ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾರ್ಟ್‌ಮೆಂಟ್‌ ಭದ್ರತೆ: ರಾಜಿ ಬೇಡ

Last Updated 27 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಸಿಲಿಕಾನ್‌ ಸಿಟಿಯಲ್ಲಿ ಗಗನಚುಂಬಿ ಕಟ್ಟಡಗಳು ಹೆಚ್ಚುತ್ತಿವೆ. ಇವುಗಳಲ್ಲಿ ವಾಣಿಜ್ಯ ಕಟ್ಟಡಗಳಿಗಿಂತ ವಸತಿ ಸಮುಚ್ಛಯಗಳೇ ಹೆಚ್ಚು. ಮೂರು ಮಹಡಿಯಿಂದ 22 ಮಹಡಿಗಳನ್ನೂ ಮೀರಿ ನಗರದಲ್ಲಿ ಅಪಾರ್ಟ್‌ಮೆಂಟ್‌ಗಳು ನಿರ್ಮಾಣಗೊಳ್ಳುತ್ತಿವೆ. 40 ಮನೆ, 140, 300, 1,000ಕ್ಕೂ ಅಧಿಕ ಮನೆಗಳಿರುವ ವಸತಿ ಸಮುಚ್ಛಯಗಳ ಸಂಕೀರ್ಣಗಳು ಎಲ್ಲೆಡೆ ಹಬ್ಬಿವೆ.

ಪ್ರತಿ ಅಪಾರ್ಟ್‌ಮೆಂಟ್‌ಗಳು ತನ್ನದೇ ಆದ ಖಾಸಗಿ ಭದ್ರತಾ ವ್ಯವಸ್ಥೆಯನ್ನೇನೋ ಹೊಂದಿವೆ. ಹೀಗಿದ್ದರೂ ಇತ್ತೀಚೆಗೆ ಸಂಪಂಗಿರಾಮನಗರದ ಲಿಸಾ ಅಪಾರ್ಟ್‌ಮೆಂಟ್‌ನಲ್ಲಿ ವೃದ್ಧೆಯೊಬ್ಬರನ್ನು ಬರ್ಬರವಾಗಿ ಕೊಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದುಷ್ಕರ್ಮಿಗಳು ದೋಚಿದ್ದರು.

ಅದೇ ರೀತಿ ಸಂಜಯ್‌ನಗರ ಅಪಾರ್ಟ್‌ಮೆಂಟ್‌ವೊಂದರಲ್ಲಿ ಹಗಲು ಹೊತ್ತಿನಲ್ಲಿಯೇ ದರೋಡೆಕೋರರು ಮನೆಗೆ ನುಗ್ಗಿ ಐದು ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಸಾವಿರಾರು ರೂಪಾಯಿ ನಗದು ಕಳ್ಳತನ ಮಾಡಿದ್ದರು. ಕೆಲ ಅಪಾರ್ಟ್‌ಮೆಂಟ್‌ಗಳಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌ ಕಳ್ಳತನ, ಚಪ್ಪಲಿ, ಬೂಟು, ಸೈಕಲ್‌ಗಳ ಕಳ್ಳತನವೂ ಆಗಿವೆ.

ಸಿಸಿಟಿವಿ ಕಣ್ಗಾವಲು, ಖಾಸಗಿ ಭದ್ರತಾ ವ್ಯವಸ್ಥೆ ಹೊಂದಿದ್ದರೂ ಅಪಾರ್ಟ್‌ಮೆಂಟ್‌ಗಳಲ್ಲಿನ ನಿವಾಸಿಗಳಲ್ಲಿ ಅಭದ್ರತೆಯ ಭಯ ಕಾಡುತ್ತಿರುವುದು ಸುಳ್ಳಲ್ಲ. ಭದ್ರತಾ ವ್ಯವಸ್ಥೆಯಲ್ಲಿ ಆಗುವ ಸಣ್ಣ ಪುಟ್ಟ ಲೋಪಗಳು ಹಾಗೂ ಕೆಲ ನಂಬಿಕೆ, ವಿಶ್ವಾಸ ದ್ರೋಹಗಳು ಆಪಾರ್ಟ್‌ಮೆಂಟ್‌ ಆವರಣದಲ್ಲಿ ಅಪರಾಧ ಕೃತ್ಯಗಳಾಗುವಂತೆ ಮಾಡುತ್ತಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಅಪಾರ್ಟ್‌ಮೆಂಟ್‌ಗಳಲ್ಲಿ ನಿವಾಸಿಗಳಿಗೆ ಭದ್ರತೆ ಮತ್ತು ಸುರಕ್ಷತಾ ವ್ಯವಸ್ಥೆ ಹೇಗಿದೆ? ಈ ಬಗ್ಗೆ ಪೊಲೀಸರು ಹೇಳುವುದೇನು ಎಂಬುದರ ಮಾಹಿತಿ ಇಲ್ಲಿದೆ.

ಪಿರಮಿಡ್‌ ಟೆಂಪಲ್‌ ಬೆಲ್ಸ್‌
ರಾಜರಾಜೇಶ್ವರಿನಗರದಲ್ಲಿ ಇರುವ ಈ ಅಪಾರ್ಟ್‌ಮೆಂಟ್‌ನಲ್ಲೂ ಎರಡು ಬಾರಿ ಕಳ್ಳತನವಾಗಿತ್ತು. ಎರಡೂ ಬಾರಿಯೂ ಕಳ್ಳ ಕಣ್ಣಿಟ್ಟಿದ್ದು ಪಾದರಕ್ಷೆಗಳ ಮೇಲೆ. 140 ಮನೆಗಳಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ 100ಕ್ಕೂ ಹೆಚ್ಚು ಪಾದರಕ್ಷೆಗಳನ್ನು ಕಳ್ಳ ದೋಚಿಕೊಂಡು ಹೋಗಿದ್ದ. ಮಧ್ಯರಾತ್ರಿ ಕಾಂಪೌಂಡ್‌ ಅನ್ನು ಸುಲಭವಾಗಿ ಹತ್ತಿ ಬಂದು, ಅಪಾರ್ಟ್‌ಮೆಂಟ್‌ನ ಮೂರು ಬ್ಲಾಕ್‌ಗಳ ಹೊಕ್ಕು ಬಹುತೇಕರ ಮನೆಗಳ ಬಳಿಯ ಬೂಟು, ಚಪ್ಪಲಿಗಳನ್ನು ಕದ್ದೊಯ್ದಿದ್ದ. ಇದು ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಆ ವೇಳೆ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಕುರ್ಚಿಯ ಮೇಲೆ ಕುಳಿತುಕೊಂಡೇ ನಿದ್ರೆಗೆ ಜಾರಿದ್ದರು.

ಸಿಸಿಟಿವಿ ಫೂಟೇಜ್‌ ಅನ್ನು ಪೊಲೀಸರಿಗೆ ನೀಡಿ ಪ್ರಕರಣ ದಾಖಲಿಸಿದ ನಂತರ ಅಪಾರ್ಟ್‌ಮೆಂಟ್‌ನ ಮಾಲೀಕರುಗಳ ಸಂಘ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಬಿ.ವಿ. ಮಂಜುನಾಥ್‌.

‘ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಅನ್ನು ಇನ್ನಷ್ಟು ಎತ್ತರಿಸಿ, ಅದರ ಮೇಲೆ ನಾಲ್ಕು ಅಡಿ ಎತ್ತರದ ತಂತಿಬೇಲಿ ನಿರ್ಮಿಸಿದ್ದೇವೆ. ಅಪಾರ್ಟ್‌ಮೆಂಟ್‌ ಒಳಬರುವ, ಹೊರ ಹೋಗುವ ಅತಿಥಿಗಳ ವಿವರವನ್ನು ಪುಸ್ತಕದಲ್ಲಿ ದಾಖಲಿಸುತ್ತಿದ್ದೇವೆ. ರಾತ್ರಿ ವೇಳೆ ನಿದ್ರೆ ಮಾಡದಂತೆ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ. ಪೋಸ್ಟ್‌, ಪಾರ್ಸ್‌ಲ್‌ ಬಂದರೆ ಸಂಬಂಧಿಸಿದ ಮನೆಯವರಿಗೆ ಇಂಟರ್‌ಕಾಂ ಮೂಲಕ ಮಾಹಿತಿ ನೀಡಿಯೇ ಸಂಬಂಧಿಸಿದ ವ್ಯಕ್ತಿಯನ್ನು ಒಳಗೆ ಬಿಡಲಾಗುತ್ತಿದೆ. ಅಪಾರ್ಟ್‌ಮೆಂಟ್‌ ನಿವಾಸಿಗಳ ಕಾರು, ಬೈಕ್‌ಗಳಿಗೆ ಸ್ಟಿಕ್ಕರ್‌ಗಳನ್ನು ಕೊಟ್ಟಿದ್ದೇವೆ. ಅವಘಡಗಳು ಆಗದಂತೆ ಎಚ್ಚರವಹಿಸಿದ್ದೇವೆ’ ಎನ್ನುತ್ತಾರೆ ಅವರು.

ಶ್ರೀರಾಮ್‌ ಶ್ರೇಯಸ್‌
ಸಹಕಾರನಗರದ ಕೊಡಿಗೇಹಳ್ಳಿ ಬಳಿ ಇರುವ ಶ್ರೀರಾಮ್‌ ಶ್ರೇಯಸ್‌ ಅಪಾರ್ಟ್‌ಮೆಂಟ್‌ನಲ್ಲಿ 400 ಮನೆಗಳಿವೆ. ಇಲ್ಲಿ ಮೊದಲ ದಿನದಿಂದಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ‘ಅಪಾರ್ಟ್‌ಮೆಂಟ್‌ನ ಮೂರು ಪ್ರವೇಶ ದ್ವಾರದಲ್ಲೂ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದೇವೆ. ಅವರಲ್ಲಿ ಸಣ್ಣ ಲೋಪ ಕಂಡು ಬಂದರೂ ಏಜೆನ್ಸಿಯನ್ನೇ ಬದಲಿಸಿಬಿಡುತ್ತೇವೆ. ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಸಹ ಇದೆ. ರಾತ್ರಿ 10ರ ನಂತರ ನಿವಾಸಿಗಳನ್ನು ಹೊರತುಪಡಿಸಿ ಬೇರೆಯವರ ಪ್ರವೇಶ ನಿಷೇಧಿಸಿದ್ದೇವೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ದಿನೇಶ್‌.

ವಿಪ್ರ ಹೈಟ್ಸ್‌
ಬೊಮ್ಮನಹಳ್ಳಿಯಲ್ಲಿ ಇರುವ ವಿಪ್ರ ಹೈಟ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ 24 ಮನೆಗಳಿವೆ. ಇಲ್ಲೂ ಭದ್ರತಾ ಸಿಬ್ಬಂದಿ ಹಗಲು ಮತ್ತು ರಾತ್ರಿ ವೇಳೆ ಇರುತ್ತಾರೆ. ಜತೆಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇಡಲಾಗಿದೆ. ಹಾಗಾಗಿ ಸುರಕ್ಷೆಯ ವಾತಾವರಣ ಇದೆ ಎಂಬುದು ಇಲ್ಲಿನ ನಿವಾಸಿ ಶೃತಿ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT