ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮರಳು ದಂಧೆ ಕರಾಳ

Last Updated 3 ನವೆಂಬರ್ 2018, 20:05 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಬೆಳೆದು ನಿಂತಿರುವ ಮರಳು ಪೂರೈಕೆ ಈಗ ದಂಧೆಯ ಸ್ವರೂಪ ದಾಟಿ ಮಾಫಿಯಾ ಆಗಿ ಬದಲಾಗಿದೆ. ಮರಳು ಗಣಿಗಾರಿಕೆ ಮತ್ತು ಪೂರೈಕೆ ಜಾಲದಲ್ಲಿ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಕೈ ಬದಲಾಗು
ತ್ತಿದೆ. ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದವರೆಗಿನ ಆಡಳಿತ ವ್ಯವಸ್ಥೆಯನ್ನೇ ತನ್ನ ತಾಳಕ್ಕೆ ತಕ್ಕಂತೆ ಕುಣಿಸುವಷ್ಟು ಬಲಾಢ್ಯವಾಗಿ ಈ ಮಾಫಿಯಾ ಬೆಳೆದುನಿಂತಿದೆ.

ಮರಳು ಲಭ್ಯವಿರುವ ಕಾವೇರಿ, ಹೇಮಾವತಿ, ತುಂಗಭದ್ರಾ, ಕೃಷ್ಣಾ, ಭೀಮಾ, ಘಟಪ್ರಭಾ, ವೇದಾವತಿ ಮತ್ತಿತರ ದೊಡ್ಡ ನದಿಗಳ ಪಾತ್ರಗಳಲ್ಲಿ ಮರಳು ಮಾಫಿಯಾ ಯಾರ ಹಿಡಿತಕ್ಕೂ ಸಿಗದಷ್ಟು ಬೃಹದಾಕಾರವಾಗಿ ಬೆಳೆದು ನಿಂತಿದೆ. ಮಲೆನಾಡು ಮತ್ತು ಕರಾವಳಿಗಳ ಚಿತ್ರಣವೂ ಭಿನ್ನವಾಗಿ ಉಳಿದಿಲ್ಲ.

ನದಿ ಮೂಲಗಳನ್ನೇ ಬರಿದು ಮಾಡುವಷ್ಟು ಬಿರುಸಾಗಿ ಮರಳು ಕಳ್ಳಸಾಗಣೆ ನಡೆಯುತ್ತಿದೆ. ನಿಯಮ, ಷರತ್ತುಗಳನ್ನು ಮೀರಿ ನದಿಗಳ ಒಡಲು ಬಗೆಯಲಾಗುತ್ತಿದೆ. ಕಾನೂನು, ಮರಳು ನೀತಿ ಎಲ್ಲವನ್ನೂ ತನ್ನ ಪರವಾಗಿ ಬಳಸಿಕೊಳ್ಳುತ್ತಿರುವ ಈ ಮಾಫಿಯಾ, ಕಾಳಸಂತೆಯಲ್ಲಿ ದರ ಹೆಚ್ಚಿಸಿ ‘ಸಂಪಾದನೆ’ಯನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದೆ. ಜಲಮೂಲಗಳ ಒಡಲು ಬಗೆದಷ್ಟೇ ಸಲೀಸಾಗಿ ರಾಜ್ಯದ ಜನರನ್ನೂ ಶೋಷಿಸುತ್ತಿದೆ.

ದಕ್ಷಿಣ ಕನ್ನಡದಿಂದ ಬೆಳಗಾವಿಯವರೆಗೆ 650ಕ್ಕೂ ಹೆಚ್ಚು ನದಿ, ನಾಲೆಗಳಲ್ಲಿ ಮರಳು ಲಭ್ಯವಿದೆ. ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರುವ ನೂರಾರು ಹಳ್ಳ, ಕೊಳ್ಳಗಳಲ್ಲಿ ಮರಳು ಸಿಗುತ್ತಿದೆ. ಈ ಎಲ್ಲವೂ ಮಾಫಿಯಾದಲ್ಲಿ ಸಕ್ರಿಯವಾಗಿರುವ ರಾಜಕಾರಣಿಗಳು, ಸ್ವಘೋಷಿತ ನಾಯಕರು, ಉದ್ಯಮಿಗಳ ಪಾಳೆಪಟ್ಟುಗಳಂತಾಗಿವೆ. ಬಹುತೇಕ ಕಡೆ ಎಲ್ಲ ರಾಜಕೀಯ ಪಕ್ಷಗಳ ಸ್ಥಳೀಯ ನಾಯಕರು ಮರಳು ನಿಕ್ಷೇಪಗಳನ್ನು ಸಮಾನವಾಗಿ ‘ಹಿಸ್ಸೆ’ ಮಾಡಿಕೊಂಡು ಜೊತೆ ಜೊತೆಯಾಗಿಯೇ ವಹಿವಾಟು ನಡೆಸುತ್ತಿದ್ದಾರೆ. ತಮ್ಮ ತಮ್ಮ ‘ಪಾಲು’ ಪಡೆಯುವುದಕ್ಕೆ ಸೀಮಿತವಾಗಿ ಅವರು ಬಡಿದಾಡುತ್ತಿದ್ದಾರೆ.

ಮರಳಿಗೆ ಬೇಡಿಕೆ ಹೆಚ್ಚಿದಂತೆ ರಾಜಧಾನಿ ಸಹಿತ ನಗರಗಳ ಸಮೀಪದಲ್ಲೇ ಮಣ್ಣನ್ನು ಸೋಸಿ (ಫಿಲ್ಟರ್‌) ಮರಳು ಸಂಗ್ರಹಿಸಿ ಮಾರುವ ಫಿಲ್ಟರ್‌ ಮರಳು ದಂಧೆಯೂ ವ್ಯಾಪಕವಾಗಿದೆ. ಇತ್ತೀಚೆಗೆ ಸಿಮೆಂಟ್‌ ತ್ಯಾಜ್ಯವನ್ನು ಮಿಕ್ಸ್‌ ಮಾಡಿ ಮಾರುವ ಜಾಲವೂ ತಲೆಎತ್ತಿದೆ. ಮರಳಿನ ಕೊರತೆ ನೀಗಲು ಕಲ್ಲು ಬಂಡೆ ಪುಡಿಮಾಡಿ ಕೃತಕ ಮರಳು (ಎಂ– ಸ್ಯಾಂಡ್‌) ಉತ್ಪಾದಿಸಿ ಪೂರೈಸುವ ಉದ್ದಿಮೆ ಆರಂಭವಾಯಿತು. ಆದರೆ ಬಹುತೇಕ ಎಂ ಸ್ಯಾಂಡ್‌ ಘಟಕಗಳೂ ರಾಜಕಾರಣಿಗಳು, ಮರಳು ಮಾಫಿಯಾ ’ಕಿಂಗ್‌ ಪಿನ್‌’ಗಳ ಕೈವಶವಾಗಿರುವುದರಿಂದ ಗ್ರಾಹಕರ ಬವಣೆ ನೀಗಲೇ ಇಲ್ಲ. ವಿದೇಶದಿಂದ ಮರಳು ಆಮದು ಮಾಡಿಕೊಂಡು ಮಾರಾಟ ಮಾಡುವ ಸರಕಾರದ ಯತ್ನ ಜಾರಿಯಲ್ಲಿದ್ದರೂ ಯಶಸ್ಸು ಕಂಡಿಲ್ಲ.

ಪ್ರತಿವರ್ಷ 1.8 ಕೋಟಿ ಟನ್‌ನಷ್ಟು ಸಿಮೆಂಟ್ ರಾಜ್ಯದಲ್ಲಿ ಬಳಕೆಯಾಗುತ್ತಿದೆ. 1:4 ಮತ್ತು 1:6ರ ಅನುಪಾತದಲ್ಲಿ ಸಿಮೆಂಟ್‌ ಮತ್ತು ಮರಳು ಬಳಕೆ ಮಾಡಲಾಗುತ್ತದೆ. 1:4ರ ಅನುಪಾತದಲ್ಲಿ ಲೆಕ್ಕ ಹಾಕಿದರೂ ರಾಜ್ಯದಲ್ಲಿ 7 ಕೋಟಿ ಟನ್‌ ಮರಳಿಗೆ ಬೇಡಿಕೆ ಇದೆ. ಆದರೆ, ಮರಳು ಮತ್ತು ಉತ್ಪಾದಿತ ಮರಳು ಸೇರಿದಂತೆ 3 ಕೋಟಿ ಟನ್‌ನಷ್ಟು ಮಾತ್ರ ಅಧಿಕೃತವಾಗಿ ಪೂರೈಕೆಯಾಗುತ್ತಿದೆ. ಉಳಿದ 4 ಕೋಟಿ ಟನ್‌ನಷ್ಟು ಮರಳು ನದಿ, ಹಳ್ಳ, ಕೊಳ್ಳ, ಕೆರೆಗಳ ಅಂಗಳದಿಂದ ದಾಟಿಕೊಂಡು ‘ಮಾಮೂಲಿ’ಯ ನೆರಳಿನಲ್ಲಿ ಸರಾಗ
ವಾಗಿ ಗ್ರಾಹಕನ ಮನೆ ಬಾಗಿಲಿಗೆ ಬಂದು ಬೀಳುತ್ತಿದೆ.

ರಾಜ್ಯದಲ್ಲಿ ಮರಳು ಮಾಫಿಯಾದೊಳಗೆ ₹ 30,000 ಕೋಟಿಗೂ ಹೆಚ್ಚು ಮೊತ್ತದ ವಹಿವಾಟು ನಡೆಯುತ್ತಿದೆ. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ರಾಜಧನ, ಸುಂಕದ ಹೆಸರಿನಲ್ಲಿ ರಾಜ್ಯ ಸರ್ಕಾರದ ಬೊಕ್ಕಸ ಸೇರುತ್ತಿರುವುದು ಕೇವಲ ₹ 110 ಕೋಟಿ. ಶೇ 75ರಷ್ಟು ವಹಿವಾಟು ಕಳ್ಳ ಮಾರ್ಗಗಳ ಮೂಲಕವೇ ನಡೆಯುತ್ತಿದೆ. ಇದರಲ್ಲಿ ಬಂದ ಲಾಭವು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಮಾಫಿಯಾದ ಕಾಲಾಳುಗಳ ನಡುವೆ ಹಂಚಿಕೆಯಾಗುತ್ತಿದೆ.

ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟದ ಮಾಫಿಯಾ ತಂಟೆಗೆ ಅಧಿಕಾರಶಾಹಿ ಹೋಗುವುದು ವಿರಳ. ಮೂಗುದಾರ ಹಾಕಲು ಬಂದ ಅಧಿಕಾರಿಗಳನ್ನೇ ಬಗ್ಗಿಸಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವ ಅಥವಾ ಎತ್ತಂಗಡಿ ಮಾಡಿಸುವ ತಾಕತ್ತನ್ನು ಈ ಮಾಫಿಯಾ ಹೊಂದಿದೆ. ಮರಳು ಹೇರಳವಾಗಿರುವ ಜಿಲ್ಲೆಗಳಿಗೆ ಬರುವ ಖಡಕ್‌ ಡಿಸಿ, ಎಸ್‌ಪಿಗಳು ಬಂದಷ್ಟೇ ವೇಗದಲ್ಲಿ ವರ್ಗವಾಗಿ ಹೋಗುವುದರ ಹಿಂದಿನ ಮರ್ಮವನ್ನು ಎಲ್ಲರೂ ಬಲ್ಲರು. ಅದಕ್ಕೆ ತದ್ವಿರುದ್ಧವಾಗಿ ಮರಳು ಹೇರಳವಾಗಿರುವ ಜಿಲ್ಲೆ, ತಾಲ್ಲೂಕುಗಳಿಗೆ ಪೈಪೋಟಿ ಮೇಲೆ ಬರುವವರೂ ಇದ್ದಾರೆ.

ಮರಳು ಗಣಿಗಾರಿಕೆಯಲ್ಲಿನ ಅಕ್ರಮ ತಡೆಯಲು ಯತ್ನಿಸಿದ ಅಧಿಕಾರಿಗಳ ಮೇಲೆ ಹಲ್ಲೆ, ಕೊಲೆಯತ್ನದ ಮೂಲಕವೂ ಮಣಿಸಲು ಯತ್ನಿಸಿದ ಘಟನೆಗಳೂ ಇವೆ. ಮರಳು ಮಾಫಿಯಾದ ಜಾಡು ಶೋಧಿಸಲು ಯತ್ನಿಸಿದ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರ ಮೇಲೂ ದಾಳಿ ನಡೆದಿವೆ. ಆದರೆ, ಎಲ್ಲವಕ್ಕೂ ‘ಆಡಳಿತ’ದ ಬೆಂಬಲ ಇರುವುದರಿಂದ ‘ಮಾಫಿಯಾ’ ಹೊಸದೊಂದು ‘ರಿಪಬ್ಲಿಕ್‌’ ಸೃಷ್ಟಿಸಿ
ಕೊಳ್ಳುವ ಹಾದಿಯಲ್ಲಿ ಸಾಗುತ್ತಿದೆ.

ಸಚಿವರು ಏನಂತಾರೆ?

ಮರಳು ಮಾಫಿಯಾದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಿದ್ದೇವೆ. ಜನರಿಗೆ ಕಡಿಮೆ ದರದಲ್ಲಿ ಹಾಗೂ ಸುಲಭದಲ್ಲಿ ಮರಳು ಸಿಗುವಂತೆ ಮಾಡಲು ಮರಳು ನೀತಿ ರೂಪಿಸುತ್ತಿದ್ದೇವೆ. ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.

ರಾಜಶೇಖರ ಪಾಟೀಲ
ಗಣಿ ಹಾಗೂ ಭೂವಿಜ್ಞಾನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT