ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಕೆಲಹೊತ್ತು ಮತಯಂತ್ರ ಸ್ಥಗಿತ

120 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ
Last Updated 13 ಮೇ 2018, 10:47 IST
ಅಕ್ಷರ ಗಾತ್ರ

ಮುಂಡರಗಿ: ಮುಂಡರಗಿ ಕ್ಷೇತ್ರದ 120 ಮತಗಟ್ಟೆಗಳಲ್ಲಿ ಶನಿವಾರ ಶಾಂತಿಯುತವಾಗಿ ಮತದಾನ ನಡೆಯಿತು. ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆ ಸಂಖ್ಯೆ 42ರಲ್ಲಿ ಮತಗಟ್ಟೆ ಸಿಬ್ಬಂದಿ ಶಂಶಾದ್ ಕದಾಂಪೂರ ಎಂಬುವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರಿಗೆ ಸೂಚಿಸುತ್ತಿದ್ದಾರೆ. ಅವರನ್ನು ತಕ್ಷಣವೇ ಬದಲಾಯಿಸಬೇಕು ಎಂದು ಬಿಜೆಪಿ ಮುಖಂಡ ಕೆ.ವಿ.ಹಂಚಿನಾಳ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿ ಎಂದು ಹೇಳುತ್ತಿದ್ದ ಶಂಶಾದ್ ಅವರನ್ನು ಕೂಡಲೇ ಬದಲಿಸದಿದ್ದರೆ, ಮತಗಟ್ಟೆಯ ಮುಂದೆ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಬಂದ ಚುನಾವಣಾಧಿಕಾರಿ ಎಂ.ಎಸ್.ಕೊರ್ಲಹಳ್ಳಿ ಮತಗಟ್ಟೆಯ ಸಿಬ್ಬಂದಿ ಶಂಶಾದ್ ಕದಾಂಪೂರ ಅವರ ಸ್ಥಾನಕ್ಕೆ ಬೇರೊಬ್ಬರನ್ನು ನಿಯೋಜಿಸಿದರು.

ಬಳಿಕ ಬಿಜೆಪಿ ಕಾರ್ಯಕರ್ತರು ಮತಗಟ್ಟೆಯಿಂದ ಹೊರ ನಡೆದರು. ಪಟ್ಟಣದ ಮತಗಟ್ಟೆ ಸಂಖ್ಯೆ 42 ಹಾಗೂ 44ರಲ್ಲಿ ಮತಯಂತ್ರಗಳು ಕೆಲವು ನಿಮಿಷಗಳ ಕಾಲ ಕೈಕೊಟ್ಟವು. ತಕ್ಷಣ ಮತಗಟ್ಟೆಗೆ ಆಗಮಿಸಿದ ಚುನಾವಣಾ ಸಿಬ್ಬಂದಿ ಮತಯಂತ್ರಗಳನ್ನು ದುರಸ್ತಿಗೊಳಿಸಿದರು.

ಗ್ರಾಮೀಣ ಭಾಗದಲ್ಲಿ ಬೆಳಿಗ್ಗೆ 8ರಿಂದ ಚುರುಕುಗೊಂಡ ಮತದಾನವು ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ಮತ್ತೆ ಸಂಜೆ 4ಗಂಟೆಯಿಂದ ಮತದಾನ ಚುರುಕುಗೊಂಡಿತು. ಇದೇ ಸಮಯಕ್ಕೆ ಮುಂಡರಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಭಾರಿ ಮಳೆ ಸುರಿಯಿತು.

ಪಟ್ಟಣದ ಗದಗ ರಸ್ತೆಯ ಬಳಿ ಹಲವು ಮರಗಳು ನೆಕ್ಕುರುಳಿವೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಚಿಕ್ಕವಡ್ಡಟ್ಟಿಗೆ ಗ್ರಾಮ ಪಂಚಾಯ್ತಿ ಸ್ಥಾನಮಾನ ನೀಡಿಲ್ಲ ಎಂದು ಕಳೆದ ನಾಲ್ಕು ವರ್ಷಗಳಿಂದ ಪ್ರತಿಯೊಂದು ಚುನಾವಣೆಗಳನ್ನು ಭಹಿಸ್ಕರಿಸುತ್ತಿದ್ದ ಗ್ರಾಮಸ್ಥರು, ಈ ಬಾರಿ ಚುನಾವಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT