದಲ್ಲಿ ನಿಮ್ಮ ಮುಂದೆ ನಿಂತಿವೆ.‌ ನಮ್ಮ ಪೂಜ್ಯ ತಂದೆಯವರು ಆ ದಿನಗಳಲ್ಲಿ ಮಾಡಿದ ಸೇವಾ ಕಾರ್ಯಗಳು ಇಂದಿಗೂ ಪ್ರಸ್ತುತ. 1930ರಲ್ಲಿ ಮದ್ದೂರಿನಲ್ಲಿ ಒಕ್ಕಲಿಗರ ವಿದ್ಯಾರ್ಥಿನಿಲಯದಲ್ಲಿ ಇಬ್ಬರು ದಲಿತ ವಿದ್ಯಾರ್ಥಿಗಳಿಗೆ ಆಶ್ರಯ ಕೊಟ್ಟಿದ್ದರು. ಆಗ ವಸತಿನಿಲಯಗಳಿಗೆ ಸರ್ಕಾರದಿಂದ ಅನುದಾನ ಇರಲಿಲ್ಲ. ಸಾರ್ವಜನಿಕರ ದೇಣಿಗೆಯಿಂದ ನಡೆಯುವ ವಿದ್ಯಾರ್ಥಿನಿಲಯದಲ್ಲಿ ದಲಿತರಿಗೆ ಅವಕಾಶ ಕೊಡುವುದು ಎಂದರೆ ಸುಮ್ಮನೆ ಅಲ್ಲ‌. ಇದು ಸಣ್ಣ ಉದಾಹರಣೆ. ಆದರೆ, ಇದು ಆ ದಿನಗಳಲ್ಲಿ ಮನುಕುಲಕ್ಕೆ ಆದರ್ಶಪ್ರಾಯ‌’ ಎಂದು ನೆನಪಿಸಿಕೊಂಡರು.

‘ಅಂಥ ಪುಣ್ಯಭೂಮಿ ಮದ್ದೂರು. ಅಂತಹ ಪುಣ್ಯ ನಾಡು ಮಂಡ್ಯ. ನನ್ನಲ್ಲೇನಾದರೂ ಒಳ್ಳೆಯ ಗುಣಗಳು ಇದ್ದರೆ, ಅದು ನಮ್ಮ ತಂದೆಯವರ ಬಳವಳಿ. ಅವಗುಣಗಳು ಮಾತ್ರ ನನ್ನವೇ. ಮಂಡ್ಯದ ಜನ ನನಗೆ ಹಲವಾರು ಅವಕಾಶ ಕೊಟ್ಟರು. 60ರ ದಶಕದಲ್ಲಿ ಕಾಂಗ್ರೆಸ್ ವಿರುದ್ದ ಸೆಣಸಾಡುವ ಶಕ್ತಿ ನನಗೆ ಮದ್ದೂರಿನ ಜನ ಕೊಟ್ಟರು. 1963ರ ಚುನಾವಣೆಯಲ್ಲಿ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ ವೀರಣ್ಣಗೌಡ ಅವರನ್ನು ಸೋಲಿಸಿ ನಾನು ಚುನಾಯಿತನಾದೆ. ವೀರಣ್ಣಗೌಡರು ಗೆದ್ದಿದ್ದರೆ ಅವರು ನಿಶ್ಚಿತವಾಗಿ ಮುಖ್ಯಮಂತ್ರಿಯಾಗುತ್ತಿದ್ದರು. ನಾನು ಗೆದ್ದರೂ ಏನೂ ಪ್ರಯೋಜನ ಆಗಲಿಲ್ಲ. ಕೇವಲ ಶಾಸನ ಸಭಾ ಸದಸ್ಯನಾಗಿ ಕುಳಿತೆ. ಆಗ ಜನ ನಮ್ಮಿಂದ ಪ್ರೀತಿ, ವಿಶ್ವಾಸವನ್ನಲ್ಲದೆ ಬೇರೆ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ’ ಎಂದರು.

‘1968ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತೆ‌. ಆದರೆ, ನಂತರ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಸ್ಪರ್ಧಿಸಿದಾಗ ಇಡೀ ಮಂಡ್ಯದ ಜನ ನನ್ನ ಬೆನ್ನ ಹಿಂದೆ ನಿಂತು ಗೆಲ್ಲಿಸಿದರು. ಆವೆರಡೂ ನನ್ನ ಜೀವನದ ಮಹತ್ವದ ಘಟನೆಗಳು’ ಎಂದು ನೆನಪಿಸಿಕೊಂಡರು.

‘ಮೊದಲೆಲ್ಲ ದೇವರೇ ಕಷ್ಟಗಳನ್ನೆಲ್ಲಾ ನನಗೊಬ್ಬನಿಗೆ ಏಕೆ ಕೊಟ್ಟೆ. ಎಲ್ಲರಿಗೂ ಸ್ವಲ್ಪ ಸ್ವಲ್ಪ ಹಂಚು ಎಂದು ಕೇಳುತ್ತಿದ್ದೆ‌. ಆದರೆ, ಈಗ ಅನಿಸುತ್ತಿದೆ. ಕಷ್ಟಗಳು ಬಂದಿದ್ದು, ಅದನ್ನು ನಾನು ಎದುರಿಸಿದ್ದು ಒಳ್ಳೆಯದೇ ಆಯಿತೆಂದು. ಅದರಿಂದ ನಾನು ಪರಿಪೂರ್ಣ ಮನುಷ್ಯನಾಗಲು ಸಾಧ್ಯವಾಯಿತು. ರಾಜ್‌ಕುಮಾರ್ ಅವರನ್ನು ಮೀಸೆ ವೀರಪ್ಪನ್ ಹೊತ್ತೊಯ್ದಾಗ ನನ್ನಲ್ಲಿ ತಳಮಳ ಇದ್ದಿದ್ದು ನಿಜ. ಆದರೆ ಎದೆಗುಂದಲಿಲ್ಲ. ಧೈರ್ಯವಾಗಿ ಎದುರಿಸಿದೆ. ಸವಾಲುಗಳೇ ಮನುಷ್ಯನನ್ನು ನಾಯಕನನ್ನಾಗಿ ಮಾಡುತ್ತದೆ ಎಂಬುದು ಸತ್ಯ. ಆ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ತಮಿಳರ ಆಸ್ತಿ ಪಾಸ್ತಿಗಳಿಗೆ ತೊಂದರೆಯಾಗುತ್ತದೋ ಎಂಬ ಭಯ, ತಳಮಳ ನನ್ನಲ್ಲಿ ಇತ್ತು. ಆದರೆ, ಮುನ್ನೆಚ್ಚರಿಕೆ ತೆಗೆದುಕೊಂಡ ಕಾರಣ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದೆವು’ ಎಂದರು.

‘ಈಗ ಪ್ರಜಾಪ್ರಭುತ್ವ ಹಣ ಬಲದ ಮೇಲೆ ನಿಂತಿದೆ. ಒಳ್ಳೆಯ ದಿನಗಳನ್ನು ನೋಡಿರುವ ಬಾಳ ಮುಸ್ಸಂಜೆಯಲ್ಲಿರುವ ನಮ್ಮಂಥ ಕಾರ್ಯಕರ್ತರಿಗೆ ಕಳವಳ‌ ಮೂಡಿಸುತ್ತಿದೆ. ಎಲ್ಲಿಯವರೆಗೆ ಹಣದ ಪ್ರಭಾವ ಇರುತ್ತದೊ ಅಲ್ಲಿಯವರೆಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ಇದರ ಬಗ್ಗೆ ಬಾಳ ಮುಸ್ಸಂಜೆಯಲ್ಲಿರುವವರಿಗಿಂತ ಹೊಸದಾಗಿ ರಾಜಕೀಯ ಪ್ರವೇಶ ಮಾಡುತ್ತಿರುವ ಯುವ ಸಮೂಹ ಚಿಂತನೆ ನಡೆಸಬೇಕು. ನಾನು ಯಾರನ್ನು ಎಂದೂ ದ್ವೇಷ ಮಾಡುವ ಪ್ರಯತ್ನ ಮಾಡಲಿಲ್ಲ. ಕಾರಣ, ನನ್ನ ತಂದೆಯವರು ನನಗೆ ತುಂಬಿಸಿದ್ದ ಮೌಲ್ಯಗಳು. ಆದರೂ, ಕಳೆದ ಮೂರು ದಶಕಗಳಲ್ಲಿ ಯಾರಿಗಾದರೂ ನನ್ನಿಂದ ತೊಂದರೆಯಾಗಿದ್ದರೆ ಅವರ ಕ್ಷಮೆ ಯಾಚಿಸುತ್ತೇನೆ. ಅದನ್ನು ಮರೆತುಬಿಡಿ. ಪರಸ್ಪರ ನಿಂದನೆಯನ್ನು ಸದ್ಯಕ್ಕೆ ಹಿಂದಕ್ಕೆ ಹಾಕೋಣ ಎಂದು ಮನವಿ ಮಾಡುತ್ತೇನೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಮತ್ತು ಕವಿ ಸಿದ್ಧಲಿಂಗಯ್ಯ ಅವರು ಈ ಗ್ರಂಥಗಳ ಪರಿಚಯ ಮಾಡಿಕೊಟ್ಟರು.

‘ಕೃಷ್ಣ ಪಥ’ ಸಮಿತಿಯ ಗೌರವ ಕಾರ್ಯದರ್ಶಿ ಬಿ.ಎಲ್‌. ಶಂಕರ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಎಸ್‌.ಟಿ. ಸೋಮಶೇಖರ್‌ ಸ್ವಾಗತಿಸಿದರು.

ಕೃತಿಗಳ ಒಟ್ಟು ಬೆಲೆ ₹ 6,800

‘ಕೃಷ್ಣ ಪಥ’, ‘ಚಿತ್ರದೀಪ ಸಾಲು’, ‘ಸ್ಮೃತಿ ವಾಹಿನಿ’, ‘ಭವಿಷ್ಯ ದರ್ಶನ’, ಆಂಗ್ಲ ಭಾಷೆಯಲ್ಲಿರುವ ‘ಸ್ಟೇಟ್ಸ್‌ ಮನ್ ಎಸ್‌.ಎಂ. ಕೃಷ್ಣ’, ‘ಡೌನ್‌ ಮೆಮೊರಿ ಲೇನ್‌ ಆಫ್‌ ರೇಡಿಯಂಟ್‌ ಜೋಯ್ಸ್‌’ ಹೀಗೆ ಒಟ್ಟು ಆರು ಆಕರ ಗ್ರಂಥಗಳ ಒಟ್ಟು ಬೆಲೆ ₹ 6,800. ಲೋಕಾರ್ಪಣೆಯ ಕೊಡುಗೆಯಾಗಿ ಶನಿವಾರ ₹ 3,000ಕ್ಕೆ ಗ್ರಂಥಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಈ ಗ್ರಂಥಗಳ ಸಂಪಾದಕರು ಡಾ. ಕೆ.ಆರ್‌. ಕಮಲೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT