ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ದಾಳಿಗೆ ಕಕ್ಕಾಬಿಕ್ಕಿಯಾದ ಚಂದನವನ

ಇನ್ನಾದರೂ ಕನ್ನಡ ಚಿತ್ರರಂಗ ಕಾರ್ಪೊರೇಟ್‌ ಸ್ವರೂಪ ಪಡೆದುಕೊಳ್ಳಬಹುದೆ?
Last Updated 5 ಜನವರಿ 2019, 4:47 IST
ಅಕ್ಷರ ಗಾತ್ರ

ಬೆಂಗಳೂರು: ಕೆಜಿಎಫ್‌ ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿ ತೇಲುತ್ತಿದ್ದ ಕನ್ನಡ ಚಿತ್ರರಂಗ, ವರ್ಷದ ಆರಂಭದಲ್ಲೇ ಕನ್ನಡ ಚಿತ್ರರಂಗದ ಪ್ರಮುಖ ನಟ–ನಿರ್ಮಾಪಕರ ಮೇಲೆ ನಡೆದ ಆದಾಯ ತೆರಿಗೆ ದಾಳಿಯಿಂದ ತಬ್ಬಿಬ್ಬಾಗಿದೆ. ದೊಡ್ಡ ಬಜೆಟ್‌ನ ಚಿತ್ರಗಳು ಕನ್ನಡ ಚಿತ್ರರಂಗದ ಖ್ಯಾತಿಯನ್ನು ಉತ್ತುಂಗಕ್ಕೇರಿಸುತ್ತಿವೆ ಎನ್ನುವ ಸಂತಸದ ಬಲೂನಿಗೆ ಸೂಜಿ ಚುಚ್ಚಿದಂತಾಗಿದೆ. ಐಟಿ ದಾಳಿ ಕನ್ನಡ ಚಿತ್ರರಂಗದ ಮೇಲೆ ಯಾವ ಪರಿಣಾಮ ಬೀರಬಹುದು ಎನ್ನುವ ಚರ್ಚೆ ಶುರುವಾಗಿದೆ.

ಯಶ್‌ ಅಭಿನಯದ ‘ಕೆಜಿಎಫ್‌’ ಸಿನಿಮಾ, ಕನ್ನಡ ಚಿತ್ರರಂಗದಲ್ಲಿ ಹೂಡಿಕೆ–ಗಳಿಕೆಯ ಮಟ್ಟಿಗೆ ದೊಡ್ಡ ದಾಖಲೆ ನಿರ್ಮಿಸಿದ ಚಿತ್ರ. ಸುಮಾರು 60 ಕೋಟಿ ರೂಪಾಯಿ ಹೂಡಿಕೆಯ ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆ ಕಂಡು, ಬಾಕ್ಸಾಫೀಸ್‌ನಲ್ಲಿ ಈಗಾಗಲೇ 150 ಕೋಟಿ ರೂಪಾಯಿಗೂ ಹೆಚ್ಚು ಬಾಚಿಕೊಂಡಿದೆ ಎನ್ನಲಾಗುತ್ತಿದೆ. ಈ ಯಶಸ್ಸನ್ನು ಚಿತ್ರೋದ್ಯಮ ದೊಡ್ಡ ಮಟ್ಟದಲ್ಲಿಯೇ ಆಚರಿಸಬೇಕು ಎನ್ನುವ ಕುರಿತು ಚರ್ಚೆಯೂ ನಡೆದಿತ್ತು. ಆದರೆ ಆದಾಯ ತೆರಿಗೆ ಅಧಿಕಾರಿಗಳ ದಾಳಿಯಿಂದ ಚಿತ್ರರಂಗವೀಗ ಕಕ್ಕಾಬಿಕ್ಕಿಯಾಗಿದೆ.

ಭಾರೀ ಹೂಡಿಕೆಯ ಚಿತ್ರಗಳನ್ನು ನಿರ್ಮಿಸುವ ಹುಮ್ಮಸ್ಸೊಂದು ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಕಾಣಿಸಿಕೊಂಡದ್ದು ಸುಳ್ಳಲ್ಲ. ಶಿವರಾಜ್‌ಕುಮಾರ್‌– ಸುದೀಪ್‌ ಅಭಿನಯದ ‘ದಿ ವಿಲನ್‌’, ಯಶ್‌ ಅಭಿನಯದ ‘ಕೆಜಿಎಫ್‌’ ಮತ್ತು ಈಗ ನಿರ್ಮಾಣ ಹಂತದಲ್ಲಿರುವ ದರ್ಶನ್‌ ಅಭಿನಯದ ‘ಕುರುಕ್ಷೇತ್ರ’ – ಈ ನಿಟ್ಟಿನಲ್ಲಿ ಮುಂಚೂಣಿಯ ಚಿತ್ರಗಳು. ‘ಕೆಜಿಎಫ್‌’ನ ಅಭೂತಪೂರ್ವ ಯಶಸ್ಸು ಇಂತಹ ಇನ್ನಷ್ಟು ಸಿನಿಮಾಗಳು ಸೆಟ್ಟೇರುವ ನಿರೀಕ್ಷೆಯನ್ನೂ ಹುಟ್ಟುಹಾಕಿತ್ತು. ಈಗ ತೆರಿಗೆ ದಾಳಿಯಿಂದ ಈ ಹಮ್ಮಸ್ಸು ಕುಗ್ಗುವುದಂತೂ ನಿಶ್ಚಿತ.

‘ಕನ್ನಡದ ನಿರ್ಮಾಪಕರ ಸಂಗತಿ ಹೇಗೋ ಗೊತ್ತಿಲ್ಲ; ಆದರೆ ನಟರು ತೆರಿಗೆ ತಪ್ಪಿಸಿರಲಿಕ್ಕಿಲ್ಲ’ ಎಂದೇ ಅಭಿಮಾನಿ ವರ್ಗ ನಂಬಿಕೊಂಡಿದೆ. ಆದರೆ ಆದಾಯ ತೆರಿಗೆ ಅಧಿಕಾರಿಗಳೂ ಸುಖಾಸುಮ್ಮನೆ ದಾಳಿ ಮಾಡುವವರಲ್ಲ. ಮೂಲಗಳ ಪ್ರಕಾರ, ಕೇವಲ ದೂರು–ಮಾಹಿತಿಯನ್ನು ಆಧರಿಸಿ ಈ ದಾಳಿ ನಡೆದಿಲ್ಲ. ತೆರಿಗೆ ದಾಳಿಗೆ ಒಳಗಾಗಿರುವ ನಟ–ನಿರ್ಮಾಪಕರ ಚಲನವಲನಗಳನ್ನು ಕಳೆದ ಒಂದು ತಿಂಗಳಿಂದ ಐಟಿ ಅಧಿಕಾರಿಗಳು ಗಮನಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ವಾಣಿಜ್ಯ ತೆರಿಗೆಯನ್ನು ತಪ್ಪಿಸುವ ಚಾಳಿ ಹಿಂದಿನಿಂದಲೂ ಇತ್ತು. ಹಲವು ಥಿಯೇಟರ್‌ಗಳ ಮೇಲೆ ನಿಯಂತ್ರಣ ಹೊಂದಿರುವ ನಿರ್ಮಾಪಕರು, ಪ್ರದರ್ಶಕರು ಟಿಕೆಟ್‌ ಗಳಿಕೆಯಲ್ಲಿ ಕಳ್ಳಲೆಕ್ಕ ತೋರಿಸುತ್ತಿದ್ದುದು ನಡೆದೇ ಇತ್ತು. ಆದರೆ ಜಿಎಸ್‌ಟಿ ಜಾರಿಗೆ ಬಂದ ಬಳಿಕ ಈ ಪ್ರವೃತ್ತಿ ಕಡಿಮೆ ಆಗಿದೆ. ಅದರಲ್ಲೂ ಇತ್ತೀಚೆಗೆ ಜಿಎಸ್‌ಟಿ ದರವನ್ನು ಇಳಿಸಿದ ಬಳಿಕ, ಹೀಗೆ ಕಳ್ಳತನ ಮಾಡುವುದರಿಂದ ಹೆಚ್ಚೇನೂ ಉಳಿಯುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ.

ಮಲ್ಟಿಪ್ಲೆಕ್ಸ್‌ಗಳು ಬಂದ ನಂತರ ಆನ್‌ಲೈನ್‌ ಬುಕಿಂಗ್‌ಗಳಿಂದಾಗಿ ನಗದು ವಹಿವಾಟು ಕಡಿಮೆಯಾಗಿದೆ. ಆದರೆ ಸಿಂಗಲ್‌ ಥಿಯೇಟರ್‌ಗಳಲ್ಲಿ ಕಲೆಕ್ಷನ್‌ನ ಅರ್ಧ ಭಾಗವನ್ನು ಮಾತ್ರ ತೋರಿಸಿ ತೆರಿಗೆ ಉಳಿಸುವ ಕಾಯಕ ಈಗಲೂ ನಡೆದಿದೆ. ಟಿಕೆಟ್‌ನಲ್ಲೇ ಜಿಎಸ್‌ಟಿ ಬಾಬ್ತು ಇರುವುದರಿಂದ ಆ ಹಣವೂ ಉಳಿತಾಯವಾಗುತ್ತದೆ.

ರಿಯಲ್‌ ಎಸ್ಟೇಟ್‌ ಮೂಲಗಳಿಂದ ಕನ್ನಡ ಚಿತ್ರಗಳಿಗೆ ಹೂಡಿಕೆ ನಡೆಯುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಎದ್ದು ಕಾಣುತ್ತಿದ್ದ ಅಂಶ. ಈ ವಹಿವಾಟಿನಲ್ಲಿ ಕಪ್ಪು ಹಣದ ಪಾತ್ರವೂ ಸಾಕಷ್ಟಿರುತ್ತದೆ. ಹಿಂದಿ ಮತ್ತಿತರ ಭಾಷೆಗಳ ನಿರ್ಮಾಪಕರು ವೃತ್ತಿಪರರಾಗಿ ಚಿತ್ರನಿರ್ಮಾಣ ನಡೆಸುತ್ತಿರುವುದಕ್ಕೆ ಉದಾಹರಣೆಗಳಿವೆ. ಅದು ಅಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ‘ನಿರ್ಮಾಪಕ ಮನಮೋಹನ ದೇಸಾಯಿಯವರು ಬೆಂಗಳೂರಿನಲ್ಲಿ ಕೂಲಿ ಚಿತ್ರದ ನಿರ್ಮಾಣ ಮಾಡಿದಾಗಲೇ ಅವರ ತಂಡದಲ್ಲಿ ಅಕೌಂಟೆಂಟ್‌, ಕ್ಯಾಷಿಯರ್‌ ಮುಂತಾದವರು ಇರುತ್ತಿದ್ದರು’ ಎಂದು ಹಿರಿಯ ನಿರ್ಮಾಪಕ ಕೆ.ಸಿ.ಎನ್‌. ಚಂದ್ರಶೇಖರ್‌ ನೆನಪಿಸಿಕೊಳ್ಳುತ್ತಾರೆ. ಕನ್ನಡ ನಿರ್ಮಾಪಕರಲ್ಲಿ ಅಂತಹ ವೃತ್ತಿಪರ ಗುಣಗಳು ಕಡಿಮೆಯೇ. ಇಲ್ಲಿ ನಿರ್ಮಾಪಕರ ಒನ್‌ಮ್ಯಾನ್‌ ಷೋಗಳೇ ಹೆಚ್ಚು. ಈ ದಾಳಿಯ ಬಳಿಕವಾದರೂ ನಿರ್ಮಾಪಕರು ಕಾರ್ಪೊರೇಟ್‌ ಶೈಲಿಯಲ್ಲಿ ಚಿತ್ರ ನಿರ್ಮಾಣವನ್ನು ಮುನ್ನಡೆಸಬಹುದೆ ಎನ್ನುವುದನ್ನು ಕಾದು ನೋಡಬೇಕು.

2018ರಲ್ಲಿ ಒಟ್ಟು ಅಂದಾಜು 250 ಕನ್ನಡ ಸಿನಿಮಾಗಳು ನಿರ್ಮಾಣವಾಗಿವೆ. ಇವುಗಳಲ್ಲಿ ಎದ್ದು ಕಾಣಿಸುವಂತಹ ದೊಡ್ಡ ಬಜೆಟ್‌ನ ಸಿನಿಮಾಗಳ ಸಂಖ್ಯೆ ಕಡಿಮೆಯೇ. ಯಶಸ್ವೀ ಚಿತ್ರಗಳ ಸಂಖ್ಯೆಯೂ ಬೆರಳೆಣಿಕೆಯನ್ನು ದಾಟುವುದಿಲ್ಲ. ನಷ್ಟವಾದರೂ ಇಷ್ಟೊಂದು ಸಿನಿಮಾಗಳ ನಿರ್ಮಾಣಕ್ಕೆ ಹಣ ಎಲ್ಲಿಂದ ಬರುತ್ತಿದೆ ಎನ್ನುವ ಸಂಶಯ ತೆರಿಗೆ ಅಧಿಕಾರಿಗಳಿಗೆ ಬಂದಿರುವುದು ಸಹಜವೇ.

ಉದ್ಯಮದ ಮೂಲದ ಪ್ರಕಾರ, ಕನ್ನಡದಲ್ಲಿ ಅತ್ಯಧಿಕ, ಸುಮಾರು ₹16 ಕೋಟಿ ಸಂಭಾವನೆ ಪಡೆಯುವ ನಟರೂ ಇದ್ದಾರೆ. ಆದರೆ ಸಂಭಾವನೆ, ಸಂಗೀತದ ಹಕ್ಕು, ಸೆಟಲೈಟ್ ಪ್ರಸಾರದ ಹಕ್ಕು ಮುಂತಾಗಿ ಎಲ್ಲ ಮೂಲಗಳಿಂದ ಈ ನಟರು ಹೆಚ್ಚೆಂದರೆ 7–8 ಕೋಟಿ ರೂಪಾಯಿಗಳ ಲೆಕ್ಕ ತೋರಿಸುತ್ತಾರೆ. ಸೆಟಲೈಟ್‌ ಹಕ್ಕುಗಳನ್ನು ಈಗ ಖರೀದಿ ಮಾಡಿದರೂ, ಪ್ರಸಾರ ತಡವಾಗಿ ಮಾಡಿದರೆ ಮುಂದಿನ ವರ್ಷಕ್ಕೂ ಆದಾಯದ ಲೆಕ್ಕವನ್ನು ಹಂಚಿಕೆ ಮಾಡಿ ತೋರಿಸಲು ಸಾಧ್ಯವಾಗುತ್ತದೆ. ಇಷ್ಟರ ಹೊರತಾಗಿಯೂ ಉಳಿದ ಗಳಿಕೆಯ ಲೆಕ್ಕವನ್ನು ನಟರು ತೋರಿಸುತ್ತಿಲ್ಲ ಎನ್ನುವ ಅನುಮಾನ ಐಟಿ ಅಧಿಕಾರಿಗಳದ್ದು.

ಆನ್‌ಲೈನ್‌ ಟಿಕೆಟಿಂಗ್‌ ವ್ಯವಸ್ಥೆ

ಕನ್ನಡ ಚಿತ್ರೋದ್ಯಮ ಹಿಂದಿ ಚಿತ್ರರಂಗದಂತೆ ಕಾರ್ಪೊರೇಟ್‌ ಸ್ವರೂಪ ಪಡೆದುಕೊಳ್ಳಬೇಕೆಂಬ ಸಲಹೆಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಕೆಲವು ವರ್ಷಗಳ ಹಿಂದೆ ಈ ನಿಟ್ಟಿನಲ್ಲಿ ನಡೆದ ಪ್ರಯತ್ನ ಬಳಿಕ ಸ್ಥಗಿತಗೊಂಡಿತು. ಅದಕ್ಕೆ ನಿರ್ಮಾಪಕರೇ ಕಾರಣ ಎನ್ನುವುದು ಬಹಿರಂಗ ಗುಟ್ಟು. ಐಡಿಬಿಐ ನೆರವಿನಿಂದ 8–10 ಕನ್ನಡ ಚಿತ್ರ ನಿರ್ಮಾಪಕರು ಸಾಲ ಪಡೆದು ಬಳಿಕ ಅದನ್ನು ಹಿಂತಿರುಗಿಸಲು ಸತಾಯಿಸಿದ್ದು, ಕೊನೆಗೆ ಐಡಿಬಿಐ ಕನ್ನಡ ಚಿತ್ರೋದ್ಯಮಕ್ಕೆ ಸಾಲ ನೀಡುವುದನ್ನೇ ನಿಲ್ಲಿಸಿತು. ಕೋಟಿಗಟ್ಟಲೆ ಸಂಭಾವನೆ ಪಡೆಯುವ ಹೀರೋಗಳೇ ಮುಂದಾಗಿ ಮಾರ್ಗದರ್ಶನ ಮಾಡಿದರೆ ನಮ್ಮಲ್ಲೂ ಉದ್ಯಮ ಕಾರ್ಪೊರೇಟ್‌ ಸ್ವರೂಪ ಪಡೆದುಕೊಳ್ಳುವುದು ಸುಲಭ.

ತೆರಿಗೆ ವಂಚನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲ ಥಿಯೇಟರ್‌ಗಳಲ್ಲೂ ಆನ್‌ಲೈನ್‌ ಟಿಕೆಟಿಂಗ್‌ ವ್ಯವಸ್ಥೆ ಮಾಡಬೇಕು ಎನ್ನುವ ಸಲಹೆಯನ್ನು ರಾಜ್ಯ ಸರ್ಕಾರವೂ ಇತ್ತೀಚೆಗೆ ಗಂಭೀರವಾಗಿ ಪರಿಗಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT