ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರಮಾಲಾಕ್ಕೆ ವಿರೋಧ: ಕಾರವಾರ ಸ್ತಬ್ಧ

ಯೋಜನೆ ವಿರುದ್ಧ ಬೀದಿಗಿಳಿದು ಘೋಷಣೆ ಕೂಗಿದ ಸಾವಿರಾರು ಜನರು
Last Updated 16 ಜನವರಿ 2020, 19:54 IST
ಅಕ್ಷರ ಗಾತ್ರ

ಕಾರವಾರ: ‘ಸಾಗರಮಾಲಾ’ ಯೋಜನೆಯಡಿ ಇಲ್ಲಿನ ವಾಣಿಜ್ಯ ಬಂದರಿನ ವಿಸ್ತರಣೆ ಕಾಮಗಾರಿಯನ್ನು ವಿರೋಧಿಸಿ ಗುರುವಾರ ಕರೆ ನೀಡಲಾಗಿದ್ದ ಬಂದ್‌ಗೆ ಭಾರಿ ಬೆಂಬಲ ವ್ಯಕ್ತವಾಯಿತು. ದಿನಪೂರ್ತಿ ಇಡೀ ನಗರಸ್ತಬ್ಧವಾಗಿತ್ತು.

ಯೋಜನೆಯನ್ನು ರದ್ದು ಮಾಡುವಂತೆ ಸಾವಿರಾರು ಜನರು ಬೀದಿಗಿಳಿದು ಶಾಂತಿಯುತವಾಗಿ ಸರ್ಕಾರವನ್ನು ಆಗ್ರಹಿಸಿದರು. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಡೆದ ಪ್ರತಿಭಟನೆಯೊಂದಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಜನ ಸೇರಿದ್ದು ಇದೇ ಮೊದಲಾಗಿತ್ತು.

ಬೆಳಿಗ್ಗೆ ಒಂಬತ್ತರ ಸುಮಾರಿಗೆ ನಗರದ ಮಿತ್ರ ಸಮಾಜದ ಮೈದಾನದಲ್ಲಿ ಸೇರಿದ ಮೀನುಗಾರರು ಮತ್ತು ಇತರ ಸಮಾನ ಮನಸ್ಕರು ಸಭೆ ನಡೆಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಹಾಸನ ಘಟಕದ ಪದಾಧಿಕಾರಿಗಳೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಎಲ್ಲರೂ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ‘ಸಾಗರಮಾಲಾ’ ಯೋಜನೆಯನ್ನು ತೊಲಗಿಸುವಂತೆ ದಾರಿಯುದ್ದಕ್ಕೂ ಘೋಷಣೆ ಕೂಗಿದರು. ಜಾನಪದ ಶೈಲಿಯ ಹಾಡುಗಳಮೂಲಕವೂ ಯೋಜನೆಗೆ ಆಕ್ಷೇಪವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು ಒಂದು ತಾಸು ವಾಹನ ಸಂಚಾರ ತಡೆದು ಧರಣಿ ಹಮ್ಮಿಕೊಳ್ಳಲಾಯಿತು. ಬಳಿಕ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮನವಿ ಸ್ವೀಕರಿಸಿ,‘ನಾಗರಿಕರಭಾವನೆಯನ್ನು ಬಂದರು ಮತ್ತು ಮೀನುಗಾರಿಕಾ ಸಚಿವರ ಗಮನಕ್ಕೆ ತರಲಾಗುವುದು. ಅಲ್ಲಿಯವರೆಗೆ ಕಾಮಗಾರಿ ನಿಲ್ಲಿಸಬೇಕು ಎಂಬ ಜನರ ಬೇಡಿಕೆಯನ್ನೂ ತಿಳಿಸಲಾಗುವುದು. ಮೀನುಗಾರರ ಮುಖಂಡರುಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಚಿವರು ಬೆಂಗಳೂರಿನಲ್ಲಿ ಸಭೆ ನಡೆಸಿನಿರ್ಧಾರ ತಿಳಿಸಲಿದ್ದಾರೆ’ ಎಂದು ಹೇಳಿದರು.

ಬಂದ್ ಕರೆಯ ಹಿನ್ನೆಲೆಯಲ್ಲಿ ನಗರದಿಂದ ಬಂದು ಹೋಗುವ ಬಸ್‌ಗಳ ಸಂಚಾರವನ್ನು ತಡೆಯಲಾಗಿತ್ತು. ಹಲವಾರು ಬಸ್‌ಗಳು ಅಂಕೋಲಾದಲ್ಲಿ ಸಾಲುಗಟ್ಟಿ ನಿಂತಿದ್ದವು. ಉಳಿದಂತೆ, ಬಹುತೇಕ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಹೋಟೆಲ್, ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT