ಗುರುವಾರ , ನವೆಂಬರ್ 21, 2019
21 °C

ಆಲಿಯಾಗೆ ಮುತ್ತಿಡಲು ಸಲ್ಮಾನ್‌ ನಕಾರ?

Published:
Updated:

ಆಲಿಯಾ ಭಟ್‌ಗೆ ಮುತ್ತಿಡುವ ದೃಶ್ಯದಲ್ಲಿ ಅಭಿನಯಿಸಲು ಸಲ್ಮಾನ್‌ ಖಾನ್‌ ಒಪ್ಪಿಕೊಳ್ಳದಿರುವುದೇ ‘ಇನ್‌ಶಾ ಅಲ್ಲಾಹ್‌’ ಸಿನಿಮಾ ಸೆಟ್ಟೇರದಿರುವುದಕ್ಕೆ ಕಾರಣ ಎಂಬ ಗಾಸಿಪ್‌ ಈಗ ಬಾಲಿವುಡ್‌ನಲ್ಲಿ ಹಬ್ಬಿದೆ.

2020ರ ಈದ್‌ಗೆ ಸಂಜಯ್‌ ಲೀಲಾ ಬನ್ಸಾಲಿ, ತಮ್ಮ ಕನಸಿನ ಸಿನಿಮಾ ‘ಇನ್‌ಶಾ ಅಲ್ಲಾಹ್’ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು. ಸಲ್ಮಾನ್‌ ಖಾನ್‌ ಹಾಗೂ ಅಲಿಯಾ ಭಟ್ ಅವರೂ ಕೂಡ ಈ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿದ್ದರು. ನಂತರದಲ್ಲಿ ಈ ಸಿನಿಮಾ ಸೆಟ್ಟೇರುತ್ತಿಲ್ಲ ಎಂದು ಪ್ರಕಟಿಸಲಾಯಿತು. ಇದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಇದುವರೆಗೂ ಯಾರೂ ಬಹಿರಂಗಗೊಳಿಸಿಲ್ಲ.

‘ಮುತ್ತಿಡುವ ದೃಶ್ಯದಲ್ಲಿ ಅಭಿನಯಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಸಲ್ಮಾನ್‌ ಈ ಸಿನಿಮಾದಿಂದ ಹೊರಬಂದಿದ್ದಾರೆ’ ಎಂಬ ಸುದ್ದಿ ಗಾಳಿಯಂತೆ ಹಬ್ಬಿದೆ. ಈ ಮೊದಲು ಇದ್ದ ಸುದ್ದಿ ಪ್ರಕಾರ ಡೇಟ್ಸ್ ಹೊಂದಾಣಿಕೆಯಾಗಿಲ್ಲ, ಸಲ್ಮಾನ್‌ ಕೇಳಿದಷ್ಟು ದುಡ್ಡನ್ನು ಸಂಜಯ್‌ ಲೀಲಾ ಬನ್ಸಾಲಿ ಅವರು ಕೊಡಲು ಒಪ್ಪಿಲ್ಲ ಎಂಬ ಗಾಸಿಪ್‌ಗಳು ಕೇಳಿಬಂದಿದ್ದವು.

‘ಬನ್ಸಾಲಿ ಅವರೊಂದಿಗೆ ಸಲ್ಮಾನ್‌ ಈ ಮೊದಲೂ ಕೆಲಸ ಮಾಡಿದ್ದಾರೆ. ಕಿಸ್ ದೃಶ್ಯಗಳಲ್ಲಿ ಅವರು ನಟಿಸಲು ಒಪ್ಪುವುದಿಲ್ಲ ಎಂಬ ವಿಚಾರ ಅವರಿಗೂ ಗೊತ್ತಿದೆ. ಈ ಕಾರಣಕ್ಕೆ ಈ ಸಿನಿಮಾ ಕೈಬಿಡಲಾಗಿಲ್ಲ. ಬೇರೆಯದೇ ಕಾರಣ ಇದೆ’ ಎಂದು ಸಲ್ಮಾನ್‌ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

‘ಸೂಪರ್‌ 30’ ಸಿನಿಮಾದ ಬಳಿಕ ಹೃತಿಕ್‌ ರೋಷನ್‌ಗೆ ಸಾಕಷ್ಟು ಅವಕಾಶಗಳು ಒಲಿದು ಬಂದಿವೆ. ಉತ್ತಮ ಸ್ಕ್ರಿಪ್ಟ್‌ಗಾಗಿ ಅವರು ಕಾಯುತ್ತಿದ್ದಾರಂತೆ. ಇತ್ತೀಚೆಗೆ ಹೃತಿಕ್‌,  ಸಂಜಯ್ ಲೀಲಾ ಬನ್ಸಾಲಿ ಅವರನ್ನು ಭೇಟಿ ಮಾಡಿದ ಚಿತ್ರಗಳು ವೈರಲ್‌ ಆಗಿದ್ದವು. ‘ಇನ್‌ಶಾ ಅಲ್ಲಾಹ್‌’ ಮತ್ತೆ ಸೆಟ್ಟೇರಲಿದೆ, ಈ ಸಿನಿಮಾದಲ್ಲಿ ಹೃತಿಕ್‌ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಈಗ ಬಾಲಿವುಡ್‌ ವಲಯದಲ್ಲಿ ಕೇಳಿಬರುತ್ತಿದೆ. 

ಪ್ರತಿಕ್ರಿಯಿಸಿ (+)