ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಶಾಸಕರಿಂದ ರಾಜೀನಾಮೆ ಕೊಡಿಸುವ ತಾಕತ್ತು ನನಗಿದೆ: ದೇಶಿಕೇಂದ್ರ ಸ್ವಾಮೀಜಿ

ಮುಖ್ಯಮಂತ್ರಿ ಯಡಿಯೂರಪ್ಪಗೆ ಸುಲಫಲ ಮಠದ ಸ್ವಾಮೀಜಿ ಎಚ್ಚರಿಕೆ
Last Updated 28 ಫೆಬ್ರುವರಿ 2020, 13:06 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು. ಇಲ್ಲದಿದ್ದರೆ 10 ಶಾಸಕರಿಂದ ರಾಜೀನಾಮೆ ಕೊಡಿಸುವ ತಾಕತ್ತು ನನಗೆ ಇದೆ. ಎಚ್ಚರಿಕೆ’ ಎಂದು ಇಲ್ಲಿನ ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಶಾಸಕ ದತ್ತಾತ್ರೇಯ ಪಾಟೀಲ ಅವರ ಜನ್ಮದಿನದ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದ ಸ್ವಾಮೀಜಿ, ‘ನಾನೇನು ಸರ್ಕಾರ ಬೀಳಿಸುವ ಉದ್ದೇಶದಿಂದ ಈ ಮಾತು ಹೇಳುತ್ತಿಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಉಳಿಯಬೇಕಲ್ಲವೇ? ಈ ಮೂರು ವರ್ಷ ಮಾತ್ರವಲ್ಲ; ಮುಂದಿನ ಐದು ವರ್ಷ ಕೂಡ ಅವರೇ ಸರ್ಕಾರ ನಡೆಸಬೇಕಲ್ಲವೇ? ಅದಕ್ಕಾಗಿ ಹೇಳುತ್ತಿದ್ದೇನೆ’ ಎಂದರು.

‘ಯಡಿಯೂರಪ್ಪ ಅವರ ನಂತರ ಮುಂದಿನ 30 ವರ್ಷಗಳವರೆಗೆ ಯಾವೊಬ್ಬ ಲಿಂಗಾಯತನೂ ಮುಖ್ಯಮಂತ್ರಿ ಆಗುವ ಸಾಧ್ಯತೆ ಇಲ್ಲ. ಇತ್ತೀಚೆಗೆ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿಮಾಡಿರೇವೂರ ಅವರನ್ನು ಸಚಿವರನ್ನಾಗಿ ಮಾಡಲು ಕೇಳಿದ್ದೆವು. ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ, ಒಂದು ವರ್ಷದಲ್ಲಿ ಸಚಿವರನ್ನಾಗಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಮಾತು ಕೊಟ್ಟಂತೆ ಮುಂದಿನ ವರ್ಷದ ಒಳಗಾಗಿ ಸಚಿವ ಸ್ಥಾನ ಕೊಟ್ಟುಬಿಡಿ’ ಎಂದರು.

ಸ್ವಾಮೀಜಿ ಮಾತನಾಡುವಷ್ಟರಲ್ಲಿಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ ವೇದಿಕೆಯಿಂದ ನಿರ್ಗಮಿಸಿದ್ದರು. ಶಾಸಕ ರೇವೂರ ವೇದಿಕೆಯಲ್ಲಿದ್ದರೂ ಶ್ರೀಗಳ ಮಾತಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT