ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಮೇಲೆ ಸಂತೋಷ್‌ ‘ಉಕ್ಕಿನ ಹಿಡಿತ’; ಅಸಹಾಯಕರಾದರೇ ಯಡಿಯೂರಪ್ಪ?

Last Updated 24 ಆಗಸ್ಟ್ 2019, 1:40 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತು ರಾಜ್ಯದಲ್ಲಿ ಪಕ್ಷದ ಮೇಲೆ ‘ಉಕ್ಕಿನ ಹಿಡಿತ’ ಸಾಧಿಸುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಒಂದೊಂದೇ ಹೆಜ್ಜೆ ಇಡಲಾರಂಭಿಸಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ.

ಮುಖ್ಯಮಂತ್ರಿಯಾಗಿ ಯಡಿ ಯೂರಪ್ಪ ಪ್ರಮಾಣ ಸ್ವೀಕರಿಸಲು ಎರಡು ದಿನ ತಡವಾಗಿ ಒಪ್ಪಿಗೆ ನೀಡಲಾಯಿತು. ಸಚಿವ ಸಂಪುಟ ವಿಸ್ತರಣೆಗೆ ಬಿಎಸ್‌ವೈ 22 ದಿನಗಳು ಕಾಯಬೇಕಾಯಿತು. ಸಚಿವರ ಆಯ್ಕೆ ಸಂದರ್ಭದಲ್ಲಿ ಪಟ್ಟಿ ಬದಲಿಸಿದ್ದು ಮತ್ತು ಪಕ್ಷದ ರಾಜ್ಯ ಘಟಕ ಅಧ್ಯಕ್ಷರನ್ನಾಗಿ ತಮ್ಮ ಆಪ್ತರನ್ನೇ ಆಯ್ಕೆ ಮಾಡುವ ಮೂಲಕ ಸಂತೋಷ್‌ ಮೇಲುಗೈ ಸಾಧಿಸಿರುವುದು ಇದಕ್ಕೆ ನಿದರ್ಶನ ಎಂದು ವ್ಯಾಖ್ಯಾನಿಸಲಾಗಿದೆ.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ ಹೆಸರನ್ನು ಸೂಚಿಸಲು ಯಡಿಯೂರಪ್ಪ ಬಯಸಿದ್ದರು. ಒಂದು ವೇಳೆ ವರಿಷ್ಠರು ಲಿಂಬಾವಳಿ ಹೆಸರು ತಿರಸ್ಕರಿಸಿದರೆ, ರಾಜ್ಯದಲ್ಲಿ ಓಡಾಡಿ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯವುಳ್ಳವರ ಹೆಸರುಗಳನ್ನು ಸೂಚಿಸಲು ಉದ್ದೇಶಿಸಿದ್ದರು. ಅದಕ್ಕೆ ಆಸ್ಪದ ನೀಡದ ಸಂತೋಷ್‌ ತಮ್ಮ ‘ಶಿಷ್ಯ’ ಸಂಸದ ನಳಿನ್ ಕುಮಾರ್‌ ಕಟೀಲ್‌ ಅವರನ್ನೇ ಅಧ್ಯಕ್ಷರಾಗಿ ಮಾಡಿದರು. ಆಂತರಿಕ ಪ್ರಜಾಪ್ರಭುತ್ವ ಪಾಲಿಸಲಿಲ್ಲ’ ಎಂದು ಮೂಲಗಳು ಹೇಳಿವೆ.

ನಳಿನ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಯಡಿಯೂರಪ್ಪ ಅವರೊಂದಿಗೆ ಸಂತೋಷ್‌ ಚರ್ಚೆ ಮಾಡುವ ಗೋಜಿಗೆ ಹೋಗಲಿಲ್ಲ. ಇದು ಯಡಿಯೂರಪ್ಪ ಮಾತ್ರವಲ್ಲದೆ, ಪಕ್ಷದ ಇತರ ನಾಯಕರಲ್ಲೂ ಅಚ್ಚರಿ ಮೂಡಿಸಿದೆ. ಇನ್ನು ಮುಂದೆಪಕ್ಷದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಂದ ಹಿಡಿದು ಎಲ್ಲರೂ ನಳಿನ್‌ ಅವರಿಂದ ಸಲಹೆಗಳನ್ನು ಕೇಳಬೇಕೆಂಬ ಸೂಚನೆ ನೀಡಿರುವುದೂ, ಹಿರಿಯ ನಾಯಕರಿಗೆ ಮುಜುಗರ ಉಂಟು ಮಾಡಿದೆ ಎನ್ನಲಾಗಿದೆ.

‘ನಳಿನ್‌ ಮೂಲಕ ಪರೋಕ್ಷವಾಗಿ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಸಂತೋಷ್‌ ಉದ್ದೇಶ. ಸಂತೋಷ್ ಹಾಕಿದ ಗೆರೆಯನ್ನು ದಾಟದ ನಳಿನ್‌ ಅವರನ್ನು ಪ್ರಶ್ನಿಸಲೂ ಇತರ ನಾಯಕರಿಗೆ ಸಾಧ್ಯವಾಗುವುದಿಲ್ಲ. ಈ ಮೂಲಕ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಎರಡನೇ ಹಂತದ ನಾಯಕರ ಮಹತ್ವಾಕಾಂಕ್ಷೆಗೂ ಕಡಿವಾಣ ಹಾಕಿದ್ದಾರೆ. ಮೂರನೇ ತಲೆಮಾರಿನ ನಾಯಕರನ್ನು ಮುಂಚೂಣಿಗೆ ತರು ವುದು ಸಂತೋಷ್‌ ಅವರ ಲೆಕ್ಕಾಚಾರ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸರ್ಕಾರದ ವರ್ಚಸ್ಸು ಹೆಚ್ಚಿಸುವ ಉದ್ದೇಶದಿಂದ ತಮಗೆ ಶಕ್ತಿ ತುಂಬುವ ಗಟ್ಟಿ ತಂಡವನ್ನೇ ಹೊಂದಲು ಯಡಿಯೂರಪ್ಪ ಬಯಸಿದ್ದರು. ಅದಕ್ಕೆ ಪೂರಕವಾದ ಪಟ್ಟಿಯನ್ನು ತಯಾರಿಸಿದ್ದರು.ಆದರೆ, ಸಂತೋಷ್‌ ಅದರಲ್ಲಿ ನಾಲ್ಕು ಹೆಸರುಗಳನ್ನು ಬದಲಿಸಲು ಮುಂದಾದಾಗ ಬಿಎಸ್‌ವೈ ಆಕ್ಷೇಪ ವ್ಯಕ್ತಪಡಿಸಿದರು. ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ ಹೆಸರುಗಳನ್ನು ಕೈಬಿಡದಂತೆ ಪಟ್ಟು ಹಿಡಿದು ಉಳಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು. ಇದಕ್ಕೆ ಪ್ರತಿಯಾಗಿ ಮೈಸೂರಿನ ಎಸ್.ಎ. ರಾಮದಾಸ್‌ ಬದಲಿಗೆ ಎಸ್. ಸುರೇಶ್‌ ಕುಮಾರ್‌ ಮತ್ತು ಉಮೇಶ್‌ ಕತ್ತಿ ಬದಲಿಗೆ ಲಕ್ಷ್ಮಣ ಸವದಿ ಮತ್ತು ವಿ.ಸೋಮಣ್ಣ ಅವರ ಹೆಸರುಗಳನ್ನು ಪಟ್ಟಿಗೆ ಸೇರಿಸುವಲ್ಲಿ ಸಂತೋಷ್‌ ಯಶಸ್ವಿಯಾದರು’ ಎಂದು ಮೂಲಗಳು ತಿಳಿಸಿವೆ.

‘ಸಂಪುಟದಲ್ಲಿ ಮೂವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಸಲಹೆಯನ್ನೂ ನೀಡಿದ್ದರು. ಆದರೆ ಸಲಹೆಯನ್ನು ಯಡಿಯೂರಪ್ಪ ನಿರಾಕರಿಸಿದರು’ ಎಂದು ಮೂಲಗಳು ಹೇಳಿವೆ.

‘ರಾಜ್ಯದಲ್ಲಿ ಮಂತ್ರಿ ಸ್ಥಾನ ಸಿಗದ ಅತೃಪ್ತ ಶಾಸಕರು ಮತ್ತು ಅವರ ಬೆಂಬಲಿಗರ ಸಿಟ್ಟಿಗೆ ಗುರಿಯಾಗಿರುವ ಯಡಿಯೂರಪ್ಪ ತೀವ್ರ ಒತ್ತಡಕ್ಕೂ ಸಿಲುಕಿದ್ದಾರೆ. ಅನರ್ಹಗೊಂಡಿರುವ ಶಾಸಕರೂ ಒತ್ತಡವೂ ಅವರ ಮೇಲಿದೆ. ಸಾಹೇಬರು ಸ್ವತಂತ್ರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ’ ಎಂದು ಬಿಎಸ್‌ವೈ ಆಪ್ತ ಮೂಲಗಳು‌ಹೇಳಿವೆ.

ಅಧ್ಯಕ್ಷ ಸ್ಥಾನ ಏಕೆ ಮುಖ್ಯ

ಬಿಜೆಪಿಯಂತಹ ಪಕ್ಷದಲ್ಲಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಮಹತ್ವ ಇದೆ. ಮುಖ್ಯಮಂತ್ರಿಗೂ ಮೂಗುದಾರ ಹಾಕುವ ಅಧಿಕಾರ ಪಕ್ಷದ ಅಧ್ಯಕ್ಷರಿಗಿದೆ. ಪಕ್ಷದ ಶಾಸಕರ ಹಿಡಿತ ಅಧ್ಯಕ್ಷರ ಕೈಯಲ್ಲಿರುತ್ತದೆ.ತಮಗೆ ಸರಿ ಹೊಂದದ ಅಧ್ಯಕ್ಷರು ಬಂದರೆ, ಮುಖ್ಯಮಂತ್ರಿಯಾದವರಿಗೆ ಕೆಲಸ ಮಾಡುವುದು ಕಷ್ಟ. ಹೀಗಾಗಿ 2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಮಗೆ ಪೂರಕವಾಗಿ ಕೆಲಸ ಮಾಡಬಲ್ಲ ಡಿ.ವಿ.ಸದಾನಂದಗೌಡರು ಅಧ್ಯಕ್ಷ ಸ್ಥಾನದಲ್ಲಿ ಇರುವಂತೆ ನೋಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT