ಕದ್ದ ಸ್ಫೋಟಕಗಳಿಂದ ಬಾಂಬ್ ಸಿಡಿಸಿದ್ದ ಸಲೀಂ!

7
ಬೆಂಗಳೂರು ಸರಣಿ ಸ್ಫೋಟ ಪ್ರಕರಣದ 20ನೇ ಆರೋಪಿ ಸೆರೆ

ಕದ್ದ ಸ್ಫೋಟಕಗಳಿಂದ ಬಾಂಬ್ ಸಿಡಿಸಿದ್ದ ಸಲೀಂ!

Published:
Updated:
Deccan Herald

ಬೆಂಗಳೂರು: ಕೇರಳದ ಕಣ್ಣೂರಿನಲ್ಲಿ ಸೆರೆಸಿಕ್ಕಿರುವ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯ ಶಂಕಿತ ಉಗ್ರ ಮೊಹಮದ್ ಸಲೀಂ ಅಲಿಯಾಸ್ ರೈಸಲ್, ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸುವಲ್ಲಿ ಹಾಗೂ ಸ್ಫೋಟಕ್ಕೆ ಪೂರಕ ವಸ್ತುಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ.

ಸಲೀಂನನ್ನು ಗುರುವಾರ ಸಂಜೆ ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ, 14 ದಿನ ಪೊಲೀಸ್ ವಶಕ್ಕೆ ಒಪ್ಪಿಸಿತು. 

ಸ್ಫೋಟಕ ಕದ್ದಿದ್ದ: ‘2008ರಲ್ಲಿ ಬೆಂಗಳೂರಿನ ವಿವಿಧೆಡೆ ಬಾಂಬ್ ಸ್ಫೋಟಿಸಲು ಕೇರಳದ ಟಿ.ನಾಸಿರ್ ನೇತೃತ್ವದಲ್ಲಿ ಸಂಚು ಸಿದ್ಧವಾಗಿತ್ತು. ಈ ಸಂಬಂಧ ಕಣ್ಣೂರಿನಲ್ಲಿ ನಡೆದಿದ್ದ ಪೂರ್ವ ಸಿದ್ಧತಾ ಸಭೆಗಳಲ್ಲಿ ನಾಸಿರ್‌ನ ಆಪ್ತ ಸಲೀಂ ಭಾಗಿಯಾಗಿದ್ದ. ಬಳಿಕ ಆತನ ಸೂಚನೆಯಂತೆಯೇ ಕೇರಳದ ಮಳಿಗೆಯೊಂದರಿಂದ ಸ್ಫೋಟಕ ವಸ್ತುಗಳನ್ನು ಕಳವು ಮಾಡಿದ್ದ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘2008ರ ಜುಲೈ 24ರಂದು ಆ ಸ್ಫೋಟಕಗಳೊಂದಿಗೆ ಬೆಂಗಳೂರಿಗೆ ಬಂದ ಸಲೀಂ, ಇಲ್ಲಿದ್ದ ಸಹಚರರಿಗೆ ಅವುಗಳನ್ನು ತಲುಪಿಸಿ ವಾಪಸ್ ಕಣ್ಣೂರು ಸೇರಿದ್ದ. ಮರುದಿನ ಬೆಳಿಗ್ಗೆ ಹಲವು ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿದ್ದ ಆರೋಪಿಗಳು, ನಗರದ ಒಂಬತ್ತು ಕಡೆಗಳಲ್ಲಿ ಸ್ಫೋಟಕ ಅಳವಡಿಸಿದ್ದರು. ಮಧ್ಯಾಹ್ನ ಅವು ಸ್ಫೋಟಗೊಂಡು ಮಹಿಳೆಯೊಬ್ಬರು ಮೃತಪಟ್ಟಿದ್ದರು. 20 ಮಂದಿ ಗಾಯಗೊಂಡಿದ್ದರು.’

‘ತನ್ನ ಗುರು ನಾಸಿರ್ ಪೊಲೀಸರ ಬಲೆಗೆ ಬೀಳುತ್ತಿದ್ದಂತೆಯೇ ಸಲೀಂ ಕೇರಳ ತೊರೆದು ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ. 2016ರಲ್ಲಿ ರಾಜ್ಯಕ್ಕೆ ವಾಪಸಾದ ಆತ, ಬಂಧನದ ಭೀತಿಯಿಂದ ಅರಣ್ಯದಲ್ಲಿ ಭೂಗತನಾಗಿ ತನ್ನ ಚಟುವಟಿಕೆಗಳನ್ನು ಮುಂದುವರಿಸಿದ್ದ’ ಎಂದು ಮಾಹಿತಿ ನೀಡಿದರು.

ಅರಣ್ಯದಲ್ಲಿ ಮನೆ ಕಟ್ಟಿದ್ದ: ನಾಸಿರ್ ಹಾಗೂ ಆತನ ಸಹಚರರನ್ನು ಆಗ ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಆಗಿದ್ದ ಅಲೋಕ್‌ ಕುಮಾರ್ ನೇತೃತ್ವದ ತಂಡ ಬಂಧಿಸಿತ್ತು. ಈಗ ಸಿಸಿಬಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಅಲೋಕ್, ಸರಣಿ ಬಾಂಬ್ ಸ್ಫೋಟ ‍ಪ್ರಕರಣದ ಇತರೆ ಆರೋಪಿಗಳ ಬೆನ್ನುಹತ್ತಿದ್ದರು.

‘ಕೇರಳದಲ್ಲಿ ನಾವು ಮಾಹಿತಿದಾರರನ್ನು ಬಿಟ್ಟಿದ್ದೆವು. ಇತ್ತೀಚೆಗೆ ಕರೆ ಮಾಡಿದ್ದ ಅವರು, ಕಣ್ಣೂರಿನ ಪಿಣರಾಯಿ (ಕೇರಳ ಮುಖ್ಯಮಂತ್ರಿ ಪಿಣರಾಯಿ ಹುಟ್ಟೂರು) ಗ್ರಾಮದ ಅರಣ್ಯದಲ್ಲಿ ಸಲೀಂನನ್ನು ನೋಡಿದ್ದಾಗಿ ಹೇಳಿದರು. ಎಸಿಪಿ ಸುಬ್ರಮಣಿ ನೇತೃತ್ವದ ತಂಡವನ್ನು ಅಲ್ಲಿಗೆ ಕಳುಹಿಸಿದ್ದೆವು. ಅರಣ್ಯದಲ್ಲಿ ಮನೆ ಕಟ್ಟಿಕೊಂಡು ಪತ್ನಿ–ನಾಲ್ಕು ಮಕ್ಕಳೊಂದಿಗೆ ನೆಲೆಸಿದ್ದ ಸಲೀಂನನ್ನು ತಂಡ ವಶಕ್ಕೆ ಪಡೆಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಸಲೀಂ 20ನೇ ಆರೋಪಿ

ಸರಣಿ ಸ್ಫೋಟ ಪ್ರಕರಣದ ಸಂಬಂಧ ಕೇರಳದ ರಾಜಕಾರಣಿ ಅಬ್ದುಲ್ ನಾಸಿರ್ ಮದನಿ ಸೇರಿದಂತೆ 27 ಮಂದಿ ವಿರುದ್ಧ ಸಿಸಿಬಿ ಆರೋಪಪಟ್ಟಿ ಸಲ್ಲಿಸಿದೆ. ಅದರಲ್ಲಿ 20ನೇ ಆರೋಪಿಯಾಗಿ ಸಲೀಂನ ಹೆಸರು ಉಲ್ಲೇಖವಾಗಿದೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯವರೂ ಸೇರಿದಂತೆ ಪ್ರಮುಖ ಆರೋಪಿಗಳು ಸಿಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !