ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ತಾರತಮ್ಯದ ಬಗ್ಗೆ ವೀರಣ್ಣ ದನಿ

ಅದಾಲತ್‌ನಲ್ಲಿ ಅರ್ಜಿ ಸಲ್ಲಿಸಿದ್ದಕ್ಕೆ ಎಸ್‌ಡಿಎಂ ಬೆದರಿಕೆ
Last Updated 26 ಡಿಸೆಂಬರ್ 2019, 13:47 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕು ನಿಡಗುಂಡಿ ಅಂಬೇಡ್ಕರ್‌ ನಗರ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಸ್ವಂತ ಹಣದೊಂದಿಗೆ ಸಮುದಾಯದ ಸಹಭಾಗಿತ್ವದಲ್ಲಿ ಖಾಸಗಿ ಕಾನ್ವೆಂಟ್‌ಗಿಂತಲೂ ಅತ್ಯುತ್ತಮವಾಗಿ ರೂಪಿಸಿರುವ ಶಿಕ್ಷಕ ಹಾಗೂ ಕವಿ ವೀರಣ್ಣ ಮಡಿವಾಳರ, ವೃತ್ತಿಯಲ್ಲಿ ತಮಗಾಗಿರುವ ಅನ್ಯಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

‘ಕೆಲಸಕ್ಕೆ ಸೇರಿ 12 ವರ್ಷಗಳಾಗಿವೆ. ಸಂಬಳ ಎಷ್ಟು ಬರುತ್ತದೆ ಎನ್ನುವ ಬಗ್ಗೆ ಲಕ್ಷ್ಯ ವಹಿಸಿರಲಿಲ್ಲ. ನಮ್ಮ ಜೊತೆ ನೇಮಕವಾದವರ ಸಂಬಳ ಕೇಳಿದಾಗ, ನನಗೆ ₹ 4ಸಾವಿರ ವೇತನ ಕಡಿಮೆ ಬರುತ್ತಿರುವುದು ಗೊತ್ತಾಯಿತು. ಕಳೆದ ಫೆಬ್ರುವರಿಯಲ್ಲೂ ಅರ್ಧ ಸಂಬಳ ಮಾತ್ರವೇ ಜಮಾ ಆಗಿತ್ತು. ನನಗೆ 10 ವರ್ಷದ ಟೈಮ್ ಬಾಂಡ್ (ಒಂದು ಇನ್ಕ್ರಿಮೆಂಟ್) ಕೂಡ ಹಾಕಿಲ್ಲ. ಈ ಕುರಿತು ಹಲವು ಬಾರಿ ನಮ್ಮ ಕೇಸ್ ವರ್ಕರ್‌ಗೆ ವಿನಂತಿಸಿದರೂ ಪ್ರಯೋಜನ ಆಗಿರಲಿಲ್ಲ’ ಎಂದು ತಿಳಿಸಿದ್ದಾರೆ. ಹಿರಿಯ ಶಿಕ್ಷಕರ ಮಾರ್ಗದರ್ಶನದಂತೆ ಶಿಕ್ಷಣ ಅದಾಲತ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ, ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಕೇಸ್‌ವರ್ಕರ್‌ಗಳು ದರ್ಬಾರ್‌ ನಡೆಸುತ್ತಿರುವುದನ್ನು ಬೆಳಕಿಗೆ ತಂದಿದ್ದಾರೆ.

ಪಕ್ಕಾ ರೌಡಿ ಎಂದರು:

‘ನಾನು ಅರ್ಜಿ ಹಾಕಿರುವುದಕ್ಕೆ ಸಂಬಂಧವೇ ಇಲ್ಲದ ರಾಯಬಾಗ ಬಿಇಒ ಕಚೇರಿಯ ಎಸ್‌ಡಿಎ, ಧಮಕಿ ಹಾಕಿದರು. ‘ನಿನ್ನ ಮಾಸ್ತರ ಯಾಂವ ಅಂತಾನ, ಬುದ್ಧಿ ಐತಿಲ್ಲ ನಿನಗ, ಹಂಗ ಲೆಟರ್ ಬರೆಯೋದು, ಅದರಾಗ ಸ್ವಲ್ಪನಾದರೂ ಅರ್ಥೈತಿ?’ ಎಂದು ಬೈದರು. ‘ನಾನು ಪಕ್ಕಾ ರೌಡಿ, ಈಗ ನೌಕರಿಗೆ ಬಂದು ಯಪ್ಪಾ, ಯಣ್ಣಾ ಅಂತ ಸುಮ್ಮನದೀನಿ. ನೀ ಯಾವಾನೋ, ಮೊದಲಿನಂಗ ಇದ್ದಿದ್ರ ನಾ ನಿನ್ನ ಸುಮ್ನ ಬಿಡತಿರಲಿಲ್ಲ. ಬೆಂಕಿ ಹಚ್ಚೋ ಮಗ ನಾ. ಹೊರಗ ಬಂದ್ರ ಪಕ್ಕಾ ರೌಡಿ ನಾ’ ಎಂದು ದಬಾಯಿಸಿದರು. ಇದರಿಂದ ಬಹಳ ನೋವಾಗಿದೆ’ ಎಂದು ತಿಳಿಸಿದ್ದಾರೆ.

ಸುಮ್ಮನೆ ಇರಬೇಕಿತ್ತಾ?:

‘ಶಿಕ್ಷಕನಿಗೆ ಹೀಗೆ ಧಮಕಿ ಹಾಕಬಹುದಾ, ನಮ್ಮ ಶಾಲೆ ಬೆಳವಣಿಗೆಯಿಂದ ಹಲವರು ಪ್ರೇರಣೆಗೊಂಡು ಶಿಕ್ಷಕ ವೃತ್ತಿಗೆ ಘನತೆ ತರುತ್ತಿದ್ದಾರೆ. ಶಾಲೆ ಹೆಸರಲ್ಲಿ ಏನೆಲ್ಲಾ ಮಾಡುತ್ತಿದ್ದೇನೆ. 2 ವರ್ಷಗಳಿಂದ ಬರಬೇಕಾಗಿದ್ದ 3 ಇನ್ಕ್ರಿಮೆಂಟ್‌ ಇಲ್ಲದೇ ಸುಮ್ಮನೇ ಇರಬೇಕಿತ್ತಾ’ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ವೀರಣ್ಣ, ‘ನನ್ನ ಪಾಡಿಗೆ ಕೆಲಸ ಮಾಡುತ್ತಿದ್ದೆ. ಶಾಲೆಯ ಅಭಿವೃದ್ಧಿ, ಮಕ್ಕಳ ಕಲಿಕೆ ವಿಷಯದಲ್ಲೇ ಮುಳುಗಿದ್ದ ನನಗೆ ಅನ್ಯಾಯವಾಗಿದ್ದೇ ಗೊತ್ತಾಗಿರಲಿಲ್ಲ. ವೇತನ ನನ್ನ ಹಕ್ಕು. ಅದು ಸರಿಯಾಗಿ ಸಿಗದಿರುವುದನ್ನು ಪ್ರಶ್ನಿಸಿದ್ದಕ್ಕೆ ಎಸ್‌ಡಿಎ ನಿಂದಿಸಿದರು. ಕೇಸ್‌ ವರ್ಕರ್‌ಗಳ ದರ್ಪ ಸಮಾಜಕ್ಕೆ, ಶಿಕ್ಷಣ ಸಚಿವರಿಗೆ ಗೊತ್ತಾಗಬೇಕು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದೇನೆ’ ಎಂದರು.

‘ಶಿಕ್ಷಣ ಇಲಾಖೆಯ ಕಚೇರಿಗಳ ನೌಕರರ ದರ್ಬಾರ್‌ಗೆ ಕಡಿವಾಣ ಹಾಕಲು, ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳಲು ಶಿಕ್ಷಣ ಸಚಿವರು, ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಹಲವರು ಪ್ರತಿಕ್ರಿಯೆ ಬರೆದಿದ್ದಾರೆ.

ವೀರಣ್ಣ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT