ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಣೇಹಳ್ಳಿ, ಮಧುರೆ ಕೆರೆಗಳಲ್ಲಿ ನೀರು: ಮಠಾಧೀಶರ ಸಮಾಜಮುಖಿ ಪ್ರಯತ್ನಕ್ಕೆ ಶ್ಲಾಘನೆ

ನಾಲ್ವರು ಮಠಾಧೀಶರ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ
Last Updated 25 ಅಕ್ಟೋಬರ್ 2019, 2:28 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ನಾಲ್ವರು ಮಠಾಧೀಶರು ಕೆರೆ ಅಭಿವೃದ್ಧಿಗೆ ಶ್ರಮಿಸಿದ ಪ್ರತಿಫಲವಾಗಿ ಇಲ್ಲಿನ ಸಾಣೇಹಳ್ಳಿ, ಮಧುರೆ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದು, ಸ್ವಾಮೀಜಿಗಳ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಕಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಅವರು ತಲಾ ₹ 1 ಲಕ್ಷ ವೆಚ್ಚ ಮಾಡಿ, ಮೊದಲಿಗೆ ತಲಾ ಒಂದೊಂದು ಕೆರೆ ಅಭಿವೃದ್ಧಿ ಪಡಿಸುವ ಸಂಕಲ್ಪವನ್ನು ನಾಲ್ಕು ತಿಂಗಳ ಹಿಂದೆ ಮಾಡಿದ್ದರು.

ಈ ಕಾರ್ಯಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಸಭೆಗಳನ್ನು ನಡೆಸಿದ್ದರು. ಕೆರೆಯ ಅಭಿವೃದ್ಧಿಯಿಂದ ಆಗುವ ಅನುಕೂಲದ ಬಗ್ಗೆ ಜನರಿಗೆ ಮನವರಿಕೆ ಮಾಡಿದ್ದರು. ಕೆರೆ ಅಭಿವೃದ್ಧಿ ಸಮಿತಿ ರಚಿಸಿದ್ದರು. ಸ್ವಾಮೀಜಿ ಸಲಹೆ ಹಾಗೂ ಮಾರ್ಗದರ್ಶನದಂತೆ ಕೆರೆಯ ಹೂಳು ಎತ್ತಿಸಿ, ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಹಲವರು ನೆರವು ನೀಡಿದರು. ಕೆಲವರು ತಮ್ಮ ಬಳಿಯಿದ್ದ ಟ್ರ್ಯಾಕ್ಟರ್‌, ಟಿಪ್ಪರ್‌, ಜೆಸಿಬಿ ಯಂತ್ರವನ್ನು ಉಚಿತವಾಗಿ ನೀಡಿದರು.

ಇದರಿಂದ ಸಂತಸಗೊಂಡ ಪಂಡಿತಾರಾಧ್ಯ ಸ್ವಾಮೀಜಿ ಸಾಣೇಹಳ್ಳಿ ಕೆರೆ ಹಾಗೂ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಧುರೆ ಕೆರೆಯನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ತೆಗೆದುಕೊಂಡಿದ್ದರು. ತಾವು ನೀಡಿದ ಹಣ ಹಾಗೂ ಜನ ನೀಡಿದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೆರೆಯಲ್ಲಿ ಬೆಳೆದಿದ್ದ ಬಳ್ಳಾರಿ ಜಾಲಿ ಹಾಗೂ ಸಾಕಷ್ಟು ಹೂಳನ್ನು ತಿಂಗಳುಗಟ್ಟಲೇ ತೆಗೆಸಿ ಸ್ವಚ್ಛಗೊಳಿಸಿದ್ದರು. ಆದರೆ, ಶಾಂತವೀರ ಸ್ವಾಮೀಜಿ ಹಾಗೂ ಈಶ್ವರಾನಂದಪುರಿ ಸ್ವಾಮೀಜಿ ಜವಾಬ್ದಾರಿ ವಹಿಸಿಕೊಂಡಿದ್ದ ಹೊನ್ನೇನಹಳ್ಳಿ ಹಾಗೂ ಗರಿಂಬೀಳು
ಕೆರೆ ಕೆಲ ಕಾರಣಗಳಿಂದ ದುರಸ್ತಿ
ಯಾಗಲಿಲ್ಲ.

ವರುಣನ ಕೃಪೆಯಿಂದ ಒಂದು ವಾರದಿಂದ ಸುರಿದ ಬಿರುಸಿನ ಮಳೆಗೆ ಸಾಣೇಹಳ್ಳಿ ಹಾಗೂ ಮಧುರೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿವೆ. ಈ ಎರಡು ಕೆರೆಯಲ್ಲಿ ಹೂಳು ತೆಗೆದಿದ್ದರಿಂದ ಹೆಚ್ಚು ನೀರು ನಿಂತಿರುವುದು ಮಠಾಧೀಶರಿಗೆ ಹಾಗೂ ಸತತ ಬರದಿಂದ ಕಂಗೆಟ್ಟಿದ್ದ ರೈತರಿಗೆ ಸಂತಸ ತಂದಿದೆ. ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಹೆಚ್ಚು ನೆರವಾಗಿದೆ.

***

ಸಾಣೇಹಳ್ಳಿ, ಮಧುರೆ ಕೆರೆಗಳಂತೆ ಶ್ರೀರಾಂಪುರ ಹೋಬಳಿಯ ಗರಿಂಬೀಳು ಗ್ರಾಮದ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು.

- ಈಶ್ವರಾನಂದಪುರಿ ಸ್ವಾಮೀಜಿ

ಹೊನ್ನೇನಹಳ್ಳಿ ಕೆರೆ ಹೂಳು ತೆಗೆಯುವ ಕೆಲಸ ಕೆಲವು ಕಾರಣಗಳಿಂದ ಆಗಿಲ್ಲ. ಮುಂದಿನ ದಿನದಲ್ಲಿ ಜಾಲಿ ಹಾಗೂ ಹೂಳು ತೆಗೆಸಲಾಗುವುದು.

- ಶಾಂತವೀರ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT