ಸದಾಶಿವ ಆಯೋಗದ ವರದಿ: ಮಾದಿಗರ ಸಭೆಯಲ್ಲಿ ಭುಗಿಲೆದ್ದ ಆಕ್ರೋಶ

7
ಪ್ರತಿಭಟನೆ

ಸದಾಶಿವ ಆಯೋಗದ ವರದಿ: ಮಾದಿಗರ ಸಭೆಯಲ್ಲಿ ಭುಗಿಲೆದ್ದ ಆಕ್ರೋಶ

Published:
Updated:
Deccan Herald

ಬೆಂಗಳೂರು: ‘ಕರ್ನಾಟಕದಲ್ಲಿ ಆದಿಜಾಂಬವ ಅಭಿವೃದ್ಧಿ ನಿಗಮದ ಅವಶ್ಯಕತೆ ಇಲ್ಲ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಮಾದಿಗ ಜನಾಂಗದ ಮುಖಂಡರು ಆಕ್ರೋಶ ಹೊರಹಾಕಿದರು.

ಅಂಬೇಡ್ಕರ್‌ ಭವನದಲ್ಲಿ ಗುರುವಾರ ಆಯೋಜನೆಗೊಂಡಿದ್ದ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಉದ್ಘಾಟನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಜಿಲ್ಲೆಯ ಪ್ರತಿನಿಧಿಗಳು ನಿಗಮದ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಆಂಜನೇಯ ಅವರು ಸಭೆಯ ಉದ್ದೇಶಗಳ ಬಗ್ಗೆ ಮಾತನಾಡುತ್ತಿದ್ದ ವೇಳೆ ಎದ್ದುನಿಂತ ಕೆಲವು ಮುಖಂಡರು ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಅವರನ್ನು ಸಮಾಧಾನಪಡಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

‘ನಿಗಮದಿಂದ ನಮ್ಮ ಜನಾಂಗದ ಅಭಿವೃದ್ಧಿ ಆಗುವುದಿಲ್ಲ. ಕೆಲವರ ಹಿತಾಸಕ್ತಿಗಾಗಿ ಇದನ್ನು ರಚಿಸಲಾಗಿದೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಹೋರಾಡಿ. ಜನಾಂಗದಲ್ಲಿ ಇಬ್ಬರಿಗೆ ಸಚಿವ ಸ್ಥಾನ ಕೊಡಲು ಬೇಡಿಕೆ ಇಡಿ’ ಎಂದು ಆಗ್ರಹಿಸಿ ಕೆಲವು ಮುಖಂಡರು ಸಭೆಯನ್ನು ಬಿಟ್ಟು ಹೊರನಡೆದರು.

ಭವನದ ಹಿಂದೆ ಹೋಗಿ ನಿಂತ ಸಮುದಾಯದ ಮುಖಂಡರು ಘೋಷಣೆ ಕೂಗಲು ಆರಂಭಿಸಿದರು. ‘ಸಮ್ಮಿಶ್ರ ಸರ್ಕಾರಕ್ಕೆ ನಾಚಿಕೆ ಆಗಬೇಕು, ನಮ್ಮ ಜನಾಂಗಕ್ಕೆ ಸಚಿವ ಸ್ಥಾನ ಕೊಟ್ಟಿಲ್ಲ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ’ ಎಂದು ಕೂಗು ಹಾಕಿದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಸಮಾಧಾನಪಡಿಸಿ ಕೂರಿಸಿದರು.

ಬಳಿಕ ಆಂಜನೇಯ ಅವರು ಮಾತು ಮುಂದುವರಿಸಿದರು. ‘ಜನಾಂಗದ ಸಭೆಯಲ್ಲಿ ಈ ರೀತಿ ವರ್ತಿಸಿದರೆ ಹೊರಗಡೆ ಕೆಟ್ಟ ಸಂದೇಶ ಹೋಗುತ್ತದೆ. ನಮ್ಮಲ್ಲೇ ಒಗ್ಗಟ್ಟು ಇಲ್ಲ ಎಂದು ತಿಳಿದುಕೊಳ್ಳುತ್ತಾರೆ. ನಾವೆಲ್ಲರೂ ನಿಗಮದಿಂದ ಸಿಗುವ ಲಾಭವನ್ನು ಪಡೆದುಕೊಳ್ಳಲು ಯೋಚಿಸಬೇಕು. ಇದೇ ತಿಂಗಳು 12ರಂದು ಅರಮನೆ ಮೈದಾನದಲ್ಲಿ ನಿಗಮ ಲೋಕಾರ್ಪಣೆಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಕೇಳಿಕೊಂಡರು.

‘ಪ್ರಬಲರಿಗೆ ಮಾತ್ರ ಸೌಲಭ್ಯಗಳು ಸಿಗಬಾರದು ಎಂಬ ಉದ್ದೇಶದಿಂದ ನಿಗಮ ಸ್ಥಾಪಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದೇವೆ. ಮಾದಿಗರ ಸಮುದಾಯಕ್ಕೆ ಸೇರುವ 16 ಜಾತಿಗಳು ಇದರಲ್ಲಿ ಸೇರುತ್ತವೆ. ಇದರಿಂದ ಒಳಮೀಸಲಾತಿ ಅನುಷ್ಠಾನಕ್ಕೆ ಬರಲಿದೆ’ ಎಂದು ಅವರು ಹೇಳಿದರು.

‘ಮಾದಿಗ ಸಂಘಟನೆ ವತಿಯಿಂದ ನೀಡಲಾದ ಜಾಹೀರಾತಿನಲ್ಲಿ ‘ಬ್ರಾಹ್ಮಣವಾದಿ ಮಾದಿಗವಿರೋಧಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಪಕ್ಷಗಳಿಗೆ ಚಾಲೆಂಜ್‌’ ಎಂದೆಲ್ಲ ಕೊಡಬಾರದಿತ್ತು. ಎಲ್ಲರನ್ನೂ ನಾವು ಗೌರವಿಸೋಣ’ ಎಂದು ಆಂಜನೇಯ ಸಲಹೆ ನೀಡಿದರು.

ಶಾಸಕ ಧರ್ಮಸೇನ, ‘ಹಾವನೂರು ವರದಿಯಲ್ಲಿ ಅಸ್ಪೃಶ್ಯರಲ್ಲದವರನ್ನೂ ಸೇರಿಸಿ ಗೊಂದಲ ಸೃಷ್ಟಿಯಾಗಿದ್ದನ್ನು ನೀವು ನೋಡಿರುತ್ತೀರಿ. ಸದಾಶಿವ ಆಯೋಗದಲ್ಲಿ ಉತ್ತಮ ಅಂಶಗಳು ಇವೆ. ನೀವೆಲ್ಲಾ ಆ ವರದಿಯನ್ನು ಓದಿದ್ದೀರಾ? ಓದಿಕೊಂಡು ಆನಂತರ ಪ್ರತಿಭಟನೆ ಮಾಡಿ’ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !