ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೆ ‘ಮಹಾಯುದ್ಧ’!

ಮಾದಿಗರ ಬೃಹತ್ ಸಮಾವೇಶ l ಒಗ್ಗಟ್ಟು ಪ್ರದರ್ಶಿಸಲು ಚಂಪಾ ಕರೆ
Last Updated 2 ಅಕ್ಟೋಬರ್ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ರಾಜ್ಯ ಮಾದಿಗ ಸಂಘಟನೆಗಳ ಮಹಾಸಭಾವು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ‘ಮಾದಿಗರ ಮಹಾಯುದ್ಧ’ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿತು.

ವಿವಿಧ ಜಿಲ್ಲೆಗಳಿಂದ ಪಾಲ್ಗೊಂಡಿದ್ದ ಕಾರ್ಯಕರ್ತರು, ‘ಕೇಂದ್ರ ಹಾಗೂ ರಾಜ್ಯದ ಜನಪ್ರತಿನಿಧಿಗಳೇ, ಮಾದಿಗ ಸಮುದಾಯವನ್ನು ನಿರ್ಲಕ್ಷಿಸಬೇಡಿ. 2019ರ ಲೋಕಸಭೆ ಹಾಗೂ ರಾಜ್ಯದಲ್ಲಿ ನಡೆಯಲಿರುವ ಇತರೆ ಚುನಾವಣೆಗಳಲ್ಲಿ ಅತಂತ್ರ ಫಲಿತಾಂಶ ಸೃಷ್ಟಿಸುವ ತಾಕತ್ತು ನಮ್ಮ ಸಮುದಾಯಕ್ಕೂ ಇದೆ ಎಂಬುದನ್ನು ನೆನಪಿಟ್ಟುಕೊಳ್ಳಿ’ ಎಂದು ಎಚ್ಚರಿಸಿದರು.‌

ಮಾದಿಗ ದಂಡೋರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಂದಕೃಷ್ಣ, ‘ಬಲಾಢ್ಯರ ಹಾಗೂ ಬಡಪಾಯಿಗಳ ನಡುವಿನ ಸಂಘರ್ಷ ಇರುವವರೆಗೂ ಬದಲಾವಣೆಯ ಮಾತು ಬರೀ ಬೂಟಾಟಿಕೆ ಎನಿಸುತ್ತದೆ. ಇಂಥ ಬೂಟಾಟಿಕೆ ತೊಡೆದು ಹಾಕಲು ವರದಿ ಜಾರಿ ಆಗಲೇಬೇಕು. ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವರದಿ ಕೇಂದ್ರಕ್ಕೆ ಹೋಗಬೇಕಿತ್ತು. ಆದರೆ, ವರದಿಗೆ ರಾಜಕೀಯ ಬಣ್ಣ ಬಳಿದಿದ್ದರಿಂದ ಅದು ಪಕ್ಷಗಳ ಚುನಾವಣಾ ಪ್ರಣಾಳಿಕೆಗಷ್ಟೇ ಸೀಮಿತವಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ವರದಿ ಜಾರಿಗೆ ಕ್ರಮ ತೆಗೆದುಕೊಳ್ಳದ ಕಾರಣಕ್ಕೇ ಕಾಂಗ್ರೆಸ್ ಇಂದು ಅಧಿಕಾರ ಕಳೆದುಕೊಂಡು ಜೆಡಿಎಸ್‌ಗೆ ಬೆಂಬಲ ಸೂಚಿಸಬೇಕಾಯಿತು. ಸಿದ್ದರಾಮಯ್ಯ ಅವರು ವರದಿಯ ಶಿಫಾರಸುಗಳನ್ನು ಕೇಂದ್ರಕ್ಕೆ ಕಳುಹಿಸಿದ್ದರೆ ಈಗಲೂ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಿದ್ದರು. ಆದರೆ, ಬಲಗೈ ಪಂಗಡದ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವರ ಅವರಿಗೆ ಹೆದರಿ ಸುಮ್ಮನೆ ಕುಳಿತರು. ಈಗ ಅವರೇ ಅಧಿಕಾರದಿಂದ ದೂರ ಉಳಿಯುವಂತಾಗಿದೆ’ ಎಂದರು.

ಸಾಹಿತಿ ಚಂದ್ರಶೇಖರ ಪಾಟೀಲ, ‘ಮೀಸಲಾತಿ ಭಿಕ್ಷೆಯಲ್ಲ. ಅದು ಶೋಷಿತರ ಹಕ್ಕು. ಅದನ್ನು ಕೊಡುವುದಕ್ಕೆ ಇಷ್ಟೊಂದು ತಕರಾರು ಮಾಡುತ್ತಿರುವುದರಲ್ಲಿ ಅರ್ಥವಿಲ್ಲ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ಬೇಡಿಕೆ ಈಡೇರಬೇಕೆಂದರೆ ಒಗ್ಗಟ್ಟು ಪ್ರದರ್ಶಿಸಲೇಬೇಕು. ಹೊಲೆಮಾದಿಗ ಎಂದಿದ್ದ ಸಮುದಾಯ ಹೊಲೆ (ಬಲ) ಹಾಗೂ ಮಾದಿಗ (ಎಡ) ಎಂದು ಇಬ್ಭಾಗವಾಗಿರುವುದು ನನ್ನಂಥವರಿಗೆ ತುಂಬ ಬೇಸರವಾಗಿದೆ. ಈಗಲಾದರೂ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕು. ಮಹಾಯುದ್ಧವನ್ನೇ ಮಾಡಬೇಕು. ಮಾದಿಗ ಸಮುದಾಯಕ್ಕೆ ಸರ್ಕಾರ ಉರುಳಿಸುವಂಥ ಶಕ್ತಿ ಇದೆ ಎಂಬುದನ್ನು ತೋರಿಸಬೇಕು’ ಎಂದು ಗುಡುಗಿದರು.

ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್, ‘ಸದಾಶಿವ ಆಯೋಗದ ವರದಿ ಹಾಗೂ ಜಾತಿವಾರು ಸಮೀಕ್ಷೆ ವರದಿಗಳೆರಡೂ ಬಹಿರಂಗವಾಗಬೇಕಾದ ಕಾಲ ಘಟ್ಟವಿದು. ಏಕೆಂದರೆ ಅವೆರಡು ಒಂದಕ್ಕೊಂದು ಪೂರಕವಾಗಿವೆ. ವರದಿಗಳನ್ನು ಮಂಡಿಸಿದರೆ ಹಿಂದುಳಿದ ವರ್ಗಗಳ ಹಾಗೂ ಮಾದಿಗರ ಸ್ಥಾನಮಾನ ಏನೆಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಎದ್ದಾಗ, ಆ ಸಮುದಾಯದ ವರದಿ ಬರೆದವರಲ್ಲಿ ನಾನೂ ಒಬ್ಬ. ಆ ವರದಿ ಸಿದ್ಧವಾದ ಒಂದು ವಾರದಲ್ಲೇ ಕೇಂದ್ರಕ್ಕೆ ಹೋಯಿತು. ಆದರೆ, ಮಾದಿಗ ಸಮುದಾಯಕ್ಕೆ ಸಂಬಂಧಿಸಿದ ವರದಿ ಇಷ್ಟು ವರ್ಷಗಳಿಂದ ದೂಳು ತಿನ್ನುತ್ತ ಮೂಲೆಯಲ್ಲಿ ಬಿದ್ದಿದೆ ಎಂದರೆ ಏನು ಅರ್ಥ? ಲಿಂಗಾಯತ ಸಮುದಾಯದ ಮಂತ್ರಿಗಳೆಲ್ಲ ಬಲಾಢ್ಯರಿದ್ದಾರೆ. ಆದರೆ, ಮಾದಿಗ ಸಮುದಾಯದ ಜನಪ್ರತಿನಿಧಿಗಳು ಅಷ್ಟು ಶಕ್ತಿವಂತರಲ್ಲ. ಅವರು ವೇದಿಕೆಗಳಿಗಷ್ಟೇ ಸೀಮಿತರಾಗಿದ್ದಾರೆ. ಇದೇ ಇಂದಿನ ದುರಂತಕ್ಕೆ ಪ್ರಮುಖ ಕಾರಣ’ ಎಂದು ಅಭಿಪ್ರಾಯಪಟ್ಟರು.

ಬೇಡಿಕೆ ಈಡೇರದಿದ್ದರೆ ಭಾರತ್ ಬಂದ್

‘ಅ.12ರಂದು ಪ್ರತಿ ಜಿಲ್ಲೆಗಳಲ್ಲೂ ಜಿಲ್ಲಾ ಉಸ್ತುವಾರಿ ಸಚಿವರ ಮನೆಗಳ ಮುಂದೆ ಹಾಗೂ ಅ.17ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನೆ ಮುಂದೆ ಧರಣಿ ಕೂರುತ್ತೇವೆ. ಅಷ್ಟಕ್ಕೂ ಬಗ್ಗದಿದ್ದರೆ 22ರಂದು ಭಾರತ್ ಬಂದ್ ಮಾಡಿ, ಮರುದಿನದಿಂದಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಾಹ ಪ್ರಾರಂಭಿಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT