‘ಮಹಿಳಾ ಅಧಿಕಾರಿ ಆದೇಶ ಪಾಲಿಸಲು ಹಿಂದೇಟು’; ಡಿ.ರೂಪಾ

7

‘ಮಹಿಳಾ ಅಧಿಕಾರಿ ಆದೇಶ ಪಾಲಿಸಲು ಹಿಂದೇಟು’; ಡಿ.ರೂಪಾ

Published:
Updated:

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ಮಹಿಳಾ ಅಧಿಕಾರಿಗಳ ಆದೇಶವನ್ನು ಪಾಲಿಸಲು ಪುರುಷರು ಹಿಂಜರಿಯುತ್ತಾರೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಅಸಮಾಧಾನ ವ್ಯಕ್ತಪಡಿಸಿದರು.

 ಮಹಿಳಾ ಸಂವೇದನೆ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಣ್ಣುಮಕ್ಕಳು ಎಷ್ಟೇ ಕಷ್ಟಪಟ್ಟು ಓದಿ ಐಎಎಸ್, ಐಪಿಎಸ್ ಪಾಸು ಮಾಡಿದರೂ, ಮಹಿಳಾ ಅಧಿಕಾರಿಗಳ ಆದೇಶವನ್ನು ಪಾಲಿಸುವುದಿಲ್ಲ. ಆದೇಶ ಪಾಲಿಸುವವರು ಮನಃಪೂರ್ವಕವಾಗಿ ಮಾಡುವುದಿಲ್ಲ. ಅದೇ ಆ ಸ್ಥಾನದಲ್ಲಿ ಪುರುಷ ಅಧಿಕಾರಿ ಇದ್ದರೆ ಪಾಲಿಸುತ್ತಾರೆ. ಹೆಣ್ಣುಮಕ್ಕಳು ಶ್ರಮ ವಹಿಸಿ ಓದುತ್ತಾರೆ ನಿಜ. ಆದರೆ, ಅವರಿಗೆ ಪ್ರಾಯೋಗಿಕ ಜ್ಞಾನ ಇರೋದಿಲ್ಲ. ಅವರು ಹೆಚ್ಚು ತಿರುಗಾಡಿರುವುದಿಲ್ಲ. ಅದೇ ಗಂಡು ಮಕ್ಕಳಿಗೆ ತಿರುಗಾಟದ ಅನುಭವ ಇರುತ್ತದೆ. ಹೆಣ್ಣುಮಕ್ಕಳು ಬರೀ ಪುಸ್ತಕದ ಬದನೇಕಾಯಿ ಅಂತಲೇ ಭಾವಿಸುತ್ತಾರೆ’ ಎಂದು ನುಡಿದರು.

‘ಮಹಿಳಾ ಗೋಷ್ಠಿಯನ್ನು ಊಟದ ಹೊತ್ತಿಗೆ ಇಡಲಾಗಿದೆ. ಯಾಕೆ ಈ ರೀತಿ ಮಾಡ್ತಾರೆ? ನಿಜ ಹೇಳಬೇಕೆಂದರೆ ಮಹಿಳಾ ಗೋಷ್ಠಿಗಳು ಪುರುಷರನ್ನೂ ಒಳಗೊಳ್ಳಬೇಕು. ಮಹಿಳೆ ಹೇಳಬಯಸುವುದನ್ನು ಪುರುಷರು ಕೇಳಿದರೆ ತಾನೇ ಬದಲಾವಣೆ ಸಾಧ್ಯ? ಮಹಿಳೆಯರು ಅವರ ಪಾಡಿಗೆ ಅವರು ಗೋಷ್ಠಿ ಮಾಡಿಕೊಳ್ಳುತ್ತಾರೆ ಅಂದುಕೊಳ್ಳುತ್ತಾರೆ. ಅವರು ಹೇಳುವುದನ್ನು ನಾವು ಕೇಳಬೇಕು. ನಾವು ಹೇಳುವುದನ್ನು ಅವರೂ ಕೇಳಬೇಕಲ್ಲವೇ?‘ ಎಂದು ಪ್ರಶ್ನಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಬೇಕಾಗಿದ್ದ ಡಾ.ವೀಣಾ ಶಾಂತೇಶ್ವರ ಗೈರಾಗಿದ್ದರು. ಹೀಗಾಗಿ, ಹಿರಿಯ ಸಾಹಿತಿ ಶಶಿಕಲಾ ವಸ್ತ್ರದ ಅಧ್ಯಕ್ಷತೆ ವಹಿಸಿದರು. 

‘ಮಹಿಳಾ ಆತ್ಮಕಥನಗಳು’ ವಿಷಯವಾಗಿ ಮಾತನಾಡಿದ ಅವರು, ‘ಮಹಿಳಾ ಆತ್ಮಕಥನಗಳು ಗೋಳಾಟದ ಕಥನಗಳಲ್ಲ, ಅವು ಹೋರಾಟದ ಕಥನಗಳು. ಅವು ನಮ್ಮನಿಮ್ಮ ಮನೆಯ ಹೆಣ್ಣುಮಕ್ಕಳ ಅಂತರಂಗದ ಕಥನಗಳು. ಸ್ತ್ರೀವಾದ ಅಂದರೆ ಪುರುಷ ದ್ವೇಷಿ ಅಲ್ಲ, ಅದು ಮಾನವೀಯತೆಯ ಪರವಾಗಿರುವ ವಾದ. ಹೆಣ್ಣು–ಗಂಡು ಪರಸ್ಪರ ಅರ್ಥ ಮಾಡಿಕೊಂಡು ನಡೆಯಬೇಕು’ ಎಂದು ಸಲಹೆ ನೀಡಿದರು.

‘ರಾಜಕಾರಣ ಮತ್ತು ಮಹಿಳಾ ಪ್ರಾತಿನಿಧ್ಯ’ ಕುರಿತು ಡಾ.ಕವಿತಾ ರೈ ಮಾತನಾಡಿದರು. ಡ.ತಮಿಳ್ ಸೆಲ್ವಿ ಸ್ವಾಗತಿಸಿದರು. ಡಾ.ಗೀತಾ ವಸಂತ ನಿರೂಪಿಸಿದರು. ಮಾಯಾ ರಾಮನ್ ವಂದಿಸಿದರು. ಡಾ.ವೀಣಾ ಸಂಕನಗೌಡರ ನಿರ್ವಹಣೆ ಮಾಡಿದರು.

ಬರಹ ಇಷ್ಟವಾಯಿತೆ?

 • 6

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !