ಚಿಕ್ಕೋಡಿ ಜಿಲ್ಲೆ ರಚನೆಗೆ ಆಗ್ರಹ; ಸದಲಗಾ ಬಂದ್ ಯಶಸ್ವಿ

7

ಚಿಕ್ಕೋಡಿ ಜಿಲ್ಲೆ ರಚನೆಗೆ ಆಗ್ರಹ; ಸದಲಗಾ ಬಂದ್ ಯಶಸ್ವಿ

Published:
Updated:
Deccan Herald

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿಯನ್ನು ಜಿಲ್ಲೆ ಮತ್ತು ಸದಲಗಾ ಪಟ್ಟಣವನ್ನು ತಾಲ್ಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಸದಲಗಾ ಬಂದ್‌ ಯಶಸ್ವಿಯಾಯಿತು.

ಬಸ್ ಸಂಚಾರ, ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಶಾಲಾ– ಕಾಲೇಜುಗಳು, ಸಹಕಾರಿ ಸಂಘ ಸಂಸ್ಥೆಗಳು, ಅಂಗಡಿಗಳು ಬಂದ್ ಆಗಿದ್ದವು.

ಪಟ್ಟಣದ ಗಾಂಧಿ ಚೌಕದಿಂದ ಪ್ರಾರಂಭವಾದ ಪ್ರತಿಭಟಣಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನೂರಾರು ಮಂದಿ ಬಸ್ ನಿಲ್ದಾಣಕ್ಕೆ ತೆರಳಿ ಸಭೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್. ಸಂಗಪ್ಪಗೋಳ ಮಾತನಾಡಿ, ‘ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಒತ್ತಾಯಿಸಿ 52 ದಿನಗಳವರೆಗೆ ಚಿಕ್ಕೋಡಿಯಲ್ಲಿ ಧರಣಿ ಮಾಡಲಾಗಿತ್ತು. ಆದರೆ, ಚಿಕ್ಕೋಡಿ ಜಿಲ್ಲೆ ರಚನೆಗೆ ಬೆಳಗಾವಿ ಜಿಲ್ಲೆಯ ಮುಖಂಡರೇ ಅಡ್ಡಗಾಲು ಹಾಕುತ್ತಿದ್ದಾರೆ’ ದೂರಿದರು.

‘ಶಿಕ್ಷಣ, ಉದ್ಯೋಗ, ಆರೋಗ್ಯ, ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ಚಿಕ್ಕೋಡಿ ಪ್ರಗತಿ ಸಾಧಿಸಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಹಾಗೂ ವಿವಿಧ ಸಂಪನ್ಮೂಲವಿರುವ ತಾಲ್ಲೂಕು ಚಿಕ್ಕೋಡಿಯಾಗಿದೆ. ರಾಜ್ಯದ ಬೇರೆ ಕಡೆಯಲ್ಲಿ 150 ಕಿ.ಮೀ.ಗೆ ಒಂದು ಜಿಲ್ಲೆಯನ್ನಾಗಿ ಮಾಡಲಾಗಿದೆ. ಆದರೆ, 300 ಕಿ.ಮೀ. ವರೆಗೂ ಬೆಳಗಾವಿ ಜಿಲ್ಲೆ ವ್ಯಾಪಿಸಿದ್ದರೂ ವಿಭಜನೆಗೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ಸದಸ್ಯ ಬಸವರಾಜ ಹಣಬರ, ಶಿಕ್ಷಕ ಕೆ.ಬಿ. ಹೊನ್ನಾಯ್ಕ, ಮುಖಂಡ ಬಸವಪ್ರಸಾದ ಜೊಲ್ಲೆ, ಸಾಹಿತಿ ಎಸ್.ವೈ. ಹಂಜಿ, ಅಜರುದ್ದಿನ್ ಶೇಖಜಿ ಮಾತನಾಡಿದರು. ಮುಖಂಡರಾದ ರಾಜಕುಮಾರ ಡಾಂಗೆ, ಅಭಿಜಿತ ಪಾಟೀಲ, ಸಂಜು ಡಾಂಗೆ, ಲಕ್ಷ್ಮಿಕಾಂತ  ಹಾಲಪ್ಪನವರ, ತುಕಾರಾಮ ಕೋಳಿ, ರಾಜು ಅಮೃತಸಮ್ಮನ್ನವರ, ಕೆ.ಎಂ. ಖೋತ, ಸತೀಶ ಪಾಟೀಲ, ಸಿದ್ದು ಪಾಟೀಲ, ಭೀಮಾ ಮಾಳಗೆ, ಅತಿಕ್ರಾಂತ ಪಾಟೀಲ, ಸಂದೀಪ ಹಣಬರ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !