ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಷಿ ವರದಿಗೆ ಬಲ ಬ್ರಾಹ್ಮಣರಿಗೊಂದು ಮಂಡಳಿ

ಲೋಕಸಭಾ ಚುನಾವಣೆ ಮೇಲೆ ಕಣ್ಣು–ಮೈತ್ರಿ ಸರ್ಕಾರದಿಂದ ಭರಪೂರ ಯೋಜನೆ
Last Updated 14 ಫೆಬ್ರುವರಿ 2019, 21:00 IST
ಅಕ್ಷರ ಗಾತ್ರ

ಬೆಂಗಳೂರು: ಬಜೆಟ್‌ ಅಧಿವೇಶನದ ಗೋಜಲು ಮುಗಿದ ಬೆನ್ನಲ್ಲೇ ಲೋಕಸಭಾ ಚುನಾವಣೆಗೆ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ, ಯುವಜನರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ ಹಾಗೂ ಬ್ರಾಹ್ಮಣರಿಗೆ ಭರಪೂರ ಯೋಜನೆಗಳನ್ನು ಪ್ರಕಟಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನೇಕ ಜನಪ್ರಿಯ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ರಾಜ್ಯ ಸರ್ಕಾರದ ನೆರವು ಹಾಗೂ ಪ್ರೋತ್ಸಾಹಧನ ಪಡೆಯುವ ಸಂಸ್ಥೆಗಳು ಇನ್ನು ಮುಂದೆ ಹುದ್ದೆ ಖಾಲಿ ಇದ್ದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಆದ್ಯತೆ ನೀಡಬೇಕು. ಸರೋಜಿನಿ ಮಹಿಷಿ ವರದಿಗೆ ಕಾನೂನಿನ ಬಲ ನೀಡಲು ಸಂ‍ಪುಟ ಒಪ್ಪಿಗೆ ನೀಡಿದ್ದು, ಅದರ ಅನ್ವಯ ಈ ನಿಯಮ ಜಾರಿಗೆ ಬರಲಿದೆ.

‘ಇದು ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಅನ್ವಯವಾಗುವುದಿಲ್ಲ. ಸಂಸ್ಥೆಗಳು ಉದ್ಯೋಗ ನೀಡದಿದ್ದರೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ದೂರು ಸಲ್ಲಿಸಬಹುದು. ಸಮಿತಿಯು ಸಂಸ್ಥೆಗೆ ನೋಟಿಸ್‌ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಉಚಿತ ಸೈಕಲ್‌ಗೆ ₹189 ಕೋಟಿ: ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2019–20ನೇ ಸಾಲಿನಲ್ಲಿ ₹189 ಕೋಟಿ ವೆಚ್ಚದಲ್ಲಿ ಉಚಿತವಾಗಿ ಸೈಕಲ್‌ ವಿತರಣೆಗೆ ಅನುಮೋದನೆ ನೀಡಲಾಗಿದೆ ಎಂದರು.

2018–19ನೇ ಸಾಲಿನಲ್ಲಿ 5 ಲಕ್ಷದ 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಿಸಲಾಗಿತ್ತು. ಟೆಂಡರ್‌ ಕರೆದು ಸೈಕಲ್‌ಗಳ ವಿತರಣೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಐದು ಎಪಿಎಂಸಿಗೆ ನವರೂಪ

ರೈತರು ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವುದನ್ನು ಉತ್ತೇಜಿಸಲು ಐದು ಎಪಿಎಂಸಿಗಳಿಗೆ ಹೊಸ ರೂಪ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊಪ್ಪಳದ ಕಾರಟಗಿ, ಹಾವೇರಿಯ ರಾಣೆಬೆನ್ನೂರು ಎಪಿಎಂಸಿಗಳನ್ನು ಮೆಗಾ ಮಾರುಕಟ್ಟೆಗಳನ್ನಾಗಿ ಮಾಡಲು, ಹುಬ್ಬಳ್ಳಿ, ಬೆಳಗಾವಿ ಹಾಗೂ ಯಶವಂತಪುರ ಎಪಿಎಂಸಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ₹300 ಕೋಟಿ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ನಬಾರ್ಡ್‌ ಸಹಯೋಗದಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅಸ್ತು

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅಸ್ತು ಎಂದಿರುವ ಸರ್ಕಾರ, ಈ ಮಂಡಳಿಗೆ ₹25 ಕೋಟಿ ಕೊಡುವುದಾಗಿ ಪ್ರಕಟಿಸಿದೆ. ಈ ಮಂಡಳಿ ಕಂದಾಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ.

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರ ಸಬಲೀಕರಣಕ್ಕೆ ಮಂಡಳಿ ಸ್ಥಾಪಿಸಲಾಗಿದೆ. ವಿದ್ಯಾರ್ಥಿ ವೇತನ, ಸ್ವ ಉದ್ಯೋಗ ಸೃಷ್ಟಿ, ಕಡಿಮೆ ಬಡ್ಡಿ ದರದಲ್ಲಿ ಸಾಲ, ಸಾಮೂಹಿಕ ವಿವಾಹ ಹಾಗೂ ಉಪನಯನ ಆಯೋಜನೆ, ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಪಿಂಚಣಿ ನೀಡುವ ಕೆಲಸಗಳನ್ನು ಮಂಡಳಿ ಮಾಡಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಗಣಿಗಾರಿಕೆ: ಎಸ್‌ಐಟಿ ಅವಧಿ ವರ್ಷ ವಿಸ್ತರಣೆ

ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ನಡೆದಿರುವ ಗಣಿ ಅಕ್ರಮಗಳನ್ನು ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡದ ಅವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.

ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ತನಿಖೆಗಾಗಿ ಲೋಕಾಯುಕ್ತ ಸಂಸ್ಥೆಯಲ್ಲಿ ಈ ಘಟಕ ಸ್ಥಾಪಿಸಲಾಗಿತ್ತು. ಇದನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಸ್ಥಾಪಿಸಲಾಗಿತ್ತು. ಈ ತನಿಖಾ ತಂಡದ ಅವಧಿಯನ್ನು 2019ರ ಜನವರಿ 24ರಿಂದ ಅನ್ವಯವಾಗುವಂತೆ ವಿಸ್ತರಿಸಲಾಗಿದೆ.

ಪೊಲೀಸ್‌; ‌‌ಮಹಿಳೆಯರಿಗೆ ಶೇ 25 ಮೀಸಲಾತಿ

ಪೊಲೀಸ್‌ ಇಲಾಖೆಯ ಏಳು ಶ್ರೇಣಿಗಳ ನೇರ ನೇಮಕದಲ್ಲಿ ಮಹಿಳೆಯರಿಗೆ ಶೇ 25 ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದೆ.

ಮೀಸಲಾತಿ ನೀಡುವ ಬಗ್ಗೆ ಈ ಹಿಂದೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಎರಡು ಶ್ರೇಣಿಗಳಲ್ಲಿ ಶೇ 20 ಮೀಸಲಾತಿ ನೀಡಲು 2014ರಲ್ಲಿ ತೀರ್ಮಾನಿಸಲಾಗಿತ್ತು. ಸಿಐಡಿ, ವಯರ್‌ಲೆಸ್‌, ಗುಪ್ತಚರ ಸೇರಿದಂತೆ ಏಳು ಶ್ರೇಣಿಗಳಲ್ಲಿ ಸಬ್‌ ಇನ್‌ಸ್ಪೆಕ್ಟರ್‌, ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಶೇ 25ರಷ್ಟು ಮೀಸಲಾತಿ ನೀಡಲಾಗುತ್ತದೆ. ಐದು ವರ್ಷಗಳಲ್ಲಿ ಈ ಪ್ರಮಾಣವನ್ನು ಶೇ 25ಕ್ಕೆ ಏರಿಸಲು ಸಂಕಲ್ಪ ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

‘ಪೊಲೀಸ್‌ ಇಲಾಖೆಯಲ್ಲಿ 16 ಸಾವಿರ ಹುದ್ದೆಗಳು ಖಾಲಿ ಇವೆ. ನೇರ ನೇಮಕದ ವೇಳೆ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಅದಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕ ಸೇವೆಗಳನ್ನು ಒಳಗೊಂಡಂತೆ (ನೇಮಕಾತಿ) (ತಿದ್ದುಪಡಿ), 2018 ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು (ಅಪರಾಧ ತನಿಖಾ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳಿಗೆ 2018ಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಅವರು ಹೇಳಿದರು.

ಅಂಗವಿಕಲರಿಗೆ ಮೀಸಲಾತಿ ಹೆಚ್ಚಳ

ಇದುವರೆಗೂ ಅಂಗವಿಕಲರ ಸೌಲಭ್ಯಗಳನ್ನು ಪಡೆಯಲು ಏಳು ದೈಹಿಕ ನ್ಯೂನತೆಗಳನ್ನು ಗುರುತಿಸಲಾಗಿತ್ತು. ಈಗ ಅದನ್ನು 21 ದೈಹಿಕ ನ್ಯೂನತೆಗಳಿಗೆ ವಿಸ್ತರಿಸಲಾಗಿದೆ. ಇದಕ್ಕಾಗಿ ಅಂಗವಿಕಲ ವ್ಯಕ್ತಿಗಳ ಕರಡು ನಿಯಮಾವಳಿಗಳು–2019ಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸರ್ಕಾರಿ ಸವಲತ್ತುಗಳಲ್ಲಿ ಈ ಹಿಂದೆ ಅಂಗವಿಕಲರಿಗೆ ಶೇ 3ರಷ್ಟು ಮೀಸಲಾತಿ ನೀಡಲಾಗಿತ್ತು. ಈಗ ಅದನ್ನು ಶೇ 5ಕ್ಕೆ ವಿಸ್ತರಿಸಲಾಗಿದೆ. ಇನ್ನು ಮುಂದೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಶೇ 4ರಷ್ಟು ಉದ್ಯೋಗ ಮೀಸಲಾತಿ ನೀಡಲಾಗುತ್ತದೆ. ರಾಜ್ಯದಲ್ಲಿ ಗ್ರೂಪ್‌ ಎ ಹುದ್ದೆಗಳಿಗೆ ಮೀಸಲಾತಿ ಹಾಲಿ ಶೇ 3 ಇರುವುದನ್ನು ಶೇ 4ಕ್ಕೆ ಹೆಚ್ಚಿಸಲಾಗುತ್ತದೆ. ಗ್ರೂಪ್‌ ಬಿ ಹಾಗೂ ಸಿ ಹುದ್ದೆಗಳಿಗೆ ಈಗಾಗಲೇ ಶೇ 5 ಮೀಸಲಾತಿ ಕಲ್ಪಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಪ್ರವೇಶ ಅವಕಾಶದಲ್ಲಿ ಶೇ 5 ಮೀಸಲಾತಿ ಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಅಂಗವಿಕಲರ ಶೋಷಣೆ ಹಾಗೂ ಹಕ್ಕುಗಳ ಉಲ್ಲಂಘನೆ ಮಾಡುವವರಿಗೆ 2 ವರ್ಷಗಳ ವರೆಗೆ ಜೈಲು ಶಿಕ್ಷೆ ಅಥವಾ ₹1 ಲಕ್ಷ ದಂಡ ಅಥವಾ ಇವೆರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸರ್ಕಾರಕ್ಕೆ ವಿದ್ಯಾರ್ಥಿಗಳಿಂದ ನಾವಿನ್ಯ ಆಲೋಚನೆ

ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಇನ್ನು ಮುಂದೆ ರಾಜ್ಯ ಸರ್ಕಾರಕ್ಕೆ ನವನವೀನ ಆಲೋಚನೆಗಳನ್ನು ನೀಡಬಹುದು. ಇದಕ್ಕಾಗಿ ಇಂಟರ್ನ್‌ಶಿಪ್‌ ಕಾರ್ಯಕ್ರಮಕ್ಕೆ ಅನುಮೋದನೆ ನೀಡಲಾಗಿದೆ.

‘ಆಡಳಿತ ವ್ಯವಸ್ಥೆ ಹಾಗೂ ಜನರ ಆಲೋಚನಾ ಕ್ರಮಗಳ ನಡುವೆ ಅಂತರ ಇದೆ. ಸಮಾಜದಲ್ಲಿ ಹೊಸ ಹೊಸ ಆಲೋಚನೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ, ಅವು ಆಡಳಿತ ವ್ಯವಸ್ಥೆಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಅಂತರ ಕಡಿಮೆ ಮಾಡಲು ಈ ಯೋಜನೆ ರೂಪಿಸಲಾಗಿದೆ’ ಎಂದು ಸಚಿವರು ತಿಳಿಸಿದರು.

‘ವಿದ್ಯಾರ್ಥಿಗಳು ಆನ್‌ಲೈನ್‌ ಪೋರ್ಟಲ್‌ ಮೂಲಕ 6 ಆರು ವಾರಗಳಿಂದ ಎರಡು ತಿಂಗಳ ಇಂಟರ್ನ್‌ಶಿಪ್‌ ಪಡೆಯಬಹುದು. ಇದಕ್ಕೆ ಶಿಷ್ಯ ವೇತನ ನೀಡುವುದಿಲ್ಲ. ಇದಕ್ಕಾಗಿ 27 ವಲಯಗಳನ್ನು ಗುರುತಿಸಲಾಗಿದ್ದು, ಪ್ರತಿ ಇಲಾಖೆಯಲ್ಲಿ ತಲಾ ಮೂವರಿಗೆ ಅವಕಾಶ ನೀಡಲಾಗುತ್ತದೆ’ ಎಂದು ಅವರು ಹೇಳಿದರು.

ಇತರ ನಿರ್ಧಾರಗಳು:

*ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್ ಕಟ್ಟಡವನ್ನು 52 ಕೋಟಿ ಮೊತ್ತದಲ್ಲಿ ನಿರ್ಮಿಸಲು ಹಾಗೂ 13 ಕೋಟಿ ಅಂದಾಜು ವೆಚ್ಚದಲ್ಲಿ ಉಪಕರಣ ಖರೀದಿಗೆ ಒಪ್ಪಿಗೆ.

*2019-20ನೇ ಶೈಕ್ಷಣಿಕ ಸಾಲಿನಲ್ಲಿ ಚಾಮರಾಜನಗರದಲ್ಲಿ ಸರ್ಕಾರಿ ಕಾನೂನು ಕಾಲೇಜನ್ನು ₹2.20 ಕೋಟಿ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಅನುಮೋದನೆ.

*ರಾಣೆಬೆನ್ನೂರು ಪರಿಮಿತಿಯಲ್ಲಿ ಹಾದು ಹೋಗಿರುವ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಕಾಮಗಾರಿಗೆ ₹18 ಕೋಟಿ.

*ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಹಾಸನ ನಗರದಲ್ಲಿರುವ ಪ್ರಾದೇಶಿಕ ಕಾರ್ಯಾಗಾರದ ಪುನರುಜ್ಜೀವನ ಮತ್ತು ಆಧುನೀಕರಣಕ್ಕೆ ₹42 ಕೋಟಿ.

*ಕೋರಮಂಗಲದಲ್ಲಿರುವ ಕೆಎಸ್‌ಆರ್‌ಪಿ ಕ್ಯಾಂಪಸ್‌ನಲ್ಲಿ ₹17.80 ಕೋಟಿ ಅಂದಾಜು ವೆಚ್ಚದಲ್ಲಿ ಪೊಲೀಸ್ ಸಮುದಾಯ ಭವನ ನಿರ್ಮಾಣಕ್ಕೆ ಒಪ್ಪಿಗೆ.

*ಬೆಂಗಳೂರಿನ ಸರ್ಕಾರಿ ಔಷಧ ವಿಜ್ಞಾನ ಮಹಾ ವಿದ್ಯಾಲಯದ ಆವರಣದಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ₹10.47 ಕೋಟಿ ಮೊತ್ತದಲ್ಲಿ ನಿರ್ಮಿಸಲು ಘಟನೋತ್ತರ ಅನುಮೋದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT