ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಕೃತಿಗಳು‌ ಪತ್ರಕರ್ತೆಯಾಗಿ ರೂಪಿಸಿದವು

ಸಂವಾದ ಕಾರ್ಯಕ್ರಮದಲ್ಲಿ ಬದುಕಿನ ಹಾದಿ ಮೆಲುಕು ಹಾಕಿದ ಸಂಧ್ಯಾ ಪೈ
Last Updated 23 ಫೆಬ್ರುವರಿ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಕಥೆ, ಕಾದಂಬರಿ, ಪುಸ್ತಕಗಳ ಓದು ನನ್ನನ್ನು ಪತ್ರಕರ್ತೆಯಾಗಿ ರೂಪಿಸಿತು’ ಎಂದು ಹಿರಿಯ ಪತ್ರಕರ್ತೆ ಡಾ. ಸಂಧ್ಯಾ ಎಸ್. ಪೈ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿದ ಹಾದಿಯನ್ನು ಮೆಲುಕು ಹಾಕಿದರು.

‘ಬಾಲ್ಯದ ದಿನಗಳನ್ನು ಚಿಕ್ಕಮಗಳೂರಿನಲ್ಲಿ ಕಳೆದೆ. ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ನಮ್ಮೂರಿನ ವೈದ್ಯ ಭಗವತ್ ಎಂಬವರನ್ನು ನೋಡಿ ನಾನೂ ವೈದ್ಯೆ ಆಗಬೇಕು ಎಂದು ಕನಸು ಕಂಡಿದ್ದೆ’ ಎಂದರು.

‘ಮನೆ ಸಾಮಾನುಗಳನ್ನು ಅಂಗಡಿ ಮಾಲೀಕರು ರದ್ದಿ ಪತ್ರಿಕೆಗಳಲ್ಲಿ ಕಟ್ಟಿ ಕೊಡುತ್ತಿದ್ದರು. ಆ ಪತ್ರಿಕೆಗಳಲ್ಲಿದ್ದ ಸಾಹಿತ್ಯವನ್ನು ಆಸಕ್ತಿಯಿಂದ ಓದುತ್ತಿದ್ದೆ. ಅವುಗಳು ನನ್ನಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಿದವು’ ಎಂ‌ದು ನೆನಪಿಸಿಕೊಂಡರು.

‘ಶಿವರಾಮ ಕಾರಂತ, ಎಂ.ಕೆ. ಇಂದಿರಾ ಸೇರಿದಂತೆ ಎಲ್ಲ ಸಾಹಿತಿಗಳ ಕೃತಿಗಳನ್ನು ನಾನು ಓದಿದ್ದೇನೆ. ಬದುಕಿನಲ್ಲಿ ಗುರಿಯಿಲ್ಲದೆ ಬೆಳೆದ ನನ್ನಲ್ಲಿ ಆ ಕೃತಿಗಳು ಸಾಹಿತ್ಯಾಸಕ್ತಿ ಕೆರಳಿಸಿದವು. ನಾನು ಎಂದೂ ಬರೆಯುತ್ತೇನೆ, ಮುಂದಿನ ದಿನಗಳಲ್ಲಿ ಸಾಹಿತಿಯಾಗುತ್ತೇನೆ, ಪತ್ರಕರ್ತೆಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಹೀಗಾಗಿಯೇ ನನ್ನದು ಸಾಧನೆ ಎಂದು ಭಾವಿಸುವುದಿಲ್ಲ’ ಎಂದರು.

‘ತರಂಗ ಪತ್ರಿಕೆಯ ಸಂಪಾದಕಿಯಾದ ಬಳಿಕ ಪತ್ರಿಕೆಯಲ್ಲಿ ಕೆಲವು ಬದಲಾವಣೆ ತಂದಿದ್ದೇನೆ. ಈ ನೆಲದ ಸಂಸ್ಕೃತಿ ಮತ್ತು ಅಧ್ಯಾತ್ಮಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಿದೆ. ಯುವ ಸಮುದಾಯಕ್ಕೆ ಆಧ್ಯಾತ್ಮಿಕ ತಿರುಳಿನ ಸಾರ ಹೇಳಬೇಕು ಎಂಬುದು ನನ್ನ ಬಯಕೆಯಾಗಿತ್ತು’ ಎಂದು ಹೇಳಿದರು.

ಸಂವಾದಕರೊಬ್ಬರು ಕೇಳಿದ ಪ್ರಶ್ನಿಗೆ ಪ್ರತಿಕ್ರಿಯಿಸಿದ ಸಂಧ್ಯಾ ಪೈ, ‌‘ಬಹುಪಾಲು ಮಾಧ್ಯಮಗಳು ಬಂಡವಾಳ ಹೂಡುವ ಕಂಪನಿಗಳ ಮಾಲೀಕರು ಮತ್ತು ರಾಜಕೀಯ ಪಕ್ಷಗಳ ಮುಖಂಡರ ಕೈಯಲ್ಲಿವೆ. ಈ ಕಾರಣಕ್ಕೆ ಟಿವಿ ಮಾಧ್ಯಮ ತಮಗೆ ಬೇಕಾದ ಸುದ್ದಿಗಳಿಗೆ ಮಹತ್ವ ನೀಡುತ್ತದೆ. ಪತ್ರಿಕೆಗಳಲ್ಲೂ ಕೂಡ ಇದೇ ಸಂಸ್ಕೃತಿ ಬಂದಿದೆ’ ಎಂದರು.

‘ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಎಂದಲ್ಲ ಎಲ್ಲ ಭಾಷೆಗಳ ಪತ್ರಿಕೆಗಳ ಕಥೆ ಇದೇ ಆಗಿದೆ. ಹೊಸ ಪತ್ರಿಕೆಗಳನ್ನು ಹೊರತರುವುದು ಅಷ್ಟು ಸುಲಭದ ಮಾತಲ್ಲ. ಸಾಹಿತ್ಯ ಕೃತಿಗಳನ್ನು ಓದುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ’ ಎಂದರು.

‘ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ವಿಕೃತಿ ಕಾಲಿಟ್ಟಿದೆ. ಮಾರ್ಗದರ್ಶನ ನೀಡಬೇಕಾದವರೂ ದಾರಿ ತಪ್ಪಿದ್ದಾರೆ. ಯೋಗ್ಯರನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ಹೀಗಾಗಿ, ಯೋಗ್ಯರು ಯಾರೂ ರಾಜಕೀಯಕ್ಕೆ ಬರುತ್ತಿಲ್ಲ’ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT