ಸಜ್ಜೆ ಧಾರಣೆ ಪಾತಾಳಮುಖಿ; ರೈತ ಕಂಗಾಲು

7
ಹೊಲದಲ್ಲಿ ರಾಶಿ; ಮಾರುಕಟ್ಟೆಗೆ ಸಜ್ಜೆ ತಂದ ಬೆಳೆಗಾರ

ಸಜ್ಜೆ ಧಾರಣೆ ಪಾತಾಳಮುಖಿ; ರೈತ ಕಂಗಾಲು

Published:
Updated:
Deccan Herald

ವಿಜಯಪುರ: ಹೊಲಗಳಲ್ಲಿ ಸಜ್ಜೆಯ ರಾಶಿ ನಡೆದಿದೆ. ಕೆಲವೆಡೆ ಮುಗಿದಿದೆ. ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದ ಹೊತ್ತಲ್ಲಿ ಧಾರಣೆ ಪಾತಾಳಮುಖಿಯಾಗಿದ್ದು, ಬೆಳೆಗಾರರನ್ನು ಕಂಗಾಲಾಗಿಸಿದೆ.

ಮುಂಗಾರು ವೈಫಲ್ಯದ ನಡುವೆಯೂ ಸಿರಿಧಾನ್ಯಗಳಲ್ಲಿ ಒಂದಾದ ಸಜ್ಜೆ ಬೆಳೆದಿದ್ದ ರೈತ ಇದೀಗ ಚಿಂತಾಕ್ರಾಂತನಾಗಿದ್ದಾನೆ. ಮಾರುಕಟ್ಟೆಗೆ ಆವಕ ಹೆಚ್ಚಿದಂತೆ, ಬೆಲೆ ಕುಸಿತಗೊಳ್ಳುವ ಭೀತಿಯೂ ಕಾಡಲಾರಂಭಿಸಿದೆ.

ಕೇಂದ್ರ ಸರ್ಕಾರ ಸಜ್ಜೆಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಂದು ಕ್ವಿಂಟಲ್‌ಗೆ ₹ 1950 ಧಾರಣೆ ಘೋಷಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ₹ 1000– ₹ 1100ರಂತೆ ಮಾರಾಟವಾಗುತ್ತಿರುವುದಕ್ಕೆ ರೈತ ಸಮೂಹ ಕಂಗಾಲಾಗಿದೆ. ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳು ಆರಂಭವಾಗುವವೇ ? ಎಂಬ ನಿರೀಕ್ಷೆಯಲ್ಲಿ ಸರ್ಕಾರದತ್ತ ತನ್ನ ಚಿತ್ತ ನೆಟ್ಟಿದೆ.

‘ಯಾಡ್‌ ಎಕ್ರೇಲಿ ಸಜ್ಜಿ ಬೆಳೆದಿದ್ದೆ. ಮಳೆ ಕೊರತೆ ನಡುವೆಯೂ ಬೆಳೆ ತೆಗೆದಿರುವೆ. ಹೋದ ವರ್ಷವೂ ಸಜ್ಜಿ ಕೈಸುಟ್ಟಿತ್ತು. ಈಗ್ಲೂ ಮಾರುಕಟ್ಟೆಯಲ್ಲಿ ಬೆಲೆ ಕನಿಷ್ಠವಿದೆ. ಧಾರಣೆ ತುಸು ಹೆಚ್ಚಬಹುದು ಎಂಬ ನಿರೀಕ್ಷೆ. ಆದರೆ ಯಾವಾಗ ? ಎಂಬುದೇ ತಿಳಿವಲ್ದು’ ಎಂದು ವಿಜಯಪುರ ತಾಲ್ಲೂಕು ಭೂತನಾಳದ ರೈತ ಪ್ರಕಾಶ ಶಂಕರ ಚವ್ಹಾಣ ಅಳಲು ತೋಡಿಕೊಂಡರು.

‘ನಮ್ಮೂರಲ್ಲಿ ಬಹುತೇಕರು ಸಜ್ಜಿ ಬೆಳೆದಿದ್ದೇವೆ. ಬರದಿಂದ ಎಲ್ಲೂ ಬೆಳೆಯಿರಲಿಲ್ಲ. ನಮ್‌ ಬೆಳೆಗೆ ಗುಬ್ಬಿ ಕಾಟ ವಿಪರೀತವಾಗಿತ್ತು. ಒಂದ್ ಎಕರೆಗೆ 8–9 ಕ್ವಿಂಟಲ್‌ ಸಿಗೋ ಜಾಗದಲ್ಲಿ ಇದೀಗ 5–6 ಕ್ವಿಂಟಲ್‌ ಸಿಕ್ಕೈತಿ. ಮಾರುಕಟ್ಟೆಗೆ ಹೊಯ್ದರೂ ಧಾರಣೆ ಇಲ್ಲ. ಕೂಲಿ, ಬೇಸಾಯ, ಗೊಬ್ಬರ, ಸಾಗಣೆ ಎಲ್ಲವನ್ನೂ ಲೆಕ್ಕ ಹಾಕಿದ್ರೇ ಲಾಭದ ಬದಲು ಲುಕ್ಸಾನಾಗೈತಿ’ ಎಂದು ಬಬಲೇಶ್ವರ ತಾಲ್ಲೂಕಿನ ಉಪ್ಪಲದಿನ್ನಿ ಗ್ರಾಮದ ಸಂಗಪ್ಪ ಗದಿಗೆಪ್ಪ ಮೆಂಡೆಗಾರ, ಮೋಹನ ಕುಲಕರ್ಣಿ, ಸಿದ್ದಪ್ಪ ಗುರಪ್ಪ ತುರದಿನ್ನಿ ತಿಳಿಸಿದರು.

1.87 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ: ‘ರಾಜ್ಯದಲ್ಲಿ 1.87 ಲಕ್ಷ ಹೆಕ್ಟೇರ್‌ನಲ್ಲಿ ಸಜ್ಜೆ ಬಿತ್ತನೆಯಾಗಿತ್ತು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೇ ಹೆಚ್ಚಿನ ಪ್ರಮಾಣದ ಬೆಳೆಯಿದೆ. ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರ್ಗಿ, ಯಾದಗಿರಿ, ಬೀದರ್‌, ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಬೆಳೆಯಲಾಗಿದೆ’ ಎಂದು ಕೃಷಿ ಇಲಾಖೆಯ ರಾಜ್ಯ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ದೇವರಾಜಯ್ಯ ಮಾಹಿತಿ ನೀಡಿದರು.

‘ಮಳೆಯ ಅಭಾವ ಬೆಳೆಗೆ ಸಾಕಷ್ಟು ಕಾಡಿದೆ. ಈ ತಿಂಗಳ ಕೊನೆಯ ವಾರದಿಂದ ಸಜ್ಜೆ ಮಾರಾಟಕ್ಕಾಗಿ ಮಾರುಕಟ್ಟೆಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೊಂಡೊಯ್ಯಲಿದ್ದಾರೆ’ ಎಂದು ಅವರು ತಿಳಿಸಿದರು.

ಆವಕ ಆರಂಭ: ‘ವಿಜಯಪುರದ ಎಪಿಎಂಸಿಗೆ ಸಜ್ಜೆಯ ಆವಕ ಆರಂಭಗೊಂಡಿದೆ. ದಿನ ಕಳೆದಂತೆ ಪ್ರಮಾಣ ಹೆಚ್ಚಲಿದೆ. ಪ್ರಸ್ತುತ ಕ್ವಿಂಟಲ್‌ಗೆ ₹ 1000ದಿಂದ ₹ 1500 ಧಾರಣೆ ಸಿಗುತ್ತಿದೆ’ ಎಂದು ಕಾರ್ಯದರ್ಶಿ ವಿ.ರಮೇಶ ತಿಳಿಸಿದರು.

‘2017–18ನೇ ಸಾಲಿನಲ್ಲಿ 51090 ಕ್ವಿಂಟಲ್‌ ಸಜ್ಜೆ ಆವಕವಾಗಿತ್ತು. ಧಾರಣೆ ₹ 900ರಿಂದ ₹ 1600 ಸಿಕ್ಕಿತ್ತು. ಈ ಬಾರಿ ಈಗಾಗಲೇ 7954 ಕ್ವಿಂಟಲ್‌ ಆವಕವಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !