ಬುಧವಾರ, ಮೇ 27, 2020
27 °C
ನೂಕುನುಗ್ಗಲು ಇಲ್ಲ, ಜನಜಂಗುಳಿ ಇಲ್ಲ

ಎನ್‌.ಆರ್‌.ಕಾಲೊನಿ ಮೈದಾನದಲ್ಲಿ ಮಾರುಕಟ್ಟೆ: ಸುರಕ್ಷಿತ ಅಂತರ, ಶಿಸ್ತಿನ ವ್ಯಾಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎನ್.ಆರ್‌.ಕಾಲೊನಿಯ ಆಚಾರ್ಯ ಪಾಠಾಶಾಲಾ ಮೈದಾನ ಈಗ ಮಾರುಕಟ್ಟೆಯಾಗಿ ಬದಲಾಗಿದೆ. ನಗರದ ಕೆಲವೆಡೆ ಅಗತ್ಯ ಸಾಮಾಗ್ರಿಗಳ ಖರೀದಿಗೆ ಜನ ಮುಗಿಬಿದ್ದು, ಜನಜಂಗುಳಿ ಉಂಟಾಗುತ್ತಿದ್ದರೆ, ಇಲ್ಲಿ ಗ್ರಾಹಕರು ಪರಸ್ಪರ ಸುರಕ್ಷಿತ ಅಂತರ ಕಾಪಾಡಿಕೊಂಡು ಹಣ್ಣು–ತರಕಾರಿ ಖರೀದಿಸುತ್ತಿದ್ದಾರೆ. ಈ ವ್ಯವಸ್ಥೆ ಸ್ಥಳೀಯರ ಮೆಚ್ಚುಗೆಗೂ ಪಾತ್ರವಾಗಿದೆ.

ಇಲ್ಲಿ ಬೆಳಿಗ್ಗೆ 7ರಿಂದ 11.30ರವರೆಗೆ ಹಾಗೂ ಸಂಜೆ 5ರಿಂದ 8.30ರವರೆಗೆ ವ್ಯಾಪಾರ ನಡೆಯುತ್ತದೆ. ಎನ್‌.ಆರ್‌.ಕಾಲೊನಿಯಲ್ಲಿ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ 100ಕ್ಕೂ ಅಧಿಕ ವ್ಯಾಪಾರಿಗಳಿಗೆ ಇಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 8.30ರವರೆಗೆ ವ್ಯಾಪಾರ ನಡೆಸುವುದಕ್ಕೆ ಅನುಕೂಲವಾಗುವಂತೆ ಬೆಳಕಿನ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಇಲ್ಲಿನ ಶಿಸ್ತುಬದ್ಧ ವ್ಯಾಪಾರದ ಹಿಂದೆ ಸ್ಥಳೀಯ ಪಾಲಿಕೆ ಸದಸ್ಯ ಬಿ.ಎಸ್‌.ಸತ್ಯನಾರಾಯಣ (ಕಟ್ಟೆ ಸತ್ಯ) ಅವರ ಮುಂದಾಲೋಚನೆಯೂ ಇದೆ.

‘ಕೊರೊನಾ ಸೋಂಕು ಹಬ್ಬುವುದನ್ನು ತಡೆಯಲು ಬೆಂಗಳೂರಿನಲ್ಲಿ ಲಾಕ್‌ ಡೌನ್‌ ಘೋಷಣೆ ಮಾಡಿದ ಬಳಿಕ ಜನರು ದಿನಬಳಕೆ ಸಾಮಗ್ರಿ ಖರೀದಿಗೆ ಸಮಸ್ಯೆ ಆಗುತ್ತದೆ ಎಂಬುದು ತಿಳಿಯಿತು. ಇಲ್ಲಿನ ಬೀದಿ ಬದಿ ವ್ಯಾಪಾರಿಗಳು ರಸ್ತೆ ಪಕ್ಕ ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಿದ್ದರು. ಇದರಿಂದ ಕೊರೊನಾ ಸೋಂಕು ಹರಡುವ ಅಪಾಯ ಇದೆ ಎಂದು ಅರಿತ ನಾವು ಆಚಾರ್ಯ ಪಾಠಶಾಲಾ ಮೈದಾನವನ್ನೇ ಮಾರುಕಟ್ಟೆಯನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆವು. ಇದಕ್ಕೆ ಆಚಾರ್ಯ ಪಾಠಶಾಲಾ ಸಂಸ್ಥೆಯವರೂ ಸಹಕಾರ ನೀಡಿದರು’ ಎಂದು ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನರು ಸರತಿ ಸಾಲಿನಲ್ಲಿ ನಿಂತು ಸಾಮಗ್ರಿ ಖರೀದಿಸುವಾಗ ಸುರಕ್ಷಿತ ಅಂತರ ಕಾಪಾಡುವುದಕ್ಕೆ ಮಾ.22ರಂದೇ ನಾವು ಅಗತ್ಯ ಗುರುತುಗಳನ್ನು ಮಾಡಿದೆವು. 100ಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳು ಮೈದಾನದ ಅಂಚಿನಲ್ಲಿ ಸಾಲಾಗಿ ವ್ಯಾಪಾರ ಮಾಡಲು ವ್ಯವಸ್ಥೆ ಕಲ್ಪಿಸಿದೆವು. ಮೊದಲ ದಿನದಿಂದಲೇ ಶಿಸ್ತು ಕಾಪಾಡಿದ್ದರಿಂದ ಜನಜಂಗುಳಿ ಉಂಟಾಗಲಿಲ್ಲ’ ಎಂದರು. 

‘ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚುತ್ತಿರುವುದರಿಂದ ನಮ್ಮ ವ್ಯಾಪಾರಕ್ಕೆ ಕುತ್ತು ಬರುತ್ತದೆ ಎಂಬ ಭಯವಿತ್ತು. ಆದರೆ ಇಲ್ಲಿ ನಿರಾತಂಕವಾಗಿ ವ್ಯಾಪಾರ ಮಾಡಬಹುದಾಗಿದೆ. ಈ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಧನ್ಯವಾದ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

‘ಎನ್‌.ಆರ್‌.ಕಾಲೊನಿ ನಿವಾಸಿಗಳಿಗೆ ಅನುಕೂಲವಾಗಿದೆ. ವ್ಯಾಪಾರಿಗಳೂ ಕೈಗವಸು, ಮುಖಗವಸು ಧರಿಸುತ್ತಿದ್ದಾರೆ. ನಾವಿಲ್ಲಿ ಆತಂಕವಿಲ್ಲದೇ ಖರೀದಿಸಬಹುದು’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

‘ವ್ಯಾಪಾರವನ್ನು ಏಕಾಏಕಿ ನಿಲ್ಲಿಸಿದರೆ ಹಣ್ಣು– ತರಕಾರಿ ಖರೀದಿಗೆ ಎಲ್ಲಿಗೆ ಹೋಗುವುದಪ್ಪಾ ಎಂದು ಭಯವಾಗಿತ್ತು. ಇಲ್ಲಿ ತುಂಬಾ ಚೆನ್ನಾಗಿ ವ್ಯವಸ್ಥೆ ಕಲ್ಪಿಸಿದ್ದಾರೆ. ವ್ಯಾಪಾರಿಗಳಿಗೂ ಅನ್ಯಾಯ ಆಗಿಲ್ಲ. ಜನರಿಗೂ ಅನುಕೂಲವಾಗಿದೆ’ ಎಂದು ಮಹಿಳೆಯೊಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು