ಫಲ ಕೊಟ್ಟ ಒಂದು ‘ಆಕಸ್ಮಿಕ’ ಭೇಟಿ

ಭಾನುವಾರ, ಜೂಲೈ 21, 2019
22 °C
ವಿಧಾನಸೌಧದ ಮೊಗಸಾಲೆಯಲ್ಲಿ ಅದೇ ಮಾತು, ಜತೆಗೊಂದಿಷ್ಟು ಗುಸುಗುಸು

ಫಲ ಕೊಟ್ಟ ಒಂದು ‘ಆಕಸ್ಮಿಕ’ ಭೇಟಿ

Published:
Updated:
Prajavani

ಬೆಂಗಳೂರು: ಕುಮಾರಕೃಪಾ ಅತಿಥಿಗೃಹದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಆಪ್ತ ಹಾಗೂ ಪ್ರಭಾವಿ ಸಚಿವ ಸಾ.ರಾ.ಮಹೇಶ್‌ ಅವರು ಇಬ್ಬರು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದ ವಿದ್ಯಮಾನ ಇಡೀ ನಾಡಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ‘ದಳ’ ಉರುಳಿಸಿದ ದಾಳದ ಫಲ ಶುಕ್ರವಾರವೇ ಗೋಚರವಾಯಿತು.

‘ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ’ ಎಂದು ಬಿಂಬಿತವಾದಾಗ ಇಡೀ ರಾಜ್ಯದ ಗಮನ ಬೇರೆಡೆಗೆ ಸೆಳೆಯುವ ಹಕೀಕತ್ತು ದೋಸ್ತಿಯ ಒಂದು ಪಕ್ಷಕ್ಕೆ ಅತ್ಯಗತ್ಯವಾಗಿತ್ತು. ಆಗ ಸಿಕ್ಕಿದ ಅಸ್ತ್ರವೇ ಮಹೇಶ್‌–ಈಶ್ವರಪ್ಪ ಭೇಟಿ. ಕುಮಾರಕೃಪಾ ಅತಿಥಿಗೃಹದಲ್ಲಿ ಸಚಿವ ಮಹೇಶ್‌ ಅವರು ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಮತ್ತು ಕೆ.ಎಸ್‌.ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದು ಆಕಸ್ಮಿಕವೇ ಇರಬಹುದು. ಆದರೆ ಅದನ್ನು ಬಳಸಿಕೊಂಡ ಸಮಯಪ್ರಜ್ಞೆ ಇಡೀ ಬಿಕ್ಕಟ್ಟಿನ ಗಾಯಕ್ಕೆ ಸಾಂತ್ವನ ನೀಡುವ ಮುಲಾಮಿನ ರೀತಿಯಲ್ಲಿ ಕೆಲಸ ಮಾಡಿತ್ತು.

ಬೆಳಿಗ್ಗೆಯೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸಾ.ರಾ.ಮಹೇಶ್‌ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಪ್ರತಿಕ್ರಿಯಿಸಿದರು. ಪಕ್ಷಕ್ಕೆ ದ್ರೋಹ ಬಗೆದ ಪಕ್ಷದೊಂದಿಗೆ ಮತ್ತೆ ಸಖ್ಯ ಸಾಧ್ಯವೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಈಶ್ವರಪ್ಪ ಮೌನವಾಗಿಯೇ ಇದ್ದರು. ಮತ್ತೊಂದೆಡೆ ಸಿದ್ದರಾಮಯ್ಯ ತಾವು ಈ ಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟೇ ಇಲ್ಲ ಎಂದು ಹೇಳಿಬಿಟ್ಟರು. ಇದೇ ಭೇಟಿ ವಿಷಯ ಬಿಜೆಪಿ ವರಿಷ್ಠರಿಂದ ತೀವ್ರ ಕೆಂಡದುಂಡೆ ಉದುರುವುದಕ್ಕೂ ಕಾರಣವಾಯಿತು.

ವಿಧಾನಸೌಧದ ಮೊಗಸಾಲೆಯಲ್ಲೂ ಕೇಳಿಸಿದ ಸಣ್ಣ ಧ್ವನಿಯೆಂದರೆ ‘ಈಶ್ವರಪ್ಪ ಅವರು ಸಾ.ರಾ.ಮಹೇಶ್‌ ಅವರಿಗೆ ನಾಲ್ಕು ಬಾರಿ ಫೋನ್‌ ಕರೆ ಮಾಡಿದ್ದರೇ?’ ಎಂಬುದು. ಅದಕ್ಕೆ ಉತ್ತರ ಸಿಗಲಿಲ್ಲ. ಆದರೆ ದೋಸ್ತಿ ಕಾಂಗ್ರೆಸ್‌ ಪಾಳಯದಲ್ಲಿ ಮಾತ್ರ ಒಂದಿಷ್ಟು ಸಂಚಲನ ಪಕ್ಕಾ ಆಗಿಬಿಟ್ಟಿತ್ತು. ಅತೃಪ್ತ ಶಾಸಕರ ಪಾಳಯದಲ್ಲಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರ ಆಪ್ತರು ತಮ್ಮ ನಿಲುವು ಬದಲಿಸುವ ಸಾಧ್ಯತೆ ಇದೆ ಎಂಬ ಸುಳಿವು ಸಂಜೆ ವೇಳೆ ಸಿಗಲು ಇದೇ ಬೆಳವಣಿಗೆ ಕಾರಣ ಎಂದು ಹೇಳಲಾಗುತ್ತಿದೆ.

₹ 60 ಕೋಟಿ ಕೊಡುಗೆ: ಮಾಜಿ ಮುಖ್ಯಮಂತ್ರಿಯೊಬ್ಬರು ಹಾಲಿ ಸಚಿವರೊಬ್ಬರ ಪತ್ನಿಗೆ ಕರೆ ಮಾಡಿ, ₹ 60 ಕೋಟಿಯ ಕೊಡುಗೆ ಮುಂದಿಟ್ಟಿದ್ದಾರೆ ಎಂಬ ಮಾತು ಸಹ ವಿಧಾನಸೌಧದಲ್ಲಿ ಪಿಸುಗುಟ್ಟಿತು. ಇದು ಸಹ ಮಿತ್ರ ಪಾಳಯದ ಕಿವಿ ಮೇಲೆ ಬೀಳಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ವಿಧಾನಸೌಧದಲ್ಲಿ ಅಧಿಕಾರದಲ್ಲಿರುವವರ ಮುಖದಲ್ಲಿ ಮಂದಹಾಸ ಮೂಡಿದ್ದಕ್ಕೆ ಇಂತಹ ವಿದ್ಯಮಾನಗಳೆಲ್ಲವೂ ಕೊಡುಗೆ ನೀಡಿದವು.

‘2 ನಿಮಿಷ ಮಾತುಕತೆ’
‘ಕುಮಾರಕೃಪಾಕ್ಕೆ ನಾನು, ಮುರಳೀಧರ್‌ ರಾವ್ ಹೋದಾಗ ಸಾ.ರಾ.ಮಹೇಶ್‌  ಎದುರಾದರು. ಶಿವಮೊಗ್ಗದ ಒಂದು ದೇವಸ್ಥಾನದ ಅಭಿವೃದ್ಧಿ ಕುರಿತಂತೆ ಅವರೊಂದಿಗೆ ಎರಡು ನಿಮಿಷ ಮಾತನಾಡಿದೆ. ಅವರು ಸಹ ವಿಶ್ವಾಸದಿಂದಲೇ ಮಾತನಾಡಿ ಕೆಲಸ ಮಾಡಿಸಿಕೊಡುವ ಭರವಸೆ ನೀಡಿದರು. ನಮ್ಮೊಳಗೆ ನಡೆದುದು ಇಷ್ಟೇ ಮಾತು. ಆದರೆ ನಾವು ಅರ್ಧ ಗಂಟೆ ಮಾತುಕತೆ ನಡೆಸಿದ್ದೇವೆ ಎಂದು ಬಿಂಬಿಸಲಾಯಿತು.

ನಾನು ಹೋದ ತಕ್ಷಣ ಅಲ್ಲಿಗೆ ಕ್ಯಾಮೆರಾ ಕಳುಹಿಸುವ ವ್ಯವಸ್ಥೆ ನಡೆಯಿತು. ಅದು ಯಾರಿಂದ ಆಯಿತೋ ಗೊತ್ತಿಲ್ಲ. ನನ್ನ ಅನುಪಸ್ಥಿತಿಯಲ್ಲಿ ಅಲ್ಲಿನ ಸಿಬ್ಬಂದಿಯೊಬ್ಬರನ್ನು ಮಾತನಾಡಿಸಲಾಯಿತು. ಅವರು ಹೇಳಿದ್ದು ಸಹ 5 ನಿಮಿಷ ಮಾತುಕತೆ ನಡೆಯಿತು ಎಂದು. ಆದರೆ ತೋರಿಸುವಾಗ ಅರ್ಧ ಗಂಟೆ, ಮುಕ್ಕಾಲು ಗಂಟೆ ಭೇಟಿ ಮಾಡಲಾಯಿತು ಎಂದು ತಿಳಿಸಲಾಯಿತು. ನಮ್ಮ ಭೇಟಿಗೆ ಯಾವುದೇ ಒಳಾರ್ಥ ಇಲ್ಲ’ ಎಂದು ಕೆ.ಎಸ್‌.ಈಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

**
ಜೆಡಿಎಸ್ ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡುವುದಿಲ್ಲ, ಇದರ ಬಗ್ಗೆ ಯಾರಿಗೂ ಸಂಶಯ ಬೇಡ.
-ಜೆ.ಕೆ.ಕೃಷ್ಣಾ ರೆಡ್ಡಿ, ವಿಧಾನಸಭಾ ಉಪಸಭಾಧ್ಯಕ್ಷ

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !