ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಮೂರೂವರೆ ತಾಸು ತಡ

Last Updated 4 ಜನವರಿ 2019, 20:23 IST
ಅಕ್ಷರ ಗಾತ್ರ

ಧಾರವಾಡ: ಶುಕ್ರವಾರ ಇಲ್ಲಿ ಆರಂಭವಾದ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೂರೂವರೆ ತಾಸು ತಡವಾಗಿ ಬಂದರು. ಇದರಿಂದಾಗಿ ಸಮ್ಮೇಳನದ ಮೊದಲ ದಿನದ ಕಾರ್ಯಕ್ರಮಗಳು ಅಸ್ತವ್ಯಸ್ತವಾದವು.

ಉದ್ಘಾಟನಾ ಸಮಾರಂಭ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದರೆ, ಮುಖ್ಯಮಂತ್ರಿಯವರು ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಿ, ಸಮ್ಮೇಳನಕ್ಕೆ ಬರಲಿದ್ದಾರೆ ಎಂಬ ಮಾಹಿತಿ ಬೆಳಿಗ್ಗೆಯೇ ಲಭ್ಯವಾಗಿತ್ತು. ಇದರಿಂದಾಗಿ ಸಂಘಟಕರು ಎಲ್ಲ ಕಾರ್ಯಕ್ರಮಗಳಲ್ಲೂ ವಿಳಂಬ ಮಾಡತೊಡಗಿದರು.

ನಿಗದಿಯಂತೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ದೊರೆಯಿತು. ಆದರೆ, ಮೆರವಣಿಗೆ ಕೃಷಿ ವಿಶ್ವವಿದ್ಯಾಲಯದ ಆವರಣಕ್ಕೆ ಬಂದು ತಲುಪಿದಾಗ ಮಧ್ಯಾಹ್ನ 1.30 ಆಗಿತ್ತು. ಆ ನಂತರ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮತ್ತು ಇತರೆ ಗಣ್ಯರು ಮಧ್ಯಾಹ್ನದ ಭೋಜನಕ್ಕೆ ತೆರಳಿದರು.

ತುಮಕೂರಿನಿಂದ ಹುಬ್ಬಳ್ಳಿಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಮುಖ್ಯಮಂತ್ರಿ ಅಲ್ಲಿಂದ ರಸ್ತೆ ಮಾರ್ಗವಾಗಿ ಧಾರವಾಡಕ್ಕೆ ಬಂದರು. ಅವರು ಸಮಾರಂಭದ ಉದ್ಘಾಟನಾ ವೇದಿಕೆ ತಲುಪಿದಾಗ ಮಧ್ಯಾಹ್ನ 2.32 ಆಗಿತ್ತು. ಉದ್ಘಾಟನಾ ಸಮಾರಂಭ ಮುಗಿದಾಗ ಸಂಜೆ 5 ಗಂಟೆ ಮೀರಿತ್ತು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ, ಪ್ರಾಸ್ತಾವಿಕವಾಗಿ ಮಾತನಾಡುವಾಗ ಮುಖ್ಯಮಂತ್ರಿಯವರಿಂದ ವಿಳಂಬವಾಗಿಲ್ಲ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ‘ಮೆರವಣಿಗೆ ವಿಳಂಬ ಆಗುತ್ತಿದೆ ಎಂದು ಮಾಹಿತಿ ನೀಡಿದ್ದೆವು. ಈ ಕಾರಣದಿಂದ ಕುಮಾರಸ್ವಾಮಿಯವರು ತಡವಾಗಿ ಬಂದರು’ ಎಂದು ಹೇಳಿದರು.

ಸ್ವಾಗತಿಸದ ಸಚಿವ: ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಎಲ್ಲರನ್ನೂ ಸ್ವಾಗತಿಸಬೇಕಿತ್ತು. ಆದರೆ, ಸಾಹಿತ್ಯ ಸಮ್ಮೇಳನದ ತಯಾರಿ ಕುರಿತು ಲಿಖಿತ ಭಾಷಣವೊಂದನ್ನು ಓದಿದ ಅವರು ಯಾರನ್ನೂ ಸ್ವಾಗತಿಸದೇ ಸ್ವಸ್ಥಾನಕ್ಕೆ ಮರಳಿದರು. ಬಳಿಕ ಎಲ್ಲರಿಗೂ ಸ್ಮರಣಿಕೆ ನೀಡಿ ಸ್ವಾಗತಿಸಲಾಯಿತು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT