ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನದಲ್ಲಿ ‘ದೇಶದ್ರೋಹಿ’ ಆದೆ: ದ.ಕ. ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

ಗಾಂಧಿ 150: ಚಿಂತನಾ ಯಾತ್ರೆಯಲ್ಲಿ ದ.ಕ.ಜಿಲ್ಲಾ ನಿಕಟಪೂರ್ವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
Last Updated 3 ಅಕ್ಟೋಬರ್ 2019, 8:38 IST
ಅಕ್ಷರ ಗಾತ್ರ

ಮಂಗಳೂರು: ‘ಹತ್ತು ವರ್ಷಗಳ ಸಾರ್ವಜನಿಕ ಬದುಕು, ಜನರೊಂದಿಗಿನ ಒಡನಾಟವಿದ್ದೂ, ರಾಜೀನಾಮೆ ನೀಡಿದ ಒಂದೇ ದಿನದಲ್ಲಿ ‘ದೇಶದ್ರೋಹಿ’ ಆದೆ' ಎಂದು ದಕ್ಷಿಣ ಕನ್ನಡ ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಹೇಳಿದರು.

ಸಮದರ್ಶಿ ವೇದಿಕೆಯು ನಗರದಲ್ಲಿ ಆಯೋಜಿಸಿದ ‘ಗಾಂಧಿ 150: ಚಿಂತನಾ ಯಾತ್ರೆ’ಯಲ್ಲಿ ಅವರು ಮಾತನಾಡಿದರು.

‘ಈಗ ನಮ್ಮ ರಾಷ್ಟ್ರೀಯತೆಯನ್ನು ಪ್ರಶ್ನಿಸುತ್ತಿರುವ ಪರೀಕ್ಷೆಯ ಸಮಯ. ಎಲ್ಲರಲ್ಲೂ ದೇಶಪ್ರೇಮ ಇತ್ತು. ಆದರೆ, ಯಾರೂ ಪ್ರಶ್ನಿಸುತ್ತಿರಲಿಲ್ಲ. ಈಗ ದೇಶದ ಹೆಸರಲ್ಲಿ ಘೋಷಣೆ ಕೂಗಿಸುವ ಸನ್ನಿವೇಶ ಕಾಣುತ್ತಿದ್ದೇವೆ’

ಇಂದಿಗೂ ಗಾಂಧೀಜಿಯೇ ರಾಷ್ಟ್ರಪಿತ ಎಂದು ನಂಬಿದ್ದೇನೆ. ನಾನು, ‘ಮುನ್ನಾಭಾಯಿ ಎಂಬಿಬಿಎಸ್’ ಸಿನಿಮಾದಂತೆ ಗಾಂಧಿಯಿಂದ ಆಗಾಗ್ಗೆ ಸ್ಪೂರ್ತಿ ಪಡೆವ ‘ಮುನ್ನಾಭಾಯ್‌’ ಎಂದು ಬಣ್ಣಿಸಿಕೊಂಡರು.

ಕೌಟುಂಬಿಕ ಸಂಬಂಧವನ್ನು ಕಾನೂನು ರೂಪಿಸಿಲ್ಲ. ಪರಸ್ಪರ ಭಿನ್ನತೆ ನಡುವೆ ಏಕತೆ ಇರುತ್ತದೆ. ಅದೇ ರೀತಿ ದೇಶವೂ ಒಂದು ಕುಟುಂಬ. ಆದರೆ, ರಾಷ್ಟ್ರ ಹಾಗೂ ರಾಷ್ಟ್ರೀಯತೆಗೆ ವ್ಯತ್ಯಾಸವಿದೆ. ಒಂದು ದೇಶಕ್ಕೆ ಒಂದೇ ಭಾಷೆ, ಆಚರಣೆ ಇರಬೇಕಾಗಿಲ್ಲ. ತಮಿಳರು, ಕನ್ನಡಿಗರು, ಗುಜರಾತಿಗಳೆಲ್ಲ ಒಟ್ಟಿಗೆ ಹೋರಾಡಿ ಸ್ವಾತಂತ್ರ್ಯ ಪಡೆದರು. ಆ ಭಾವನೆಯನ್ನು ಗಾಂಧೀಜಿ ಒಗ್ಗೂಡಿಸಿದ್ದರು’ ಎಂದರು.

‘ರಾಷ್ಟ್ರೀಯತೆ ಎಂದರೆ ಮಾನವೀಯತೆ. ಮನುಕುಲಕ್ಕಾಗಿ ರಾಷ್ಟ್ರವನ್ನೂ ತ್ಯಾಗ ಮಾಡಲು ಸಿದ್ಧರಾಗುವುದೇ ರಾಷ್ಟ್ರೀಯತೆ’ ಎಂದು ಗಾಂಧಿ ಹೇಳಿದ್ದರು. ಅವರ ಅಹಿಂಸಾ ಹೋರಾಟ, ಒಗ್ಗೂಡಿಸುವ ದೇಶಪ್ರೇಮವು ಇಂದು ಬೇಕಾಗಿದೆ’ ಎಂದರು.

‘ಹತ್ತು ವರ್ಷಗಳ ಬಳಿಕ ಸಂಭ್ರಮ’

‘ಹತ್ತು ವರ್ಷಗಳ ಜೊತೆ ಪತಿ ಒತ್ತಡ ರಹಿತವಾಗಿ ಕುಟುಂಬಕ್ಕೆ ಬಂದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದೆವು. ಈಗ ಖುಷಿಯಾಗಿದ್ದೇವೆ. ಏನನ್ನೂ ನಿರ್ಧರಿಸಿಲ್ಲ. ಆದರೆ, ಮಾಡುವುದು ಸಾಕಷ್ಟಿದೆ’ ಎಂದು ಸೆಂಥಿಲ್ ಪತ್ನಿ ಸುಜಾತಾ ಹರ್ಷ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸೆಂಥಿಲ್ ‘ನನ್ನ ರಾಜೀನಾಮೆಗೆ ಒತ್ತಡ ಅಥವಾ ನಕಾರಾತ್ಮಕತೆಗಳು ಕಾರಣವಲ್ಲ. ನನ್ನ ನೈತಿಕತೆಯೇ ಹೀಗಿತ್ತು. ಸೇವೆಯಲ್ಲಿ ಇದ್ದು ನನ್ನ ಚಿಂತನೆ ಮಾಡಿದ್ದರೆ, ಅನೈತಿಕವಾಗುತ್ತಿತ್ತು. ಈಗ ನಾನು ಉತ್ತಮ ಅವಕಾಶ ಪಡೆದಿದ್ದೇನೆ. ಅಧಿಕಾರ ಇಲ್ಲದಾಗ, ಅರ್ಥೈಸಲು ಮತ್ತು ಹತ್ತಿರವಾಗಲು ಸಾಧ್ಯ’ ಎಂದರು.

‘ನನ್ನ ರಾಜೀನಾಮೆ ನನಗೆ ನಿರೀಕ್ಷಿತ. ನಾನು ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ. ಒತ್ತಡದಿಂದ ರಾಜೀನಾಮೆ ನೀಡಿದ್ದೇನೆ ತಪ್ಪಾರ್ಥ ಬೇಡ. ಐಎಎಸ್ ದೇಶದಲ್ಲಿರುವ ಅತ್ಯುತ್ತಮ ವೃತ್ತಿ’ ಎಂದು ಪ್ರಶ್ನೆಗೆ ಉತ್ತರಿಸಿದರು. ತಮ್ಮ ವಿರುದ್ಧದ ಆರೋಪಗಳಿಗೆ, ‘ಅವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ’ ಎಂದು ಚುಟುಕಾಗಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT