ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಜಾತ್ರೆಗೆ ಪ್ರತಿರೋಧ : ಒಂದೇ ದಿನಕ್ಕೆ ಮೊಟಕು

ತಡೆಯಲು ಪೊಲೀಸರ ಯತ್ನ, ಒಂದೇ ದಿನಕ್ಕೆ ಮೊಟಕು
Last Updated 11 ಜನವರಿ 2020, 3:06 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸರ್ಕಾರದ ಕೆಂಗಣ್ಣು, ಪೊಲೀಸ್‌ ಸರ್ಪ‍ಗಾವಲು, ಕೆಲ ಸಂಘಟನೆಗಳ ಪ್ರತಿರೋಧದ ನಡುವೆಯೂ ಶೃಂಗೇರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರ ನಡೆಯಿತು. ಆದರೆ, ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಶನಿವಾರದ ಕಾರ್ಯಕ್ರಮಗಳನ್ನು ಸ್ವಾಗತ ಸಮಿತಿ ಮುಂದೂಡಿದೆ.

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ ಹೆಗ್ಡೆ ಆಯ್ಕೆ ಕಾರಣಕ್ಕೆ ಈ ನುಡಿಜಾತ್ರೆಯು ನಾಡಿನ ಗಮನ ಸೆಳೆದಿತ್ತು. ಶಾಸಕ ಟಿ.ಡಿ. ರಾಜೇಗೌಡ ಸಮ್ಮೇಳನಕ್ಕೆ ಚಾಲನೆ ನೀಡಿದರು. ಧ್ವನಿವರ್ಧಕ ಬಳಸಬಾರದು ಎಂದು ಪೊಲೀಸರು ಷರತ್ತು ಹಾಕಿದರು. ಆದರೆ, ಸಂಘಟಕರು ಜಗ್ಗಲಿಲ್ಲ.

ಕಾಂಗ್ರೆಸ್‌ ಮುಖಂಡ ಕಿಮ್ಮನೆ ರತ್ನಾಕರ ಮಾತನಾಡಿ, ‘ಇಲ್ಲಿ ನುಡಿ ಹಬ್ಬ ಮಾಡುತ್ತಿದ್ದೇವೆ, ತೊಂದರೆ ಮಾಡಿಲ್ಲ. ಪ್ರಕರಣ ದಾಖಲಿಸುವುದಾದರೆ ಮೊದಲು ನನ್ನ ಮೇಲೆ ದಾಖಲಿಸಿ’ ಎಂದರು.

ಸಾಹಿತಿ ಕುಂ.ವೀರಭದ್ರಪ್ಪ ದಿಕ್ಸೂಚಿ ಭಾಷಣ ಮಾಡಿದರು. ರಂಗಕರ್ಮಿ ಪ್ರಸನ್ನ, ಕಡಿದಾಳು ಶಾಮಣ್ಣ ಪಾಲ್ಗೊಂಡಿದ್ದರು.

ತಪಾಸಣೆ: ಪೊಲೀಸರು ಪ್ರವೇಶ ದ್ವಾರದಲ್ಲಿ ಸಭಿಕರನ್ನು ತಪಾಸಣೆ ಮಾಡಿ ಒಳಗೆ ಬಿಟ್ಟರು. ಪಟ್ಟಣದ ಸಂಪರ್ಕ ರಸ್ತೆಗಳ ಮೂಲೆಗಳಲ್ಲಿ ಕೆಲ ವಾಹನಗಳನ್ನು ತಪಾಸಣೆ ಮಾಡಿದರು. ವಿಠಲ ಹೆಗ್ಡೆ ವಿರೋಧಿಸುವ ಸಂಘಟನೆಗಳ ಕಾರ್ಯಕರ್ತರು ಆವರಣದ ಹೊರಗೆ ರಸ್ತೆಯಲ್ಲಿ ‘ಸಮ್ಮೇಳನ ಬೇಕು, ಸಮ್ಮೇಳನಾಧ್ಯಕ್ಷ ಬೇಡ’ ಮೊದಲಾದ ಘೋಷಣೆ ಕೂಗಿದರು. ಪ್ರತಿರೋಧ ಮಾಡಿದವರನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು. ವಿಠಲ ಹೆಗ್ಡೆ ಭಾಷಣ ಸಂದರ್ಭದಲ್ಲಿ ಈ ಘೋಷಣೆ ಮುಂದುವರಿದಿತ್ತು.

ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.ಮಧ್ಯಾಹ್ನ ಗೋಷ್ಠಿ ಸಂದರ್ಭದಲ್ಲಿಯೂ ಧ್ವನಿವರ್ಧಕ ಬಳಸದಂತೆ ತಡೆಯಲು ಪೊಲೀಸರು ಯತ್ನಿಸಿದರು. ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಬಹುತೇಕ ಅಂಗಡಿ, ಮಳಿಗೆಗಳು ಬಂದ್‌

ಶೃಂಗೇರಿ ಪಟ್ಟಣದ ಬಹುತೇಕ ಅಂಗಡಿ, ಮಳಿಗೆಗಳು ಬೆಳಿಗ್ಗೆಯಿಂದಲೂ ಬಂದ್‌ ಆಗಿದ್ದವು. ಕೆಲವೇ ಹೋಟೆಲ್‌, ಲಾಡ್ಜ್‌, ಮಳಿಗೆಗಳು ತೆರೆದಿದ್ದವು. ವಾಹನ ಸಂಚಾರ ಸಹಜವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT