ಮಾದರಿ ಜೈಲು: ಅನುಷ್ಠಾನ ಇನ್ನೂ ಕನಸು

7
ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಿಂದ ಬೆಳಕಿಗೆ: ಜಾರಿಯಾಗದ ಸುಧಾರಣಾ ನೀತಿ

ಮಾದರಿ ಜೈಲು: ಅನುಷ್ಠಾನ ಇನ್ನೂ ಕನಸು

Published:
Updated:
Deccan Herald

ಬೆಂಗಳೂರು: ಅಂತರರಾಷ್ಟ್ರೀಯ ಸಂಸ್ಥೆಗಳು ಹಾಗೂ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳ ಅನುಸಾರ, ಜಾರಿಗೆ ಬರಬೇಕಾದ ‘ಮಾದರಿ ಜೈಲು ಕೈಪಿಡಿ–2016’ ರಾಜ್ಯದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ ಎಂಬ ಅಂಶ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವೇದ್ಯವಾಗಿದೆ.

ಕೈದಿಗಳ ಅಸಹಜ ಸಾವಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಈ ಪೀಠಕ್ಕೆ ಸಲ್ಲಿಸಲಾದ ಪ್ರಮಾಣ ಪತ್ರದಲ್ಲಿ ಈ ಅಂಶಗಳು ಕಂಡು ಬಂದಿವೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್ ಹಾಗೂ ದೀಪಕ್‌ ಗುಪ್ತ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ 2017ರ ಸೆಪ್ಟೆಂಬರ್ 15ರಂದು ನೀಡಿರುವ ತೀರ್ಪಿನ ಅನುಸಾರ ಬಯಲು ಹಾಗೂ ಅರೆಬಯಲು ಬಂದೀಖಾನೆ (ದೆಹಲಿಯಲ್ಲಿ ಉತ್ತಮ ಯಶಸ್ಸು ಕಂಡಿದೆ) ಪ್ರಯೋಗಗಳೂ ಸೇರಿದಂತೆ ಹಲವು ಸುಧಾರಣಾ ನೀತಿಗಳು ‍ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ.

ಸುಪ್ರೀಂ ಕೋರ್ಟ್‌ ತೀರ್ಪಿನ ಮುಖ್ಯಾಂಶಗಳು: ‘ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ತರಬೇತಿ, ಕೈದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕ್ಷರರನ್ನಾಗಿಸುವುದು, ಬಯಲು ಬಂದೀಖಾನೆಗಳ ಪ್ರಯೋಗ (ಹಿಮಾಚಲ ಪ್ರದೇಶದಲ್ಲಿ ಇದು ಯಶಸ್ಸು ಕಂಡಿದೆ), ಕೈದಿಗಳ ಆತ್ಮಹತ್ಯೆ ತಡೆ ದಿಸೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರೂಪಿಸಿರುವ ಸಲಹೆ, ಪರಿಹಾರ, ತಡೆ ಹಾಗೂ ಇಂತಹ ಘಟನೆಗಳನ್ನು ಕಡಿಮೆಗೊಳಿಸುವ ಸಂಗತಿ, ದಟ್ಟಣೆ ಕಡಿಮೆ ಮಾಡಬೇಕು, ಅವರ ಆರೋಗ್ಯ ವೃದ್ಧಿಸಬೇಕು ಎಂಬ ಬಗ್ಗೆ ಎಲ್ಲ ರಾಜ್ಯ ಸರ್ಕಾರಗಳೂ ಹೆಚ್ಚಿನ ನಿಗಾ ವಹಿಸಬೇಕು’ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಮಾದರಿ ಜೈಲು ಕೈಪಿಡಿ: ಇದರ ಅನುಸಾರ ‘ಮನುಷ್ಯರ ಘನತೆ, ಸಂವಹನದ ಹಕ್ಕು, ಕನಿಷ್ಠ ಮೂಲಸೌಕರ್ಯ ಪಡೆಯುವುದು, ಕಾನೂನು ಸಲಹೆ ಪಡೆಯಲು ಅವಕಾಶ, ಜೈಲು ಶಿಕ್ಷೆ ಏಕಪಕ್ಷೀಯ ನಿರ್ಧಾರವಾಗದಂತೆ ನೋಡಿಕೊಳ್ಳುವುದು, ಜೈಲಿನಲ್ಲಿ ಅರ್ಥಪೂರ್ಣ ಮತ್ತು ಲಾಭದಾಯಕ ಉದ್ಯೋಗ ಹೊಂದುವುದು ಹಾಗೂ ನಿಗದಿತ ಸಮಯಕ್ಕೆ ಸರಿಯಾಗಿ ಬಿಡುಗಡೆ ಹೊಂದುವ ಅಂಶ’ಗಳಿಗೆ ಹೆಚ್ಚಿನ ಒತ್ತು ನೀಡಬೇಕು.

‘ಈ ಅಂಶಗಳನ್ನು ಕೈದಿಗಳಿಗೆ ಅರ್ಥವಾಗುವ ಭಾಷೆಗಳಲ್ಲಿ ಮುದ್ರಿಸಿ ನೀಡುವುದು, ಅನಕ್ಷರಸ್ಥರಿಗೆ ಓದಿ ತಿಳಿಯಪಡಿಸಬೇಕು. ಈ ದಿಸೆಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬೇಕು. ಜೈಲುಗಳಿಗೆ ಭೇಟಿ ನೀಡುವ ಮಂಡಳಿಯಲ್ಲಿ ಸಮಾಜದ ಪ್ರಮುಖರೂ ಭಾಗಿಯಾಗಬೇಕು. ಇದಕ್ಕಾಗಿ ಸರ್ಕಾರ ಸೂಕ್ತ ಮಂಡಳಿ ರಚನೆಗೆ ಮುಂದಾಗಬೇಕು’ ಎಂಬ ಅಂಶಗಳೂ ಕೈಪಿಡಿಯಲ್ಲಿ ಅಡಕವಾಗಿವೆ.

ರಾಜ್ಯದ ಪ್ರಮಾಣ ಪತ್ರ: ಸರ್ಕಾರ ಕಳೆದ ತಿಂಗಳ 31ರಂದು ಸಲ್ಲಿಸಿದ ಪ್ರಮಾಣ ಪತ್ರದಲ್ಲಿ, ‘ರಾಜ್ಯದ ಜೈಲುಗಳಲ್ಲಿ 2012ರಿಂದ 2017ರ ಅಕ್ಟೋಬರ್ 31ರ ವರೆಗಿನ ಅವಧಿಯಲ್ಲಿ ಒಟ್ಟು 48 ಕೈದಿಗಳು ಅಸಹಜ ಸಾವನ್ನಪ್ಪಿದ್ದಾರೆ’ ಎಂದು ತಿಳಿಸಲಾಗಿದೆ.

‘ಈ ಪೈಕಿ 26 ಪ್ರಕರಣಗಳನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ನಿರ್ದೇಶನದ ಅನುಸಾರ ಇತ್ಯರ್ಥಪಡಿಸಲಾಗಿದೆ. ಇನ್ನೂ 21 ಪ್ರಕರಣ ಬಾಕಿ ಇವೆ. ಒಂದು ಪ್ರಕರಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶದಂತೆ ಮಂಜಪ್ಪ ಎಂಬ ಮೃತ ಕೈದಿಯ ಪತ್ನಿಗೆ ₹ 5 ಲಕ್ಷ ಪರಿಹಾರ ನೀಡಲಾಗಿದೆ’ ಎಂದೂ ಹೇಳಿದೆ.

‘ಬಹುತೇಕ ಸಂದರ್ಭಗಳಲ್ಲಿ ಕೈದಿಗಳು ಪರಸ್ಪರ ಹೊಡೆದಾಟ ಅಥವಾ ಆತ್ಮಹತ್ಯೆಯಿಂದ ಸಾವನ್ನಪ್ಪುವುದೇ ಜಾಸ್ತಿ. ಇಂತಹ ಅಸಹಜ ಸಾವಿನ ಪ್ರಕರಣಗಳನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್‌ ಅವರು ಅಪರಾಧಿಕ ಪ್ರಕ್ರಿಯಾ ಸಂಹಿತೆಯ ಕಲಂ 176 (1–ಎ) ಅನುಸಾರ ವಿಚಾರಣೆ ಕಡ್ಡಾಯ ವಿಚಾರಣೆ ನಡೆಸಲಾಗುತ್ತಿದೆ. ಮಾನವ ಹಕ್ಕುಗಳ ಆಯೋಗಕ್ಕೆ ಶಿಫಾರಸು ಮಾಡಲಾಗುತ್ತದೆ’ ಎಂದು ವಿವರಿಸಲಾಗಿದೆ.

ಸುಧಾರಣಾ ನೀತಿ: ‘ಭಾರತದಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡುವ ಉದ್ದೇಶ ಪ್ರತೀಕಾರ ತೀರಿಸಿಕೊಳ್ಳುವ ಸಿದ್ಧಾಂತದ ಅಡಿಯಲ್ಲಿ ರೂಪಿತವಾಗಿಲ್ಲ. ಬದಲಿಗೆ ನಮ್ಮದು, ಸುಧಾರಣಾ ನೀತಿ’ ಎನ್ನುತ್ತಾರೆ ಹೈಕೋರ್ಟ್‌ ವಕೀಲ ಎಂ.ಎಸ್.ಶ್ಯಾಮಸುಂದರ್.

‘ಕೈದಿಗಳಿಗೆ ಜೈಲಿನಲ್ಲಿ ಆತ್ಮಾವಲೋಕನ ಆಗಬೇಕು. ಅಂತಹ ವಾತಾವರಣ ಇರಬೇಕು. ಇಲ್ಲದೇ ಹೋದರೆ ಆತ ಅಥವಾ ಅವಳು ಮಾನಸಿಕ ರೋಗಿಯಾಗುತ್ತಾರೆ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

‘ಶಿಕ್ಷೆಯಾಗಿ ಹೊರಬಂದವರನ್ನು ಸಮಾಜ ಕೆಟ್ಟದಾಗಿ ನೋಡುತ್ತದೆ. ಅಂತಹವರಿಗೆ ಸ್ವಯಂ ಉದ್ಯೋಗಕ್ಕೆ ಹಾಗೂ ಸರ್ಕಾರಿ ಕೆಲಸ ನೀಡುವಲ್ಲಿ ಮೀಸಲಾತಿ ಕಲ್ಪಿಸಬೇಕು’ ಎಂದು ವಿವರಿಸುತ್ತಾರೆ.

ಶೋಷಣೆ ನಿಲ್ಲಬೇಕು: ‘ಕಾರ್ಯಾಂಗ, ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಧಾರಣೆಯಾದರೆ ಕೈದಿಗಳ ಪರಿಣಾಮಕಾರಿ ಸುಧಾರಣೆ ಆಗುತ್ತದೆ’ ಎನ್ನುತ್ತಾರೆ ವಕೀಲ ಕೆ.ಬಿ.ಕೆ.ಸ್ವಾಮಿ.

‘ಜೈಲುಗಳಲ್ಲಿ ಕೈದಿಗಳ ಶೋಷಣೆ ಆಗುತ್ತಿದೆ. ಬಿಳಿ ಕಾಲರ್‌ ಕೈದಿಗಳಿಗೆ ಸಿಗುವ ಸೌಲಭ್ಯ ಬಡವನಿಗೂ ಸಿಗಬೇಕು. ಆಗ ಮಾದರಿ ಕೈಪಿಡಿ ಅನುಷ್ಠಾನಗೊಳಿಸಲು ಸಾಧ್ಯ’ ಎಂಬುದು ಸ್ವಾಮಿ ಅವರ ಅಭಿಪ್ರಾಯ.

**

‘ವಿಡಿಯೊ ಕಾನ್ಫರೆನ್ಸ್‌ ಸೌಲಭ್ಯ ಕಲ್ಪಿಸಿ’

‘ಕೈದಿಗಳು ತಮ್ಮ ಬಂಧು ಬಳಗದ ಜೊತೆ ಜೈಲಿನಿಂದ ಮಾತನಾಡಲು ಆಗಾಗ್ಗೆ ಫೋನು, ವಿಡಿಯೊ ಕಾನ್ಫರೆನ್ಸ್‌ ಸಂಪರ್ಕ ಕಲ್ಪಿಸಿ’ ಎಂಬ ಅಂಶವು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಆದ್ಯತೆ ಪಡೆದಿದೆ.

‘ಕುಟುಂಬದ ಸದಸ್ಯರ ಜೊತೆ ಬೆರೆಯುವ ಹಾಗೂ ಅವರ ವಕೀಲರ ಜೊತೆ ಕಾನೂನು ಸಲಹೆ ಪಡೆಯುವ ಅವಕಾಶದ ಅವಧಿಗಳನ್ನು ಹೆಚ್ಚಿಸಬೇಕು. ಇದರಿಂದ ಅವರಲ್ಲಿ ಮನೆ ಮಾಡಿರುವ ಏಕತಾನತೆ ಕಡಿಮೆಯಾಗುತ್ತದೆ ಮತ್ತು ಆತ್ಮಹತ್ಯೆ ಪ್ರಮಾಣಗಳೂ ಕಡಿಮೆಯಾಗುತ್ತವೆ’ ಎಂಬುದು ತೀರ್ಪಿನ ಪ್ರಮುಖಾಂಶ.

**

ಜೈಲುಗಳಲ್ಲಿ ದುಡ್ಡೇ ದೊಡ್ಡಪ್ಪ..!

‘ನಮ್ಮ ಜೈಲುಗಳಲ್ಲಿ ಯಾರೂ ತಡೆಯಲಾಗದಷ್ಟು ಭ್ರಷ್ಟಾಚಾರ ಇದೆ’ ಎಂಬುದು ವಕೀಲ ಹಸ್ಮತ್‌ ಪಾಷಾ ಅವರ ಆರೋಪ.

‘ಇಲ್ಲಿ ಬಡವ–ಶ್ರೀಮಂತ ಎಂಬ ಭೇದಭಾವ ಹೆಚ್ಚಿದೆ. ಇದಕ್ಕೆಲ್ಲಾ ಕಾರಣ ಜೈಲು ಅಧಿಕಾರಿಗಳು. ದೋಚುವುದೇ ಇವರ ಗುಣ. ಭ್ರಷ್ಟಚಾರ ಇವರಿಗೆ ದೊಡ್ಡ ವರಮಾನವಾಗಿದೆ’ ಎಂದು ಅವರು ಹೇಳುತ್ತಾರೆ.

‘ಕೈದಿಗಳ ಸುಧಾರಣೆಗೆ 1987–1988ರಲ್ಲಿಯೇ ನಾನು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಹಾಕಿದ್ದೆ. ಕೈದಿಗಳಿಗೆ ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ಕೊಡಬೇಕು ಎಂಬ ನನ್ನ ಮನವಿ ಮಾನ್ಯ ಮಾಡಿದ್ದ ನ್ಯಾಯಪೀಠ ಈ ಸಂಬಂಧ ಆದೇಶವನ್ನೂ ನೀಡಿತ್ತು. ಆದರೆ, ಇಲ್ಲೀತನಕ ಅದರ ಆಶಯ ಈಡೇರಿಲ್ಲ’ ಎಂದು ಅವರು ವಿಷಾದಿಸುತ್ತಾರೆ.

‘ಕೈದಿಗಳಿಗೆ ಊಟವನ್ನು ತೂಕ ಮಾಡಿ ಕೊಡುವುದು ಅಮಾನವೀಯ. ಇದರಲ್ಲೂ ಅಧಿಕಾರಿಗಳೇ ಅರ್ಧ ಮುಕ್ಕಾಲು ಪಾಲು ತಿನ್ನುತ್ತಾರೆ’ ಎಂದು ದೂರುವ ಅವರು, ‘ಇಲ್ಲಿನ ಭ್ರಷ್ಟ ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯೂ 
ಕಡಿಮೆ ಎನ್ನಿಸುವಂತಹ ಘೋರ ಸನ್ನಿವೇಶ’ ಇದೆ ಎಂದು ವ್ಯಥೆ ಹೊರಹಾಕುತ್ತಾರೆ.

**

ಜೈಲುಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಅಕ್ರಮಗಳಿಗೆ ತಡೆ ಹಾಕಬೇಕು.

-ಹಷ್ಮತ್‌ ಪಾಷ, ಹೈಕೋರ್ಟ್‌ ವಕೀಲ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !