ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾಜೆ ಘಾಟಿ: ಸಿದ್ಧವಾಗಿದೆ ತಾತ್ಕಾಲಿಕ ರಸ್ತೆ

ಬೃಹತ್‌ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಕೊಡಗು ಜಿಲ್ಲಾಡಳಿತಕ್ಕೆ ಶಿಫಾರಸು
Last Updated 1 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭೀಕರ ಭೂಕುಸಿತದಿಂದ ಅಕ್ಷರಶಃ ನಾಮಾವಶೇಷವಾಗಿದ್ದ ಸಂಪಾಜೆ ಘಾಟಿಯ 14 ಕಿ.ಮೀ ರಸ್ತೆಯ ತಾತ್ಕಾಲಿಕ ಮರುನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ರಾಷ್ಟ್ರೀಯ ಹೆದ್ದಾರಿ ವಿಭಾಗ ‍ಪೂರ್ಣಗೊಳಿಸಿದೆ. ಬೃಹತ್‌ ವಾಹನಗಳ ಸಂಚಾರಕ್ಕೆ ಇರುವ ನಿರ್ಬಂಧ ತೆರವುಗೊಳಿಸುವಂತೆ ಕೊಡಗು ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಿದೆ.

ಕರಾವಳಿ ಜಿಲ್ಲೆಗಳು ಮತ್ತು ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ಹೆದ್ದಾರಿ ಭೂಕುಸಿತದಿಂದಾಗಿ ಮೂರು ತಿಂಗಳಿನಿಂದ ಬಂದ್‌ ಆಗಿದೆ. ಜುಲೈ ತಿಂಗಳಲ್ಲೇ ಈ ಮಾರ್ಗದ ಕೆಲವೆಡೆ ಬಿರುಕು ಕಾಣಿಸಿಕೊಂಡಿತ್ತು. ಆಗಲೇ ಬೃಹತ್‌ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಆಗಸ್ಟ್‌ ಎರಡನೇ ವಾರ ಸಂಭವಿಸಿದ ಭೂಕುಸಿತದಲ್ಲಿ ಜೋಡುಪಾಲದಿಂದ ಮಡಿಕೇರಿವರೆಗಿನ ರಸ್ತೆ ಸಂಪೂರ್ಣವಾಗಿ ನಿರ್ನಾಮವಾಗಿತ್ತು. ಮೊಣ್ಣಂಗೇರಿ, ಮದೆನಾಡು, ಹಟ್ಟಿಹೊಳೆ ಮತ್ತಿತರ ಗ್ರಾಮಗಳ ಭಾಗದಲ್ಲಿ ರಸ್ತೆ ಕೊಚ್ಚಿಕೊಂಡು ನದಿಯ ಒಡಲು ಸೇರಿತ್ತು.

ಕೆಲವು ದಿನಗಳ ಹಿಂದೆ ಈ ಮಾರ್ಗದಲ್ಲಿ ಕಾರುಗಳು ಮತ್ತು ಕೆಎಸ್‌ಆರ್‌ಟಿಸಿಯ ಮಿನಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕರಾವಳಿಯ ವಿವಿಧೆಡೆಯಿಂದ ಕೊಯ್ನಾಡುವರೆಗೆ ದೊಡ್ಡ ಬಸ್‌ಗಳು ಸಂಚರಿಸುತ್ತಿವೆ. ಅಲ್ಲಿಂದ ಮಡಿಕೇರಿಗೆ ಮಿನಿ ಬಸ್‌ಗಳು ಸಂಚರಿಸುತ್ತಿವೆ.

‘ಸಂಪಾಜೆ ಘಾಟಿಯಲ್ಲಿ ಅಂದಾಜು ₹ 10 ಕೋಟಿ ವೆಚ್ಚದಲ್ಲಿ ತಾತ್ಕಾಲಿಕವಾಗಿ ರಸ್ತೆಯನ್ನು ಮರುನಿರ್ಮಾಣ ಮಾಡಲಾಗಿದೆ. ಕಾಮಗಾರಿ ಮುಗಿದಿದ್ದು, ಎಲ್ಲ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಬಹುದು ಎಂದು ಕೊಡಗು ಜಿಲ್ಲಾಧಿಕಾರಿಯವರಿಗೆ ಕಳೆದ ವಾರ ವರದಿ ನೀಡಲಾಗಿದೆ. ಅವರೇ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರು. ಅದನ್ನು ವಾಪಸು ಪಡೆದು ಹೊಸ ಆದೇಶ ಹೊರ
ಡಿಸಿದರೆ ಎಲ್ಲ ಬಗೆಯ ವಾಹನಗಳೂ ಸಂಚರಿಸಬಹುದು’ ಎಂದು ಪಿಡಬ್ಲ್ಯುಡಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿದ ಸ್ಥಳಗಳಲ್ಲಿ ಸಾವಿರಾರು ಮರಳಿನ ಚೀಲಗಳನ್ನು ಪೇರಿಸಿ ರಸ್ತೆ ಜಾರದಂತೆ ತಡೆಗೋಡೆ ನಿರ್ಮಿಸಲಾಗಿದೆ. ಸೇತುವೆಗಳು ಕೊಚ್ಚಿಕೊಂಡು ಹೋದ ಸ್ಥಳಗಳಲ್ಲಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಗಿದೆ. ಹೊಸದಾಗಿ ಜೆಲ್ಲಿ ಹಾಕಿ, ಡಾಂಬರು ಹಾಕಲಾಗಿದೆ. ತಾತ್ಕಾಲಿಕವಾಗಿ ವಾಹನಗಳ ಸಂಚಾರಕ್ಕೆ ಯಾವ ತೊಂದರೆಯೂ ಇಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ನಿಷೇಧ ತೆರವಿಗೆ ಸಿದ್ಧತೆ:ಸಂಪಾಜೆ ಘಾಟಿಯಲ್ಲಿ ಬೃಹತ್‌ ವಾಹನಗಳ ಸಂಚಾರ ನಿಷೇಧ ಹಿಂದಕ್ಕೆ ಪಡೆಯುವ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ‘ತಾತ್ಕಾಲಿಕ ರಸ್ತೆ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿರುವ ಕುರಿತು ಪಿಡಬ್ಲ್ಯುಡಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ರಸ್ತೆಯುದ್ದಕ್ಕೂ ಸೂಚನಾ ಫಲಕಗಳನ್ನು ಅಳವಡಿಸಿ, ವರದಿ ನೀಡುವಂತೆ ಸೂಚಿಸಲಾಗಿತ್ತು. ಬೃಹತ್‌ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಶಿಫಾರಸು ಮಾಡಿ ಸಲ್ಲಿಸಿರುವ ಅಂತಿಮ ವರದಿ ಇನ್ನೂ ನನಗೆ ತಲುಪಿಲ್ಲ. ವರದಿ ಬಂದ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಜ್ಞರ ವರದಿಯೊಂದಿಗೆ ಪ್ರಸ್ತಾವ

ಸಂಪಾಜೆ ಘಾಟಿ ಮಾರ್ಗದಲ್ಲಿ ಭೂಕುಸಿತದಿಂದ ಹಾನಿಗೀಡಾಗಿರುವ 14 ಕಿ.ಮೀ ರಸ್ತೆಯನ್ನು ಶಾಶ್ವತವಾಗಿ ಮರು ನಿರ್ಮಾಣ ಮಾಡಲು ಅನುದಾನ ಕೋರಿ ತಜ್ಞರ ವರದಿಯೊಂದಿಗೆ ಕೇಂದ್ರ ಹೆದ್ದಾರಿ ಖಾತೆ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲು ಪಿಡಬ್ಲ್ಯುಡಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶಾಶ್ವತವಾಗಿ ಭೂಕುಸಿತ ತಡೆಯುವ ಕುರಿತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮಣ್ಣು ಎಂಜಿನಿಯರಿಂಗ್‌ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಆರ್‌.ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ಅಧ್ಯಯನ ನಡೆಸಿದೆ. ಐಐಎಸ್‌ಸಿ ಜಿಯೋಟೆಕ್ನಿಕಲ್‌ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಜಿ.ಎಲ್‌.ಶಿವಕುಮಾರ್‌ ಬಾಬು ನೇತೃತ್ವದ ಮತ್ತೊಂದು ತಂಡವೂ ಅಧ್ಯಯನ ನಡೆಸುತ್ತಿದೆ.

‘ಸಂಪಾಜೆ ಘಾಟಿ ರಸ್ತೆಯ ಮರುನಿರ್ಮಾಣಕ್ಕೆ ₹ 500 ಕೋಟಿ ಅನುದಾನ ಕೋರಲು ಈ ಹಿಂದೆ ಸಿದ್ಧತೆ ನಡೆಸಲಾಗಿತ್ತು. ಈಗ ತಜ್ಞರ ಸಮಿತಿಗಳ ವರದಿ ಆಧರಿಸಿ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ. ತಜ್ಞರ ಸಮಿತಿಗಳ ವರದಿ ಲಭ್ಯವಾದ ಬಳಿಕವೇ ಕೋರಬೇಕಾದ ಅನುದಾನದ ಮೊತ್ತದ ಬಗ್ಗೆ ನಿರ್ಧರಿಸಲಾಗುವುದು’ ಎಂದು ಪಿಡಬ್ಲ್ಯುಡಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ರಾಘವನ್‌ ತಿಳಿಸಿದರು.

* ಸಂಪಾಜೆ ಘಾಟಿ ಮಾರ್ಗದ ತಾತ್ಕಾಲಿಕ ರಸ್ತೆ ಸಿದ್ಧವಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ವಾಹನ ಸಂಚಾರಕ್ಕೆ ಅವಕಾಶ ನೀಡುವುದು ಸರಿಯಲ್ಲ

-ಪಿ.ಐ.ಶ್ರೀವಿದ್ಯಾ, ಕೊಡಗು ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT